ಗಂಗಾ ನದಿಯ ರಕ್ಷಣೆ ಯಾಕೆ ಯಶಸ್ವಿಯಾಗಿಲ್ಲ?
ಗಂಗಾ ನದಿಯ ರಕ್ಷಣೆಗಾಗಿ ಸರಕಾರ ಯೋಜನೆಗಳನ್ನು ರೂಪಿಸುತ್ತಿದೆ ಎನ್ನುವುದು ನಿಜ. ಇದು ಜನರ ಸಕ್ರಿಯ ಭಾಗೀದಾರಿಕೆಯಿಂದ ಹೆಚ್ಚಿನ ಯಶಸ್ಸನ್ನು ಗಳಿಸಲು ಸಾಧ್ಯವಾಗುವ ಕಾರ್ಯವಾಗಿದೆ. ಹಾಗಾದರೆ, ಈವರೆಗೆ ಯಶಸ್ಸು ಎನ್ನುವುದು ಯಾಕೆ ಮರೀಚಿಕೆಯಾಗಿ ಉಳಿದಿದೆ? ಗಂಗಾ ನದಿ ರಕ್ಷಣೆ ಯೋಜನೆಯಲ್ಲಿ ವಾರಣಾಸಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ, ವಾರಣಾಸಿಗೆ ಸಂಬಂಧಿಸಿದ ಅಂಕಿ-ಅಂಶಗಳ ಪ್ರಕಾರ, ಇಲ್ಲಿ ಹರಿಯುತ್ತಿರುವ ಗಂಗಾ ನದಿಯ ನೀರು ವೈಜ್ಞಾನಿಕ ಮಾನದಂಡಗಳ ಆಧಾರದಲ್ಲಿ ಹೆಚ್ಚು ಕಲುಷಿತವಾಗಿದೆ ಹಾಗೂ ಸ್ನಾನಕ್ಕೆ ಯೋಗ್ಯವಾಗಿಲ್ಲ.
ವಾರಣಾಸಿಯಲ್ಲಿ ಗಂಗಾ ನದಿಯ ನೀರನ್ನು ಶುದ್ಧಗೊಳಿಸಲು ‘ನಮಾಮಿ ಗಂಗೆ’ ಯೋಜನೆಯಲ್ಲಿ 20,000 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿರುವ ಹೊರತಾಗಿಯೂ ಅದರ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ. ಇದಕ್ಕೆ ಒಂದು ಕಾರಣವೆಂದರೆ, ಮಂಜೂರುಗೊಂಡ ಹಣದ ಸುಮಾರು ಮೂರನೇ ಒಂದು ಭಾಗ ಬಿಡುಗಡೆಗೊಂಡಿಲ್ಲ. ಆದರೆ ಬಿಡುಗಡೆಗೊಂಡ ಹಣದಲ್ಲೂ ಎಷ್ಟು ಕೆಲಸ ಆಗಬೇಕಾಗಿತ್ತೋ ಅಷ್ಟು ಕೆಲಸ ಆಗಿಲ್ಲ.
