varthabharthi


ಅನುಗಾಲ

ರಥಯಾತ್ರೆಯಲ್ಲಿ ನಜ್ಜುಗುಜ್ಜಾದವರು

ವಾರ್ತಾ ಭಾರತಿ : 10 Mar, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಇಂದಿರಾ ಗಾಂಧಿಯೇ ಇರಲಿ, ಮೋದಿಯೇ ಇರಲಿ, ಶಾಗಳೇ ಇರಲಿ, ಸರಕಾರಗಳು ತಮ್ಮ ಅಧಿಕಾರವನ್ನು ಸ್ಥಾಪಿಸಲು, ತಮ್ಮ ಬಿಗಿಹಿಡಿತವನ್ನು ಇನ್ನಷ್ಟು ಮುನ್ನಡೆಸಲು ಪ್ರಯತ್ನಿಸುತ್ತವೆಯೇ ಹೊರತು ಪ್ರಜಾಭಿಪ್ರಾಯವನ್ನಾಗಲೀ ನ್ಯಾಯವನ್ನಾಗಲೀ ಅಲ್ಲ. ದಾಸರು ಹೇಳಿದ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂಬುದು ಎಲ್ಲ ಕಾಲದ ಸತ್ಯ. ಗುಜರಾತ್ ಹತ್ಯಾಕಾಂಡವು ನಡೆದು 2 ದಶಕಗಳಾದರೂ ಅಲ್ಲಿನ ರಕ್ತದ ಕಲೆ ತೆಳುವಾಗಿರಬಹುದೇ ಹೊರತು ಮಾಸಿಲ್ಲ. ಒಂದಲ್ಲ ಒಂದು ರೂಪದಲ್ಲಿ ನಮ್ಮೆದುರು ತನ್ನ ಭಯಾನಕ ಕರಿನೆರಳನ್ನು ಬೀರುತ್ತಿದೆ. ಖುರೇಷಿ ಈ ರಥಯಾತ್ರೆಯಲ್ಲಿ ನುಜ್ಜುಗುಜ್ಜಾಗಿಯೂ ತನ್ನತನವನ್ನು ಕಾಪಾಡಿಕೊಂಡ ಒಂದು ಜ್ವಲಂತ ಉದಾಹರಣೆ.


ರಾಜಸ್ಥಾನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಖೀಲ್ ಅಬ್ದುಲ್ ಹಮೀದ್ ಖುರೇಶಿ ಕಳೆದ ವಾರ (ಮಾರ್ಚ್ 6, 2022) ನಿವೃತ್ತರಾದರು. ನಿವೃತ್ತಿಯ ವಿದಾಯ ಭಾಷಣದಲ್ಲಿ ಕೆಲವು ಹೃದಯಸ್ಪರ್ಶಿ ಮಾತುಗಳನ್ನು ಹೇಳಿದರು. ಇನ್ನು ಮುಂದೆ ತಾವು ಸ್ವತಂತ್ರರೆಂದರು. ತಮ್ಮ ನೆಚ್ಚಿನ ಹವ್ಯಾಸಗಳಾದ ಕುದುರೆ ಸವಾರಿಗೆ, ದೀರ್ಘ ಓಟಕ್ಕೆ ಸಮಯವನ್ನು ವಿನಿಯೋಗಿಸಲಿರುವುದಾಗಿ ಮತ್ತು ಕೈಬಿಟ್ಟಿದ್ದ ಗಣಿತಾಭ್ಯಾಸವನ್ನು ಮತ್ತೆ ಕೈಗೆತ್ತಿಕೊಳ್ಳಲಿರುವೆನೆಂದು ಹೇಳಿದರು. ಇವಿಷ್ಟೇ ಆಗಿದ್ದರೆ ಅವರನ್ನು ಉದಾಹರಿಸುವ ಅಗತ್ಯವಿಲ್ಲ. ಆದರೆ ಅವರು ನಮ್ಮ ದೇಶ ಮತ್ತು ಜಗತ್ತಿನ ಎಲ್ಲೆಡೆ ನಡೆಯುವ ಜಗನ್ನಾಥ ರಥಯಾತ್ರೆಯಲ್ಲಿ ನಜ್ಜುಗುಜ್ಜಾದ, ಆಗುವ ಬಹಳಷ್ಟು ಮಂದಿಯಲ್ಲಿ ಒಬ್ಬರಾಗಿದ್ದರೆಂಬುದಕ್ಕೆ ಮುಖ್ಯರು. ಅವರನ್ನು ನೆನಪಿಸುವಾಗ ಬಂದುಹೋಗುವವರನೇಕರು.

