ಭವಿಷ್ಯದ ಮಾಯಾಬಝಾರ್ ‘ಮೆಟಾವರ್ಸ್’
ವಿಜ್ಞಾನದ ಆವಿಷ್ಕಾರಗಳಿಗೆ ಮಿತಿಯಿಲ್ಲ, ಭವಿಷ್ಯ ಇಂದಿನಂತಿರುವುದಿಲ್ಲ, ಮಾನವ ಜಗತ್ತು ಹೊಸತನ್ನು ಪಡೆಯಲು, ಸುಲಲಿತವಾಗಿ ಬದುಕನ್ನು ಸಾಗಿಸಲು ನಿರಂತರವಾಗಿ ಪರಿಶ್ರಮಿಸುತ್ತಿರುತ್ತದೆ, ಅಂತಹ ಪ್ರಯತ್ನಗಳ ಭಾಗವಾಗಿ ತಂತ್ರಜ್ಞಾನಗಳು ಬೆಳೆದು ಬರುತ್ತವೆ, ಆ ರೀತಿ ಬೆಳೆಯುತ್ತಿರುವ ಒಂದು ಅದ್ಭುತವೇ ಮೆಟಾವರ್ಸ್.
ಅದೊಂದು ಭವ್ಯವಾದ ಕನ್ವೆನ್ಶನ್ ಹಾಲ್, ಜಗತ್ತಿನ ಪ್ರಸಿದ್ಧ ವಾಸ್ತುಶಿಲ್ಪಿಗಳ ವಿನ್ಯಾಸವನ್ನೆಲ್ಲಾ ಅಳವಡಿಸಿಕೊಂಡಿರುವ ಇದರ ಸಭಾಂಗಣದ ಗೋಡೆಗಳು ತೆಳುವಾದ ಗಾಜಿನಿಂದ ಮಾಡಲ್ಪಟ್ಟಿದ್ದು ಎದುರು ನಿಂತು ನೋಡಿದರೆ ಮೈ ರೋಮಾಂಚನಗೊಳಿಸುವಂತೆ ಧುಮ್ಮಿಕ್ಕುವ ನಯಾಗರ ಜಲಪಾತ, ಹಾಲ್‌ನ ಹಿಂಬದಿಯಲ್ಲಿ ಶ್ವೇತ ಹೊದಿಕೆ ಹೊದ್ದ ಹಿಮಾಲಯ ಶ್ರೇಣಿಗಳು, ಅಕ್ಕಪಕ್ಕದಲ್ಲಿ ಕಣ್ಣಾಯಿಸಿದರೆ ಹಚ್ಚಹಸಿರಿನ ಪಶ್ಚಿಮ ಘಟ್ಟದ ಕಾಡು, ಈ ಸಭಾಂಗಣವು ಒಂದು ಬೃಹತ್ ಅಕ್ವೇರಿಯಂನ ಮೇಲೆ ನಿರ್ಮಾಣವಾಗಿದ್ದು ಮೇಲಿನಿಂದ ಕೆಳಗೆ ಓಡಾಡುವ ತಿಮಿಂಗಿಲ, ಅಕ್ಟೋಪಸ್, ಡಾಲ್ಫಿನ್ ಮೊದಲಾದ ಸಮುದ್ರ ಜೀವಿಗಳನ್ನು ವೀಕ್ಷಿಸಬಹುದು, ಬಂದಂತಹ ಅತಿಥಿಗಳು ಕುಳಿತುಕೊಳ್ಳಲು ಅಮೃತಶಿಲೆಗಳನ್ನು ಸೂಕ್ಷ್ಮವಾಗಿ ಕೆತ್ತಿ ಮೆತ್ತನೆಯ ಕುಷನ್‌ಗಳನಿಟ್ಟು ಸಿದ್ಧಪಡಿಸಿದ ಐಷಾರಾಮಿ ಕುರ್ಚಿಗಳು, ವಿಶ್ರಾಂತಿ ಹಾಗೂ ಖಾಸಗಿ ಸಮಯಕ್ಕಾಗಿ ಸಜ್ಜಾದ ಸುಂದರ ಕೊಠಡಿಗಳು, ಬೇಸರ ಕಳೆಯಲು ವಿವಿಧ ಆಟಗಳು, ದೂರದಲ್ಲಿ ಸೃಷ್ಟಿಯಾಗಿ ಎಲ್ಲರನ್ನು ಆವರಿಸುತ್ತಿರುವ ಮಧುರವಾದ ಸಂಗೀತದ ವಾತಾವರಣವು, ಅಲ್ಲಲ್ಲೇ ಇಳಿಬಿದ್ದು ಹೂಗಳನ್ನು ಅರಳಿಸುವ ವಿವಿಧ ಗಿಡಬಳ್ಳಿಗಳು, ಸದಾ ಮನಸಿಗೆ ಹಿತಕರವೆನಿಸುವಂತೆ ಬದಲಾಗುವ ಗಾಳಿ ಹಾಗೂ ಬೆಳಕಿನ ಸಂಯೋಜನೆಗಳು ಅಬ್ಬಬ್ಬಾ! ಒಟ್ಟಾರೆಯಾಗಿ ಬ್ರಹ್ಮನ ಅದ್ಭುತ ಸೃಷ್ಟಿ ಇದು ಎನ್ನುವಂತಹ ಸ್ಥಳ.
ಈ ಹಾಲ್‌ನ ಬಾಡಿಗೆಯೆಷ್ಟು ಗೊತ್ತಾ? ದಿನವೊಂದಕ್ಕೆ ಕೇವಲ 5,000 ರೂಪಾಯಿಗಳು! ಆಶ್ಚರ್ಯವಾಗ್ತಿದೀಯಾ? ನೀವು ಹೇಳಬಹುದು, ಅಲ್ಲ ಸ್ವಾಮಿ, ಇವತ್ತು ಒಂದು ಸಾಧಾರಣ ಕನ್ವೆನ್ಶನ್ ಹಾಲ್ ಬುಕ್ ಮಾಡಬೇಕೆಂದರೆ, ಬಾಡಿಗೆ ಏನಿಲ್ಲವೆಂದರೂ ರೂ. 30,000ದ ಕಡಿಮೆಯಿಲ್ಲ, ಇನ್ನೂ ಉತ್ತಮವಾದದ್ದು ಬೇಕೆಂದರೆ ಲಕ್ಷಗಳೇ ಸುರಿಯಬೇಕು, ಅದರಲ್ಲೂ ಇಂತಹ ವ್ಯವಸ್ಥೆಯ ಭವನವು ಕೋಟಿ ಕೊಟ್ಟರೂ ದೊರೆಯುವುದು ಕಷ್ಟ, ಎಲ್ಲಿದೆ? ಅದರ ಅಡ್ರೆಸ್ಸ್ ಕೊಡಿ ಅನ್ನಬಹುದು. ತಡೆಯಿರಿ, ನೀವು ಅಲ್ಲಿಗೆ ಹೋಗಲು ಇನ್ನೂ ಕೆಲವು ವರ್ಷಗಳು ಕಾಯಬೇಕು, ಕಾರಣ ಅದು ಇರುವುದು ನಮ್ಮ ಭೂಮಿಯಲ್ಲೂ ಅಲ್ಲ! ನಮ್ಮ ಯೂನಿವರ್ಸ್‌ನಲ್ಲೂ ಅಲ್ಲ! ಹಾಗಾದರೆ ಎಲ್ಲಿ ಅಂತೀರಾ, ಅದು ಇರುವುದು ಮೆಟಾವರ್ಸ್‌ನಲ್ಲಿ!
