ಮಹಿಳೆಯರು ಸಾಮಾಜಿಕವಾಗಿಯೂ ಸಬಲೀಕರಣಗೊಳ್ಳಬೇಕು: ಸಿಇಓ ಡಾ.ನವೀನ್ ಭಟ್
ಉಡುಪಿ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಉಡುಪಿ, ಮಾ.8: ಮಹಿಳೆ ರಾಜಕೀಯವಾಗಿ ಮಾತ್ರ ಸಬಲೀಕರಣ ಗೊಂಡರೆ ಸಾಲದು, ಸಾಮಾಜಿಕ ವಾಗಿಯೂ ಸಬಲೀಕರಣಗೊಳ್ಳಬೇಕು. ಇದರಿಂದ ಸಮಾಜದ ಬೆಂಬಲವೂ ಆಕೆಗೆ ಸಿಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಇಲಾಖೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಉಡುಪಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ. ಹೇಳಿದ್ದಾರೆ.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಮಿಷನ್, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ಜಿಲ್ಲಾ ಮತ್ತು ತಾಲೂಕು ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟ, ಸಂಜೀವಿನಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಎನ್‌ಯುಎಲ್‌ಎಂ) ಹಾಗೂ ಪರ್ಯಾಯ ಶ್ರೀಕೃಷ್ಣಾಪುರ ಮಠಗಳ ಸಂಯುಕ್ತ ಆಸ್ರಯದಲ್ಲಿ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಮಂಗಳವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಂಜೀವಿನಿ ಯೋಜನೆ ಕುರಿತು ಉಡುಪಿ ಜಿಲ್ಲಾ ಲಾಂಛನವನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡುತಿದ್ದರು.
ಸಮಾಜದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಪಾಲುದಾರಿಕೆ ಅಧಿಕವಾಗಬೇಕು. ಈ ಹಿನ್ನೆಲೆಯಲ್ಲಿ ಉಡುಪಿ ಜಿಪಂ ತನ್ನ ವಿವಿಧ ಚಟುವಟಿಕೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದೆ. ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವ-ಸಹಾಯ ಸಂಘಕ್ಕೆ ಕೃಷಿ ಯಂತ್ರೋಪಕರಣ ವಿತರಣೆ, ಕೊರಗ ಮಹಿಳೆಯರಿಂದ ಚಿಕ್ಕಿ ತಯಾರಿ ಘಟಕ ಸ್ಥಾಪನೆ, ಸಂಚಾರಿ ಕ್ಯಾಂಟೀನ್ ಆರಂಭಕ್ಕೆ ಆರ್ಥಿಕ ನೆರವು, 60 ಮಂದಿ ಮಹಿಳೆಯರಿಗೆ ಡ್ರೈವಿಂಗ್ ತರಬೇತಿ ಮುಂತಾದವುಗಳನ್ನು ನೀಡಲಾಗಿದೆ ಎಂದರು.