ವಾರಾಣಸಿಯಲ್ಲಿರುವ ಸಂಕಟಮೋಚನ ಫೌಂಡೇಶನ್ (ಎಸ್‌ಎಫ್) ಎಂಬ ಸಂಘಟನೆಯು ಗಂಗಾ ನದಿಯ ಮಾಲಿನ್ಯವನ್ನು ಕಡಿಮೆಗೊಳಿಸುವಲ್ಲಿ ಅತ್ಯಂತ ರಚನಾತ್ಮಕ ಪಾತ್ರವನ್ನು ವಹಿಸುತ್ತಿದೆ ಹಾಗೂ ರಚನಾತ್ಮಕ ಕೆಲಸವನ್ನು ಮಾಡುತ್ತಿದೆ. ಬಹುಷಃ ಬೇರೆ ಯಾವ ಸಂಘಟನೆಯೂ ಇದರಷ್ಟು ಪ್ರಾಮಾಣಿಕತೆಯಿಂದ ಗಂಗಾ ನದಿಯ ನೀರಿನ ಗುಣಮಟ್ಟದ ಮೇಲೆ ನಿರಂತರವಾಗಿ ನಿಗಾ ಇಟ್ಟಿಲ್ಲ. ಈ ಸಂಘಟನೆಯು ಆಧ್ಯಾತ್ಮಿಕ ಕ್ಷೇತ್ರದಲ್ಲಿಯೂ ತೊಡಗಿಕೊಂಡಿದೆ. ಅದರ ಆಧ್ಯಾತ್ಮಿಕ ಚಟುವಟಿಕೆಗಳು ವಾರಣಾಸಿಯ ಸಾಮಾಜಿಕ ಸಾಮರಸ್ಯ ಮತ್ತು ಜನರ ಏಕತೆಯೊಂದಿಗೆ ಗಾಢವಾಗಿ ಬೆಸೆದುಕೊಂಡಿವೆ. ವಾಸ್ತವಿಕವಾಗಿ, ಸರಕಾರ ಮೊದಲು ಮಾಡಬೇಕಾಗಿದ್ದ ಕೆಲಸವೆಂದರೆ, ಗಂಗಾ ನದಿ ರಕ್ಷಣಾ ಕಾರ್ಯದ ನಾಯಕತ್ವವನ್ನು ಇಂತಹ ಸಂಘಟನೆಗೆ ವಹಿಸಬೇಕಾಗಿತ್ತು. ಆದರೆ ವಿಭಜನವಾದಿ ಕಾರ್ಯಸೂಚಿಯನ್ನು ಹೊಂದಿರುವ ಬಿಜೆಪಿಯು ಇಂತಹ ಸಂಘಟನೆಗಳನ್ನು ದೂರವೇ ಇಟ್ಟಿದೆ. ಗಂಗಾ ನದಿಯನ್ನು ಶುದ್ಧಗೊಳಿಸುವ ಸಂಕಟಮೋಚನ ಫೌಂಡೇಶನ್‌ನ ಅತ್ಯಂತ ಭರವಸೆಯ ಹಾಗೂ ಪರಿಸರ ಸ್ನೇಹಿ ವಿಧಾನವನ್ನು ಯಾಕೆ ನಿರ್ಲಕ್ಷಿಸಲಾಯಿತು ಎನ್ನುವುದರ ಬಗ್ಗೆ ಹೇಳಲು ತುಂಬಾ ಇದೆ. ಅದರ ಬದಲು ಬಿಜೆಪಿ ಸರಕಾರವು ತಂತ್ರಜ್ಞಾನ ಆಧಾರಿತ, ಬೃಹತ್ ಉದ್ದಿಮೆಗಳಿಗೆ ಪೂರಕವಾದ ದುಬಾರಿ ವಿಧಾನವನ್ನು ಅಂಗೀಕರಿಸಿತು. ಆದರೆ ಈ ವಿಧಾನವು ಸಂಪೂರ್ಣ ಪರಿಣಾಮಕಾರಿಯಲ್ಲ ಎನ್ನುವುದನ್ನು ಜನರು ಅನುಭವದಿಂದ ತಿಳಿದುಕೊಂಡಿದ್ದಾರೆ.
ಗಂಗಾ ನದಿಯ ರಕ್ಷಣೆಯ ಕಾರ್ಯದಲ್ಲಿರುವ ಇನ್ನೊಂದು ಅತ್ಯಂತ ಮಹತ್ವದ ಭಾಗವೆಂದರೆ ನದಿಯ ಹಿಮಾಲಯದ ತಪ್ಪಲು. ಇಲ್ಲಿನ ಮಾತ್ರಿ ಸದನ ಎಂಬ ಇನ್ನೊಂದು ಅತ್ಯಂತ ಪ್ರಾಮಾಣಿಕ ಆಧ್ಯಾತ್ಮಿಕ ಗುಂಪು ಗಂಗಾ ನದಿಯ ರಕ್ಷಣೆಯ ವಿಧಾನದಲ್ಲಿ ರಾಜ್ಯ (ಉತ್ತರಾಖಂಡ) ಮತ್ತು ಕೇಂದ್ರ ಸರಕಾರಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ಈ ಆಧ್ಯಾತ್ಮಿಕ ಗುಂಪಿನ ಕೆಲವು ಪ್ರಮುಖ ಸಾಧುಗಳು ಗಂಗಾ ನದಿಯ ರಕ್ಷಣೆಗಾಗಿ ಆಗ್ರಹಿಸಿ ನಡೆದ ಸುದೀರ್ಘ ಉಪವಾಸ ಸತ್ಯಾಗ್ರಹದ ವೇಳೆ ಪ್ರಾಣಾರ್ಪಣೆ ಮಾಡಿದ್ದಾರೆ. ಕೆಲವು ಸಾಧುಗಳು 50ರಿಂದ 100 ದಿನಗಳವರೆಗೂ ಉಪವಾಸ ನಡೆಸಿದರು.