ಹೌದು, ಮೆಟಾವರ್ಸ್ ಒಂದು ರೀತಿಯಲ್ಲಿ ಭವಿಷ್ಯದ ಜಗತ್ತು, ನಾನು ಮೇಲೆ ತಿಳಿಸಿದ ಜಾಗದಲ್ಲಿ ನಯಾಗರ ಫಾಲ್ಸ್, ಹಿಮಾಲಯ ಮತ್ತು ಪಶ್ಚಿಮ ಘಟ್ಟದ ಕಾಡುಗಳು ಒಟ್ಟಿಗೆ ಬಂದಾಗಲೇ ನಿಮಗೆ ಅರ್ಥವಾಗಿರಬಹುದು ಇದ್ಯಾವುದೋ ಹೊಸ ಜಗತ್ತು ಅಂತಾ, ಖಂಡಿತವಾಗಿಯೂ ಇದು ಹೊಸ ಜಗತ್ತೇ, ಭವಿಷ್ಯದಲ್ಲಿ ಜನರು ತಾವಿದ್ದಲ್ಲಿಂದಲೇ ತಮಗೆ ಬೇಕಾದ ಜಾಗಗಳನ್ನು ಬೇಕಾದ ರೀತಿಯಲ್ಲಿ ಒಟ್ಟುಗೂಡಿಸಿ ಅದರ ನಡುವೆಯೇ ತಮ್ಮಿಷ್ಟದ ಕಲ್ಪನೆಯ ಭವನಗಳನ್ನು ನಿರ್ಮಿಸಿಕೊಂಡು ಅಲ್ಲೆಲ್ಲಾ ಅಲೆದಾಡಬಹುದು, ಜೊತೆಗೆ ತಮ್ಮವರನ್ನೂ ಕರೆದೊಯ್ದು ತಿರುಗಾಡಿಸಿಕೊಂಡು ಬರುವಂತಹ ವ್ಯವಸ್ಥೆಯನ್ನು ನೀಡುವ ಜಗತ್ತು ಇದು.
ಮನುಷ್ಯನ ಇಂದ್ರಿಯಗಳೇ ಆತನ ಅನುಭವಗಳಿಗೆ ಸಂಪನ್ಮೂಲಗಳನ್ನು ಒದಗಿಸುವುದು, ಒಂದೊಮ್ಮೆ ಆತನ ಇಂದ್ರಿಯಗಳಿಗೆ ನಮ್ಮ ನೈಜ ಜಗತ್ತಿನ ಅನುಭವಗಳನ್ನು ಅನುಭವಿಸಲು ಕುಳಿತಲ್ಲಿಯೇ ಸಂಪನ್ಮೂಲಗಳು ದೊರೆತರೆ ಆತ ಅಲ್ಲಿಯೇ ಜಗತ್ತನ್ನು ಅನುಭವಿಸಲು ಆರಂಭಿಸುತ್ತಾನೆ ಅಲ್ಲವೇ. ಉದಾಹರಣೆಗೆ ನೀವು ಒಂದು ದಟ್ಟ ಅರಣ್ಯದ ಅನುಭವವನ್ನು ಕುಳಿತಲ್ಲೇ ಪಡೆಯಬೇಕಾದರೆ ನಿಮ್ಮ ಕಣ್ಣುಗಳಿಗೆ ಗಿಡ, ಮರ, ಬಳ್ಳಿಗಳು, ಪ್ರಾಣಿ ಪಕ್ಷಿಗಳು, ಸಣ್ಣ ಪುಟ್ಟ ಕೀಟಗಳು, ಎಲ್ಲೆಲ್ಲೂ ದಟ್ಟವಾಗಿ ಹಬ್ಬಿದ ಹಸಿರು, ಕಲ್ಲು, ಮಣ್ಣು , ಹರಿಯುವ ತೊರೆ, ತೂರಿ ಬರುವ ಸೂರ್ಯನ ಕಿರಣ, ಮೇಲೆ ಮರಗಳ ನಡುವೆ ಗೋಚರಿಸುವ ಆಗಸ, ಗಾಳಿ ಬೀಸುವಿಕೆಗೆ ಅಲೆದಾಡೋ ಎಲೆಗಳು ಎಲ್ಲವೂ ಕಾಣಿಸಬೇಕು. ನಿಮ್ಮ ಕಿವಿಗಳಿಗೆ ಎಲೆಗಳ ಅಲುಗಾಟ, ತರಗೆಲೆಗಳ ಮೇಲೆ ಹೆಜ್ಜೆಯಿಟ್ಟಾಗ ಆಗುವ ಸದ್ದು, ಪ್ರಾಣಿ ಪಕ್ಷಿ ಕೀಟಗಳ ಶಬ್ದ, ನೀರು ಹರಿಯುವುದು, ಗಾಳಿ ಬೀಸುವುದೂ ಸೇರಿ ಎಲ್ಲ ರೀತಿಯ ಶಬ್ದಗಳು ಕೇಳಬೇಕು, ಇದರ ಜೊತೆಗೆ ನಿಮ್ಮ ಸ್ಪರ್ಶೇಂದ್ರಿಯಕ್ಕೆ ಕಾಡಿನ ಭಾಗವಾದ ಮರ, ಗಿಡ ಗಂಟಿಗಳು, ಮಣ್ಣು, ಕಲ್ಲು, ತೊರೆಗಳನ್ನು ಸ್ಪರ್ಶಿಸಿದಾಗ ದೊರೆಯುವ ಮಾಹಿತಿಯನ್ನು ತಲುಪಿಸಿದರೆ ನೀವು ಕುಳಿತಲ್ಲೇ ಕಾಡನ್ನು ಅನುಭವಿಸಬಹುದು ಮತ್ತು ಅಲ್ಲಿಯೇ ಇರುವಂತಹ ಭಾವನೆಯನ್ನು ತಾಳಬಹುದು ಅಲ್ಲವೇ. ಇದೇ, ಈ ಆಲೋಚನೆಯೇ ಮೆಟಾವರ್ಸ್‌ನ ಹುಟ್ಟಿಗೆ ಕಾರಣ.
ಮೆಟಾವರ್ಸ್ ಎಂದರೆ ಒಂದು ಬೃಹತ್ತಾದ, ನೈಜ ಸಮಯದಲ್ಲಿ ನಿರೂಪಿಸಲ್ಪಡುವ, ಪರಸ್ಪರ ನಿರ್ವಹಿಸಿಕೊಳ್ಳುವ ಮೂರು ಆಯಾಮಗಳ ಹಲವು ವ್ಯವಸ್ಥೆಗಳ ಜಾಲ ಹಾಗೂ ಅದನ್ನು ತಮ್ಮ ಗುರುತು, ಇತಿಹಾಸ, ಅರ್ಹತೆ, ಸಂವಹನ ಮತ್ತು ಆರ್ಥಿಕ ಶಕ್ತಿಯ ಜೊತೆಗೆ ವೈಯಕ್ತಿಕ ಪ್ರಜ್ಞೆಯೊಂದಿಗೆ ಸತತವಾಗಿ ಅನುಭವಕ್ಕೆ ತಂದುಕೊಳ್ಳುವ ಹಲವು ಬಳಕೆದಾರರನ್ನು ಒಟ್ಟುಗೂಡಿಸಿಕೊಂಡ ಒಂದು ಜಗತ್ತು.