 ಅನ್ಯಾಯದ ಈ ರಥಯಾತ್ರೆಗೆ ಸಿಕ್ಕಿ ಸಾಯುವ, ನೋಯುವ ಮಂದಿ ಬಹಳ ಇದ್ದಾರೆ. ಅದರಲ್ಲೂ ಧರ್ಮ, ಮತ, ಜಾತಿಯ ಅಧಿಕಾರಕ್ರೌರ್ಯಕ್ಕೆ ಸಿಕ್ಕಿ ನಲುಗುವ ಅನಾಥರೇ ಹೆಚ್ಚು. ಇದು ಸಾಕ್ರೆಟಿಸನಿಗೂ ಸರಿ; ಯೇಸುವಿಗೂ ಸರಿ; ದಾರಾಶಿಕೋವಿಗೂ ಸರಿ; ಲವಾಷಿಯೆಗೂ ಸರಿ. ಹೆಸರು ಹೇಳದ ಬಲಿಪಶುಗಳು ಇತಿಹಾಸದಲ್ಲಿ ಅಗಾಧ. ಈ ಸಾವು ನೋವು ಭೌತಿಕವಿರಬಹುದು; ವೈಚಾರಿಕವಿರಬಹುದು; ಸಾವು ಸಾವೇ ನೋವು ನೋವೇ. ಹಂಸಗೀತೆಯ ವೆಂಕಟಸುಬ್ಬಯ್ಯ ಅರಸರು ಹಾಡಬೇಕೆಂದು ತನ್ನನ್ನು ಒತ್ತಾಯಿಸಿದಾಗ ತನ್ನ ನಾಲಗೆಯನ್ನು ಕತ್ತರಿಸಿಕೊಂಡರೆಂದು ಐತಿಹ್ಯ. ‘ಮದೋರು ಭಾಗಂ’ ಎಂಬ ಉತ್ತಮ ಕೃತಿಯನ್ನು ನೀಡಿದ ಪೆರುಮಾಳ್ ಮುರುಗನ್ ಎಂಬ ತಮಿಳು ಲೇಖಕ ತಾನು ಬದುಕಿದ್ದಾಗಲೇ ಸತ್ತಿದ್ದೇನೆಂದು ಪ್ರಕಟಿಸಿ ಇನ್ನು ಬರೆಯಲಾರೆನೆಂದು ಘೋಷಿಸಿದರು. ಸಂವೇದನಾಶೀಲ ಮನುಷ್ಯನಿಗೆ ವೈಚಾರಿಕ ಅವಮಾನವೂ ಸಾವೇ; ನೋವೇ. ಅಧಿಕಾರಸ್ಥರು ತಮ್ಮನ್ನು ಪ್ರಶ್ನೆ ಮಾಡುವ ವೈಚಾರಿಕತೆಯನ್ನು ಮಾತ್ರವಲ್ಲ, ಸಂವೇದನೆಯನ್ನೂ ಸಹಿಸುವುದಿಲ್ಲವಾದ್ದರಿಂದ ಅಂತಹ ವಿಚಾರಗಳನ್ನು, ಸಂವೇದನೆಗಳನ್ನು ಭೌತಿಕವಾಗಿ ಹಿಂಸಿಸಿ ಕೊಲ್ಲುವುದಕ್ಕೆ ಮುಂದಾಗುತ್ತಾರೆ. ಯೇಸುವನ್ನು ಶಿಲುಬೆಗೇರಿಸಿದ ಬಳಿಕ ಪಿಲಾತನ ಅಧಿಕಾರಸ್ಥ ಅಹಂಕಾರವು ‘ಈತ ಯೆಹೂದಿಗಳ ಒಡೆಯನಂತೆ!’ ಎಂದು ವ್ಯಂಗ್ಯವಾಡಿತು. ಆಳುವವರನ್ನು ಪ್ರಶ್ನಿಸಿದ್ದಕ್ಕಾಗಿ ಲವಾಶಿಯೆಯನ್ನು ವಿಚಾರಣೆಗೆ ಗುರಿಪಡಿಸಿದ ಬಳಿಕ ನ್ಯಾಯಾಧೀಶರು ‘‘ನಮಗೆ ಬೇಕಾದ್ದು ನಿಮ್ಮ ಸಂಶೋಧನೆಗಳಲ್ಲ, ಪ್ರತಿಭೆ-ಪಾಂಡಿತ್ಯಗಳಲ್ಲ, ಅವೆಲ್ಲ ಮತ್ತೆ ಬರಬಹುದು’’ ಎಂದು ಅಧಿಕಾರಸ್ಥರ ಪರವಾಗಿ ವ್ಯಂಗ್ಯವಾಗಿ ಬರೆದರು. ತಮ್ಮ ಅಧಿಕಾರನಿಷ್ಠೆಯನ್ನು ಮೆರೆದರು. ಈ ಖ್ಯಾತ ವಿಜ್ಞಾನಿಯನ್ನು ಮರಣದಂಡನೆಗೆ ಗುರಿಪಡಿಸಿದರು. ಆಧುನಿಕರಾದ ನಮ್ಮ ಕಾಲದಲ್ಲೂ ಇದು ಅಳಿದುಹೋಗಿಲ್ಲ. ‘ಸೂಡೋ ಸೆಕ್ಯುಲರ್’, ‘ಅರ್ಬನ್ ನಕ್ಸಲ್’ ಎಂದು ಟೀಕಿಸುವ ಮೂಲಕ ಅಧಿಕಾರ, ಅಹಂಕಾರ, ಬಹುಮತದ ಬೆಂಬಲ ಇವೆಲ್ಲ ಮಿಳಿತವಾದ ಮೂಲಭೂತವಾದದ ಧೋರಣೆಯ ದಬ್ಬಾಳಿಕೆೆ ಮುಂದುವರಿದಿದೆ. ಇವರಿಗೆ ಗೊತ್ತಿಲ್ಲದಿರುವುದು ಏನೆಂದರೆ ಕೊನೆಗೂ ಚರಿತ್ರೆಯಲ್ಲಿ ನಾಯಕರಾಗಿ, ಆದರ್ಶವಾಗಿ ಉಳಿಯುವುದು ಬಲಿಪಶುಗಳೇ ವಿನಃ ಈ ಕ್ರೂರಿಗಳಲ್ಲ. ಅವರು ಖಳನಾಯಕರಾಗಿ, ಮರೆಯಬೇಕಾದ ಸೈತಾನರಾಗಿ ಉಳಿಯುತ್ತಾರೆ. ನ್ಯಾಯಾಂಗದಲ್ಲೂ ಇಂತಹ ಕ್ರೌರ್ಯವನ್ನು ಸ್ವತಂತ್ರ ಭಾರತ ನೋಡಿದೆ. ಇಂದಿರಾಗಾಂಧಿ ಆಡಳಿತದಲ್ಲಿ ಖ್ಯಾತ ನ್ಯಾಯವೇತ್ತ ಎಚ್.ಆರ್ ಖನ್ನಾ ತಮ್ಮ ಆತ್ಮಸಾಕ್ಷಿಯನ್ನು ಬಲಿಗೊಡದೆ ನೀಡಿದ ತೀರ್ಪಿಗಾಗಿ ಭಾರತದ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗುವ ಅವಕಾಶವನ್ನು ತಪ್ಪಿಸಿಕೊಂಡರು. ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿತನವನ್ನು ಕಡೆಗಾಣಿಸಿ ಕಿರಿಯ ನ್ಯಾಯಾಧೀಶರೊಬ್ಬರು ಆಯ್ಕೆಯಾದಾಗ ನ್ಯಾಯಮೂರ್ತಿಗಳಾದ ಶೆಲ್ಲಟ್, ಗ್ರೋವರ್, ಹೆಗಡೆ ಎಂಬ ಹಿರಿಯ ತ್ರಿಮೂರ್ತಿಗಳು ತಮ್ಮ ಹುದ್ದೆಯನ್ನು ತ್ಯಜಿಸಿ ಪ್ರತಿಭಟಿಸಿದರು. ಇದು ಪ್ರಜಾತಂತ್ರವನ್ನು ಬೆಂಬಲಿಸುವ ವ್ಯಕ್ತಿಗಳ ಕಣ್ಣುತೆರೆಸುವ ಉದಾಹರಣೆಗಳಾಗಬೇಕಿತ್ತು. ಆದರೆ ಹಾಗಾಗಲಿಲ್ಲ; ದುರ್ದೈವ.
 

ನ್ಯಾಯಮೂರ್ತಿ ಖುರೇಶಿ ಗುಜರಾತಿನವರು. ಅವರ ತಂದೆ ಅಹಮದಾಬಾದಿನಲ್ಲಿ ಖ್ಯಾತ ವಕೀಲರಾಗಿದ್ದರು. ಅವರಿಗೆ ತಮ್ಮ ಈ ಮಗನೂ ವಕೀಲನಾಗಬೇಕೆಂಬ ಬಯಕೆಯಿತ್ತಂತೆ. ಆದರೆ ಮಗ ಮಾತ್ರ ಗಣಿತದಲ್ಲಿ ಅತೀವ ಆಸಕ್ತಿಹೊಂದಿ ತಾನು ಒಬ್ಬ ಗಣಿತಶಾಸ್ತ್ರಜ್ಞನಾಗಬೇಕೆಂಬ ಬಯಕೆಯನ್ನು ಹೊಂದಿದ್ದರಂತೆ. ಆದರೆ ವಿಧಿಯ ಆಟ ಬೇರೆಯಿತ್ತು. ನ್ಯಾಯಾಲಯದ ಹೊರಗೇ ಪೊಲೀಸರು ಅಟ್ಟಿ ಓಡಿಸಿ ಹಿಂಸಿಸಿದ ಒಂದು ಘಟನೆಯು ಅವರಿಗೆ ಕಾನೂನು ಶಿಕ್ಷಣಕ್ಕೆ ಪ್ರೇರಣೆಯಾಯಿತಂತೆ. ಪರಿಣಾಮವಾಗಿ ಅವರು ತಂದೆಯ ಹಾದಿಯನ್ನೇ ತುಳಿದರು. ಸೈದ್ಧಾಂತಿಕವಾಗಿ ಎಡ-ಬಲದ ಹಾದಿಗಳಲ್ಲದಿದ್ದರೂ ಅವರು ವ್ಯವಸ್ಥೆಯ ಹಾನಿಯನ್ನು ಕಾಣುವವರಾಗಿದ್ದರು. ಹೀಗಾಗಿ ಖುರೇಷಿ ನ್ಯಾಯವಾದಿಯಾದರು. ಪ್ರಭಾವವಿಲ್ಲದೆಯೂ ತಮ್ಮ ಪ್ರಖರ ವೃತ್ತಿನಿಷ್ಠೆಯಿಂದ ಅವರು ಪ್ರಕಾಶಿಸಿದರು ಮತ್ತು ಸುಮಾರು 18 ವರ್ಷಗಳ ವೃತ್ತಿಜೀವನದ ಬಳಿಕ 2004ರಲ್ಲಿ ಗುಜರಾತ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಇವು ಕೂಡ ಎಲ್ಲ ನ್ಯಾಯಮೂರ್ತಿಗಳ ವೃತ್ತಿಜೀವನದ ಕೊನೆಯ ಬೀಳ್ಕೊಡುಗೆ ಭಾಷಣದಲ್ಲಿ ಇತರರು ಗುರುತಿಸುವ ಅಂಶಗಳಂತೆ ಕಾಣಬಹುದು. ಆದರೆ ಅವರ ವೈಚಾರಿಕ ಸ್ಪಷ್ಟತೆ ಮತ್ತು ಆತ್ಮಸಾಕ್ಷಿಯ ಪ್ರಜ್ಞೆಯೇ ಅವರ ಆಗಿನ ಆಗಬಹುದಾಗಿದ್ದ ಪದೋನ್ನತಿಗೂ ಆನಂತರದ ಪದೋನ್ನತಿಯ ಅಡ್ಡಿಗೂ ಕಾರಣವೆಂಬುದು ಅವರ ಇತ್ಯಾತ್ಮಕ ಶ್ರೇಷ್ಠತೆಯಾಗಿ ಗುರುತಾಗುತ್ತದೆ. ಗುಜರಾತಿನ ಗೋಧ್ರೋತ್ತರ ಹತ್ಯಾಕಾಂಡದಲ್ಲಿ ಅಲ್ಲಿ ಆಗ ಪ್ರತಿಷ್ಠಿತವಾಗಿದ್ದ ಮೋದಿ ಸರಕಾರದ ವಿರುದ್ಧ ತೀವ್ರ ಆರೋಪಗಳು ಬಂದವು. ಮುಖ್ಯವಾಗಿ ಆಗ ಅಲ್ಲಿನ ಗೃಹಸಚಿವರಾಗಿದ್ದ ಈಗಿನ ಒಕ್ಕೂಟ ಸರಕಾರದ ಗೃಹಸಚಿವರಾದ ಅಮಿತ್ ಶಾ ಅವರ ವಿರುದ್ಧ ಸೊಹ್ರಾಬುದ್ದೀನ್ ಶೇಕ್ ಮತ್ತು ಅವರ ಪತ್ನಿ ಕೈಸರ್ ಬೀ ಅವರ ಕೊಲೆ ಸಂಚಿನ ನೇರ ಆರೋಪ ಮಾಡಲಾಗಿತ್ತು. 06.08.2010ರಂದು ಅಮಿತ್ ಶಾ ಅವರನ್ನು 2 ದಿನಗಳ ಸಿಬಿಐ ಕಸ್ಟಡಿಗೆ ನೀಡಲಾಯಿತು. ಈ ಸಿಬಿಐ ಕಸ್ಟಡಿಯ ಆದೇಶವನ್ನು ಮಾಡಿದವರು ನ್ಯಾಯಮೂರ್ತಿ ಖುರೇಷಿ. ಆನಂತರ ಅವರು 8 ತಿಂಗಳುಗಳ ಕಾಲ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದರು. ಬಳಿಕ ಸರ್ವೋಚ್ಚ ನ್ಯಾಯಾಲಯವು ಶಾ ಅವರಿಗೆ ಷರತ್ತುಬದ್ಧ ಜಾಮೀನು ನೀಡಿ 6 ತಿಂಗಳ ಕಾಲ ಗುಜರಾತಿಗೆ ಕಾಲಿಡದಂತೆ ಆಜ್ಞಾಪಿಸಿತು.
