ಮಂಗಳಮ್ಮನ ಬದುಕು
ಇಂದು ವಿಶ್ವ ಮಹಿಳಾ ದಿನ
ಮಂಗಳಮ್ಮನಂತಹ ಮಹಿಳೆಯರಿಗೆ ಅಂತರ್ ರಾಷ್ಟ್ರೀಯ ಮಹಿಳಾ ದಿನ, ಮಹಿಳಾ ಸ್ವಾತಂತ್ರ, ಸಮಾನತೆ, ವಿಮೋಚನೆ, ಮೀಸಲಾತಿ, ಕಲ್ಯಾಣ, ಸಬಲೀಕರಣ ಎಂಬ ವಿಶೇಷಣ ಬಳಸಿ ಗೌರವಿಸುವುದಕ್ಕಿಂತ ವ್ಯಂಗ್ಯ, ಅಣಕ ಇನ್ನೊಂದಿಲ್ಲ, ಅಲ್ಲವೇ?
ಸೂರ್ಯ ಹುಟ್ಟುವ ಮುಂಚೆಯೇ ಎದ್ದು ಗಂಡನ ತಿಂಡಿಗೆ, ಮಧ್ಯಾಹ್ನದ ಊಟಕ್ಕೆ ಮಾಡಿಟ್ಟು, ಬುತ್ತಿ ಕಟ್ಟಿಟ್ಟು, ಆರು ಗಂಟೆಗೆಲ್ಲ ಮನೆಗೆಲಸಕ್ಕೆ ಹಾಜರಾಗುವ ಮಂಗಳಮ್ಮನ ಸಮಯಪಾಲನೆಗೆ ಸೂರ್ಯನೇ ನಾಚಬೇಕು. 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ, ಸಂಜೆ 4ರಿಂದ 7 ಗಂಟೆಯವರೆಗೆ, ಸುಮಾರು 8ಮನೆಯ ಕೆಲಸ ಮಾಡುವ ಮಂಗಳಮ್ಮನಿಗೆ, ಒಂದೊಂದು ಮನೆಯಲ್ಲಿ ಒಂದೊಂದು ರೀತಿಯ ಕೆಲಸ ಮತ್ತು ಆ ಕೆಲಸಕ್ಕೆ ತಕ್ಕ ಸಂಬಳ. ಅಂಥದ್ದೇ ಒಂದು ಮನೆಗೆಲಸ. ಮನೆಯೊಡತಿ ಸಾವಿತ್ರಮ್ಮ. ಒಳ್ಳೆಯ ಹೆಂಗಸು. ಕೆಲಸದವರನ್ನೂ ತಮ್ಮವರೆಂದು ಭಾವಿಸುವವರು.ಉಳಿದ ಊಟ-ತಿಂಡಿ ಕೊಟ್ಟು, ಕಷ್ಟ-ಸುಖ ಕೇಳಿ ಆಪ್ತರಾಗಿದ್ದರು.ಮಂಗಳಮ್ಮ ಕೂಡ ಅವರ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನಂಬಿಕಸ್ಥ ಕೆಲಸಗಾರ್ತಿ ಎಂದು ಹೆಸರು ಗಳಿಸಿದ್ದರು. ಕಳೆದ ಐದು ವರ್ಷಗಳಿಂದಲೂ ಸಾವಿತ್ರಮ್ಮನವರ ಮನೆ ಗುಡಿಸಿ, ಸಾರಿಸಿ, ಒರೆಸಿ, ಪಾತ್ರೆ ತೊಳೆದು, ಬಟ್ಟೆ ಒಗೆಯುವ ಕೆಲಸಕ್ಕೆ ಹೋಗುತ್ತಿದ್ದರು.
