‘ಆಪರೇಷನ್ ಗಂಗಾ’: ಪ್ರಚಾರ ಮತ್ತು ವಾಸ್ತವ
ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ 20,000ದಷ್ಟು ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆಂದು ಭಾರತ ಸರಕಾರವು ಕೈಗೆತ್ತಿಕೊಂಡಿರುವ ‘ಅಪರೇಷನ್ ಗಂಗಾ’ ಕಾರ್ಯಾಚರಣೆಯು ‘ನಂಗಾ’ ಎಂದರೆ, ಬೆತ್ತಲೆಯಾಗುತ್ತಿರುವಂತೆ ಕಾಣುತ್ತಿದೆ. ಕರ್ನಾಟಕದ ವಿದ್ಯಾರ್ಥಿಯ ಸಾವು ಮತ್ತು ಸಾಮಾಜಿಕ, ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಚ್ಚುಹೆಚ್ಚಾಗಿ ಬೆಳಕಿಗೆ ಬರುತ್ತಿರುವ ಈ ವಿದ್ಯಾರ್ಥಿಗಳ ದಯನೀಯ ಗೋಳಿನ ಕತೆಗಳು ಹಾಗೂ ನೆಲಮಟ್ಟದ ವಾಸ್ತವಗಳು ಇದನ್ನೇ ಸೂಚಿಸುತ್ತವೆ. ಇಂತಹ ಪರಿಸ್ಥಿತಿಯ ಒಂದು ಕಿರು ಚಿತ್ರಣ ಇಲ್ಲಿದೆ.
ರಶ್ಯದ ಭಯಾನಕ ದಾಳಿಗೆ ಒಳಗಾಗಿರುವ ಉಕ್ರೇನಿನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರ, ಅದರಲ್ಲೂ ಮುಖ್ಯವಾಗಿ, ಅಲ್ಲಿದ್ದ- ಕರ್ನಾಟಕದ 346 ವಿದ್ಯಾರ್ಥಿಗಳೂ ಸೇರಿದಂತೆ ನಿಖರವಾಗಿ 18,320 ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮರಳಿ ಭಾರತಕ್ಕೆ ತರುವುದು ಇದೀಗ ಒಂದು ಆತಂಕಕಾರಿ ಮತ್ತು ಅತ್ಯಂತ ಆದ್ಯತೆಯ ರಾಷ್ಟ್ರೀಯ ಪ್ರಶ್ನೆಯಾಗಿದೆ. ಇವರನ್ನು ರಕ್ಷಿಸಲು ಭಾರತ ಸರಕಾರವು ಅಥವಾ ಬಿಜೆಪಿಯು ಬಿಂಬಿಸಲು ಬಯಸುವಂತೆ ಮೋದಿ ಸರಕಾರವು ತಡವಾಗಿ ಆರಂಭಿಸಿದ ‘ಅಪರೇಷನ್ ಗಂಗಾ’ವು ಪ್ರಚಾರದ ಹಪಾಹಪಿಯನ್ನೇ ಮೂಲವಾಗಿ ಹೊಂದಿತ್ತು. ಇದೀಗ, ಉಕ್ರೇನ್‌ನ ಪೂರ್ವ ಗಡಿಯ ಖಾರ್ಕೀವ್ ನಗರದಲ್ಲಿ ಕರ್ನಾಟಕದ ಹಾವೇರಿಯ 21 ವರ್ಷದ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಸಾವು ಮತ್ತು ಸಾಮಾಜಿಕ, ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಚ್ಚುಹೆಚ್ಚಾಗಿ ಬೆಳಕಿಗೆ ಬರುತ್ತಿರುವ ಈ ವಿದ್ಯಾರ್ಥಿಗಳ ದಯನೀಯ ಗೋಳಿನ ಕತೆಗಳು ಹಾಗೂ ನೆಲಮಟ್ಟದ ವಾಸ್ತವಗಳು ಇದನ್ನೇ ಸೂಚಿಸುತ್ತವೆ. ಈ ಪ್ರಚಾರದ ಆರಂಭದಲ್ಲಿದ್ದ ಕೀಳು ಅಭಿರುಚಿಯ ಹಪಾಹಪಿ, ಇದೀಗ ಹರಡಲಾಗುತ್ತಿರುವ ಅಗ್ಗದ ಅಪಪ್ರಚಾರಗಳನ್ನು ಪರಿಶೀಲಿಸುವ ಮೊದಲು ವಾಸ್ತವಾಂಶಗಳನ್ನು ನೋಡೋಣ.
ಯುದ್ಧದಲ್ಲಿ ನಾಶವಾಗುತ್ತಿರುವ ಉಕ್ರೇನಿನಲ್ಲಿ ಭಾರತೀಯರ ಡಿಲ್ಲದೆ, ಮೊರೊಕ್ಕೊ, ನೈಜೀರಿಯ, ನೆರೆಯ ಅಜರ್ ಬೈಜಾನ್, ತುರ್ಕ್‌ಮೇನಿಸ್ತಾನ್ ಸೇರಿದಂತೆ 80,000 ಅಂತರ್‌ರಾಷ್ಟ್ರೀಯ ವಿದ್ಯಾರ್ಥಿ ಗಳು ಕಲಿಯುತ್ತಿದ್ದರು. 158 ದೇಶಗಳ ವಿದ್ಯಾರ್ಥಿಗಳು ಮುಖ್ಯವಾಗಿ ಐದು ವಿಶ್ವವಿದ್ಯಾನಿಲಯಗಳ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ಇವುಗಳಲ್ಲಿ ಈಶಾನ್ಯದಲ್ಲಿರುವ ಎರಡನೇ ದೊಡ್ಡ ನಗರ ಖಾರ್ಕೀವ್‌ನಲ್ಲಿರುವ ಖಾರ್ಕೀವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿ ಮತ್ತು ವಿ.ಎನ್. ಕರಾಝಿನ್ ಖಾರ್ಕೀವ್ ನ್ಯಾಷನಲ್ ಯುನಿವರ್ಸಿಟಿ ಅತ್ಯಂತ ಜನಪ್ರಿಯ. ಭಾರತೀಯ ವಿದ್ಯಾರ್ಥಿಗಳು ಹೆಚ್ಚಾಗಿರುವುದು ಇಲ್ಲಿ ಮತ್ತು ರಾಜಧಾನಿ ಕೀವ್‌ನಲ್ಲಿರುವ ರಾಷ್ಟ್ರೀಯ ವಿಶ್ವವಿದ್ಯಾನಿಲಯದಲ್ಲಿ. ಇವುಗಳಲ್ಲಿ ಖಾರ್ಕೀವ್ ಮತ್ತು ಕೀವ್ ತೀವ್ರ ಶೆಲ್ ಮತ್ತು ವೈಮಾನಿಕ ಬಾಂಬ್ ದಾಳಿಗಳಿಗೆ ಗುರಿಯಾಗುತ್ತಿದ್ದು, ಖಾರ್ಕೀವ್ ಸಂಪೂರ್ಣವಾಗಿ ಮತ್ತು ಕೀವ್ ದಕ್ಷಿಣ ಗಡಿ ಬಿಟ್ಟು ಬಹುತೇಕವಾಗಿ ರಶ್ಯನ್ ಸೇನೆಯಿಂದ ಸುತ್ತುವರಿಯಲ್ಪಟ್ಟಿದ್ದು, ಪರಿಸ್ಥಿತಿ ಅರಾಜಕ ಮತ್ತು ಭಯಾನಕವಾಗಿದೆ. ಕೀವ್‌ನ ವಿದ್ಯಾರ್ಥಿಗಳು ನಗರದಿಂದ ಹೊರಬಂದಿದ್ದಾರೆ ಎಂದು ಸರಕಾರ ಹೇಳುತ್ತಿದ್ದು, ಖಾರ್ಕೀವ್‌ನಲ್ಲಿ ಉಳಿದಿರುವ ವಿದ್ಯಾರ್ಥಿಗಳನ್ನು ರಕ್ಷಿಸುವುದು ಬಹುತೇಕ ಅಸಾಧ್ಯ ಎಂಬಂತಾಗಿದೆ.