ಗುಜರಾತಿನ ನಿವೃತ್ತ ನ್ಯಾಯಮೂರ್ತಿ ಮೆಹ್ತಾ ಅವರನ್ನು ಅಲ್ಲಿನ ಲೋಕಾಯುಕ್ತರಾಗಿ ರಾಜ್ಯಪಾಲರು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಶಿಫಾರಸಿನ ಮೇಲೆ ನೇಮಿಸಿದರು. ಇದು ಅಲ್ಲಿನ ಮೋದಿ ಸರಕಾರಕ್ಕೆ ರುಚಿಸಲಿಲ್ಲ. ಅವರು ಇದನ್ನು ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಈ ಪ್ರಶ್ನೆ ನ್ಯಾಯಮೂರ್ತಿ ಖುರೇಷಿಯವರ ಮುಂದೆ ಬಂದಾಗ ಅವರು ಅಕ್ಟೋಬರ್ 2011ರಲ್ಲಿ ಮುಖ್ಯ ನ್ಯಾಯಮೂರ್ತಿಯವರ ಶಿಫಾರಸಿನ ಮೇಲೆ ರಾಜ್ಯಪಾಲರು ಮಾಡಿದ ತೀರ್ಮಾನವೇ ಅಂತಿಮವೆಂದು ಹೇಳಿ ಮೆಹ್ತಾ ಅವರ ಆಯ್ಕೆಯನ್ನು ಎತ್ತಿಹಿಡಿದರು. ಹೀಗೆ ಮೋದಿ ಸರಕಾರದ ದುರಾಗ್ರಹಕ್ಕೆ ಪಾತ್ರರಾದರು.
ಖುರೇಷಿ ಮಾತ್ರ ಕರ್ತವ್ಯದ ಕರ್ಮವನ್ನು ಮುಂದುವರಿಸಿದರು. ಈ ಹೊತ್ತಿಗೆ ಮೋದಿ-ಶಾ ಇಬ್ಬರೂ ಗುಜರಾತಿನಿಂದ ದಿಲ್ಲಿಗೆ ಬಂದಿದ್ದರು. ಆಡಳಿತದ ಕಳ್ಳಹಾದಿ ಇಬ್ಬರಿಗೂ ಪರಿಚಿತವೇ. ಜೊತೆಗೆ ಗುಜರಾತ್‌ನಲ್ಲಿ ಆಗಿದ್ದ ಅವಮಾನ ಇಬ್ಬರಿಗೂ ನೆನಪಿತ್ತು. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮುಖೋಪಾಧ್ಯಾಯ ಅವರು ಸರ್ವೋಚ್ಚ ನ್ಯಾಯಮೂರ್ತಿಗಳಾಗಿ ಪದೋನ್ನತಿ ಹೊಂದಿದಾಗ ಖುರೇಷಿ ಅಲ್ಲಿನ ಹಿರಿಯ ನ್ಯಾಯಮೂರ್ತಿಗಳಾಗಿ, ಪ್ರಭಾರ ಮುಖ್ಯನ್ಯಾಯಮೂರ್ತಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡದೆ ಮುಂಬೈಗೆ 5ನೇ ಹಿರಿಯ ನ್ಯಾಯಮೂರ್ತಿಗಳಾಗಿ ವರ್ಗಾಯಿಸಲಾಯಿತು. (ನೇಮಕ ಮತ್ತು ವರ್ಗಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಶಿಫಾರಸಿನ, ಇಷ್ಟಾನಿಷ್ಟಗಳ ಪಾತ್ರ ಸಾಕಷ್ಟಿರುತ್ತದೆ. ಇದನ್ನು ಎದುರಿಸಲು ಸರ್ವೋಚ್ಚ ನ್ಯಾಯಾಲಯವು ವಿಫಲವಾಗಿರುವುದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಒಂದು ಕಳಂಕ!) 1 ವರ್ಷದ ಆನಂತರ ಅವರ ಹಿರಿತನವನ್ನು ಕಡೆಗಣಿಸಿ ಗುಜರಾತಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ ಬಳಿಕವೇ ಅವರನ್ನು ಮತ್ತೆ ಗುಜರಾತಿಗೆ ವರ್ಗಾಯಿಸಲಾಯಿತು.