ಹೀಗೆ ಪ್ರಾಣ ತ್ಯಾಗ ಮಾಡಿದವರಲ್ಲಿ ಪ್ರೊಫೆಸರ್ ಜಿ.ಡಿ. ಅಗರ್ವಾಲ್ ಸೇರಿದ್ದಾರೆ. ಅವರು ಅಮೆರಿಕದಿಂದ ಡಾಕ್ಟರೇಟ್ ಪದವಿ ಪಡೆದಿದ್ದರು ಹಾಗೂ ಅಮೆರಿಕದ ಐಐಟಿಯಲ್ಲಿ ಕಲಿಸುತ್ತಿದ್ದರು. ಬಳಿಕ ಅವರು ಭಾರತದಲ್ಲಿ ಉನ್ನತ ಮಾಲಿನ್ಯ ನಿಯಂತ್ರಣ ಅಧಿಕಾರಿಯಾದರು. ಆದರೆ, ನಂತರ ಎಲ್ಲವನ್ನು ತ್ಯಜಿಸಿದ ಅವರು ಸಾಧುವಾಗಿ ತನ್ನ ಇಡೀ ಬದುಕನ್ನು ಗಂಗಾ ನದಿಯ ರಕ್ಷಣೆಗಾಗಿ ಮುಡಿಪಾಗಿಟ್ಟರು.
ತನ್ನ ವೈಜ್ಞಾನಿಕ ಕಲಿಕೆ ಮತ್ತು ಸ್ಥಾನಮಾನದಿಂದಾಗಿ, ಗಂಗಾ ನದಿಯ ರಕ್ಷಣಾ ಯೋಜನೆಯಲ್ಲಿ ಏನು ತಪ್ಪಾಗಿದೆ ಎನ್ನುವುದನ್ನು ಅತ್ಯುನ್ನತ ಮಟ್ಟದಲ್ಲಿ ಸರಕಾರಕ್ಕೆ ಮನವರಿಕೆ ಮಾಡುವ ಸಾಮರ್ಥ್ಯವನ್ನು ಅವರು ಹೊಂದಿದ್ದರು. ಲೆಕ್ಕಕ್ಕಿಂತ ಹೆಚ್ಚು ಅಣೆಕಟ್ಟುಗಳ ನಿರ್ಮಾಣ, ವಿವೇಚನಾರಹಿತ ಗಣಿಗಾರಿಕೆ ಮತ್ತು ಇತರ ಪರಿಸರ ವಿನಾಶಕ ಚಟುವಟಿಕೆಗಳ ವಿರುದ್ಧ ಅವರು ಮತ್ತು ಮಾತ್ರಿ ಸದನದ ಇತರ ಸಾಧುಗಳು ಗಂಭೀರ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು. ತಮ್ಮ ಮನವಿಗಳಿಗೆ ಸರಕಾರ ಕಿವಿ ಕೊಡದೇ ಹೋದಾಗ, ಸುದೀರ್ಘ ಉಪವಾಸಗಳನ್ನು ಮಾಡಿ ಅವರು ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದರು.