ಯುದ್ಧವು ಪಶ್ಚಿಮದ ಗಡಿಯಲ್ಲಿ ಹಬ್ಬಿಲ್ಲವಾದುದರಿಂದ ಅಲ್ಲಿ ಪೋಲ್ಯಾಂಡ್, ಸ್ಲೊವಾಕಿಯಾ ಮತ್ತು ರೊಮೇನಿಯಾ ಗಡಿ ದಾಟಿ ಅಲ್ಲಿಂದ ಭಾರತಕ್ಕೆ ಬರಲು ಸಾಧ್ಯ. ಈಗ ‘ಅಪರೇಷನ್ ಗಂಗಾ’ದ ವಿಮಾನಗಳು ಹಾರುತ್ತಿರುವುದು ಈ ದೇಶಗಳಿಂದಲೇ. ಇದನ್ನು ಬರೆಯುವ ಹೊತ್ತಿಗೆ ಏಳು ಹಾರಾಟಗಳಿಂದ ಸುಮಾರು ಒಂದೂವರೆ ಸಾವಿರದಷ್ಟು ಭಾರತೀಯರನ್ನು ಭಾರತಕ್ಕೆ ಕರೆತರಲಾಗಿದೆ. ಇದೀಗ ಭಾರತೀಯ ವಾಯುಪಡೆಯ ಸರಕು ವಿಮಾನಗಳನ್ನೂ ನಿಯೋಜಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಪಶ್ಚಿಮ ಭಾಗದಲ್ಲಿದ್ದು, ಮೊದಲಿಗೆ ಗಡಿದಾಟಿದವರು. ವಿದೇಶಾಂಗ ಖಾತೆಯ ಪ್ರಕಾರ 12,000 ವಿದ್ಯಾರ್ಥಿಗಳು ಗಡಿ ದಾಟಿದ್ದಾರೆ. ಹಾಗಾದರೆ, ಯುದ್ಧ ತಾರಕಕ್ಕೆ ಏರಿರುವ ಈ ಹೊತ್ತಿನಲ್ಲಿ ದೇಶದಲ್ಲಿ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿರುವ ಸಾವಿರಾರು ಇತರರ ಪಾಡೇನು? ಎಲ್ಲರನ್ನೂ ಹೊರತರಲು ಶಕ್ತಿ ಮೀರಿ ಯತ್ನಿಸುವುದಾಗಿ ಸರಕಾರ ಹೇಳುತ್ತಿದ್ದರೂ, ಇದನ್ನು ನಂಬುವಂತಹ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಯಾಕೆಂದರೆ, ಭಾರತದ ದೂತಾವಾಸವೇ ರಾಯಭಾರಿಯ ಸಹಿತ ಕೀವ್ ನಗರವನ್ನು ಬಿಟ್ಟು ಪಶ್ಚಿಮದ ದಿಕ್ಕಿನಲ್ಲಿ ಪ್ರಯಾಣ ಮಾಡುತ್ತಿದೆ. ಅದು ಲಿಯೇವ್ ನಗರದಲ್ಲಿ ಸ್ಥಾಪನೆಯಾಗುವ ನಿರೀಕ್ಷೆ ಇದೆಯಾದರೂ, ಸದ್ಯಕ್ಕೆ ಅದು ಆಗೊಮ್ಮೆ ಈಗೊಮ್ಮೆ ಮಾತ್ರ ಇಲೆಕ್ಟ್ರಾನಿಕ್ ಸಂಪರ್ಕದ ನೆಟ್‌ವರ್ಕ್ ನಲ್ಲಿ ಸಿಗುತ್ತಿದೆಯಂತೆ! ಹೀಗಿರುವಾಗ ಭಾರತೀಯರಿಗೆ ಸಲಹೆ ನೀಡುವವರು, ರಕ್ಷಿಸುವವರು ಯಾರು ಮತ್ತು ಹೇಗೆ?
ಭಾರತವು ತನ್ನ ಕಾರ್ಯಾಚರಣೆಯನ್ನೇ ತಡವಾಗಿ ಆರಂಭಿಸಿತು. ಪರಿಸ್ಥಿತಿಯ ಗಂಭೀರತೆಯನ್ನು ಗ್ರಹಿಸಲಿಲ್ಲ. ಸಾಧ್ಯವಿರುವವರು ಗಡಿದಾಟುವಂತೆ ಹೇಳಿದರೂ, ಉಳಿದವರು ಮುಂದಿನ ಕ್ರಮದವರೆಗೆ ಇದ್ದಲ್ಲೇ ಸುರಕ್ಷಿತ ಸ್ದಳದಲ್ಲಿಯೇ ಉಳಿಯುವಂತೆ ಸೂಚಿಸಿತು. ಸಾವಿರಾರು ಮಂದಿಗೆ ಮುಂದಿನ ಕ್ರಮ ಬರಲೇ ಇಲ್ಲ. ಆ ನಿರೀಕ್ಷೆಯೂ ಇಲ್ಲ. ಈಗ ಗಡಿದಾಟಿದವರನ್ನು ಮರಳಿ ತರುವ ಪ್ರಯತ್ನ ನಡೆಯುತ್ತಿದೆಯೇ ಹೊರತು, ಒಳಗಿರುವವರ ಬಗ್ಗೆ ಸರಕಾರವೇ ಯಾವುದೇ ಸ್ಪಷ್ಟತೆ ಹೊಂದಿದಂತಿಲ್ಲ. ಖಾರ್ಕೀವ್‌ನಲ್ಲಿರುವ ವಿದ್ಯಾರ್ಥಿಗಳು ಹೇಳುತ್ತಿರುವಂತೆ: ಈಗ ಕೂಡಾ ಸುರಕ್ಷಿತ ಸ್ದಳದಲ್ಲಿಯೇ ಉಳಿಯುವಂತೆಯೂ, ಸ್ವತ ಪಾರಾಗಲೂ ಪ್ರಯತ್ನಿಸಿ ಅಪಾಯವಾದರೆ ತಾನು ಜವಾಬ್ದಾರಿಯಲ್ಲ ಎಂದೂ ವಿದೇಶಾಂಗ ಸಚಿವಾಲಯ ನಿರ್ದೇಶನ ನೀಡಿದೆ. ಆದರೆ, ಇವರನ್ನು ರಕ್ಷಿಸುವ ಯಾವುದೇ ದಾರಿ ಅದರ ಬಳಿ ಉಳಿದಿಲ್ಲ. ಹಾಗಾದರೆ ಅವರು ಎಲ್ಲಿಯ ತನಕ ಅಲ್ಲಿ ಉಳಿದಿರಬೇಕು? ಅಲ್ಲಿ ಅವರು ಅನುಭವಿಸುತ್ತಿರುವ ಕಷ್ಟಕರ ಪರಿಸ್ಥಿತಿಯ ಕುರಿತು, ಅನ್ನ, ನೀರು, ಔಷಧಿ ಇತ್ಯಾದಿ ಕೊರತೆ, ಹಣ ತೆಗೆಯಲಾಗದ ಕೊರತೆ, ಸರತಿ ಸಾಲು ಇತ್ಯಾದಿಗಳ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆ ಮಕ್ಕಳೇ ತಮ್ಮ ದಯನೀಯ ಸ್ಥಿತಿಗಳನ್ನು ವಿವರಿಸುತ್ತಿದ್ದಾರೆ. ವಿದ್ಯಾರ್ಥಿ ನವೀನ್ ಸಾವಿಗೀಡಾದದ್ದೂ ದಿನಸಿಗಾಗಿ ಕ್ಯೂ ನಿಂತಿದ್ದಾಗ ಎಂದು ಗಮನಿಸಬೇಕು.