ಆದರೂ ಹಿರಿತನಕ್ಕೆ ಸೂಕ್ತ ಸ್ಥಾನಮಾನವನ್ನು ನೀಡಬೇಕಾದ ಅನಿವಾರ್ಯತೆ ಬಂದಾಗ ಸರ್ವೋಚ್ಚ ನ್ಯಾಯಾಲಯವು ಅವರನ್ನು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಯಾಗಿ ನೇಮಿಸಿತು. ಈ ನೇಮಕಕ್ಕೆ ಒಕ್ಕೂಟ ಸರಕಾರ ಮತ್ತು ಮಧ್ಯಪ್ರದೇಶದ ಸರಕಾರಗಳು ಆಕ್ಷೇಪಿಸಿದ್ದರಿಂದ ಅವರನ್ನು ತ್ರಿಪುರ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಿಸಲಾಯಿತು. ಈ ಹಂತದಲ್ಲಿ ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಪದೋನ್ನತಿ ಹೊಂದಲು ಅರ್ಹರಾಗಿದ್ದರು. ಅಖಿಲ ಭಾರತ ಮಟ್ಟದಲ್ಲಿ ಅವರು 2ನೇ ಹಿರಿಯ ನ್ಯಾಯಾಧೀಶರಾಗಿದ್ದರು. (ಕರ್ನಾಟಕದ ಮುಖ್ಯ ನ್ಯಾಯಾಧೀಶರಾಗಿದ್ದ ಅಭಯ್ ಓಕಾ ಮೊದಲನೆಯವರು.) ಅವರನ್ನು ಮತ್ತು ವಿವಿಧ ಉಚ್ಚ ನ್ಯಾಯಾಲಯಗಳ ಇತರ ನ್ಯಾಯಮೂರ್ತಿಗಳನ್ನೂ ಹೀಗೆ ಒಟ್ಟು 9 ಸ್ಥಾನಗಳಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಿಸಲು ಸರ್ವೋಚ್ಚ ನ್ಯಾಯಾಲಯವು ನಿರ್ಣಯಿಸಿತು. ಆದರೆ ಮೋದಿ-ಶಾ ಮುಂದಾಳತ್ವದ ಸರಕಾರವು ಖುರೇಷಿಯವರ ಪದೋನ್ನತಿಯನ್ನು ಆಕ್ಷೇಪಿಸಿತು ಮತ್ತು ಓಕಾ ಹಾಗೂ ಖುರೇಶಿಯವರಿಗಿಂತ ಕಿರಿಯರಾಗಿದ್ದ ಇತರ ನಾಲ್ವರ ಪದೋನ್ನತಿಯನ್ನು ಅಂಗೀಕರಿಸಿತು. ಆದರೆ ಸರ್ವೋಚ್ಚ ನ್ಯಾಯಾಲಯದ ಆಯ್ಕೆ ಸಮಿತಿಯಲ್ಲಿದ್ದ ನ್ಯಾಯಮೂರ್ತಿಗಳ ಪೈಕಿ ನ್ಯಾಯಮೂರ್ತಿ ರೋಹಿನ್‌ಟನ್ ಎಫ್. ನರಿಮನ್ ಅವರು ಖುರೇಷಿಯವರ ಹೊರತಾಗಿ ಇತರರ ಆಯ್ಕೆಯನ್ನು ವಿರೋಧಿಸಿ ಒಂದು ವೇಳೆ ಹಾಗೆ ಆಯ್ಕೆ ಮಾಡಿದರೆ ತಾನು ಸದಸ್ಯತ್ವವನ್ನು ತ್ಯಜಿಸುವುದಾಗಿ ಹೇಳಿದ್ದರಿಂದ ಐವರ ಆಯ್ಕೆಯೂ ತಿಂಗಳುಗಟ್ಟಲೆ ಹಿಂದುಳಿಯಿತು. ವ್ಯಂಗ್ಯವೆಂದರೆ ಅವರೆಲ್ಲರೂ ನ್ಯಾಯಮೂರ್ತಿ ಖುರೇಷಿಯವರಿಗಿಂತ ಮೊದಲೇ ನಿವೃತ್ತಿ ಹೊಂದುವವರು. ಖುರೇಷಿಯವರ ಮೇಲಿನ ಸೇಡಿಗಾಗಿ ಒಕ್ಕೂಟ ಸರಕಾರವು 