ರವಿ ಚೋಪ್ರಾ ಇನ್ನೋರ್ವ ಪ್ರಖ್ಯಾತ ಇಂಜಿನಿಯರ್ ಹಾಗೂ ಗಂಗಾ ಮತ್ತು ಹಿಮಾಲಯ ಪರಿಸರ ವ್ಯವಸ್ಥೆಯ ತಜ್ಞರು. (ಪ್ರೊ. ಜಿ. ಡಿ. ಅಗರ್ವಾಲ್ ರವಿ ಚೋಪ್ರಾರ ಗುರು ಮತ್ತು ಮಾರ್ಗದರ್ಶಿಯಾಗಿದ್ದರು). ತನ್ನ ಪ್ರಾಮಾಣಿಕತೆ ಮತ್ತು ಪಾಂಡಿತ್ಯಕ್ಕೆ ಹೆಸರಾದವರು. ಸುಪ್ರೀಂ ಕೋರ್ಟ್ ನ ಸೂಚನೆಯಂತೆ ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿಗಳಿಗೆ ಅವರು ಆಗಾಗ ನೇಮಕಗೊಳ್ಳುತ್ತಿದ್ದರು. ಇತ್ತೀಚೆಗೆ ಅವರು ಇಂತಹ ಒಂದು ಸಮಿತಿಗೆ ರಾಜೀನಾಮೆ ನೀಡಿದರು. ಮರಗಳು, ಅರಣ್ಯಗಳು, ಹೊಲಗಳನ್ನು ರಕ್ಷಿಸುವುದು ಹಾಗೂ ಭೂಕುಸಿತಗಳು ಮತ್ತು ಪ್ರಾಕೃತಿಕ ವಿಪತ್ತುಗಳನ್ನು ತಡೆಯುವುದು ಹಾಗೂ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಪರಿಸರವಾದಿಗಳು ನೀಡಿರುವ ಅಭಿಪ್ರಾಯಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಅವರು ರಾಜೀನಾಮೆ ನೀಡಿದ್ದಾರೆ. ಗಂಗಾ ನದಿ ಮುಖಜ ಭೂಮಿಯಲ್ಲಿ (ಅಥವಾ ಯಾವುದೇ ನದಿಯಲ್ಲಿ) ಅರಣ್ಯಗಳು ಮತ್ತು ಜೀವವೈವಿಧ್ಯವನ್ನು ಕಾಪಾಡುವುದು ನದಿಯ ರಕ್ಷಣೆಯ ನಿಟ್ಟಿನಲ್ಲಿ ಮಾಡಬೇಕಾದ ಅತ್ಯಂತ ಮಹತ್ವದ ಕೆಲಸವಾಗಿದೆ. ಆದರೆ, ನದಿ ಮುಖಜ ಭೂಮಿಯನ್ನು ರಕ್ಷಿಸುವ ಪ್ರಮುಖ ಯೋಜನೆಗಳು ಭಾರೀ ಹಿಂದೆ ಬಿದ್ದಿವೆ ಹಾಗೂ ಇದು ಸಾವು-ಬದುಕಿನ ಸಂಗತಿಯಾಗಿದೆ ಎಂಬುದಾಗಿ ಡಾ. ರವಿ ಚೋಪ್ರಾ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿರುವ ಸಮಿತಿಯೊಂದು ಹೇಳಿದೆ. ಹಿಮಾಲಯ ವಲಯದಲ್ಲಿ 2013ರಲ್ಲಿ ಸಂಭವಿಸಿದ ಪ್ರವಾಹದ ಬಗ್ಗೆ ಅಧ್ಯಯನ ನಡೆಸಲು ಸುಪ್ರೀಂ ಕೋರ್ಟ್‌ನ ಆದೇಶದಂತೆ ಈ ಸಮಿತಿಯನ್ನು ರಚಿಸಲಾಗಿತ್ತು.
