ಉಡುಪಿ: ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಸಪ್ತಾಹ
ಉಡುಪಿ, ಮಾ.10: ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಸವಿತಾ ಸಮಾಜ ಅಂಬಲಪಾಡಿ ಇವರ ಸಹಯೋಗ ದೊಂದಿಗೆ ನಗರದ ಅಂಬಲಪಾಡಿಯ ಸವಿತಾ ಸಮಾಜ ಸಮುದಾಯ ಭವನದಲ್ಲಿ ಪಿಂಚಣಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕ್ಷೌರಿಕ ವೃತ್ತಿದಾರ ಮತ್ತು ಇತರೆ ಅಸಂಘಟಿತ ಕಾರ್ಮಿಕರಿಗೆ ನೋಂದಣಿ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಯ ಕುರಿತು ಸಮಗ್ರ ಮಾಹಿತಿಗಳನ್ನು ನೀಡಿದರು.
ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಮಾತನಾಡಿ, ಕಾರ್ಮಿಕ ಇಲಾಖೆ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು ಹಲವಾರು ಯೋಜನೆಯನ್ನು ಜಾರಿಗೆ ತಂದಿದ್ದು, ಇದರಲ್ಲಿ ಪಿಎಂಎಸ್‌ವೈಎಂ ಯೋಜನೆ ಒಂದಾಗಿದೆ. 18ರಿಂದ 40 ವರ್ಷದೊಳಗಿನ ಸವಿತಾ ಸಮಾಜ ವೃತ್ತಿದಾರರು ಮತ್ತು ಇತರೆ ಅಸಂಘಟಿತ ಕಾರ್ಮಿಕರು ಈ ಯೋಜನೆಯಲ್ಲಿ ನೋಂದಣಿಯಾಗಿ 60 ವರ್ಷದ ನಂತರ ತಿಂಗಳಿಗೆ 3000 ರೂ.ಗಳ ಪಿಂಚಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದರು.
ಜಿಲ್ಲಾ ಸವಿತಾ ಸಮಾಜದ ನಿಂಜೂರು ವಿಶ್ವನಾಥ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಗೋವಿಂದ ಭಂಡಾರಿ, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ಜಿಲ್ಲಾ ವ್ಯವಸ್ಥಾಪಕ ನಿತೀಶ್, ಸವಿತಾ ಸಮಾಜ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿಯ ಜಿಲ್ಲಾ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ, ಉಡುಪಿ ತಾಲೂಕು ಸವಿತಾ ಸಮಾಜ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮುಲ್ಕಿ, ಜಿಲ್ಲಾ ಸವಿತಾ ಸಮಾಜದ ಕಾಪು ಸಂಚಾಲಕ ಸತೀಶ್ ಭಂಡಾರಿ, ಕಾರ್ಕಳ ತಾಲೂಕು ಅಧ್ಯಕ್ಷ ನಾಗೇಶ್ ಭಂಡಾರಿ ಬಜಗೋಳಿ ಮತ್ತಿತರರು ಉಪಸ್ಥಿತರಿದ್ದರು.