4 ಇತರ ನ್ಯಾಯಮೂರ್ತಿಗಳ ಪದೋನ್ನತಿಯನ್ನೂ ಕೆಲವು ತಿಂಗಳುಗಳ ಕಾಲ ಬಲಿಕೊಟ್ಟಿತು. ನರಿಮನ್ ಅವರು ನಿವೃತ್ತರಾದ ಒಂದು ವಾರದ ಬಳಿಕ ನ್ಯಾಯಮೂರ್ತಿ ನಾಗೇಶ್ವರ ರಾವ್ ಅವರು ಈ ಆಯ್ಕೆ ಸಮಿತಿಯ ಸದಸ್ಯರಾದ ಆನಂತರ ಇತರ ನ್ಯಾಯಮೂರ್ತಿಗಳ ಆಯ್ಕೆಯ ಶಿಫಾರಸು ನಡೆಯಿತು. ಅವರೆಲ್ಲರೂ ಆಯ್ಕೆಯಾದರು. ಮುಂದೆ ಖುರೇಷಿಯವರನ್ನು ಅವರ ಹಿರಿತನದಿಂದಾಗಿ ರಾಜಸ್ಥಾನದ ಮುಖ್ಯ ನ್ಯಾಯಮೂರ್ತಿಗಳಾಗಿ ವರ್ಗಾಯಿಸಲೇಬೇಕಾಯಿತು. ಅಲ್ಲಿ ಅವರು ಮಾರ್ಚ್ 6, 2022ರಂದು ನಿವೃತ್ತಿಹೊಂದಿದರು. ಹೀಗೆ ನ್ಯಾಯ ಕೊಡುವವರಿಗೇ ನ್ಯಾಯ ದಕ್ಕದಾಯಿತು. ಖುರೇಷಿಯವರ ಪದೋನ್ನತಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆಗಿನ ವಿವಾದಿತ ಮುಖ್ಯ ನ್ಯಾಯಮೂರ್ತಿ ಗೊಗೊಯಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಈ ಕುರಿತು ಸರಕಾರದ ಆಕ್ಷೇಪಣೆಯನ್ನು ಹೇಳುತ್ತ ಖುರೇಷಿಯವರ ಆಕ್ಷೇಪಣಾರ್ಹ ನೇತ್ಯಾತ್ಮಕ ಮನಸ್ಥಿತಿಯನ್ನು ಸರಕಾರವು ಹೇಳಿದೆಯೆಂದು ಉಲ್ಲೇಖಿಸಿದರಂತೆ. ಈ ಬಗ್ಗೆ ಖುರೇಷಿಯವರು ಉಗ್ರರಾಗದೆ ಸಮಾಧಾನದಿಂದಲೇ ಇದು ತನ್ನ ‘ನ್ಯಾಯೋಚಿತ ಸ್ವಾತಂತ್ರ್ಯ’ದ ಉಲ್ಲೇಖವೆಂದಿದ್ದಾರೆ. ನ್ಯಾಯಾಲಯಗಳು ಮತ್ತು ನ್ಯಾಯಾಧೀಶರು ಇರುವುದು ನಾಗರಿಕರ ಹಕ್ಕುಗಳನ್ನು ಕಾಯ್ದುಕೊಳ್ಳುವುದಕ್ಕೇ ಹೊರತು ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಲು ಅಲ್ಲ. ತಮ್ಮ ಅಭಿವೃದ್ಧಿಯ ಬಗ್ಗೆ ಯೋಚಿಸುವವರು ಮಾತ್ರ ಆಳುವವರೆದುರು ಅಂಗಲಾಚುತ್ತಾರೆ. ಇತರರು ನಿರ್ಭಿಡೆೆೆಯಿಂದ ತಲೆಯೆತ್ತಿ ನಡೆಯುತ್ತಾರೆ; ನಿಷ್ಠುರವಾಗಿ, ನಿರ್ದಾಕ್ಷಿಣ್ಯವಾಗಿ ನ್ಯಾಯವನ್ನು ಎತ್ತಿಹಿಡಿಯುತ್ತಾರೆ. ಇದು ಖುರೇಷಿಯವರ ನಿಲುವು. ಗೊಗೊಯಿಯವರು ತಮ್ಮ ವೃತ್ತಿಯ ಕೊನೆಯ ತಿಂಗಳುಗಳಲ್ಲಿ ಹೇಗೆ ಸರಕಾರದ ಮನಸ್ಸನ್ನು ಗೆದ್ದರೆಂಬುದು