ಮಹಿಳೆಯರು ಸಬಲರಾಗಿ, ಸಂಘಟಿತರಾಗಿ, ಜಾಗೃತರಾಗಬೇಕು. ಜಿಲ್ಲೆಯ ಮಹಿಳೆಯರೂ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಐಎಎಸ್, ಐಪಿಎಸ್ ಸೇವೆಗೆ ಸೇರಬೇಕಾಗಿದೆ. ಇದಕ್ಕಾಗಿ ಜಿಲ್ಲೆಯ ಹೆತ್ತವರು ತಮ್ಮ ಹೆಣ್ಣು ಮಕ್ಕಳಿಗೆ ಈಗಿಂದಲೇ ಪ್ರೇರೇಪಣೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪಾತ್ರ ಮುಖ್ಯ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಮಹಿಳೆ ಸಮಾಜದ ಶಕ್ತಿ ಹಾಗೂ ಕುಟುಂಬದ ಕಣ್ಣು. ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪ್ರಮುಖ ಪಾತ್ರವಹಿಸುತಿದ್ದಾರೆ. ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಸಾಧನೆಯ ಮೂಲಕ ತನ್ನ ಛಾಪು ಮೂಡಿಸಿದ್ದಾಳೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಬೆರಳಣಿಕೆಯಷ್ಟು ಮಹಿಳೆಯರು ಮಾತ್ರ ಮನೆಯಿಂದ ಹೊರಬಂದು ದುಡಿಯುತ್ತಿದ್ದರು. ಆದರೆ ಪ್ರಸ್ತುತ ಗಡಿ ಕಾಯುವುದರಿಂದ ಹಿಡಿದು ಕುಟುಂಬದ ಪ್ರತಿಯೊಂದು ಕೆಲಸವನ್ನೂ ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾಳೆ. ಪ್ರತಿಯೊಂದು ಕೆಲಸವನ್ನೂ ನಿರ್ವಹಿಸುವ ಶಕ್ತಿ, ಸಾಮರ್ಥ್ಯ, ತಾಳ್ಮೆ, ಉತ್ಸಾಹ ಮಹಿಳೆಗಿದೆ ಎಂದರು.
ಅದರೆ ಇದರ ಮಧ್ಯೆಯೂ ಕೌಟುಂಬಿಕ ದೌರ್ಜನ್ಯಕ್ಕೆ ಹಲವು ಮಂದಿ ಮಹಿಳೆಯರು ಬಲಿಯಾಗುತ್ತಿದ್ದು, ಅವರಿಗೆ ಧೈರ್ಯ ನೀಡಿ, ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಮಹಿಳೆಯ ಸಾಮರ್ಥ್ಯ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಮತ್ತು ಅವಳನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ನಾಗರಿಕ ಸಮಾಜದ ಮುಖ್ಯ ಗುಣವಾಗಬೇಕು. ಮಹಿಳೆ ಯರು ಸಂವಿಧಾನ ನೀಡಿರುವ ಹಕ್ಕುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುತ್ಪಾಡಿ ಎಸ್‌ಡಿಎಂ ಆರ್ಯುವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲೆ ಹಾಗೂ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಮಮತಾ ನವೀನ್ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಗುಂಪಿನ ಮಹಿಳೆಯರಿಗೆ ಚಾಲನಾ ಪರವಾನಗಿ ವಿತರಿಸಲಾಯಿತು. ಮಹಿಳಾ ಸ್ವ-ಸಹಾಯ ಸಂಘಕ್ಕೆ ಟ್ಯಾಕ್ಟರ್ ವಿತರಣೆ, ಅತ್ಯುತ್ತಮವಾಗಿ ಕಾರ್ಯನಿರ್ವಸಿದ ಸಂಜೀವಿನಿ ಒಕ್ಕೂಟದ ಮಹಿಳೆಯರನ್ನು ಗೌರಸಲಾಯಿತು. ಅಸಾಧಾರಣ ಪ್ರತಿಭಾ ಪ್ರಶಸ್ತಿ ಪಡೆದ ಮಕ್ಕಳಿಗೆ ಸನ್ಮಾನ, ಅತ್ಯುತ್ತಮ ಮಹಿಳಾ ಮಂಡಲಗಳನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಜಿಪಂ ಯೋಜನಾ ನಿರ್ದೇಶಕ ಬಾಬು, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಜಗದೀಶ್, ರುಡ್‌ಸೆಟ್ ನಿರ್ದೇಶಕ ಪಾಪಾ ನಾಯ್ಕಾ, ವಿವಿಧ ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳಾದ ಶೀಲಾ ಕೆ ಶೆಟ್ಟಿ, ವಸಂತಿ ಕೆರಡ್ಕಲ್, ಯಶೋಧಾ ಶೆಟ್ಟಿ, ರಾಧಾದಾಸ್, ಶೋಭಾ ಕಲ್ಕೂರ, ವಸಂತಿ ಅಂಬಲಾಡಿ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್ ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ವಂದಿಸಿದರು.