ನೆಟ್ಫ್ಲಿಕ್ಸ್ ಮೂಲಕ ಹಾಲಿವುಡ್ ಚಿತ್ರರಂಗ ಪ್ರವೇಶಿಸಿದ ಬಾಲಿವುಡ್ ನಟಿ ಆಲಿಯಾ ಭಟ್
ಮುಂಬೈ: ತಾವು ನೆಟ್ಫ್ಲಿಕ್ಸ್ ಸ್ಪೈ ಥ್ರಿಲ್ಲರ್ ಹಾರ್ಟ್ ಆಫ್ ಸ್ಟೋನ್ ಮೂಲಕ ಹಾಲಿವುಡ್ ಪ್ರವೇಶಿಸುತ್ತಿರುವುದಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಇಂದು ಬೆಳಿಗ್ಗೆ ಇನ್ಸ್ಟಾಗ್ರಾಂನಲ್ಲಿ ಘೋಷಿಸುತ್ತಿದ್ದಂತೆಯೇ ಹಲವಾರು ನಟ ನಟಿಯರು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಆಕೆಗೆ ಅಭಿನಂದನೆಗಳನ್ನು ಸಲ್ಲಿಸಲು ಆರಂಭಿಸಿದ್ದಾರೆ.
ನಟ ಅರ್ಜುನ್ ಕಪೂರ್ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಆಲಿಯಾರನ್ನು ಹಿರಿಯ ನಟಿ ಮೆರಿಲ್ ಸ್ಟ್ರೀಪ್ಗೆ ಹೋಲಿಸಿದ್ದಾರೆ. ಆಲಿಯಾ ಪೋಸ್ಟ್ ಗೆ ಪ್ರತಿಕ್ರಿಯಿಸಿ ಅರ್ಜುನ್ ಕಪೂರ್ ಅವರು ʼಮಿನಿ ಮೆರಿಲ್ಸ್ ಎಟ್ ಇಟ್ ಅಗೇನ್ʼ ಎಂದು ಬರೆದಿದ್ದಾರೆ.
ಆಲಿಯಾ ತಾಯಿ ಸೋನಿ ರಝ್ದಾನ್, ಸಹೋದರಿ ಪೂಜಾ ಭಟ್ ಕೂಡ ಆಕೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆಕೆಯನ್ನು ಅಭಿನಂದಿಸಿದವರಲ್ಲಿ ಸಮಂತಾ ರುತ್ ಪ್ರಭು, ಝೋಯಾ ಅಖ್ತರ್, ವಿಜಯ್ ಶರ್ಮ, ಭೂಮಿ ಪೆಡ್ನೇಕರ್, ಮನೀಶ್ ಮಲ್ಹೋತ್ರ ಕೂಡ ಸೇರಿದ್ದಾರೆ.
ನೆಟ್ಫ್ಲಿಕ್ಸ್ ಇಂಡಿಯಾ ಕೂಡ ಆಲಿಯಾ ಅವರ ಒಂದು ಫೋಟೋ ಶೇರ್ ಮಾಡಿ "ಪಿಂಚಸ್ ಸೆಲ್ಫ್ ಇಟ್ ಈಸ್ ರಿಯಲಿ ಹ್ಯಾಪನಿಂಗ್. ಆಲಿಯಾ ಅವರು ಗಾಲ್ ಗಡೋಟ್ ಮತ್ತು ಜೇಮೀ ಡೊರ್ನಾನ್ ಜತೆ ಮುಂಬರುವ ನೆಟ್ಫ್ಲಿಕ್ಸ್ ಚಿತ್ರ ಹಾರ್ಟ್ ಆಫ್ ಸ್ಟೋನ್ನಲ್ಲಿ ನಟಿಸಲಿದ್ದಾರೆ" ಎಂದು ಟ್ವೀಟ್ ಮಾಡಿದೆ.