ಕಾರ್ಕಳ ಉತ್ಸವಕ್ಕೆ ರಾಜ್ಯಪಾಲರನ್ನು ಆಮಂತ್ರಿಸಿದ ಸಚಿವ ಸುನೀಲ್ ಕುಮಾರ್
ಉಡುಪಿ, ಮಾ.3: ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರು ಇಂದು ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮಾರ್ಚ್ 10ರಿಂದ 20ರವರೆಗೆ ನಡೆಯಲಿರುವ ಕಾರ್ಕಳ ಉತ್ಸವಕ್ಕೆ ರಾಜ್ಯಪಾಲರನ್ನು ಅಧಿಕೃತವಾಗಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ನೀಡಿ ಆಹ್ವಾನಿಸಿದ ಅವರು, ಉತ್ಸವದ ವೈಶಿಷ್ಟ್ಯ ಗಳನ್ನು ರಾಜ್ಯಪಾಲರಿಗೆ ವಿವರಿಸಿದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಯೋಗದೊಂದಿಗೆ ಹತ್ತುದಿನಗಳ ಈ ಉತ್ಸವವನ್ನು ಪ್ರಥಮ ಬಾರಿಗೆ ಕಾರ್ಕಳದಲ್ಲಿ ಆಯೋಜಿಸಲಾಗಿದೆ.
ತುಳು ನಾಡಿನ ಸಾಂಸ್ಕ್ರತಿಕ ಬದುಕಿನ ಅನಾವರಣದ ಜತೆಗೆ ಕೋವಿಡ್‌ನಿಂದ ಏಕತಾನತೆಗೆ ಸಿಲುಕಿದ್ದ ತಾಲೂಕಿನ ಜನಜೀವನಕ್ಕೆ ಉತ್ಸಾಹ ತುಂಬುವ ಉದ್ದೇಶ ವನ್ನು ಉತ್ಸವ ಹೊಂದಿದೆ. ಉತ್ಸವ ಕಾರ್ಕಳದಲ್ಲಿ ನಡೆಯುತ್ತಿದ್ದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈಗಾಗಲೇ ಸದ್ದು ಮಾಡುತ್ತಿದೆ.
ತುಳುನಾಡಿನ ಸಾಂಸ್ಕ್ರತಿಕ ವೈಭವ ಉತ್ಸವದ ಜೀವಾಳವಾಗಿದ್ದು, ಈ ಹಿನ್ನೆಲೆಯಲ್ಲಿ ಉತ್ಸವದ ಸಿದ್ಧತಾ ಕಾರ್ಯ ಭರದಿಂದ ನಡೆಯುತ್ತಿದೆ. ಗಣ್ಯಾತಿಗಣ್ಯರು, ಅನಿವಾಸಿ ಕಾರ್ಕಳ ಜನರು ಸೇರಿದಂತೆ ಲಕ್ಷಾಂತರ ಮಂದಿ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.