ಅಂದು ಎಂದಿನಂತೆ, ಸಾವಿತ್ರಮ್ಮ ನವರ ಮನೆಗೆ ನಿಗದಿಯಾದ ಸಮಯಕ್ಕೆ ಸರಿಯಾಗಿ- ಹನ್ನೊಂದುವರೆಗೆ ಹೋದರು. ಮಂಗಳಮ್ಮ ಕೆಲಸಕ್ಕೆ ಹೋದ ಸಮಯಕ್ಕೂ, ಸಾವಿತ್ರಮ್ಮನವರ ಯಜಮಾನ ಮನೆಗೆ ಬರುವುದಕ್ಕೂ ಒಂದೇ ಆಯಿತು. ಕೆಲಸದಾಕೆ ಮತ್ತು ಗಂಡ- ಇಬ್ಬರೂ ಒಂದೇ ಸಮಯಕ್ಕೆ ಮನೆಯೊಳಕ್ಕೆ ಬಂದದ್ದನ್ನು ಗಮನಿಸಿದ ಮನೆಯೊಡತಿಯ ಅನುಮಾನದ ರೋಗ ಉಲ್ಬಣಗೊಂಡಿತು. ತಲೆಯಲ್ಲಿ ಏನೇನೋ ತೇಲಿಹೋಯಿತು. ಪರಿಣಾಮವಾಗಿ, ಗಂಡನನ್ನು ಮತ್ತು ಮನೆಗೆಲಸದ ಮಂಗಳಮ್ಮನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಹುಮ್ಮಸ್ಸಿನಲ್ಲಿ ಸುತ್ತಲ ನಾಲ್ಕಾರು ಮನೆಗಳಿಗೆ ಕೇಳುವಂತೆ ಕೂಗಾಡತೊಡಗಿದರು. ಇಬ್ಬರ ನಡುವೆ ಎಷ್ಟು ದಿನದಿಂದ ನಡೆಯುತ್ತಿದೆ ಈ ‘ಆಟ’ ಎಂದು ಅರಚಾಡಿ ಭೂಮಿ-ಆಕಾಶವನ್ನು ಒಂದುಮಾಡಿಬಿಟ್ಟರು. ಕೊಳಕು ಮಾತಿನಲ್ಲಿಯೇ ಮಂಗಳಮ್ಮನ ಬಟ್ಟೆ ಬಿಚ್ಚಿ ಬೀದಿಯಲ್ಲಿ ಬೆತ್ತಲೆಗೊಳಿಸಿದರು. ತಾನು ನಂಬಿದ ಸಾವಿತ್ರಮ್ಮನವರಿಂದ ಇಂತಹ ಮಾತು ಮತ್ತು ವರ್ತನೆ ಕಂಡು ಕಂಗಾಲಾದ ಮಂಗಳಮ್ಮ, ಮಾತು ಕಳೆದುಕೊಂಡು ಕಲ್ಲಾಗಿ ನಿಂತುಬಿಟ್ಟಳು. ಆ ಗಂಡನೂ ಮಾತನಾಡದೆ ಕತ್ತುಬಗ್ಗಿಸಿದವನು ಮೇಲೆತ್ತಲಿಲ್ಲ. ನೋಡುತ್ತಿದ್ದ ಬೀದಿಯ ಜನಕ್ಕೆ ಅವರಿಬ್ಬರ ಮೌನ, ಸಾವಿತ್ರಮ್ಮನ ಕೂಗಾಟ-ಅದೇ ಸತ್ಯವಾಗಿ ಕಾಣತೊಡಗಿತ್ತು. ನೆರೆದ ಜನಕ್ಕೆ ಪುಕ್ಕಟೆ ಮನರಂಜನೆ ಸಿಕ್ಕು, ತಲೆಗೊಂದು ಮಾತನಾಡಿದರು.
ಮಂಗಳಮ್ಮನ ದುರದೃಷ್ಟಕ್ಕೆ ಆ ಮನೆಯ ಯಜಮಾನ ಚಪಲ ಚನ್ನಿಗರಾಯನಾಗಿದ್ದ. ಆತನ ‘ಆಟ’ದ ಬಗ್ಗೆ ಅನುಮಾನವಿದ್ದ ಮನೆಯೊಡತಿ, ಆಗಾಗ ಜಗಳ ತೆಗೆದು ಅತಿರೇಕಕ್ಕೆ ಹೋಗಿತ್ತು. ಅದೇ ಮೂಡ್‌ನಲ್ಲಿದ್ದ ಮನೆಯೊಡತಿಗೆ ಗಂಡ ಅವೇಳೆಯಲ್ಲಿ ಮನೆಗೆ ಬಂದದ್ದು, ಮಂಗಳಮ್ಮ ಅದೇ ಸಮಯಕ್ಕೆ ಮನೆಗೆ ಕೆಲಸಕ್ಕೆ ಬಂದದ್ದು, ಅನುಮಾನವನ್ನು ಗಟ್ಟಿಗೊಳಿಸಿತ್ತು. ಆದರೆ ಮಂಗಳಮ್ಮ ಐದು ವರ್ಷದಿಂದಲೂ ಅದೇ ಟೈಮಿಗೆ ಕೆಲಸಕ್ಕೆ ಬರುತ್ತಿದ್ದರೂ, ಮನೆಯೊಡತಿಗೆ ಅದು ಗೊತ್ತಿದ್ದರೂ, ಗಂಡನ ಮೇಲಿನ ಸಿಟ್ಟು ಎಲ್ಲವನ್ನು ಮರೆಸಿತ್ತು. ಕೆಲಸದಾಕೆಯೊಂದಿಗೆ ಸಂಬಂಧ ಬೆರೆಸಿ ಮಾತನಾಡುವಂತೆ, ರಂಪ-ರಾದ್ಧಾಂತವೆಬ್ಬಿಸುವಂತೆ ಪ್ರೇರೇಪಿಸಿತ್ತು. ಕೊನೆಗೆ ತನ್ನ ತಪ್ಪಿಲ್ಲದಿದ್ದರೂ, ಏನೂ ನಡೆಯದಿದ್ದರೂ, ಏನನ್ನೂ ಹೇಳಲಾಗದ ಮಂಗಳಮ್ಮ ಮೌನವಾಗಿ ಆ ಮನೆಯಿಂದ ನಿರ್ಗಮಿಸಿದಳು. ಗಂಡ-ಹೆಂಡತಿ ಸ್ವಲ್ಪ ಹೊತ್ತು ಮುನಿಸಿಕೊಂಡು, ಮತ್ತೆ ಒಂದಾದರು. ಆದರೆ ಮನೆಗೆಲಸದ ಮಂಗಳಮ್ಮ ಅನೈತಿಕ ಸಂಬಂಧದ ಹಣೆಪಟ್ಟಿ ಹೊತ್ತುಕೊಳ್ಳಬೇಕಾಯಿತು. ಕೆಲಸ ಕಳೆದುಕೊಂಡು, ಅಲ್ಲಿಯವರೆಗೆ ದುಡಿದ ದುಡ್ಡನ್ನೂ ಕೇಳದಂತಾಯಿತು. ಮಂಗಳಮ್ಮ ಬಡವಿ, ಅವಳ ಬೆಂಬಲಕ್ಕೆ ಸಂಘಟನೆ ಇಲ್ಲ, ಜಾತಿ ಇಲ್ಲ, ಜನರೂ ಇಲ್ಲ. ಅನಗತ್ಯವಾಗಿ ಅಂಟಿಕೊಂಡ ಹಣೆಪಟ್ಟಿಯಿಂದ ಆ ಬೀದಿಯ ಬೇರೆ ಮನೆಗಳ ಕೆಲಸಕ್ಕೆಕಾಲಿಡುವಂತೆಯೂ ಇಲ್ಲ.
*
‘‘ಚಪ್ಪಲೀನ ಕಾಲಿನಲ್ಲಿ ಮೆಟ್ಟಿಕೊಂಡು ಬರ್ತರಾ, ಕೈಯಲ್ಲಿ ತಂದುಕೊಟ್ಟಿದ್ರೆ ನಿನ್ನ ಕೈಯೇನು ಸೇದ್‌ಹೋಗ್ತಿತ್ತಾ, ಆಗಲ್ಲ ಅಂದ್ರೆ ಹೇಳಬೇಕಿತ್ತು’’
ಪೆಡಿಕ್ಯೂರ್(ಬಿರಿದ ಕಾಲಿನ ಹಿಮ್ಮಡಿ ಉಜ್ಜಿ ಸರಿಮಾಡುವುದು) ಮಾಡಿಸಿಕೊಳ್ಳುತ್ತಿದ್ದ ಮಹಿಳೆ, ಅರ್ಬನ್ ಕಂಪೆನಿಯಿಂದ ನಿಯೋಜಿತಗೊಂಡಿದ್ದ ಬ್ಯೂಟಿಷಿಯನ್ ಮಂಗಳಮ್ಮಗೆ, ಕೂತ ಜಾಗಕ್ಕೆ ಚಪ್ಪಲಿ ತರಲು ಹೇಳಿ, ಅವರು ಚಪ್ಪಲಿಯನ್ನು ಕಾಲಿನಲ್ಲಿ ಮೆಟ್ಟಿಕೊಂಡು ತಂದುಕೊಟ್ಟಿದ್ದಕ್ಕೆ ಕೋಪಗೊಂಡು ಬಯ್ದಿದ್ದರು. ಕೊಸರಿಕೊಂಡು ಕೂತಿದ್ದರು. ಬ್ಯೂಟಿಷಿಯನ್ ಮಂಗಳಮ್ಮ, ಅವರಿಗೆ ಸರಿ-ತಪ್ಪುಗಳ ಮನವರಿಕೆ ಮಾಡಿಕೊಡುವುದಕ್ಕಿಂತ ಹೆಚ್ಚಾಗಿ ತನಗೆ ಬರಬೇಕಾದ ಸಂಭಾವನೆ, ಕಂಪೆನಿಯ ಪಾಯಿಂಟ್ಸ್, ಅಭಿಪ್ರಾಯಗಳ ಲೆಕ್ಕಾಚಾರದಲ್ಲಿ ಮುಳುಗಿ, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಳು.
