ವನ್ಯಜೀವಿಗಳನ್ನು ಬದುಕಲು ಬಿಡೋಣ
ಇಂದು ವಿಶ್ವ ವನ್ಯಜೀವಿಗಳ ದಿನ
ಡಿಸೆಂಬರ್ 20, 2013ರಂದು ಯುನೈಟೆಡ್ ನೇಷನ್ ಜನರಲ್ ಅಸೆಂಬ್ಲಿ(ಯುಎನ್ಜಿಎ) 68ನೇ ಅಧಿವೇಶನದಲ್ಲಿ ಭೂಮಿಯ ಮೇಲೆ ಅಳಿವಿನ ಅಂಚಿನಲ್ಲಿರುವ ಪ್ರಭೇದಗಳಾದ ವಿಶ್ವ ವನ್ಯಜೀವಿಗಳು ಮತ್ತು ಸಸ್ಯಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಘೋಷಿಸಿತು. ಪ್ರಸ್ತುತ ವಿಶ್ವ ವನ್ಯಜೀವಿ ದಿನವು ಈಗ ಪ್ರಮುಖ ಜಾಗತಿಕ ಕಾರ್ಯಕ್ರಮವಾಗಿ ಮುಂದುವರಿದಿದೆ. ಪ್ರತಿ ವರ್ಷವೂ ಅರಣ್ಯ ಮತ್ತು ವನ್ಯಜೀವಿಗಳನ್ನು ಉಳಿಸಿಕೊಳ್ಳುವ ಸಲುವಾಗಿ ಒಂದು ಘೋಷಣಾ ವಾಕ್ಯವನ್ನು ಹುಟ್ಟು ಹಾಕಲಾಗುತ್ತದೆ. ಪ್ರಸ್ತುತ 2022ರ ಘೋಷಣಾ ವಾಕ್ಯ ‘ಪರಿಸರ ವ್ಯವಸ್ಥೆ ಪುನಃಸ್ಥಾಪನೆಗಾಗಿ ಪ್ರಮುಖ ಪ್ರಭೇದಗಳನ್ನು ಮರುಪಡೆಯುವುದು’. ಪ್ರತಿ ವರ್ಷವೂ ಒಂದು ಹೊಸ ಘೋಷಣಾ ವಾಕ್ಯದ ಮೂಲಕ ಜಗತ್ತಿನಾದ್ಯಂತ ಅರಣ್ಯ-ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಹಿಂದಿನ ವರ್ಷಗಳಲ್ಲಿ ಜನರಲ್ಲಿ ಮುಖ್ಯವಾಗಿ ಯುವಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹುಟ್ಟುಹಾಕಿದ ಘೋಷಣಾ ವಾಕ್ಯಗಳೆಂದರೆ ‘ಅರಣ್ಯ ಮತ್ತು ಜೀವನೋಪಾಯ: ಜನರು ಮತ್ತು ಭೂಗ್ರಹ (2021)’, ‘ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನು ಉಳಿಸಿಕೊಳ್ಳವುದು’, ‘ನೀರಿನೊಳಗೆ ಜೀವನ: ಜನರು ಮತ್ತು ಗ್ರಹಕ್ಕಾಗಿ’, ‘ದೊಡ್ಡ ಬೆಕ್ಕುಗಳ ಪರಭಕ್ಷಕ ಬೆದರಿಕೆಗಳು’, ‘ಯುವ ಧ್ವನಿಗಳನ್ನು ಆಲಿಸಿ’, ‘ವನ್ಯಜೀವಿಗಳ ಭವಿಷ್ಯ ನಮ್ಮ ಕೈಯಲ್ಲಿದೆ’ ಮತ್ತು ‘ವನ್ಯಜೀವಿ ಅಪರಾಧಗಳ ಬಗ್ಗೆ ಗಂಭೀರ ನಿಲುವು ತಳೆಯುವ ಸಮಯ’ ಇತ್ಯಾದಿ. ಈ ಘೋಷಣಾ ವಾಕ್ಯಗಳ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಇದು ನಮ್ಮ ಭೂಮಿ ಮತ್ತು ಭೂಮಿಯ ಮೇಲಿನ ಜೀವಜಾಲವನ್ನು ಉಳಿಸಿಕೊಳ್ಳುವ ಬಹುಮುಖ್ಯ ಆಂದೋಲನವಾಗಿದೆ.
ಜಾಗತಿಕವಾಗಿ ಮತ್ತು ನಿರ್ದಿಷ್ಟವಾಗಿ ಅರಣ್ಯ ಮತ್ತು ಅದರ ಸುತ್ತಲಿನ ಪ್ರದೇಶಗಳಿಗೆ ಐತಿಹಾಸಿಕ ಸಂಬಂಧ ಹೊಂದಿರುವ ಸ್ಥಳೀಯ ಸಮುದಾಯಗಳ ಜೀವನೋಪಾಯವನ್ನು ಉಳಿಸಿಕೊಳ್ಳುವಲ್ಲಿ ಅರಣ್ಯಗಳು, ವನ್ಯ ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಯ ಸೇವೆಗಳು ಅತಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿಯ ಗುರಿಗಳೊಂದಿಗೆ ಬಡತನವನ್ನು ನಿವಾರಿಸುವ, ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಭೂಮಿಯ ಮೇಲಿನ ಜೀವಜಾಲವನ್ನು ಸಂರಕ್ಷಿಸುವ ಬದ್ಧತೆಯನ್ನು ಹೊಂದಿದೆ ಮತ್ತು ಅದಕ್ಕೆ ಜಗತ್ತಿನ ಜನರೆಲ್ಲ ಕೈಜೋಡಿಸುವ ಅಗತ್ಯವೂ ಇದೆ. ಭೂಮಿಯ ಮೇಲಿನ ಎಲ್ಲಾ ಪರಿಸರ ವಲಯಗಳು ಅದ್ಭುತ ಜೀವಜಾಲದಿಂದ ತುಂಬಿಕೊಂಡಿವೆ. ಗಾಳಿಯಲ್ಲಿ ಹಾರಾಡುವ ಪಕ್ಷಿಗಳಿಂದ ಹಿಡಿದು ಸಾಗರಗಳಲ್ಲಿನ ದೈತ್ಯ ತಿಮಿಂಗಿಲಗಳವರೆಗೆ ವನ್ಯಜೀವಿಗಳು ಅತ್ಯಂತ ಅಸಾಮಾನ್ಯ ಮತ್ತು ಅನಿರೀಕ್ಷಿತ ವಲಯಗಳಲ್ಲಿ ಬದುಕು ನಡೆಸುತ್ತಿವೆ. ಅರಣ್ಯಗಳು ಮತ್ತು ವನ್ಯಜೀವಿಗಳು ನಮಗೆ ಅನೇಕ ರೀತಿಗಳಲ್ಲಿ ಸಹಕಾರಿಯಾಗಿವೆ. ಭೂಮಿಯ ಮೇಲೆ ಪ್ರಾಣಿಗಳ ಸಂಖ್ಯೆಗೆ ಹೋಲಿಸಿದರೆ ಮನುಷ್ಯನ ಸಂಖ್ಯೆ ಅತಿ ಹೆಚ್ಚಾಗಿ ಬೆಳೆಯುತ್ತಿದೆ. ಆದರೆ ಭೂಮಿಯ ಮೇಲೆ ಮನುಷ್ಯನು ಮಾತ್ರ ಮುಖ್ಯವಲ್ಲ. ವನ್ಯಜೀವಿಗಳನ್ನು ಮನುಷ್ಯ ತುಚ್ಛವಾಗಿ ಗಮನಿಸುವ ವಿಷಯ ಆಘಾತಕಾರಿ ಮತ್ತು ಅಪಾಯಕಾರಿ ವಿಷಯವಾಗಿದೆ. ಮನುಷ್ಯನು ತನ್ನ ಸ್ವಾರ್ಥ ಬದುಕಿಗಾಗಿ ಭೂಮಿಯ ಮೇಲಿನ ಎಲ್ಲಾ ರೀತಿಯ ವನ್ಯಜೀವಿಗಳನ್ನು ಬೇಟೆಯಾಡಿ ಅಳಿವಿನ ಅಂಚಿಗೆ ತಳ್ಳುತ್ತಿದ್ದಾನೆ. ಭೂಮಿಯ ಮೇಲೆ ಮನುಷ್ಯ ಇಲ್ಲದೇ ಇದ್ದರೆ ಭೂಮಿಗೆ ಏನೂ ತೊಂದರೆ ಇಲ್ಲ. ಆದರೆ ಅದೇ ಭೂಮಿಯ ಮೇಲಿರುವ ಜೀವಜಾಲದ ಪಿರಮಿಡ್ ನಾಶವಾದಲ್ಲಿ ಮನುಷ್ಯ ಖಂಡಿತ ಉಳಿಯಲಾರ. ಅದಕ್ಕೆ ಈಗ ಭೂಮಿಯ ಮೇಲೆ ಸ್ಫೋಟಗೊಂಡಿರುವ ಕೋವಿಡ್-19 ಒಂದು ಉದಾಹರಣೆ ಮಾತ್ರ. ವನ್ಯಜೀವಿಗಳ ಬಗ್ಗೆ ಕಾಳಜಿ ವಹಿಸುವುದು ಹಿಂದೆಂದಿಗಿಂತ ಇಂದು ತುರ್ತು ವಿಷಯವಾಗಿದೆ. ಭೂಮಿಯ ಮೇಲಿನ ನೂರಾರು ಪ್ರಭೇದಗಳು ಪ್ರಸ್ತುತ ಅಳಿವಿನ ಅಂಚಿನಲ್ಲಿ ಸಿಕ್ಕಿಕೊಂಡಿದ್ದು ಪ್ರತಿ ವರ್ಷ ಹತ್ತಾರು ಪ್ರಭೇದಗಳು ಭೂಮಿಯಿಂದ ಅಳಿಸಿ ಹೋಗುತ್ತಿವೆ. ಇದೇ ಕಾರಣದಿಂದ ಅಂತರ್ರಾಷ್ಟ್ರೀಯ ವ್ಯಾಪಾರದ ಸಮಾವೇಶದಲ್ಲಿ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು, ಇಲ್ಲವೆಂದರೆ ಜಗತ್ತು ಮತ್ತೆ ಎಂದಿಗೂ ಆ ಪ್ರಾಣಿ ಪ್ರಭೇದಗಳನ್ನು ಕಾಣುವುದಿಲ್ಲ ಎಂದು ಒತ್ತಿ ಹೇಳಿದೆ. ಜಗತ್ತಿನಾದ್ಯಾಂತ 200ರಿಂದ 350 ದಶಲಕ್ಷ ಜನರು ಅರಣ್ಯ ಪ್ರದೇಶಗಳಲ್ಲಿ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅರಣ್ಯ ಪರಿಸರ ಮತ್ತು ವನ್ಯ ಪ್ರಭೇದಗಳು ಒದಗಿಸುವ ವಿವಿಧ ಪರಿಸರ ವ್ಯವಸ್ಥೆಯ ಸೇವೆಗಳ ಮೇಲೆ ಇವರೆಲ್ಲ ಅವಲಂಬಿತವಾಗಿದ್ದಾರೆ. ಅವೆಂದರೆ ಆಹಾರ, ಆಶ್ರಯ, ಶಕ್ತಿ, ಔಷಧಿ ಮತ್ತು ಮೂಲಭೂತ ಅಗತ್ಯಗಳ ಪೂರೈಕೆ. ಸ್ಥಳೀಯ ಜನಸಮುದಾಯಗಳು, ಅರಣ್ಯ, ವನ್ಯಜೀವಿ ಪ್ರಭೇದಗಳು ಮತ್ತು ಪರಿಸರ ವ್ಯವಸ್ಥೆಯ ಸೇವೆಗಳ ನಡುವಿನ ಸಹಜೀವನವನ್ನು ಇಲ್ಲಿ ನೋಡಬಹುದಾಗಿದೆ. ಜಗತ್ತಿನ ಸರಿಸುಮಾರು ಶೇ.28 ಭೂಪ್ರದೇಶಗಳು ಸ್ಥಳೀಯ ಜನಸಮುದಾಯಗಳ ಆಡಳಿತದಲ್ಲಿವೆ. ಇದರಲ್ಲಿ ಭೂಮಿಯ ಅತ್ಯಂತ ಸಮೃದ್ಧ ಅರಣ್ಯಗಳೂ ಸೇರಿವೆ. ಇವು ಅವರ ಆರ್ಥಿಕ ಮತ್ತು ವೈಯಕ್ತಿಕ ಯೋಗಕ್ಷೇಮಕ್ಕೆ ಮಾತ್ರ ಸೀಮಿತವಾಗಿಲ್ಲ, ಅವರ ಸಾಂಸ್ಕೃತಿಕ-ನಾಗರಿಕತೆಯ ಗುರುತುಗಳ ಕೇಂದ್ರಗಳೂ ಆಗಿವೆ. ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಹವಾಮಾನ ವೈಪರಿತ್ಯದಿಂದ ಜಗತ್ತಿನ ಜೀವವೈವಿಧ್ಯಕ್ಕೆ ಅಪಾರ ಧಕ್ಕೆ ಉಂಟಾಗುತ್ತಿದೆ. ಹವಾಮಾನ ಬದಲಾವಣೆ, ಜೀವವೈವಿಧ್ಯದ ನಷ್ಟ ಮತ್ತು ಈಗಿನ ಮಹಾಮಾರಿ ಕೋವಿಡ್-19ರಿಂದ ಇಡೀ ಜಗತ್ತಿನಲ್ಲಿ ಸಾಮಾಜಿಕ ಪಲ್ಲಟಗಳು ಮತ್ತು ಅಪಾರ ಆರ್ಥಿಕ ನಷ್ಟ ಉಂಟಾಗಿದೆ. ಇದೆಲ್ಲದರ ಬಗ್ಗೆ ಜಾಗೃತಿ ಮೂಡಿಸಲೆಂದೇ ಪ್ರತಿವರ್ಷ ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನವನ್ನಾಗಿ ಆಚರಿಸಲಾಗುತ್ತದೆ. ಅರಣ್ಯ-ವನ್ಯಜೀವಿ ನಿರ್ವಹಣಾ ಮಾದರಿಗಳು, ಮಾನವ ಯೋಗಕ್ಷೇಮ, ಅರಣ್ಯಗಳ ದೀರ್ಘಕಾಲೀನ ಸಂರಕ್ಷಣೆ, ಅರಣ್ಯಗಳಲ್ಲಿ ವಾಸಿಸುವ ವನ್ಯಪ್ರಾಣಿಗಳು ಮತ್ತು ಅಭ್ಯಾಸಗಳನ್ನು ಉತ್ತೇಜಿಸಲು ವಿಶ್ವಸಂಸ್ಥೆ ಪ್ರಯತ್ನಿಸುತ್ತಿದೆ. ಸಸ್ಯಸಂಕುಲ ಮತ್ತು ಅವುಗಳನ್ನು ಉಳಿಸಿಕೊಳ್ಳುವ ಪರಿಸರ ವ್ಯವಸ್ಥೆಗಳು ಮತ್ತು ಈ ನಿರ್ಣಾಯಕ ನೈಸರ್ಗಿಕ ವ್ಯವಸ್ಥೆಗಳೊಂದಿಗೆ ಹೆಚ್ಚು ಸುಸ್ಥಿರ ಸಂಬಂಧಗಳನ್ನು ಸ್ಥಾಪಿಸಲು ಸಾಂಪ್ರದಾಯಿಕ ಅಭ್ಯಾಸಗಳು ಮತ್ತು ಜ್ಞಾನದ ಮೌಲ್ಯವನ್ನು ಉತ್ತೇಜಿಸಬೇಕಿದೆ. ಭೂಮಿ ಮತ್ತು ಸುತ್ತಲಿನ ಪರಿಸರದ ಬಗ್ಗೆ ನಾವು ಆಸಕ್ತಿ ಉಳ್ಳವರಾದರೆ ಈ ವನ್ಯಪ್ರಾಣಿಗಳ ವಿಶ್ವ ದಿನವನ್ನೂ ಪ್ರಾಯೋಗಿಕವಾಗಿ ಆಚರಿಸಬೇಕಾಗಿದೆ. ಅರಣ್ಯ ಮತ್ತು ವನ್ಯಪ್ರಾಣಿಗಳ ವೈವಿಧ್ಯ ಪರಿಸರ, ಆನುವಂಶಿಕತೆ, ಸಾಮಾಜಿಕ, ಆರ್ಥಿಕ, ವೈಜ್ಞಾನಿಕ, ಶೈಕ್ಷಣಿಕ, ಸಾಂಸ್ಕೃತಿಕ, ಮನರಂಜನೆ, ಸೌಂದರ್ಯ, ಸುಸ್ಥಿರ ಅಭಿವೃದ್ಧಿ ಮಾನವಕ್ಷೇಮಕ್ಕೆ ಮುಖ್ಯವಾಗುತ್ತದೆ. ಈ ಭೂಮಿ ಕೂಡ ನಿರಂತರವಾಗಿ ಮಾನವ ಯೋಗಕ್ಷೇಮವನ್ನು ಕಾಪಾಡುತ್ತಾ ಬಂದಿದೆ. ವಿಶ್ವ ವನ್ಯಜೀವಿ ದಿನಾಚರಣೆ ಎಂದರೆ ನಮಗೆ ಮೊದಲು ಕಾಣಿಸುವುದು ಸ್ಥಳೀಯ ಮೃಗಾಲಯಗಳು ಮತ್ತು ಸಸ್ಯಶಾಸ್ತ್ರೀಯ ತೋಟಗಳು. ಇವು ನಮಗೆ ಜೀವವೈಧ್ಯದ ಬಗ್ಗೆ ನೆನಪಿಸುತ್ತವೆ. ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿಗಳ ಪ್ರಾಮುಖ್ಯತೆಯನ್ನು ವಿವರಿಸಿ ಹೇಳಬೇಕಿದೆ. ಶಾಲಾಮಕ್ಕಳಿಗೆ ಹೊರಾಂಗಣ ವಿಹಾರದೊಂದಿಗೆ ಅರಣ್ಯ-ವನ್ಯಜೀವಿ ಪರಿಸರದ ಸಂಪರ್ಕಗಳನ್ನು ಏರ್ಪಡಿಸಿ ಅವರಲ್ಲಿ ಕುತೂಹಲ ಮತ್ತು ಆಸಕ್ತಿಯನ್ನು ಹುಟ್ಟಿಸಬೇಕಿದೆ. ಇದರ ಮೂಲಕ ಅರಣ್ಯ ಮತ್ತು ವನ್ಯಜೀವಿಗಳನ್ನು ಉಳಿಸಿಕೊಳ್ಳಬೇಕಿದೆ. ಅಂದರೆ ನಮ್ಮನ್ನು ನಾವು ಉಳಿಸಿಕೊಳ್ಳುವುದೇ ಈ ವಿಶ್ವ ವನ್ಯಜೀವಿ ದಿನಾಚರಣೆಯ ಉದ್ದೇಶ.