ಅವಘಡಗಳ ನಿಯಂತ್ರಣ ಸಾಮಾಜಿಕ ಹೊಣೆ
ಇಂದು ರಾಷ್ಟ್ರೀಯ ಸುರಕ್ಷತಾ ದಿನ
ಪ್ರತಿ ವರ್ಷ ದೇಶದಾದ್ಯಂತ ಮಾರ್ಚ್ 4ರಂದು ರಾಷ್ಟ್ರೀಯ ಸುರಕ್ಷತಾ ದಿನ ಎಂದು ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಆಚರಿಸುತ್ತಿದೆ. ಜನ ಸಾಮಾನ್ಯರಲ್ಲಿ ರಾಷ್ಟ್ರೀಯ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶ ಈ ಆಚರಣೆ ಹೊಂದಿದೆ. ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಎನ್ನುವುದು ಸ್ವಾಯತ್ತ ಸಂಸ್ಥೆಯಾಗಿದ್ದು, ಸ್ವಂತ ಹಣಕಾಸಿನ ಬಲದಿಂದ ಲಾಭದಾಯಕವಲ್ಲದ ಉನ್ನತ ಸಂಸ್ಥೆಯಾಗಿದ್ದು ಭಾರತ ಸರಕಾರದ ಉದ್ಯೋಗ ಮಂತ್ರಾಲಯದ ಅಧೀನಕ್ಕೆ ಒಳಪಟ್ಟಿದೆ. 1966ರ ಮಾರ್ಚ್ 4ರಂದು ರಾಷ್ಟ್ರೀಯ ಸಂಪನ್ಮೂಲಗಳ ಸುರಕ್ಷತೆ, ಆರೋಗ್ಯ ಮತ್ತು ಪರಿಸರದ ಬಗ್ಗೆ ರಾಷ್ಟೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಸೊಸೈಟಿ ಕಾಯ್ದೆಗಳ ಅಧೀನಕ್ಕೆ ಒಳಪಡುವ ಈ ಸಂಸ್ಥೆಯ ಕೇಂದ್ರ ಕಚೇರಿ ಮುಂಬೈಯಲ್ಲಿದ್ದು, ಕೈಗಾರಿಕಾ ಸಂಸ್ಥೆಗಳ ಬಗ್ಗೆ ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆಯನ್ನು ಮೂಡಿಸುವ ಹೆಚ್ಚಿನ ಹೊಣೆಗಾರಿಕೆಯನ್ನು ಹೊಂದಿದೆ. ಜನರಲ್ಲಿ ರಾಷ್ಟೀಯ ಸಂಪನ್ಮೂಲಗಳ ಸುರಕ್ಷತೆ, ಕೈಗಾರಿಕೀಕರಣದಿಂದಾಗುವ ಆರೋಗ್ಯದ ಮೇಲಿನ ದುಷ್ಪರಿಣಾಮ ಮತ್ತು ಪರಿಸರದ ಮೇಲಾಗುವ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸಿ, ಜನರಲ್ಲಿ ವೈಜ್ಞಾನಿಕ ಚಿಂತನೆ, ರೋಗ ತಡೆಗಟ್ಟುವ ಮಾನಸಿಕ ಸ್ಥಿತಿ ಮತ್ತು ವಿಪತ್ತುಗಳನ್ನು ಎದುರಿಸುವಲ್ಲಿ ರಚನಾತ್ಮಕ ಮತ್ತು ಧನಾತ್ಮಕ ವಿಚಾರ ಚಿಂತನೆಗಳನ್ನು ಮೂಡಿಸುವ ಮೂಲ ಉದ್ದೇಶವನ್ನು ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಹೊಂದಿದೆ. ಈ ನಿಟ್ಟಿನಲ್ಲಿ ಮಾರ್ಚ್ 6ರಿಂದ 10ರ ವರೆಗೆ ರಾಷ್ಟ್ರದಾದ್ಯಂತ ರಾಷ್ಟ್ರೀಯ ಸುರಕ್ಷತಾ ಸಪ್ತಾಹ ಎಂದು ಆಚರಿಸಲಾಗುತ್ತದೆ.