ಗಂಗಾ ನದಿ ರಕ್ಷಣೆಗೆ ಬದ್ಧತೆಯನ್ನು ಹೊಂದಿದ್ದ ಹಾಗೂ ತಮ್ಮ ಜ್ಞಾನಕ್ಕಾಗಿ ಅಪಾರ ಗೌರವವನ್ನು ಸಂಪಾದಿಸಿದ್ದ ಈ ವ್ಯಕ್ತಿಗಳು ಬಿಜೆಪಿ ಸರಕಾರದ ಗಂಗಾ ರಕ್ಷಣೆಯ ಅತಿರಂಜಿತ ಯೋಜನೆಯಿಂದ ಯಾಕೆ ದೂರವುಳಿದರು? ಯಾಕೆಂದರೆ, ನದಿ ಮತ್ತು ಅದರ ಮುಖಜಭೂಮಿ ಪ್ರದೇಶಗಳನ್ನು ರಕ್ಷಿಸುವುದಕ್ಕೆ ಅತ್ಯಂತ ಸೂಕ್ತವಾಗಿರುವ ನೀತಿಗಳನ್ನು ಬಿಜೆಪಿ ಸರಕಾರಗಳು ನಿರ್ಲಕ್ಷಿಸುತ್ತಿವೆ ಎಂಬುದಾಗಿ ಅವರು ಭಾವಿಸಿದ್ದಾರೆ. ಅದೂ ಅಲ್ಲದೆ, ಗಂಗಾ ನದಿಯ ರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ನಿಕಟವಾಗಿ ತೊಡಗಿಸಿಕೊಂಡಿರುವ ಹಲವು ವ್ಯಕ್ತಿಗಳು ಈಗಿನ ಕೇಂದ್ರ ಸರಕಾರದ ಮೇಲೆ ಹಿಂದೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ, ಈ ಯೋಜನೆಗಳು ಸಾಗುತ್ತಿರುವ ದಾರಿಯನ್ನು ನೋಡಿ ಅವರು ಭ್ರಮನಿರಸನಗೊಂಡಿದ್ದಾರೆ.
ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿರುವ ಸಾವಿರಾರು ಮರಗಳು ಕಡಿಯಲ್ಪಡುವ ಬೆದರಿಕೆಯನ್ನು ಎದುರಿಸುತ್ತಿವೆ ಹಾಗೂ ಈಗಾಗಲೇ ಭಾರೀ ಸಂಖ್ಯೆಯ ಮರಗಳನ್ನು ಕಡಿಯಲಾಗಿದೆ ಎಂದು ಸುರೇಶ್ ಭಾಯ್ ಮತ್ತು ರಾಧಾ ಭಟ್ ಸೇರಿದಂತೆ ಉತ್ತರಾಖಂಡದ ಹಿರಿಯ ಗಾಂಧಿವಾದಿ ಸಾಮಾಜಿಕ ಕಾರ್ಯಕರ್ತರು ಸಿದ್ಧಪಡಿಸಿರುವ ವರದಿಗಳು ತಿಳಿಸಿವೆ. ಈ ಕಣಿವೆಗಳಲ್ಲಿ ನಿರ್ಲಕ್ಷದಿಂದ ಒಂದು ಮರವನ್ನು ಕಡಿದರೆ ಇತರ ಹಲವಾರು ಮರಗಳಿಗೆ ಹಾನಿಯಾಗುತ್ತದೆ ಎಂದು ಅವರು ಹೇಳುತ್ತಾರೆ. ಅದೂ ಅಲ್ಲದೆ, ವಿವೇಚನಾರಹಿತ ನಿರ್ಮಾಣ ಕಾರ್ಯಕ್ಕಾಗಿ ಪರ್ವತಗಳನ್ನು ಅಗೆಯುವ ಪ್ರಕ್ರಿಯೆಯಲ್ಲಿ ಉಂಟಾಗುವ ಬೃಹತ್ ಪ್ರಮಾಣದ ಅವಶೇಷಗಳು ಗಂಗಾ ನದಿ ಮತ್ತು ಅದರ ಉಪನದಿಗಳನ್ನು ಸೇರುತ್ತವೆ. ಈ ಪ್ರಕ್ರಿಯೆಗಳು, ಈಗಾಗಲೇ ವಿಪತ್ತುಕಾರಕವಾಗಿರುವ ವಲಯವನ್ನು ಇನ್ನಷ್ಟು ಹೆಚ್ಚು ಭೂಕುಸಿತಗಳು ಮತ್ತು ಪ್ರವಾಹಗಳಿಗೆ ಈಡು ಮಾಡುತ್ತವೆ.