ಆದರೂ ಸಾವರಿಸಿಕೊಂಡು, ‘‘ಕೊರೋನ ಟೈಮಲ್ಲವೇ ಮೇಡಂ, ಕೈಗೆ ಗ್ಲೌಸ್ ಹಾಕಿದ್ದೆ, ಬಿಚ್ಚಿಟ್ಟು ತಂದುಕೊಡುವಷ್ಟು ಟೈಮ್ ಇರಲಿಲ್ಲ’’ ಎಂದು ಸಮಜಾಯಿಷಿ ಕೊಟ್ಟಳು. ಆದರೂ ಆಕೆಯ ಕೋಪ ಶಮನಗೊಳ್ಳಲಿಲ್ಲ. ಆ ಬಿಗು ವಾತಾವರಣದಲ್ಲ್ಲಿಯೇ ಕೆಲಸ ಮುಗಿಸಿ ಹೊರಬಂದಳು. ಪೆಡಿಕ್ಯೂರ್ ಮಾಡಿಸಿಕೊಂಡ ಮಹಿಳೆ ಅರ್ಬನ್ ಕ್ಲಾಪ್ ಸರ್ವಿಸ್ ಸೆಂಟರ್‌ಗೆ ‘‘ಆ್ಯಟಿಟ್ಯೂಡ್ ಜಾಸ್ತಿ, ಕಸ್ಟಮರ್ ಜೊತೆ ಹೇಗೆ ಬಿಹೇವ್ ಮಾಡಬೇಕೆಂದು ಗೊತ್ತಿಲ್ಲ, ಕೆಲಸ ತೃಪ್ತಿಕರವಾಗಿಲ್ಲ, ಹಣ ಕೊಡುವುದಿಲ್ಲ’’ ಎಂದು ತಮ್ಮ ಅಭಿಪ್ರಾಯವನ್ನು ಮೆಸೇಜ್ ಮಾಡಿದ್ದರು. ಕೋವಿಡ್ ಲಾಕ್‌ಡೌನ್ ಕಾಲದಲ್ಲಿ ಬ್ಯೂಟಿ ಪಾರ್ಲರ್ ಕೆಲಸ ಸ್ಥಗಿತವಾಗಿದ್ದಾಗ, ಅರ್ಬನ್ ಕಂಪೆನಿ ಗಿರಾಕಿಗಳ ಕರೆಯ ಮೇರೆಗೆ ಬ್ಯೂಟಿಷಿಯನ್‌ಗಳನ್ನು ಮನೆಗೇ ಕಳಿಸಿ ಸೇವೆ ಒದಗಿಸುವ ಕೆಲಸ ಮಾಡುತ್ತಿತ್ತು. ಇದು ನೀವಿದ್ದಲ್ಲಿಗೆ ಬರುವ ಓಲಾ, ಉಬರ್, ಸ್ವಿಗ್ಗಿ, ಡನ್‌ಜೊಸೇವೆಗಳ ರೀತಿ. ಮಂಗಳಮ್ಮನಿಗೆ ಮನೆಕೆಲಸ ಕಡಿಮೆಯಾದಾಗ, ಅವರಿವರನ್ನು ಕಾಡಿಬೇಡಿ ಬ್ಯೂಟಿಷಿಯನ್ ಕೆಲಸ ಕಲಿತು, ಸಾಲ ಸೋಲ ಮಾಡಿ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಖರೀದಿಸಿದಳು. ಅರ್ಬನ್ ಕಂಪೆನಿಗೆ ಹೆಸರು ನೋಂದಾಯಿಸಿದಳು. ಕರೆ ಬಂತು, ಹೋದಳು. ಸುಮಾರು 12 ಕಿಲೋಮೀಟರ್ ಪ್ರಯಾಣ ಮಾಡಿ, 2 ಗಂಟೆ ಸಮಯ ಮತ್ತು ಶ್ರಮ ವ್ಯಯಿಸಿ, ಬರುವ 250 ರೂ.