ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವಿಭಿನ್ನ ಮಹಿಳಾ ದಿನಾಚರಣೆ
ಮಣಿಪಾಲ, ಮಾ.10: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿಭಿನ್ನ ರೀತಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ಉದ್ಯೋಗಿಗಳು ಮನೆಯಲ್ಲಿಯೇ ತಾವು ತಯಾರಿಸಿದ ವಸ್ತುಗಳು ಹಾಗೂ ಆಹಾರ ಪದಾರ್ಥಗಳನ್ನು ತಂದು ಪ್ರದರ್ಶಿಸಿದ್ದು ಮಾತ್ರವಲ್ಲದೇ ಅವುಗಳನ್ನು ಮಾರಾಟ ಮಾಡಿ ಮಹಿಳೆಯರಲ್ಲಿ ಉದ್ಯಮಶೀಲತಾ ಮನೋಭಾವ ಪ್ರದರ್ಶಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ ಮತ್ತು ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯ 150ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು 37 ಮಳಿಗೆಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಫ್ಯಾಬ್ರಿಕ್ ಕೊಲಾಜ್ ಕಲಾವಿದೆ ಅಪರ್ಣಾ ಮುತ್ತಣ್ಣ, ಡಾ.ಟಿಎಂಎ ಪೈ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥೆ ಡಾ. ಶಶಿಕಿಕಲಾ ಕೆ ಭಟ್, ಕ್ಲಿನಿಕಲ್ ಸೈಕಾಲಜಿ ವಿಭಾಗದ ಪ್ರಾಧ್ಯಾಪಿಕೆ ಡಾ.ಅನಘಾ ಕೆ ಬಲ್ಲಾಳ್ ಮತ್ತು ಉದ್ಯಮಿ ಪ್ರಸನ್ನ ಪದ್ಮರಾಜ್ ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಪರ್ಣಾ ಮುತ್ತಣ್ಣ, ಮಹಿಳೆಯರ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಾಧನೆಗಳನ್ನು ಸ್ಮರಿಸಲು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಮಹಿಳೆಯರು ಇಂದು ಏನನ್ನಾದರೂ ಸಾಧಿಸಬಹುದು ಮತ್ತು ಈ ವರ್ಷದ ದ್ಯೇಯ ವಾಕ್ಯ ಹೇಳುವಂತೆ ನಾವು ಲಿಂಗ ಪಕ್ಷಪಾತವನ್ನು ಮುರಿಯಬೇಕು ಎಂದರು.
ಡಾ.ಶಶಿಕಲಾ ಭಟ್ ಮಾತನಾಡಿ, ಈಚಿನ ದಿನಗಳಲ್ಲಿ ಜನರ ಮನಸ್ಥಿತಿಯಲ್ಲಿ ದೊಡ್ಡ ಬದಲಾವಣೆಯನ್ನು ಕಾಣುತಿದ್ದೇವೆ. ಇಂದು ಹೆಣ್ಣು ಮಗು ಜನಿಸಿದರೆ ಕುಟುಂಬದ ಎಲ್ಲರೂ ಖುಷಿ ಪಡುತ್ತಾರೆ. ಆದರೆ 25 ವರ್ಷಗಳ ಹಿಂದೆ ತಂದೆ-ತಾಯಿ, ಕುಟುಂಬದವರು ಬೇರೆ ರೀತಿಯಲ್ಲಿ ಯೋಚಿಸುತ್ತಿದ್ದರು. ಆದ್ದರಿಂದ ರಾಷ್ಟ್ರೀಯ ಲಿಂಗ ಅನುಪಾತಕ್ಕಿಂತ ಉಡುಪಿ ಜಿಲ್ಲೆ ಅತಿ ಹೆಚ್ಚು ಮಹಿಳಾ ಅನುಪಾತವನ್ನು ಹೊಂದಿದೆ ಎಂದರು.
ಮಳಿಗೆಯಲ್ಲಿ ಮನೆಯಲ್ಲಿ ತಾವೇ ತಯಾರಿಸಿದ ಪೇಂಟಿಂಗ್‌ಗಳು, ಫ್ಯಾಷನ್ ಆಭರಣಗಳು ಮತ್ತು ವೈವಿಧ್ಯಮಯ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟವು ಇತ್ತು. ಮಹಿಳೆಯರಿಗಾಗಿ ಮೆಹಂದಿ ಸ್ಪರ್ಧೆಯೂ ನಡೆಯಿತು. ರಕ್ತದಾನ ಶಿಬಿರವನ್ನು ಸಹ ಆಯೋಜಿಸಲಾಗಿದ್ದು, ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿ ಗಾಗಿ ಅನೇಕ ಮಹಿಳಾ ಉದ್ಯೋಗಿಗಳು ಮುಂದೆ ಬಂದು ರಕ್ತದಾನ ಮಾಡಿದರು.