ಹಿಮಾಲಯದಲ್ಲಿ ಗಂಗಾ ಮತ್ತು ಅದರ ಉಪನದಿಗಳು ಹರಿಯುವ ಪ್ರದೇಶಗಳಲ್ಲಿ ಪರಿಸರ ವಿನಾಶಕ ಜಲವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸಬಾರದು ಎನ್ನುವುದು ಪರಿಸರವಾದಿಗಳು, ಅದರಲ್ಲೂ ಮುಖ್ಯವಾಗಿ ಗಂಗಾ ನದಿಯ ರಕ್ಷಣೆಯಲ್ಲಿ ಹೆಚ್ಚು ನಿಕಟವಾಗಿ ಕೆಲಸ ಮಾಡಿರುವ ಪರಿಸರವಾದಿಗಳ ದೀರ್ಘಕಾಲೀನ ಬೇಡಿಕೆಯಾಗಿದೆ. ಆದರೆ, ದುರದೃಷ್ಟವಶಾತ್ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರವು ಈ ಬೇಡಿಕೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ವಾಸ್ತವಿಕವಾಗಿ, ಗಂಗಾ ನದಿ ಮತ್ತು ಅದರ ಉಪನದಿಗಳಲ್ಲಿ ಮತ್ತು ಅವುಗಳ ಸುತ್ತಮುತ್ತ ಗಣಿಗಾರಿಕೆ ಚಟುವಟಿಕೆಗಳನ್ನು ತಡೆಯಬೇಕು ಎಂಬ ಸ್ವೀಕರಿಸಲು ಸುಲಭವಾಗಿರುವ ಬೇಡಿಕೆಗಳಿಗೂ ಸರಕಾರ ಸರಿಯಾದ ಗಮನ ನೀಡುತ್ತಿಲ್ಲ. ಈಗ ಬೃಹತ್ ಪ್ರಮಾಣದಲ್ಲಿ ಮರಗಳನ್ನು ಕಡಿಯುವುದರಿಂದ ಪರಿಸರ ಸಮಸ್ಯೆಗಳು ಮತ್ತು ಪ್ರಾಕೃತಿಕ ವಿಪತ್ತುಗಳು ಸಂಭವಿಸುವ ಸಾಧ್ಯತೆಗಳು ಮತ್ತಷ್ಟು ಹೆಚ್ಚಿವೆ. ಅತ್ಯಂತ ಸೂಕ್ಷ್ಮ ಮತ್ತು ಪವಿತ್ರ ಉತ್ತರಕಾಶಿ-ಗಂಗೋತ್ರಿ ವಲಯದಲ್ಲಿರುವ ಸಾವಿರಾರು ಮರಗಳು, ಅದರಲ್ಲೂ ಮುಖ್ಯವಾಗಿ ದೇವದಾರು ಮರಗಳು ಕಡಿಯಲ್ಪಡುವ ಬೆದರಿಕೆಯನ್ನು ಎದುರಿಸುತ್ತಿವೆ.