ಈ ಮೆಟಾವರ್ಸ್ ಅನ್ನುವ ವರ್ಚುವಲ್ ಜಗತ್ತಿನ ಕಲ್ಪನೆ ಮೊದಲು ಬಂದದ್ದು ನಿಯಾಲ್ ಸ್ಟಿಫನ್ಸನ್ ಎಂಬ ಕಾದಂಬರಿಕಾರನ 1992ರಲ್ಲಿ ಪ್ರಕಟವಾದ, ತಂತ್ರಜ್ಞಾನದಿಂದ ನಡೆಸ್ಪಲ್ಪಡುವ ಅರಾಜಕ ಜಗತ್ತನ್ನು ಬಿಂಬಿಸುವ ‘ಸ್ನೋ ಕ್ರಾಶ್’ ಎಂಬ ವೈಜ್ಞಾನಿಕ ಕಾದಂಬರಿಯಲ್ಲಿ, ವರ್ಚುವಲ್ ರಿಯಾಲಿಟಿ ಕನ್ನಡಕಗಳನ್ನು ಹಾಗೂ ಇತರ ಸಾಧನಗಳನ್ನು ಬಳಸಿ ತ್ರೀಡಿ ಜಗತ್ತಿಗೆ ಪ್ರವೇಶಿಸುವಂತಹ ಪಾತ್ರಗಳನ್ನು ಸೃಷ್ಟಿಸುವ ಮೂಲಕ ಒಂದು ವಿನೂತನ ಜಗತ್ತಿನ ಸಾಧ್ಯತೆಗೆ ಪೀಠಿಕೆ ಹಾಕುತ್ತಾನೆ, ನಂತರ ಬಂದಂತಹ ಲಿಂಡನ್ ಲ್ಯಾಬ್ ಪರಿಚಯಿಸಿದ ‘ಸೆಕೆಂಡ್ ಲೈಫ್’ ಎಂಬ ಆನ್‌ಲೈನ್ ಗೇಮ್ ಈ ವರ್ಚುವಲ್ ವರ್ಡ್‌ನ ಅಂದರೆ ಕಂಪ್ಯೂಟರ್ ಸೃಷ್ಟಿಸುವ ನಮ್ಮ ಜಗತ್ತಿಗೆ ಪರ್ಯಾಯವಾದ ಡಿಜಿಟಲ್ ಜಗತ್ತಿನ ಅಪಾರ ಸಾಧ್ಯತೆಗಳಿಗೆ ಜಗತ್ತಿನ ಉದ್ಯಮಿಗಳನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿತು, ಇಲ್ಲಿ ಗೇಮರ್ ತನ್ನ ವರ್ಚುವಲ್ ದೇಹವನ್ನು ಹೊತ್ತು ಡಿಜಿಟಲ್ ಜಗತ್ತಿನಲ್ಲಿ ಹಲವು ರೀತಿಯ ಚಟುವಟಿಕೆಗಳನ್ನು ಮಾಡಲು ಅವಕಾಶ ನೀಡುವಂತಹ ವ್ಯವಸ್ಥೆಯನ್ನು ಸೃಷ್ಟಿಸಲಾಯಿತು. ಪಬ್ಜಿ ಗೇಮ್ ಅನ್ನು ಕೆಲವರು ಗಮನಿಸಿರಬಹುದು. ಇದು ಸೆಕೆಂಡ್ ಲೈಫ್‌ನಂತೆ ಮೆಟಾವರ್ಸ್ ತಂತ್ರಜ್ಞಾನವಲ್ಲದಿದ್ದರೂ ಇದರಲ್ಲಿ ನಮ್ಮ ಡಿಜಿಟಲ್ ಮುಖದ ಅವತಾರ ಆಡಲು ತೆರಳುತ್ತದೆಯಲ್ಲವೇ? ಆದರೆ ಸೆಕೆಂಡ್ ಲೈಫ್‌ನಲ್ಲಿ ನಾವೇ ಒಳಹೊಕ್ಕು ಆಡಬಹುದಾಗಿತ್ತು. ಆದರೂ ಸೆಕೆಂಡ್ ಲೈಫ್ ಹೆಚ್ಚು ನೈಜ ಅನುಭವವನ್ನು ಕೊಡಲು ಸಮರ್ಥವಾಗಲಿಲ್ಲ, ಕಾರಣ ತಂತ್ರಜ್ಞಾನ ಹೆಚ್ಚು ಅಭಿವೃದ್ದಿಯಾಗಿರಲಿಲ್ಲ.
ಇಂದು ದೊಡ್ಡ ದೊಡ್ಡ ಕಂಪೆನಿಗಳು ಈ ಕ್ಷೇತ್ರದಲ್ಲಿ ಬಂಡವಾಳ ಹೂಡುತ್ತಿರುವ ವೇಗವು ಮೆಟಾವರ್ಸ್‌ಗೆ ಬೇಕಾದ ಅಗತ್ಯ ಸಾಧನಗಳಾದ ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳು ಮತ್ತು ಆಗ್ಯುಮೆಂಟೆಡ್ ರಿಯಾಲಿಟಿ ಗ್ಲಾಸಸ್ ಹಾಗೂ ಕ್ಲೌಡ್, ಬ್ಲಾಕ್‌ಚೈನ್, ಕೃತಕ ಬುದ್ಧ್ದಿಮತ್ತೆ, ಅಂತರ್ಜಾಲ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರುವುದರ ಜೊತೆಗೆ ನಮ್ಮನ್ನು ಮೆಟಾವರ್ಸ್‌ಗೆ ಹತ್ತಿರವಾಗಲು ಸಿದ್ಧಗೊಳಿಸುತ್ತಿದೆ. ಈಗಾಗಲೆ ಫೇಸ್‌ಬುಕ್ ಕಂಪೆನಿಯು ತನ್ನ ಹೆಸರನ್ನೇ ‘ಮೆಟಾ’ ಎಂದು ಬದಲಾಯಿಸಿಕೊಂಡಿದೆ. ಭವಿಷ್ಯದ ಭರವಸೆ ಇದು ಎಂದು ಗಟ್ಟಿಯಾಗಿ ನಂಬಿಕೊಂಡು ಅದಕ್ಕೆ ಸಂಬಂಧಿಸಿದ ಹಲವು ಸಣ್ಣ ಪುಟ್ಟ ಕಂಪೆನಿಗಳನ್ನು ಉದಾಹರಣೆಗೆ ಆಕ್ಯೂಲಸ್ ವಿ ಆರ್ ಬ್ಯುಸಿನೆಸ್‌ನಂತಹವುಗಳನ್ನು ಖರೀದಿಸಿ ತನ್ನ ಗುರಿಯನ್ನು ತಲುಪಲು ಶ್ರಮಿಸುತ್ತಿದೆ. ನಿಮಗೆ ಆಶ್ಚರ್ಯವಾಗಬಹುದು 2021ರಿಂದೀಚೆಗೆ ಫೇಸ್‌ಬುಕ್ ಮೆಟಾವರ್ಸ್‌ನ ಅಭಿವೃದ್ಧಿಗೆ ಹೂಡಿದ ಹಣವೆಷ್ಟು ಗೊತ್ತಾ, 10.3 ಬಿಲಿಯನ್ ಡಾಲರ್! ಅಂದರೆ 2012ರಲ್ಲಿ ಇನ್ಸ್ಟಾಗ್ರಾಮ್ ಖರೀದಿಸಲು ಫೇಸ್‌ಬುಕ್ ನೀಡಿದ ಹಣಕ್ಕಿಂತಲೂ ಹತ್ತು ಪಟ್ಟು ಹೆಚ್ಚು, ನೀವೇ ಊಹಿಸಿ ಈ ತಂತ್ರಜ್ಞಾನದ ಭವಿಷ್ಯದ ಬೆಲೆಯನ್ನು.
ಫೇಸ್‌ಬುಕ್‌ನ ಕ್ಷಮಿಸಿ ಮೆಟಾ ಕಂಪೆನಿಯ ಝುಕರ್‌ಬರ್ಗ್ ಮಾತ್ರವಲ್ಲ, ಅಮೆಝಾನ್, ಮೈಕ್ರೊಸಾಫ್ಟ್, ಆ್ಯಪಲ್ ಕಂಪೆನಿಗಳು ಕೂಡ ಈ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯೊಂದಿಗೆ ಬಂಡವಾಳ ಸುರಿಯುತ್ತಿವೆ. ಭವಿಷ್ಯದ ಅಮೆಝಾನ್ ಶಾಪಿಂಗ್‌ನಲ್ಲಿ ನೀವು ಮೆಟಾವರ್ಸ್‌ನಲ್ಲಿರುವ ಅಮೆಝಾನ್‌ನ ಜಗಮಗಿಸುವ ಮಾಲ್‌ನೊಳಗೆ ಡಿಜಿಟಲ್ ದೇಹ ಹೊತ್ತು ಹೋಗಬಹುದು. ಅಲ್ಲಿ ನಿಮ್ಮ ಹಿಂದಿಂದೆ ಅಲೆದು ವಸ್ತುವಿನ ಕುರಿತು ವಿವರಿಸುವ ಡಿಜಿಟಲ್ ಬಾಡಿ ಹೊತ್ತ ಸಹಾಯಕರಿರುತ್ತಾರೆ. ಬಟ್ಟೆಗಳನ್ನು ಹಾಗೂ ಇತರ ವಸ್ತುಗಳನ್ನು ಸ್ಪರ್ಶಿಸಬಹುದು, ನಿಮಗೆ ಹೊಂದುತ್ತದೆಯೇ ಎಂದು ಪರೀಕ್ಷಿಸಬಹುದು, ಇಷ್ಟವಾದರೆ ಅಲ್ಲೇ ಕ್ರಿಪ್ಟೋ ಕರೆನ್ಸಿಯ ಮೂಲಕ ಹಣ ಪಾವತಿಸಿ, ಹೆಡ್‌ಸೆಟ್‌ಗಳನ್ನು ಕಳಚಿಟ್ಟು ಬಾಲ್ಕನಿಯ ಉಯ್ಯಿಲೆಯಲ್ಲಿ ನಿದ್ರೆಗೆ ಜಾರಬಹುದು, ಮಾರನೇ ದಿನ ಮನೆಬಾಗಿಲಿಗೆ ಆ ವಸ್ತು ಬಂದು ತಲುಪಿರುತ್ತದೆ.
ಈಗಾಗಲೇ ಹಲವು ಕಡೆ ಬಳಕೆಗೆ ಬರುತ್ತಿರುವ ಈ ತಂತ್ರಜ್ಞಾನವನ್ನು ಬಳಸಿ ಸ್ಯಾಮ್ಸಂಗ್ ಕಂಪೆನಿಯು ತನ್ನ ಹೊಸ ಗ್ಯಾಲಕ್ಸಿ ಫೋನ್‌ನ ಲಾಂಚ್ ಮಾಡಲು ಹೋಗಿದ್ದು ಕಾರ್ಯಕ್ರಮವು ಸ್ವಲ್ಪ ತಾಂತ್ರಿಕ ತೊಡಕಿನೊಂದಿಗೆ ಸಾಧಾರಣವಾಗಿ ನಡೆದು ಹೋಯಿತು, ಈಗಾಗಲೇ ಕೆಲವು ಕಂಪೆನಿಗಳು ಮೆಟಾವರ್ಸ್‌ನಲ್ಲಿ ತಮ್ಮ ಮೀಟಿಂಗ್‌ಗಳನ್ನು ಸಣ್ಣ ಪ್ರಮಾಣದಲ್ಲಿ ನಡೆಸಿವೆ ಕೂಡ. ಇತ್ತೀಚೆಗೆ ಬಹುಭಾಷಾ ನಟ ಪ್ರಭಾಸ್ ನಟನೆಯ ‘ರಾಧೇ ಶ್ಯಾಮ್’ ಮೂವಿ ಟ್ರೈಲರ್‌ನನ್ನು ಮೆಟಾವರ್ಸ್‌ನಲ್ಲಿ ಲಾಂಚ್ ಮಾಡಿದ್ದು ಹೆಚ್ಚು ಅಭಿಮಾನಿಗಳು ಭೇಟಿ ನೀಡಿದ ಪರಿಣಾಮ ಸರ್ವರ್ ಕೂಡ ಕ್ರಶ್ ಆಗಿದ್ದು ಸುದ್ದಿಯಾಗಿತ್ತು, ಇಷ್ಟು ಮಾತ್ರವಲ್ಲದೆ ಕಳೆದ ಫೆಬ್ರವರಿಯಲ್ಲಿ ಲಂಡನ್ ಮೂಲದ ನೀನಾ ಜೆನ್ ಪಟೇಲ್ ಎಂಬ ಮಹಿಳೆ ತಾನು ಡಿಜಿಟಲ್ ಅವತಾರ ಹೊತ್ತು ಮೆಟಾದ ವರ್ಚುವಲ್ ಪ್ರಪಂಚ ಒಳಹೊಕ್ಕ 60 ಸೆಕೆಂಡ್‌ನಲ್ಲಿಯೇ 3-4 ಗಂಡಸರ ಡಿಜಿಟಲ್ ಅವತಾರದ ಗುಂಪು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಸಾಮೂಹಿಕ ಅತ್ಯಾಚಾರ ನಡೆಸಿತು ಎಂದು ಆರೋಪಿರುವುದು ಇಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವುದರೊಂದಿಗೆ ಜಗತ್ತನ್ನು ಬೆಚ್ಚಿಬೀಳಿಸಿದೆ ಕೂಡ. ಸಂಗೀತ ಕಚೇರಿಗಳು, ಫ್ಯಾಶನ್ ಶೋಗಳು, ರಾಜಕೀಯ ಕಾರ್ಯಕ್ರಮಗಳಿಗೂ ವೇದಿಕೆಯಾಗುತ್ತಿದೆ ಈ ತಂತ್ರಜ್ಞಾನ.