ಗಡಿಯನ್ನು ದಾಟಿದರೆ, ಸುರಕ್ಷಿತವಾಗಿ ಭಾರತಕ್ಕೆ ಮರಳಬಹುದು. ಗಡಿಯೀಚೆಯ ದೇಶಗಳು ನಿರಾಶ್ರಿತರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಅಲ್ಲಿನ ಸ್ವಯಂಸೇವಕರು ಆಹಾರ, ವಸತಿ, ವೈದ್ಯಕೀಯ ಇತ್ಯಾದಿ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ ಎಂದು ವರದಿಗಳಿಂದಲೂ, ಸ್ವತಃ ಹಿಂತಿರುಗಿರುವ ವಿದ್ಯಾರ್ಥಿಗಳಿಂದಲೂ ತಿಳಿಯುತ್ತಿದೆ. ಆದರೆ ಸಮಸ್ಯೆ ಎಂದರೆ, ಕಿಕ್ಕಿರಿದಿರುವ ಗಡಿಗಳನ್ನು ದಾಟುವುದು ಮತ್ತು ಅದಕ್ಕಿಂತ ಮುಖ್ಯವಾಗಿ ನೂರಾರು ಕಿ.ಮೀ.ದೂರದಿಂದ ಪ್ರಯಾಣ ಮಾಡಿ ಗಡಿಗಳನ್ನು ತಲಪುವುದು. ಗಡಿಗಳಲ್ಲಿ ಭಾರತೀಯರ ಮೇಲೆ ಹಲ್ಲೆಗಳು ನಡೆಯುತ್ತಿರುವ ವರದಿಗಳೂ ಪ್ರಸಾರವಾಗಿವೆ. ಇದಕ್ಕೆ ಒಟ್ಟು ಪರಿಸ್ಥಿತಿಯ ಒತ್ತಡ, ಉಕ್ರೇನ್‌ನವರಿಗೆ ನೀಡಬೇಕಾದ ಆದ್ಯತೆ, ಒಟ್ಟು ಅರಾಜಕ ಪರಿಸ್ಥಿತಿ, ಉಕ್ರೇನ್ ಬಹಳ ನಿರೀಕ್ಷೆ ಇಟ್ಟುಕೊಂಡಿರಬಹುದಾದ ಭಾರತದ ತಟಸ್ಥ ನಿಲುವಿನಿಂದ ಉಂಟಾದ ಸಿಟ್ಟು ಇವೆಲ್ಲವೂ ಕಾರಣವಿರಬಹುದು.
ಇದೇ ಕಾರಣದಿಂದಾಗಿ, ಉಳಿದಿರುವ ವಿದ್ಯಾರ್ಥಿಗಳು ನೂರಾರು ಕಿ.ಮೀ. ಪ್ರಯಾಣಿಸಿ ಗಡಿ ತಲಪುವುದು ಬಹುತೇಕ ಅಸಾಧ್ಯ. ಶೆಲ್, ಬಾಂಬ್ ದಾಳಿಗಳ ಅಪಾಯಗಳಿಗೆ ಹೊರತಾಗಿ ವಾಹನಗಳು ಇಲ್ಲದಿರುವುದು, ರೈಲುಗಳನ್ನು ಸ್ದಳೀಯರೇ ಆಕ್ರಮಿಸುತ್ತಿರುವುದು, ದಾರಿಯಲ್ಲಿ ಕ್ರಿಮಿನಲ್‌ಗಳಿಂದ ಆಗಬಹುದಾದ ಅಪಾಯ, ಹಿಮ ಸುರಿಯುತ್ತಿರುವ, ಸೊನ್ನೆಗಿಂತಲೂ ಕೆಳಗಿನ ಉಷ್ಣತೆ ಇವೆಲ್ಲಾ ಕಾರಣಗಳಿವೆ. ನಾವು ಒಂದು ಯುದ್ಧ ವಲಯದಲ್ಲಿ ಇದ್ದುಕೊಂಡು ಇದನ್ನು ಊಹಿಸಿ ಸಂಕಟಪಡಬಹುದೇ ಹೊರತು, ಈ ದುರಂತವನ್ನು ಸವಿಯುತ್ತಿರುವ ಕೆಲವು ಮಾಧ್ಯಮಗಳಲ್ಲಿನ ರಣಹದ್ದುಗಳ ಊಹೆಗೆ ಈ ನೋವು, ಸಂಕಷ್ಟ ಅರ್ಥವೇ ಆಗದು. ಸ್ವಂತ ದೇಶದಲ್ಲಿ ಹಠಾತ್ ಲಾಕ್‌ಡೌನ್ ಮೂಲಕ ಲಕ್ಷಾಂತರ ಜನರು ನಿರಾಶ್ರಿತರಂತೆ ಅನ್ನಾಹಾರ, ರಕ್ಷಣೆ ಇಲ್ಲದ ಮೈಲುಗಟ್ಟಲೆ ನಡೆಯುವಂತೆ ಮಾಡಿದವರಿಗೆ ಇದು ಅರ್ಥವಾಗುವುದು ಹೇಗೆ?