ಅರಣ್ಯನಾಶ, ಕ್ಷಿಪ್ರ ಜೈವಿಕವೈವಿಧ್ಯತೆಯ ನಾಶ ಮತ್ತು ವಿವೇಚನಾರಹಿತ ಅಣೆಕಟ್ಟು ನಿರ್ಮಾಣವು ನೀರಿನ ಗುಣಮಟ್ಟ ಮತ್ತು ಪರಿಶುದ್ಧತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಿವೆ. ಅದರ ಜೊತೆಗೆ ಗೃಹ ಮತ್ತು ಕೈಗಾರಿಕಾ ಮಾಲಿನ್ಯ ಮಟ್ಟಗಳನ್ನು ಕಡಿಮೆಗೊಳಿಸುವುದರಲ್ಲಿಯೂ ಗಣನೀಯ ಪ್ರಮಾಣದ ವೈಫಲ್ಯ ಎದ್ದು ಕಾಣುತ್ತಿದೆ. ಅತ್ಯಂತ ದುಬಾರಿ ಹಾಗೂ ಹೆಚ್ಚು ಇಂಧನದ ಅಗತ್ಯವಿರುವ ಕೊಳಚೆ ನೀರು ಸಂಸ್ಕರಣಾ ಸ್ಥಾವರಗಳ ನಿರ್ಮಾಣಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದಕ್ಕೆ ತುಂಬಾ ಹಣ ಮತ್ತು ವಿದ್ಯುತ್ ಬೇಕು. ಇವುಗಳು ಹೆಚ್ಚಾಗಿ ತಮ್ಮ ಪೂರ್ಣ ಸಾಮರ್ಥ್ಯಕ್ಕಿಂತ ತುಂಬಾ ಕಡಿಮೆ ಪ್ರಮಾಣದಲ್ಲಿ ಸಂಸ್ಕರಣೆ ನಡೆಸುತ್ತವೆ.
ಕೊಳಚೆ ನೀರು ಸಂಸ್ಕರಣೆಗಾಗಿ ಸಂಕಟಮೋಚನ ಫೌಂಡೇಶನ್ ಕಡಿಮೆ ವೆಚ್ಚದ ಹಾಗೂ ಕಡಿಮೆ ವಿದ್ಯುತ್ ಬಳಸುವ ಇತರ ವಿಧಾನಗಳನ್ನು ಸೂಚಿಸಿತ್ತು. ಆದರೆ, ಅದಕ್ಕೆ ಸರಕಾರ ಗಮನವೇ ಕೊಟ್ಟಿಲ್ಲ. ಬೃಹತ್ ಉದ್ಯಮಗಳ ಹಿತಾಸಕ್ತಿಗೆ ಪೂರಕವಾದ, ಹೆಚ್ಚಿನ ಬಂಡವಾಳದ ಅಗತ್ಯವಿರುವ ಹಾಗೂ ದುಬಾರಿ ತಂತ್ರಜ್ಞಾನಗಳನ್ನು ಬಳಸುವ ವಿಧಾನಗಳಿಗೆ ಸರಕಾರ ನಿರಂತರವಾಗಿ ಒತ್ತು ನೀಡುತ್ತಿದೆ. ಹಾಗಾಗಿ, ಮಾಲಿನ್ಯವನ್ನು ತಗ್ಗಿಸುವ ಉದ್ದೇಶದ ಸರಳ, ಅಗ್ಗದ, ಹೆಚ್ಚಿನ ನೈಪುಣ್ಯದ ಹಾಗೂ ವಿಕೇಂದ್ರೀಕೃತ ವಿಧಾನಗಳಿಗೆ ನ್ಯಾಯೋಚಿತ ಅವಕಾಶವನ್ನೇ ನೀಡಲಾಗಿಲ್ಲ. ಅದೂ ಅಲ್ಲದೆ, ನದಿ ಸಾರಿಗೆಯಂಥ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆಯು ಪರಿಸರಕ್ಕೆ ಮತ್ತಷ್ಟು ಬೆದರಿಕೆಗಳನ್ನು ಒಡ್ಡಿದೆ.