ಒಟ್ಟಾರೆಯಾಗಿ ಮೆಟಾವರ್ಸ್ ಈ ಭೂಮಿಯ ಭವಿಷ್ಯದ ತಂತ್ರಜ್ಞಾನ ಎನ್ನುವ ಝುಕರ್‌ಬರ್ಗ್ ಒಂದು ಕಡೆಯಾದರೆ, ಈ ಭೂಮಿಗೆ ಭವಿಷ್ಯವೇ ಇಲ್ಲ ಎಂದು ಅಂತರಿಕ್ಷದ ಕಡೆ ನೋಡುತ್ತಿರುವ ಸ್ಪೇಸ್‌ಎಕ್ಸ್‌ನ ಎಲಾನ್ ಮಸ್ಕ್ ಇನ್ನೊಂದು ಧ್ರುವದ ವ್ಯಕ್ತಿ. ಒಟ್ಟಾರೆ ಇಬ್ಬರೂ ಶ್ರೀಮಂತರಾಗುತ್ತಿದ್ದಾರೆ. ಒಂದಂತೂ ನಿಜ. ಭವಿಷ್ಯ ಮಾತ್ರ ಯಾರೋ ಒಬ್ಬರದ್ದಂತೂ ಅಲ್ಲವೇ ಅಲ್ಲ. ಅದು ಎಲ್ಲರಿಗೂ ಸೇರಿದ್ದು. ಮೆಟಾವರ್ಸ್ ತನ್ನೊಳಗೆ ಒಳಿತಿನ ಜೊತೆ ಸಹಜವಾಗಿ ಕೆಡುಕನ್ನೂ ಒಳಗೊಂಡಿದೆ. ತಂತ್ರಜ್ಞಾನ ಎಲ್ಲರನ್ನು ಒಳಗೊಂಡು ಸಾಗಲಿ. ನಾವಿರುವ ಪ್ರಪಂಚವೇನೋ ವಿಪರೀತ ಸಮಸ್ಯೆಗಳಿಂದ ಬಳಲುತ್ತಿದೆ. ಈ ಪರ್ಯಾಯ ಪ್ರಪಂಚ ಕೂಡ ಹಾಗೆ ಇರಬೇಕೇ. ಮೆಟಾವರ್ಸ್‌ನ ಕನ್ವೆನ್ಶನ್ ಹಾಲ್‌ನಲ್ಲಿ ಬಡ ಗುಮಾಸ್ತ ಕೂಡ ತನ್ನ ಮಕ್ಕಳ ಮದುವೆ ಮಾಡುವಂತಾಗಬಹುದು ಅಥವಾ ಭವಿಷ್ಯದ ಯುದ್ಧಭೂಮಿ ಇದಾಗಬಹುದು. ಏನೂ ಬೇಕಾದರೂ ಆಗಬಹುದು. ಭವಿಷ್ಯವನ್ನು ಕಂಡವರು ಯಾರು ಅಲ್ಲವೇ? ಅದರಲ್ಲೂ ಇದು ಮೆಟಾವರ್ಸ್‌ನ ಭವಿಷ್ಯ!