ಇಂತಹ ಪರಿಸ್ಥಿತಿಯಲ್ಲಿ ಸರಕಾರ ಈ ತನಕ ಮತ್ತು ನಂತರ ನಡೆದುಕೊಂಡ ರೀತಿ ನಾಚಿಕೆಗೇಡಿನದ್ದಾಗಿದೆ. ಅದು ಪ್ರಯತ್ನಗಳನ್ನು ಮಾಡುತ್ತಿದೆ ಎಂಬುದು ನಿಜ. ಆದರೆ, ಇಡೀ ದೇಶವನ್ನು ಜೊತೆಗೆ ಸೇರಿಸದೆ, ಪ್ರಧಾನಿಯಲ್ಲ-ಬರೀ ಒಬ್ಬ ಮೋದಿ, ಬಿಜೆಪಿ ಇದನ್ನು ಮಾಡುತ್ತಿರುವಂತೆ ಬಿಂಬಿಸಲಾಯಿತು. ಇದಕ್ಕೆ ಕಾರಣ ಉತ್ತರ ಪ್ರದೇಶದ ಚುನಾವಣೆಯಲ್ಲಿ ಲಾಭ ಪಡೆಯುವುದು. ಅದಕ್ಕಾಗಿಯೇ ಮೋದಿ ಚುನಾವಣಾ ಪ್ರಚಾರ ಸಭೆಗಳಲ್ಲಿ ವೀರಾವೇಶದ ಭಾಷಣ ಮಾಡಿದರು. ಬಿಜೆಪಿಯ ಐಟಿ ಸೆಲ್‌ಗಳು ಬೇಗಡೆ, ಬಾವುಟ ದೇಶಪ್ರೇಮದ ಬೊಂಬಡಾ ಬಜಾಯಿಸಿದವು. ತಾವಾಗಿಯೇ ಮರಳಿದವರನ್ನೂ ನಖ್ವಿಯಂತಹ ಮಂತ್ರಿಗಳು ತಾವು ಮಹಾ ಸಾಧನೆ ಮಾಡಿದ ದೇಖಿಯಲ್ಲಿ ಬಾವುಟ ಕೊಟ್ಟು ವಿಮಾನದೊಳಗೇ ಸ್ವಾಗತಿಸಿ, ಸರಕಾರವನ್ನು ಹೊಗಳಿಸಿದರು. ಈ ಕಾರ್ಯಾಚರಣೆಗೆ ಗಂಗಾ ಎಂಬ ಹೆಸರನ್ನು ಕೊಟ್ಟದ್ದೂ ಇದೇ ಕಾರಣದಿಂದ. ಇದೀಗ ಸರಕಾರದ ಚಾಳಿಯಾಗಿಹೋಗಿದೆ. ಅಫ್ಘಾನಿಸ್ತಾನ ಕಾರ್ಯಾಚರಣೆಗೂ ‘ದೇವಿ ಶಕ್ತಿ’ ಎಂಬ ಧಾರ್ಮಿಕ ಹೆಸರನ್ನು ನೀಡಲಾಗಿತ್ತು. ಇದರಲ್ಲಿ ಯಾವ ದೇವಿ? ಯಾವ ಶಕ್ತಿ? ಜಾತ್ಯತೀತ ಭಾರತವು ಹಿಂದೆ ಇರಾಕ್, ಕುವೈಟ್, ಲಿಬಿಯಾಗಳಿಂದ ಲಕ್ಷಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ಯಾವತ್ತೂ ಕಾರ್ಯಾಚರಣೆಗೆ ಧಾರ್ಮಿಕ ಹೆಸರುಗಳನ್ನು ಇಟ್ಟದ್ದಿಲ್ಲ. ಅಗ್ಗದ ಪ್ರಚಾರ ಮಾಡಿದ್ದಿಲ್ಲ.