ಹೇಗೆ ಆಚರಿಸಲಾಗುತ್ತದೆ?
ಸಾಮಾನ್ಯವಾಗಿ ಕೈಗಾರಿಕೆಗಳ ಮತ್ತು ಕಾರ್ಖಾನೆಗಳ ಸಾಂದ್ರತೆ ಜಾಸ್ತಿ ಇರುವ ಜಿಲ್ಲೆಗಳ ಕೇಂದ್ರ ಸ್ಥಾನಗಳಲ್ಲಿ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ಒಂದುಗೂಡಿ, ಇತರ ಆರೋಗ್ಯ ಸಂಸ್ಥೆಗಳು, ಅಗ್ನಿಶಾಮಕದಳ, ಗೃಹರಕ್ಷಕದಳ, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ, ಸಾರಿಗೆ ಇಲಾಖೆ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳೆಲ್ಲಾ ಒಟ್ಟು ಸೇರಿ ಈ ಆಚರಣೆಯನ್ನು ಮಾಡುತ್ತಿದೆ. ಜನರಲ್ಲಿ ಕೈಗಾರಿಕಾ ಅವಘಡಗಳನ್ನು ತಡೆಯುವುದು ಹೇಗೆ ಮತ್ತು ಅವಘಡ ನಡೆದಾಗ ಯಾವ ರೀತಿ ಮಾನವ ಸಂಪನ್ಮೂಲ, ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶವನ್ನು ಕಡಿಮೆ ಮಾಡಬಹುದು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ವಿಚಾರ ವಿನಿಮಯ ನಡೆಸಲಾಗುತ್ತದೆ. ಕೈಗಾರಿಕಾ ಸುರಕ್ಷತೆ ಬಗ್ಗೆ ವಿಚಾರ ಸಂಕಿರಣಗಳು, ವರ್ಕ್ಶಾಪ್ಗಳು, ಸೆಮಿನಾರ್ಗಳು, ಸಮ್ಮೇಳನಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ದೇಶಾದ್ಯಂತ ಹಮ್ಮಿಕೊಂಡು, ಜನರಲ್ಲಿ ಹೆಚ್ಚಿನ ಕೈಗಾರಿಕಾ ದುರ್ಘಟನೆ ನಡೆದಾಗ ಯಾವ ರೀತಿ ವರ್ತಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅದೇ ರೀತಿ ಕಾರ್ಖಾನೆಗಳ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಸುರಕ್ಷಿತ ಅವವ್ಯಯಗಳ ಪಟ್ಟಿ ಮಾಡುವುದು, ಕೈಗಾರಿಕೆಗಳಿಂದಾಗುವ ದುರ್ಘಟನೆಗಳ ಮಾಪನ, ಅಪಘಾತಗಳ ಸಮಯದಲ್ಲಿ ಉಂಟಾಗುವ ಅಪಾಯಗಳು, ಪ್ರಮಾಣೀಕರಣ ಮತ್ತು ಕಡಿತಗೊಳಿಸುವ ಪ್ರಕ್ರಿಯೆಗಳ ಬಗೆಗಿನ ವಿಚಾರ ವಿನಿಮಯ ನಡೆಸಲಾಗುತ್ತದೆ.