ಗಾಗಿ ಎದುರು ನೋಡುತ್ತಿದ್ದಳು. ಆದರೆ ಸೇವೆ ಮಾಡಿಸಿಕೊಂಡ ಮಹಿಳೆಯಿಂದ ಮತ್ತು ಕೆಲಸಕ್ಕೆ ಅವಕಾಶ ಮಾಡಿಕೊಟ್ಟ ಕಂಪೆನಿಯಿಂದ ನಕಾರಾತ್ಮಕ ಉತ್ತರ ಸಿದ್ಧವಿತ್ತು. ಬ್ಯೂಟಿಷಿಯನ್ ಮಂಗಳಮ್ಮ ಹೇಳಿಕೇಳಿ ಬಡವಿ, ಹೆಚ್ಚಿಗೆ ಓದಿಲ್ಲ, ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ, ಸಂಘಟನೆಯ ಬೆಂಬಲವೂ ಇಲ್ಲ. ಆಕೆಗಾದ ಅನ್ಯಾಯವನ್ನು ಕೇಳುವವರೂ ಇಲ್ಲ.
*
ಮಂಗಳಮ್ಮಗೆ 10 ವರ್ಷವಿದ್ದಾಗ, 5ನೇ ಕ್ಲಾಸ್‌ನಲ್ಲಿ ಓದುತ್ತಿದ್ದಾಗ, ಆಕೆಯ ಪೋಷಕರು ದೂರದ ಹುಲಿಯೂರು ದುರ್ಗದ ಹತ್ತಿರದ ಹಳ್ಳಿಯಿಂದ ಬೆಂಗಳೂರಿಗೆ ಬಂದರು. ಮಂಗಳಮ್ಮನ ಪೋಷಕರಿಗೆ ಓದು-ಬರಹ ಗೊತ್ತಿಲ್ಲ, ಶ್ರೀಮಂತರೂ ಅಲ್ಲ. ಹಾಗಾಗಿ ಅವರಿಗೆ ಸುಲಭವಾಗಿ ಸಿಕ್ಕಿದ್ದು ಮತ್ತು ಮಾಡಲಿಕ್ಕೆ ಬರುತ್ತಿದ್ದುದು ಮನೆಗೆಲಸ. ಮನೆತುಂಬಾ ಹಸಿದ ಹೊಟ್ಟೆಗಳು. ಜೊತೆಗೆ ಬಾಡಿಗೆ ಮನೆ. ಹೇಗೋ ಕಷ್ಟಪಟ್ಟು 10ನೇ ತರಗತಿವರೆಗೆ ಓದಿದ ಮಂಗಳಮ್ಮ, ಓದುತ್ತಲೇ ಮನೆಗೆಲಸ ಮಾಡಿ ಸಂಸಾರದ ಸಹಾಯಕ್ಕೆ ನಿಂತಳು. ಎಸೆಸೆಲ್ಸಿ ನಂತರ ಓದು ಮುಂದುವರಿಸಲಾಗದೆ, ಹತ್ತಾರು ವರ್ಷಗಳ ಕಾಲ ಮನೆಗೆಲಸ ಮಾಡಿ ಸುಸ್ತಾದ, ವಯಸ್ಸಾದ ಪೋಷಕರಿಗೆ ಆಸರೆಯಾದಳು. ವಯಸ್ಸಿಗೆ ಬಂದಾಗ, ಸುಂದರಿಯಂತೆ ಕಂಡಾಗ ಊರಿನ ಕಡೆಯ ಸಂಬಂಧಿಗಳೇ ಬಂದರು, ಮದುವೆ ಮಾಡಿಕೊಂಡರು. ಬಂದ ಗಂಡ ಮಂಗಳಮ್ಮಳನ್ನು ರಮಿಸುವ, ರಕ್ಷಣೆ ಒದಗಿಸುವ ಬದಲಿಗೆ ಸುಲಿಯುವ ಸುಲಿಗೆಕೋರನಾದ. ಕೆಲಸಕ್ಕೆ ಹೋಗದೆ, ಹೋದರೆ ಕಾಸು ಕೊಡದೆ ಕುಡಿದು ತೂರಾಡತೊಡಗಿದ. ಅಷ್ಟಾದರೂ ಗಂಡ, ಮನೆಯ ಮಾನ ಕಳೆಯಬಾರದು ಎಂದು ನೋವನ್ನು ನುಂಗಿಕೊಂಡು, ಸಮಸ್ಯೆಗಳನ್ನು ಸಂಭಾಳಿಸಿಕೊಂಡು ಒಂದಷ್ಟು ವರ್ಷ ನೂಕಿದಳು. ಈ ನಡುವೆ ಗಂಡು ಮಗು ಹುಟ್ಟಿತು. ಅದು ತನ್ನಂತಾಗಬಾರದು ಎಂದು ಬಾಲ್ಯದಿಂದಲೇ ಇಂಗ್ಲಿಷ್ ಕಲಿಯಲಿ ಎಂದು ಕಾನ್ವೆಂಟಿಗೆ ಹಾಕಿದಳು. ಬೇರೆ ಊರಿನಲ್ಲಿಟ್ಟು ಓದಿಸತೊಡಗಿದರು. ಮನೆ ಬಾಡಿಗೆ, ಮಗುವಿನ ಸ್ಕೂಲು, ಟ್ಯೂಷನ್ ಫೀಸು, ಹಾಸ್ಟೆಲ್ ಖರ್ಚು.. ಜೊತೆಗೆ ಗಂಡನ ಕುಡಿತಕ್ಕೆ ಹಣ ಒದಗಿಸಲು ಗಾಣದ ಎತ್ತಾದಳು. ಕೊರೋನ ಕಾಲದಲ್ಲಿ ಮನೆಗೆಲಸಕ್ಕೆ ಕರೆಯದೆ ಹೋದಾಗ, ಹೊಸ ದುಡಿಮೆಯ ಮಾರ್ಗ ಕಂಡುಕೊಂಡು ಬ್ಯೂಟಿಷಿಯನ್ ಕೆಲಸ ಕಲಿತಳು. ಸ್ಮಾರ್ಟ್‌ಫೋನ್ ಖರೀದಿಸಿ, ನೆಟ್‌ಪ್ಯಾಕ್ ಹಾಕಿಸಿ ಆನ್‌ಲೈನ್ ಮೂಲಕ ಅರ್ಬನ್ ಕ್ಲಾಪ್‌ನೊಂದಿಗೆ ಸಂಪರ್ಕ ಕಲ್ಪಿಸಿಕೊಂಡಳು. ಆ ಮೂಲಕ ಮನೆಮನೆಗೆ ಹೋಗಿ ಬ್ಯೂಟಿಷಿಯನ್ ಕೆಲಸ ಮಾಡಿ ಬದುಕಿಗಾಗಿ ಭಿನ್ನ ಮಾರ್ಗ ಹುಡುಕಿಕೊಂಡಳು.
ಮಂಗಳಮ್ಮನ ವಯಸ್ಸು ಈಗ 40ರ ಆಸುಪಾಸು. ಮೊಪೆಡ್ ಖರೀದಿಸಿ, ಕೆಲಸಗಳಿಗೆ ಸಮಯ ಹೊಂದಿಸಿಕೊಂಡು, ಬಿಡುವಿಲ್ಲದ ಕೆಲಸಗಳಲ್ಲಿ ಮುಳುಗಿಹೋದಳು. ಅತ್ತ ದೂರದ ಊರಿನಲ್ಲಿ ಮಗ ಅಮ್ಮನ ದುಡಿಮೆಯ ಬಗ್ಗೆ ಕಿಂಚಿತ್ತೂ ಬೆಲೆ ಇಲ್ಲದೆ, ಹಣ ಪೋಲು ಮಾಡುತ್ತಾ, ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಕಳೆದುಕೊಂಡು ಅಡ್ಡ ಹಾದಿ ಹಿಡಿಯತೊಡಗಿದ. ಇತ್ತ ಕೆಲಸ ಮಾಡುವ ಯಂತ್ರದಂತಾದ ಮಂಗಳಮ್ಮನ ದೇಹ ರಸ ಹಿಂಡಿದ ಕಬ್ಬಿನ ಸಿಪ್ಪೆಯಂತಾಯಿತು. ಅಂತಹ ದೇಹ ಕೂಡ ಸೋಮಾರಿ ಗಂಡನಲ್ಲಿ ಅನುಮಾನ ಹುಟ್ಟಿಸಿತು. ಅದಕ್ಕೆ ಸಾವಿತ್ರಮ್ಮನ ಮನೆಯ ಪ್ರಕರಣ ಪುಷ್ಟಿ ನೀಡಿತು.