ಇದೀಗ ಕೇವಲ 20,000 ಜನರನ್ನು ರಕ್ಷಿಸುವ ಕಾರ್ಯಾಚರಣೆ ಯಲ್ಲಿ ವಿಫಲವಾಗಿರುವ ಸರಕಾರ ಎಲ್ಲವನ್ನೂ ಪ್ರಚಾರಕ್ಕಾಗಿಯೇ ಮಾಡುತ್ತಿದೆ. ಉದಾಹರಣೆಗೆ: ಊರು ಕೊಳ್ಳೆಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ ನಾಲ್ವರು ಮಂತ್ರಿಗಳನ್ನು ಕಳುಹಿಸಿದೆ. ಇದು ತೋರಿಕೆಯಲ್ಲದೆ ಬೇರೇನೂ ಅಲ್ಲ ಎಂದು ತಜ್ಞರು ಹೇಳುತ್ತಾರೆ. ಯಾಕೆಂದರೆ, ಉಕ್ರೇನಿನ ಉನ್ನತಾಧಿಕಾರಿಗಳೆಲ್ಲಾ ಯುದ್ಧದಲ್ಲಿ ವ್ಯಸ್ತವಾಗಿರುವುದರಿಂದ ಮೇಲ್ಮಟ್ಟದಲ್ಲಿ ಏನೂ ಆಗಲು ಸಾಧ್ಯವಿಲ್ಲ. ಈಗ ಮಾಡಬಹುದಾದ ಒಂದೇ ಕೆಲಸವೆಂದರೆ, ಉಕ್ರೇನ್ ಸಹಕಾರ ಪಡೆದು ತಳಮಟ್ಟದಲ್ಲಿ ಕೆಲಸ ಮಾಡಬಲ್ಲ ಅಧಿಕಾರಿಗಳು ಮತ್ತು ಸ್ವಯಂಸೇವಕರ ತಂಡಗಳನ್ನು ಸಿಕ್ಕಿಬಿದ್ದವರ ರಕ್ಷಣೆಗಾಗಿ ಕಳುಹಿಸಲು ಯತ್ನಿಸುವುದು. ಮೋದಿಯನ್ನು ‘ವಿಶ್ವಗುರು’ ಎಂದು ಕರೆದು, ಅವರಿಗೆ ಎಲ್ಲರೂ ಹೆದರುತ್ತಾರೆ; ಅವರು ಒಂದು ಮಾತು ಹೇಳಿದರೆ ಯುದ್ಧವೇ ನಿಲ್ಲುವುದು ಎಂಬ ಭಟ್ಟಂಗಿಗಳ ಹಾಸ್ಯಾಸ್ಪದ ಭ್ರಮೆಗಳಿಗೆ ನೀರೆರಚುವಂತೆ ಅವರದ್ದೇನೂ ಉಕ್ರೇನಿನಲ್ಲಾಗಲೀ, ರಶ್ಯದಲ್ಲಾಗಲೀ, ಯುಎಸ್‌ಎಯಲ್ಲಾಗಲೀ ಕಿಂಚಿತ್ತೂ ನಡೆಯುತ್ತಿಲ್ಲ. ಬದಲಾಗಿ ಮೂರೂ ದೇಶಗಳು ಭಾರತದ ನಿಲುವಿನ ಬಗ್ಗೆ ಅಸಮಾಧಾನಗೊಂಡಿವೆ. ಇದೇ ಹೊತ್ತಿಗೆ, ಭಾರತೀಯರ ರಕ್ಷಣೆ ಬಗ್ಗೆ ನಿದ್ದೆ ಕಳೆದುಕೊಳ್ಳಬೇಕಾಗಿದ್ದ ವಿದೇಶಾಂಗ ರಾಜ್ಯ ಸಚಿವೆ ಮೀನಾಕ್ಷಿ ಬಾಳಿ, ಕೊಯಮತ್ತೂರಿನ ಸ್ವಯಂಘೋಷಿತ ಸದ್ಗುರು ಜಗ್ಗಿ ವಾಸುದೇವ್ ಮಠದಲ್ಲಿ ಮಣ್ಣಿನ ರಕ್ಷಣೆಯ ಬಗ್ಗೆ ವಿಚಾರಸಂಕಿರಣದಲ್ಲಿ ಭಾಗವಹಿಸಿ ಟ್ವೀಟ್ ಮಾಡುತ್ತಾರೆ ಎಂದರೆ, ಸರಕಾರದ ಬೇಜವಾಬ್ದಾರಿಯ ಮಟ್ಟವನ್ನು ಊಹಿಸಬಹುದು. ಜನರಿಗಿಂತ ಮಣ್ಣು, ಭೂಪಟಗಳನ್ನು ದೇಶವೆಂದು ತಿಳಿದುಕೊಂಡವರಿಂದ ಬೇರೇನು ನಿರೀಕ್ಷಿಸಬಹುದು?
