ಸ್ಕಾಲರ್‌ಶಿಪ್‌ಗಳಿಗೆ ಖೋ, ಅವಕಾಶಗಳ ನಿರಾಕರಣೆ
''ಇತಿಹಾಸ ಯಾವ ಹಂತಕ್ಕೆ ಬಂದಿದೆಯೆಂದರೆ, ಪರಿಪೂರ್ಣ ವ್ಯಕ್ತಿಯಾಗಿರುವ ಓರ್ವ ನೈತಿಕ ಮನುಷ್ಯನು ತನ್ನ ಅರಿವಿಗೆ ಬಾರದೆಯೇ, ಸೀಮಿತ ಉದ್ದೇಶದ ವ್ಯಕ್ತಿಯಾಗಿರುವ ಓರ್ವ ವ್ಯಾಪಾರಿ ಮನೋಭಾವದ ಮನುಷ್ಯನಿಗಾಗಿ ಹೆಚ್ಚೆಚ್ಚು ಅವಕಾಶಗಳನ್ನು ಕೊಡುತ್ತಾ ಬರುತ್ತಾನೆ. ವಿಜ್ಞಾನದ ಅಮೋಘ ಪ್ರಗತಿಯ ಬೆಂಬಲದಿಂದ ಈ ಪ್ರಕ್ರಿಯೆಯು ದೈತ್ಯ ಪರಿಮಾಣ ಮತ್ತು ಶಕ್ತಿಯನ್ನು ಪಡೆದುಕೊಳ್ಳುತ್ತಿದೆ ಹಾಗೂ ಮನುಷ್ಯನ ನೈತಿಕ ಸಮತೋಲನವನ್ನು ಹದಗೆಡಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಮಾನವನ ಮಾನವೀಯ ಮುಖವು ಆತ್ಮರಹಿತ ಸಂಘಟನೆಯ ನೆರಳಿನಡಿಯಲ್ಲಿ ಮರೆಯಾಗುತ್ತದೆ.''
- ರವೀಂದ್ರನಾಥ ಟಾಗೋರ್, ನ್ಯಾಶನಲಿಸಮ್, 1917
(ಈ ಮಾತುಗಳನ್ನು ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್‌ನ ಮಾರ್ತಾ ನಸ್ಬಾಮ್ ಬರೆದ ''Not for Profit - Why Democracy Needs Humanities'' ಎಂಬ 2010ರ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.)
ಒಂದು ಸಂಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದನ್ನು ತಿಳಿಯಲು ಮತ್ತು ಅದನ್ನು ಹೇಗೆ ಸರಿಪಡಿಸಬಹುದು ಎಂದು ನಿರ್ಧರಿಸಲು ಹೆಚ್ಚಿನ ಸಂದರ್ಭಗಳಲ್ಲಿ ಒಂದೇ ಉದಾಹರಣೆ ಸಾಕು. ವಿದೇಶಿ ಸ್ಕಾಲರ್‌ಶಿಪ್ ಪಡೆಯಲು ಅರುಣ ನಡೆಸಿದ ಸುದೀರ್ಘ ಹೋರಾಟವು ಇಂತಹ ಒಂದು ಉದಾಹರಣೆಯಾಗಿದೆ.
ಒಡಿಶಾದ ಭೂರಹಿತ ಕೃಷಿ ಕಾರ್ಮಿಕರ ಮಗನಾಗಿರುವ ಅರುಣ ಬುದ್ಧಿವಂತ ವಿದ್ಯಾರ್ಥಿ. ಅವರು ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮುದಾಯಕ್ಕೆ ಸೇರಿದವರು. ವಿದೇಶಿ ಸ್ಕಾಲರ್‌ಶಿಪ್ ಪಡೆಯುವುದಕ್ಕಾಗಿ ನ್ಯಾಶನಲ್ ಓವರ್‌ಸೀಸ್ ಸ್ಕಾಲರ್‌ಶಿಪ್ ಎಂಬ ಸಂಸ್ಥೆಯ ಮೂಲಕ ಅವರು ಅರ್ಜಿ ಸಲ್ಲಿಸಿದ್ದರು. ಈ ಸಂಸ್ಥೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಡೀನೋಟಿಫೈಡ್ ಪಂಗಡಗಳ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತದೆ. ಎಸೆಕ್ಸ್ ವಿಶ್ವವಿದ್ಯಾನಿಲಯದಲ್ಲಿ ಅವರಿಗೆ ಪ್ರವೇಶ ಸಿಕ್ಕಿದ್ದರೂ, ಅಧಿಕಾರಶಾಹಿಯೊಂದಿಗೆ ಹೋರಾಡುತ್ತಾ ಎರಡು ವರ್ಷಗಳನ್ನು ಅವರು ಕಳೆದರು.