ಕೊನೆ ಮಾತು:
ವ್ಯೆಜ್ಞಾನಿಕತೆ, ತಂತ್ರಜ್ಞಾನ ಮತ್ತು ಅವಿಷ್ಕಾರಗಳು ಹುಟ್ಟಿಕೊಂಡಂತೆ, ಜೊತೆ ಜೊತೆಗೆ ಮನುಷ್ಯನ ಪ್ರಾಥಮಿಕ ಅವಶ್ಯಕತೆಗಳ ಹೊರತಾಗಿ, ಇನ್ನಿತರ ಭೋಗ ಭಾಗ್ಯಗಳ ಪಟ್ಟಿ ಬೆಳೆಯುತ್ತಲೇ ಇದೆ. ಹಾಗಾಗಿ ಔದ್ಯೋಗೀಕರಣ, ಕೈಗಾರೀಕರಣ, ವ್ಯಾಪಾರೀಕರಣ ಎಲ್ಲವೂ ಜೊತೆ ಜೊತೆಯಾಗಿಯೇ ಧಾವಂತದಲ್ಲಿ ಮುನ್ನುಗ್ಗುತ್ತಲಿದೆ. ಇದರ ಜೊತೆಗೆ ಹಲವಾರು ಅಡ್ಡಪರಿಣಾಮಗಳು ಮತ್ತು ಸಂಕಷ್ಟಗಳು ಬರತೊಡಗಿದೆ. ಜನರ ಆಸೆ ಅಕಾಂಕ್ಷೆಗಳಿಗೆ ಹೇಗೆ ಇತಿಮಿತಿ ಇಲ್ಲವೋ, ಹಾಗೆಯೇ ಕೈಗಾರೀಕರಣ ಮತ್ತು ಔದ್ಯೋಗಿಕ ಕ್ರಾಂತಿಯಿಂದ ಹಲವಾರು ಮನುಷ್ಯ ನಿರ್ಮಿತ ಅವಘಡಗಳ ಸಾಧ್ಯತೆಯನ್ನು ಮನುಷ್ಯ ತನ್ನ ಸುತ್ತಲಿನ ವಾತಾವರಣದಲ್ಲಿ ಬೆಳೆಸಿ ಕೊಂಡಿದ್ದಾನೆ. ಈ ಕಾಲಘಟ್ಟದಲ್ಲಿ ಅವಘಡಗಳು ಆಗುವುದು ಸಾಮಾನ್ಯ. ಆದರೆ ಈ ಅವಘಡಗಳನ್ನು ಹೇಗೆ ಪರಿಣಾಮಕಾರಿಯಾಗಿ ತಡೆಗಟ್ಟ ಬಹುದು ಮತ್ತು ಸುರಕ್ಷಿತವಾಗಿ ನಿಯಂತ್ರಿಸಬಹುದು ಎಂಬುದರ ಬಗ್ಗೆ ಪ್ರತಿಯೊಬ್ಬ ನಾಗರಿಕನೂ ಚಿಂತಿಸಬೇಕಾದ ಅನಿವಾರ್ಯ ಖಂಡಿತವಾಗಿಯೂ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದ್ದಲ್ಲಿ ಈ ರೀತಿಯ ಮಾನವ ನಿರ್ಮಿತ ಅವಘಡಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗ ಬಹುದು. ಈ ಕಾರಣದಿಂದಲೇ ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಇದರ ವತಿಯಿಂದ ನಡೆಯುವ ರಾಷ್ಟ್ರೀಯ ಸುರಕ್ಷತಾ ದಿನ ಮತ್ತು ಸಪ್ತಾಹಕ್ಕೆ ಹೆಚ್ಚಿನ ಮಹತ್ವ ಬಂದಿದೆ ಎಂದರೂ ಅತಿಶಯೋಕ್ತಿಯಲ್ಲ. ಈ ಆಚರಣೆಯನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ಆಚರಿಸೋಣ ಮತ್ತು ನಾವು ನಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ಸಕಾಲದಲ್ಲಿ ನಿಭಾಯಿಸೋಣ. ಇದರಲ್ಲಿಯೇ ನಮ್ಮ ಸಮಾಜದ ಮತ್ತು ಮನುಕುಲದ ಉನ್ನತಿ ಅಡಗಿದೆ.