ಇಂತಹ ಪರಿಸ್ಥಿತಿಯಲ್ಲಿ ಸರಕಾರ, ಬಿಜೆಪಿ ಮತ್ತು ಮೋದಿ ಅಭಿಮಾನಿಗಳು ಇಳಿದಿರುವ ಮಟ್ಟ ವಾಕರಿಕೆ ತರಿಸುವಂತದ್ದು. ವಿದ್ಯಾರ್ಥಿಯ ಸಾವು, ವಿದ್ಯಾರ್ಥಿಗಳ ಗೋಳಿನ ಕತೆಗಳು ರಾಶಿರಾಶಿಯಾಗಿ ಹೊರಬರುತ್ತಿರುವಂತೆಯೇ, ವೈಫಲ್ಯ ಮುಚ್ಚಿಹಾಕಲು ಬೇರೆಯೇ ದಾರಿತಪ್ಪಿಸುವ ಕತೆಗಳನ್ನು ಹರಡಲಾಗುತ್ತಿದೆ. ನವೀನ್ ಸಾವಿಗೆ ಆತನೇ ಕಾರಣ, ಉಕ್ರೇನಿಗೆ ಕಲಿಯಲು ಹೋದವರು ಅರ್ಹತೆ ಇಲ್ಲದವರು, ಅವರು ಭಾರತದಲ್ಲಿಯೇ ಕಲಿಯಬೇಕಿತ್ತು ಇತ್ಯಾದಿ ಬೇಜವಾಬ್ದಾರಿ, ಅಮಾನವೀಯ ಹೇಳಿಕೆಗಳನ್ನು ನಾಚಿಕೆ ಇಲ್ಲದೇ ಪ್ರಚಾರ ಮಾಡಲಾಗುತ್ತಿದೆ. ಕೇಂದ್ರ ಮಂತ್ರಿಗಳಾದ ಪ್ರಹ್ಲಾದ್ ಜೋಷಿ ಮುಂತಾದವರೂ ಇದರಲ್ಲಿ ಭಾಗಿಯಾಗಿದ್ದಾರೆ. ಇವೆಲ್ಲವುಗಳಿಂದಾಗಿ ಹುಸಿ ದೇಶಪ್ರೇಮ ಬಿತ್ತಿ ಮತಗಳ ಬೆಳೆ ತೆಗೆಯುವ ಸರಕಾರದ ಮತ್ತು ಬಿಜೆಪಿಯ ಕೀಳು ಆಭಿರುಚಿ, ನಿರ್ದಯ ಅಸೂಕ್ಷ್ಮತೆ ಮತ್ತು ನಾಚಿಗೆಗೇಡುತನ ‘ನಂಗಾ’-ಬೆತ್ತಲಾಗಿದೆ!
ಎಲ್ಲರನ್ನೂ ಹೊರತರಲು ಶಕ್ತಿ ಮೀರಿ ಯತ್ನಿಸುವುದಾಗಿ ಸರಕಾರ ಹೇಳುತ್ತಿದ್ದರೂ, ಇದನ್ನು ನಂಬುವಂತಹ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಯಾಕೆಂದರೆ, ಭಾರತದ ದೂತಾವಾಸವೇ ರಾಯಭಾರಿಯ ಸಹಿತ ಕೀವ್ ನಗರವನ್ನು ಬಿಟ್ಟು ಪಶ್ಚಿಮದ ದಿಕ್ಕಿನಲ್ಲಿ ಪ್ರಯಾಣ ಮಾಡುತ್ತಿದೆ. ಅದು ಲಿಯೇವ್ ನಗರದಲ್ಲಿ ಸ್ಥಾಪನೆಯಾಗುವ ನಿರೀಕ್ಷೆ ಇದೆಯಾದರೂ, ಸದ್ಯಕ್ಕೆ ಅದು ಆಗೊಮ್ಮೆ ಈಗೊಮ್ಮೆ ಮಾತ್ರ ಇಲೆಕ್ಟ್ರಾನಿಕ್ ಸಂಪರ್ಕದ ನೆಟ್‌ವರ್ಕ್‌ನಲ್ಲಿ ಸಿಗುತ್ತಿದೆಯಂತೆ! ಹೀಗಿರುವಾಗ ಭಾರತೀಯರಿಗೆ ಸಲಹೆ ನೀಡುವವರು, ರಕ್ಷಿಸುವವರು ಯಾರು ಮತ್ತು ಹೇಗೆ?