ಪಿಂಚಣಿ ಸಪ್ತಾಹದ ಕುರಿತು ಬೀದಿ ನಾಟಕ ಪ್ರದರ್ಶನ
ಉಡುಪಿ, ಮಾ.10: ಕಾರ್ಮಿಕ ಇಲಾಖೆ ವತಿಯಿಂದ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಪಿಂಚಣಿ ಸಪ್ತಾಹ ಕಾರ್ಯಕ್ರಮದ ಕುರಿತು ಸ್ವಸ್ತಿಕ್ ಪ್ರೊಡಕ್ಷನ್ ಮುದ್ರಾಡಿ ಸುರೇಂದ್ರ ಮೋಹನ್ ಹಾಗೂ ತಂಡದಿಂದ ನಗರದ ಶಿರಿಬೀಡು ನರ್ಮ್ ಬಸ್‌ನಿಲ್ದಾಣದ ಬಳಿ ಬೀದಿ ನಾಟಕದ ಮೂಲಕ ಅಸಂಘಟಿತ ಕಾರ್ಮಿಕರಲ್ಲಿ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ಕುಮಾರ್ ಮಾತನಾಡಿ, 75ನೇ ಅಮೃತ ಮಹೋತ್ಸವದ ಅಂಗವಾಗಿ ಪಿಂಚಣಿ ಸಪ್ತಾಹ ಮತ್ತು ನೋಂದಣಿ ಶಿಬಿರವನ್ನು ಜಿಲ್ಲೆಯಲ್ಲಿ ಮಾ.7ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದೆ. 18ರಿಂದ 40 ವರ್ಷದೊಳಗಿನ, ಆದಾಯ ತೆರಿಗೆ, ಇಎಸ್‌ಐ, ಪಿಎಫ್, ಎನ್‌ಪಿಎಸ್ ಯೋಜನೆಯ ವ್ಯಾಪ್ತಿಗೆ ಒಳಪಡದ ಅಸಂಘಟಿತ ಕಾರ್ಮಿಕರು ಇದಕ್ಕೆ ಅರ್ಹ ರಾಗಿರುತ್ತಾರೆ ಎಂದರು.
18 ವರ್ಷದ ಕಾರ್ಮಿಕರು 55 ರೂ. ಹಾಗೂ 40 ವರ್ಷದ ಕಾರ್ಮಿಕರು 200 ರೂ. ವಂತಿಕೆಯನ್ನು ಪ್ರತಿ ತಿಂಗಳು ಪಾವತಿಸಬೇಕಾಗಿದ್ದು, ಇದಕ್ಕೆ ಸಮಾನ ಮೊತ್ತದ ವಂತಿಗೆಯನ್ನು ಕೇಂದ್ರ ಸರಕಾರವು ಪಾವತಿಸುತ್ತದೆ. ಫಲಾನುಭವಿಯು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3000 ರೂ.ಗಳ ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ ಎಂದು ಯೋಜನೆಯ ಮಹತ್ವ ವಿವರಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ವಲಸೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸಂಗಪ್ಪ ಹಾಗೂ ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.