ದೀರ್ಘಾವಧಿಯ ಕೋಚ್ ಮರಿಯನ್ ವಾಜ್ಡಗೆ ಜೊಕೊವಿಕ್ ವಿದಾಯ
ಮ್ಯಾಡ್ರಿಡ್ (ಸ್ಪೇನ್), ಮಾ. 2: 2022ರ ಅಸ್ತವ್ಯಸ್ತ ಟೆನಿಸ್ ಬದುಕಿನ ನಡುವೆಯೇ, ತನ್ನ ದೀರ್ಘಕಾಲೀನ ಕೋಚ್ ಮರಿಯನ್ ವಾಜ್ಡರಿಗೆ ಕಳೆದ ವರ್ಷದ ಎಟಿಪಿ ಫೈನಲ್ಸ್ ಬಳಿಕ ವಿದಾಯ ಕೋರಿರುವುದಾಗಿ ಸರ್ಬಿಯದ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಘೋಷಿಸಿದ್ದಾರೆ.
‘‘ನನ್ನ ಕ್ರೀಡಾ ಜೀವನದ ಮಹೋನ್ನತ ಹಾಗೂ ಸ್ಮರಣೀಯ ಕ್ಷಣಗಳಲ್ಲಿ ಮರಿಯನ್ ನನ್ನ ಜೊತೆಗಿದ್ದರು’’ ಎಂದು ಎನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 34 ವರ್ಷದ ಜೊಕೊವಿಕ್ ಹೇಳಿದ್ದಾರೆ.
ಜನವರಿಯಲ್ಲಿ, ಆಸ್ಟ್ರೇಲಿಯನ್ ಓಪನ್ ಆರಂಭಗೊಳ್ಳುವ ಮುನ್ನಾ ದಿನ ನೊವಾಕ್ ಜೊಕೊವಿಕ್‌ರನ್ನು ಆಸ್ಟ್ರೇಲಿಯದಿಂದ ಗಡಿಪಾರು ಮಾಡಲಾಗಿತ್ತು. ಕೊರೋನ ವೈರಸ್ ಲಸಿಕೆ ಸ್ವೀಕರಿಸಲು ನಿರಾಕರಿಸಿದ್ದ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋದರಾದರೂ, ಆಸ್ಟ್ರೇಲಿಯ ಸರಕಾರವು ವಿಶೇಷ ಅಧಿಕಾರವನ್ನು ಬಳಸಿ ಅವರನ್ನು ಗಡಿಪಾರು ಮಾಡಿತ್ತು. ಸೋಮವಾರ ಅವರು ತನ್ನ ನಂಬರ್ ವನ್ ರ್ಯಾಂಕಿಂಗ್‌ನ್ನು ರಶ್ಯದ ಡೆನೀಲ್ ಮೆಡ್ವೆಡೆವ್‌ಗೆ ಬಿಟ್ಟುಕೊಟ್ಟರು. 2006ರಲ್ಲಿ, ತನ್ನ ಹದಿಹರೆಯದಲ್ಲೇ ಜೊಕೋವಿಕ್ ಸ್ಲೊವೇಕಿಯದ ಕೋಚ್‌ರಿಂದ ತರಬೇತಿ ಪಡೆಯಲು ಆರಂಭಿಸಿದ್ದರು. 2017ರಲ್ಲಿ ಒಂದು ವರ್ಷ ಅವರು ಬೇರೆಯಾಗಿದ್ದರು. ನವೆಂಬರ್‌ನಲ್ಲಿ ಟ್ಯೂರಿನ್‌ನಲ್ಲಿ ನಡೆದ ಎಟಿಪಿ ಟೂರ್ ಫೈನಲ್ಸ್ ಬಳಿಕ ಜೊಕೊವಿಕ್ ಜೊತೆಗೆ ಕೆಲಸ ಮಾಡುವುದನ್ನು ವಾಜ್ಡ ನಿಲ್ಲಿಸಿದ್ದರು.