ಗಾಡಿ-ಫೋನ್ ಖರೀದಿ ಅಸೂಯೆ ಕೆರಳಿಸಿತು. ಕುಡಿದು ಬಂದ ಗಂಡ ಪ್ರತಿದಿನ ತನ್ನ ಜೊತೆ ಮಲಗಲು ಒತ್ತಾಯಿಸತೊಡಗಿದ. ಒಪ್ಪದಿದ್ದರೆ, ‘‘ಯಾರೊಂದಿಗೋ ಸಂಬಂಧ ಇಟ್ಟುಕೊಂಡಿದ್ದೀಯ, ಹಂಗಾಗಿ ನನ್ನ ಜೊತೆ ಮಲಗ್ತಾಯಿಲ್ಲ’’ ಎಂದು ತಗಾದೆ ತೆಗೆದು ಹಿಡಿದು ಬಡಿಯತೊಡಗಿದ. ಸಂಸಾರ ಸಂಭಾಳಿಸಲಾಗದ ತನ್ನ ಸೋಲನ್ನು ಮರೆಮಾಚಲು, ಸೋಲುಗಳಿಂದ ಪಲಾಯನ ಮಾಡಲು ಹಲವು ಮಾರ್ಗಗಳನ್ನು ಹುಡುಕಿಕೊಳ್ಳತೊಡಗಿದ.
ಈಮಧ್ಯೆ, ದೂರದ ಊರಲ್ಲಿ ಓದುತ್ತಿರುವ ಬೆಳೆದ ಮಗ ಅಪರೂಪಕ್ಕೆ ಮನೆಗೆ ಬಂದ. ಮಗ ಬಂದ ಖುಷಿಯಲ್ಲಿ ಮಂಗಳಮ್ಮ ಚಿಕನ್ ತಂದು ಅಡುಗೆ ಮಾಡಿ, ಇಬ್ಬರೂ ಕೂತು ಊಟ ಮಾಡಿ ಒಟ್ಟಿಗೆ ಮಲಗಿದರು. ಯಥಾಪ್ರಕಾರ ಕುಡಿದು ಬಂದ ಗಂಡ, ‘ಬಾ ಎಂದ, ಬರದಿದ್ದಾಗ ಒಟ್ಟಿಗೆ ಮಲಗಿದ್ದ ಅಮ್ಮ-ಮಗನಿಗೂ ಸಂಬಂಧ ಕಲ್ಪಿಸಿ,ಬೀದಿಯಲ್ಲಿ ನಿಂತು ಕೆಟ್ಟದಾಗಿ ಬಯ್ದು ರಂಪ ಮಾಡಿದ. ಕೊನೆಗೆ ಬೀದಿಯ ಜನರೇ ಕುಡುಕ ಗಂಡನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರ ಮುಂದೆ ಮಗನೇ ಅಪ್ಪನ ಕುಡಿತ, ಸೋಮಾರಿತನ, ಅಸೂಯೆ, ಅನುಮಾನವನ್ನೆಲ್ಲ ವಿವರವಾಗಿ ವರದಿ ಮಾಡಿದ. ಆಗಲೂ ಮಂಗಳಮ್ಮ ಮಾತನಾಡಲಿಲ್ಲ, ನಿರ್ಲಿಪ್ತವಾಗಿ ನೋಡುತ್ತಿದ್ದಳು. ಕೊನೆಗೆ ಪೊಲೀಸರೇ ಮುಂದೆ ನಿಂತು, ‘‘ಅಮ್ಮ-ಮಗನ ಬಗ್ಗೆ ಅನುಮಾನ ಪಡುವ ಪ್ರಾಣಿ ನೀನೊಬ್ಬನೇ ಕಣಯ್ಯ, ಆಕೆ ಏನೋ ಕಷ್ಟಪಟ್ಟು ಮಗನನ್ನು ಮನೆಯನ್ನು ನೋಡಿಕೊಳ್ಳುತ್ತಿದ್ದಾಳೆ. ನಿನ್ನದು ಅತಿಯಾಯಿತು, ನೀನು ಜಾಗ ಖಾಲಿ ಮಾಡು, ಮನೆ ಕಡೆ ಕಾಲಿಟ್ಟರೆ, ಒದ್ದು ಒಳಕ್ಕಾಗ್ತಿನಿ’’ ಎಂದು ಬೆದರಿಸಿ ಗಂಡನಿಂದ ಮುಕ್ತಿ ಕೊಡಿಸಿದರು. ಮಗನೂ ಓದಲಿಕ್ಕೆ ಹಾಸ್ಟೆಲ್ ಪಾಲಾದ, ಗಂಡನೂ ಮನೆ ಬಿಟ್ಟು ಹೋದ. ಈಗ ಮಂಗಳಮ್ಮ ಸರ್ವ ಸ್ವತಂತ್ರ ಮಹಿಳೆ. ಆದರೆ ಆ ಸ್ವತಂತ್ರ ಆಕೆಗೆ ಬೇಕಾಗಿಲ್ಲ. ಗಂಡ ಎಂಬ ಕುಡುಕನಿಂದ ಸಿಕ್ಕ ಬಿಡುಗಡೆ, ಆಕೆ ಬಯಸಿದ್ದಲ್ಲ. ದಿನವಿಡಿ ದುಡಿದರೂ, ದಣಿದರೂ ನಿದ್ರೆ ಹತ್ತುತ್ತಿಲ್ಲ. ರಾತ್ರಿ ಮಲಗುವಾಗ ಗಂಡನಿಗಾಗಿ ಊಟ ಎತ್ತಿಡುವ ಅಭ್ಯಾಸ ಇವತ್ತಿಗೂ ಹೋಗಿಲ್ಲ.
ಸುಮಾರು 30 ವರ್ಷಗಳ ಕಾಲ ನಿರಂತರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು, ಚಕ್ರವೇ ನಾಚುವಂತೆ, ಕಾಲವೇ ಕಂಗಾಲಾಗುವಂತೆ ದುಡಿದರೂ ಬದುಕಿನಲ್ಲಿ ಸಣ್ಣ ನೆಮ್ಮದಿಯೂ ಸಿಗಲಿಲ್ಲ. ಅದು ಸಿಗಲಿ ಎಂದು ಆಕೆ ಕೂಡ ದೇವರನ್ನು ಬೇಡಿಕೊಳ್ಳಲಿಲ್ಲ. ಎಲ್ಲದಕ್ಕೂ ನಕ್ಕು ‘ಕಷ್ಟ ಮನ್ಸಂಗ್ ಬರ್‌ದೆ ಮರಕ್ ಬತ್ತದಾ, ಬುಡಿ. ಹರಿಯೋ ನೀರನಂಗೆ, ಬೀಸೋ ಗಾಳಿಯಂಗೆ ಇದ್ದು ಹೋಗದು ಎಂದು ಹಗುರಾಗುವುದನ್ನು ಆಕೆ, ಬದುಕಿನ ಬಹುದೊಡ್ಡ ಫಿಲಾಸಫಿ ಎಂದುಕೊಂಡಿಲ್ಲ. ಅದನ್ನೇ ಸುತ್ತಲ ಸಮಾಜ ಅಳವಡಿಸಿಕೊಳ್ಳಬೇಕೆಂಬ ಹಂಬಲವೂ ಆಕೆಗಿಲ್ಲ. ಈ ಸ್ಥಿತಪ್ರಜ್ಞೆ ಮಂಗಳಮ್ಮನದೊಂದೇ ಅಲ್ಲ, ಅಸಹಾಯಕ ಮಹಿಳೆಯರ ದಿನನಿತ್ಯದ ಬದುಕೇ ಆಗಿದೆ. ಬದಲಿಸಲಾಗದೆ ಬಸವಳಿದು ಬೂದಿಯಾಗುವುದೇ ಬದುಕಾಗಿದೆ. ಅಂತಹ ಮಹಿಳೆಯರಿಗೆ ಅಂತರ್ ರಾಷ್ಟ್ರೀಯ ಮಹಿಳಾ ದಿನ, ಮಹಿಳಾ ಸ್ವಾತಂತ್ರ, ಸಮಾನತೆ, ವಿಮೋಚನೆ, ಮೀಸಲಾತಿ, ಕಲ್ಯಾಣ, ಸಬಲೀಕರಣ ಎಂಬ ವಿಶೇಷಣ ಬಳಸಿ ಗೌರವಿಸುವುದಕ್ಕಿಂತ ವ್ಯಂಗ್ಯ, ಅಣಕ ಇನ್ನೊಂದಿಲ್ಲ, ಅಲ್ಲವೇ?