ಘಾಟ್‌ಗಳನ್ನು ಸುಂದರಗೊಳಿಸಿರುವುದು ಎದ್ದು ಕಾಣುತ್ತಿದೆ. ಆದರೆ, ಇದು ಮೇಲ್ನೋಟಕ್ಕೆ ಮಾತ್ರ ಸುಂದರವಾಗಿ ಕಾಣುತ್ತದೆ. ಘಾಟ್‌ಗಳ ಸುಂದರೀಕರಣ ಮತ್ತು ಇತರ ಕಾಮಗಾರಿಗಳ ಸಂದರ್ಭದಲ್ಲಿ ಹಲವು ಧ್ವಂಸಗಳನ್ನು ತಡೆಯಬಹುದಾಗಿತ್ತು ಎಂಬುದಾಗಿ ವಾರಣಾಸಿಯಲ್ಲಿನ ಹೆಚ್ಚಿನವರು ಅಭಿಪ್ರಾಯಪಡುತ್ತಾರೆ. ಈ ಧ್ವಂಸಗಳಿಂದಾಗಿ ನಗರದ ಹಲವರು ತಮ್ಮ ಜೀವನೋಪಾಯಗಳನ್ನು ಕಳೆದುಕೊಂಡಿದ್ದಾರೆ. ಈ ತಥಾಕಥಿತ ಸುಂದರೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳುವಾಗ ನಗರದ ಸಂಪ್ರದಾಯ ಮತ್ತು ಪರಂಪರೆಗಳನ್ನು ಉಪೇಕ್ಷಿಸಲಾಗಿದೆ ಎಂಬ ದೂರುಗಳಿವೆ. ಸಂಸ್ಕೃತಿ ಮತ್ತು ಜೀವನೋಪಾಯಗಳು ಒಂದರಲ್ಲೊಂದು ಮಿಳಿತಗೊಳ್ಳಬೇಕು. ಆದರೆ, ವಾರಣಾಸಿಯ ನೇಕಾರರು ಮತ್ತು ಕುಶಲಕರ್ಮಿಗಳು ನಗರ ಸುಂದರೀಕರಣದಿಂದಾಗಿ ತಮ್ಮ ಜೀವನೋಪಾಯವನ್ನು ಭಾರೀ ಪ್ರಮಾಣದಲ್ಲಿ ಕಳೆದುಕೊಂಡಿದ್ದಾರೆ. ಗಂಗಾ ಮತ್ತು ವಾರಣಾಸಿಯ ಬಗ್ಗೆ ಮಾತನಾಡುವಾಗ ಅವರ ವಿಷಯಗಳೂ ಚರ್ಚೆಯಾಗಬೇಕು.
ನದಿಗಳು ಮತ್ತು ನದಿ ವ್ಯವಸ್ಥೆಗಳ ರಕ್ಷಣೆ ಎಂದರೆ ನಿಜವಾಗಿಯೂ ಏನು ಎಂಬ ನಿಖರ ಹಾಗೂ ಸಮಗ್ರ ಕಲ್ಪನೆಯನ್ನು ಕೇಂದ್ರ ಸರಕಾರ ಹೊಂದಿಲ್ಲದಿರುವುದು ವಾಸ್ತವ. ಈ ತಿಳುವಳಿಕೆಯ ಕೊರತೆಯಿಂದಾಗಿಯೇ, ರಾಷ್ಟ್ರೀಯ ನದಿ-ಜೋಡಣೆಯಂಥ ಅತ್ಯಂತ ವಿನಾಶಕಾರಿ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈ ಯೋಜನೆ ಗಳ ಬೃಹತ್ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಮಾಜಿ ಹಿರಿಯ ಸರಕಾರಿ ಅಧಿಕಾರಿಗಳು ಸೇರಿದಂತೆ ಹಲವು ಪರಿಣತರು ಎಚ್ಚರಿಕೆ ನೀಡಿದ್ದಾರೆ.
ಸರಕಾರದ ತಿಳುವಳಿಕೆಯ ಕೊರತೆಯಿಂದಾಗಿಯೇ, ಗಂಗಾ ನದಿ ರಕ್ಷಣೆಯಲ್ಲಿ ಜನಾಭಿಪ್ರಾಯ ರೂಪಿಸುವಲ್ಲಿ ಗರಿಷ್ಠ ಸಹಾಯ ಮಾಡಬಲ್ಲವರು ದೂರ ಉಳಿದಿದ್ದಾರೆ. ಗಂಗಾ ರಕ್ಷಣೆಯನ್ನು ಸಾಮೂಹಿಕ ಚಳವಳಿಯನ್ನಾಗಿ ಮಾಡುವ ಸಾಧ್ಯತೆ ಇರುವ ಹೊರತಾಗಿಯೂ, ಈ ಸಾಧ್ಯತೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಕೃಪೆ: countercurrents.org