ಅವರಿಗೆ ನಿವೃತ್ತಿಯ ತಕ್ಷಣವೇ ರಾಜ್ಯಸಭೆಯ ಸದಸ್ಯತನದ ಉಡುಗೊರೆ ಸಿಕ್ಕಿದ್ದರಲ್ಲಿ ಗೊತ್ತಾಗುತ್ತದೆ. ಖುರೇಷಿ ಮಾತ್ರವಲ್ಲ ಗುಜರಾತಿನ ಇನ್ನೊಬ್ಬ ಉಚ್ಚ ನ್ಯಾಯಾಧೀಶ ಜಯಂತ್ ಪಟೇಲ್ ಕೂಡ ಈ ನಿಯಮದಲ್ಲಿ ಉರಿದು ಹೋದವರು. ಅವರು 2010-11ರಲ್ಲಿ ಇಶ್ರತ್‌ಬಾನು ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿದರು. ಪರಿಣಾಮವಾಗಿ ಅವರ ಪದೋನ್ನತಿಯನ್ನು ತಡೆಹಿಡಿಯಲಾಯಿತು. ಜಯಂತ್ ಪಟೇಲ್ ತಮಗಾದ ಅನ್ಯಾಯವನ್ನು ಸಹಿಸದೆ ಅಧಿಕಾರವನ್ನು ತ್ಯಜಿಸಿದರು.

ಖುರೇಷಿಯರ ಪಾಡು ಈಗ ಜಮ್ಮು ಮತ್ತು ಕಾಶ್ಮೀರದ ನ್ಯಾಯಮೂರ್ತಿಯವರ ಆಯ್ಕೆಯಲ್ಲೂ ನಡೆದಿದೆ. ಸರ್ವೋಚ್ಚ ನ್ಯಾಯಾಲಯವು ಆಯ್ಕೆ ಮಾಡಿದ ಅಲ್ಲಿನ ಹಿರಿಯ ವಕೀಲ ಮೊಕ್ಷ ಕಜೂರಿಯಾ ಕಾಜಮಿ ಅವರನ್ನು 2 ಬಾರಿ ಸರ್ವೋಚ್ಚ ನ್ಯಾಯಾಲಯವು ಶಿಫಾರಸು ಮಾಡಿದರೂ ಒಕ್ಕೂಟ ಸರಕಾರವು ಅಂಗೀಕರಿಸದೆ ತನ್ನ ಅಧಿಕಾರಸ್ಥ (ಅ)ನೀತಿಯನ್ನು ಮುಂದುವರಿಸಿದೆ. ಇಂದಿರಾ ಗಾಂಧಿಯೇ ಇರಲಿ, ಮೋದಿಯೇ ಇರಲಿ, ಶಾಗಳೇ ಇರಲಿ, ಸರಕಾರಗಳು ತಮ್ಮ ಅಧಿಕಾರವನ್ನು ಸ್ಥಾಪಿಸಲು, ತಮ್ಮ ಬಿಗಿಹಿಡಿತವನ್ನು ಇನ್ನಷ್ಟು ಮುನ್ನಡೆಸಲು ಪ್ರಯತ್ನಿಸುತ್ತವೆಯೇ ಹೊರತು ಪ್ರಜಾಭಿಪ್ರಾಯವನ್ನಾಗಲೀ ನ್ಯಾಯವನ್ನಾಗಲೀ ಅಲ್ಲ. ದಾಸರು ಹೇಳಿದ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಎಂಬುದು ಎಲ್ಲ ಕಾಲದ ಸತ್ಯ. ಗುಜರಾತ್ ಹತ್ಯಾಕಾಂಡವು ನಡೆದು 2 ದಶಕಗಳಾದರೂ ಅಲ್ಲಿನ ರಕ್ತದ ಕಲೆ ತೆಳುವಾಗಿರಬಹುದೇ ಹೊರತು ಮಾಸಿಲ್ಲ. ಒಂದಲ್ಲ ಒಂದು ರೂಪದಲ್ಲಿ ನಮ್ಮೆದುರು ತನ್ನ ಭಯಾನಕ ಕರಿನೆರಳನ್ನು ಬೀರುತ್ತಿದೆ. ಖುರೇಷಿ ಈ ರಥಯಾತ್ರೆಯಲ್ಲಿ ನಜ್ಜುಗುಜ್ಜಾಗಿಯೂ ತನ್ನತನವನ್ನು ಕಾಪಾಡಿಕೊಂಡ ಒಂದು ಜ್ವಲಂತ ಉದಾಹರಣೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)