(https://www.justicenews.co.in/govt-playing-spoilsport-city-ngo-revives-dalit-students-foreign-edu-dream/)
ನಾಗಪುರದ ಅಂಬೇಡ್ಕರ್‌ವಾದಿ ಚಿಂತಕರ ಒಂದು ಗುಂಪು ಈ ವಿಷಯದಲ್ಲಿ ಸಕಾಲದಲ್ಲಿ ಮಧ್ಯಪ್ರವೇಶಿಸಿತು. ಆ ಗುಂಪು ಅರುಣರ ಪರವಾಗಿ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ನ್ಯಾಯಾಲಯವು ಅಂತಿಮವಾಗಿ ವಿದ್ಯಾರ್ಥಿಯ ಪರವಾಗಿ ತೀರ್ಪು ನೀಡಿತು.
ಅರುಣರ ಹೋರಾಟವು ಅಪರೂಪದ ಒಂದು ಪ್ರಕರಣವಾಗಿದೆ ಎಂದು ಹೇಳುವುದು ಚರ್ವಿತ ಚರ್ವಣವಾಗುತ್ತದೆ.
ವಿಶಾಲ್ ಕಾರಟ್‌ರ ಕತೆಯೂ ಗುಣಾತ್ಮಕವಾಗಿ ಇದಕ್ಕಿಂತ ಭಿನ್ನವೇನಲ್ಲ. ಅವರು ಕಳೆದ ಎರಡು ವರ್ಷಗಳಿಂದ ಸ್ಕಾಲರ್‌ಶಿಪ್ ಪಡೆಯುವುದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಸ್ಕಾಲರ್‌ಶಿಪ್ ವೆಬ್‌ಸೈಟೇ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಇತ್ತೀಚೆಗೆ ಅವರ ಗಮನಕ್ಕೆ ಬಂದಿದೆ.
ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ಮತ್ತು ಶ್ರೇಷ್ಠ ವಿದ್ವಾಂಸ ಹಾಗೂ ಸ್ವಾತಂತ್ರ ಹೋರಾಟಗಾರ ವೌಲಾನಾ ಅಬುಲ್ ಕಲಾಮ್ ಆಝಾದ್ ಶಿಕ್ಷಣ ಸಚಿವರಾಗಿದ್ದಾಗ ಸ್ವತಂತ್ರ ಭಾರತದ ಆರಂಭಿಕ ವರ್ಷಗಳಲ್ಲಿ ಜಾರಿಗೆ ತರಲಾಗಿತ್ತು. ಈ ಯೋಜನೆಯನ್ನು ನಿಧಾನವಾಗಿ ಮರೆಗೆ ಸರಿಸಲು ಹೇಗೆ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎನ್ನುವುದನ್ನು ಈ ಉದಾಹರಣೆಗಳು ಹೇಳುತ್ತಿವೆ.
ಭಾರತದ ಇತಿಹಾಸ, ಸಂಸ್ಕೃತಿಯನ್ನು ವಿದೇಶಗಳಲ್ಲಿ ಕಲಿಯಲು ಉತ್ಸುಕರಾಗಿರುವ ತುಳಿತಕ್ಕೊಳಗಾದ ಸಮುದಾಯಗಳ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ನೀಡದಿರಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇತ್ತೀಚೆಗೆ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಈ ಯೋಜನೆಯನ್ನು ಮರೆಗೆ ಸರಿಸಲು ನಡೆಸಲಾಗುತ್ತಿರುವ ಪ್ರಯತ್ನಗಳಿಗೆ ಇದು ಇನ್ನೊಂದು ಉದಾಹರಣೆಗಾಗಿದೆ.
2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಈ ಯೋಜನೆಯನ್ನು ಮಾನವಶಾಸ್ತ್ರ (ಹ್ಯುಮೇನಿಟೀಸ್)ಕ್ಕೂ ವಿಸ್ತರಿಸಲಾಗಿತ್ತು. ಪ್ರತಿ ವರ್ಷ ಶೋಷಿತ ಮತ್ತು ತುಳಿತಕ್ಕೊಳಗಾದ ಸಮುದಾಯಗಳ 100 ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗಳನ್ನು ಪಡೆಯುತ್ತಿದ್ದರು. ಆದರೆ ಕೇಂದ್ರದಲ್ಲಿ ಸರಕಾರ ಬದಲಾವಣೆಯಾದ ಬಳಿಕ ಪರಿಸ್ಥಿತಿ ಗಣನೀಯವಾಗಿ ಬದಲಾಯಿತು.
(https://www.deshabhimani.com/english/news/national/centre-scraps-scholarships-dashing-hopes-of-dalits-tribals-to-study-abroad/5928)
ತನ್ನ ಹಿಂದಿನ ಹಲವಾರು ನಿರ್ಧಾರಗಳಂತೆ, ವಿದೇಶಗಳಲ್ಲಿ ಮಾನವಶಾಸ್ತ್ರವನ್ನು ಅಧ್ಯಯನ ಮಾಡಲು ನೀಡುವ ಸ್ಕಾಲರ್‌ಶಿಪ್‌ಗೂ ಕಲ್ಲು ಹಾಕುವ ನಿರ್ಧಾರವನ್ನೂ ಸಂಬಂಧಪಟ್ಟವರೊಂದಿಗೆ ಸಮಾಲೋಚಿಸದೆಯೇ ಸರಕಾರ ತೆಗೆದುಕೊಂಡಿತು. ಅದೂ ಅಲ್ಲದೆ, ಈ ವಿಶಿಷ್ಟ ಸಬಲೀಕರಣ ಯೋಜನೆಯನ್ನು ಹೇಗೆ ಮುನ್ನಡೆಸಿಕೊಂಡು ಹೋಗಲು ಸರಕಾರ ಬಯಸಿದೆ ಎನ್ನುವ ಸುಳಿವನ್ನೂ ಸರಕಾರ ನೀಡಿಲ್ಲ. ಈ ಯೋಜನೆಯಡಿ ಸೌಲಭ್ಯ ಪಡೆಯುವುದಕ್ಕಾಗಿ ಅರ್ಜಿ ಹಾಕಲು ಕೊನೆಯ ದಿನಾಂಕ ಮಾರ್ಚ್ 31. ಹಾಗಾಗಿ, ವಿದೇಶಗಳಲ್ಲಿ ಅಧ್ಯಯನ ಮಾಡಲು ಉತ್ಸುಕರಾಗಿರುವ ಯುವ ವಿದ್ವಾಂಸರಿಗೆ ತಮ್ಮ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗವನ್ನು ಅರಸಲು ಯಾವುದೇ ಸಮಯ ಉಳಿದಿಲ್ಲ.
ಈ ಸ್ಕಾಲರ್‌ಶಿಪ್‌ಗಳನ್ನು ರದ್ದುಪಡಿಸಲು ಅಧಿಕಾರಸ್ಥರು ನೀಡಿರುವ ಕಾರಣಗಳು ತೃಪ್ತಿದಾಯಕವಾಗಿಲ್ಲ.
ಭಾರತೀಯ ಮಾಹಿತಿ ಸಂಗ್ರಹಾಗಾರಗಳ ಗರಿಷ್ಠ ಬಳಕೆ, ಭಾರತೀಯ ಸಂಸ್ಥೆಗಳಲ್ಲಿ ಲಭ್ಯವಿರುವ ದಾಖಲೆಗಳು ಮತ್ತು ಪುಸ್ತಕಗಳ ಗರಿಷ್ಠ ಬಳಕೆ, ಭಾರತೀಯ ಸಂಸ್ಕೃತಿ, ನಾಗರಿಕತೆ ಮುಂತಾದ ವಿಷಯಗಳ ಪರಿಣಿತರ ಗರಿಷ್ಠ ಬಳಕೆ ಹಾಗೂ ಈ ಮೂಲಕ ಉಳಿಸಲಾದ ಸಂಪನ್ಮೂಲಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಮುಂತಾದ ಇತರ ವಿಷಯಗಳ ಅಧ್ಯಯನಕ್ಕೆ ಬಳಸುವುದು- ಎಂಬ ಕಾರಣಗಳನ್ನು ಸರಕಾರ ನೀಡುತ್ತದೆ.
ಸರಕಾರದ ಈ ಹೇಳಿಕೆಗಳನ್ನು ನಂಬುವುದು ತುಂಬಾ ಕಷ್ಟ. ಆದರೆ, ಸುಮ್ಮನೆ ಚರ್ಚೆಗಾಗಿ ಸರಕಾರದ ಕಾರಣಗಳು ಸರಿ ಎಂದು ಒಂದು ಕ್ಷಣಕ್ಕೆ ಒಪ್ಪಿಕೊಂಡರೂ, ಈಗ ಅಸ್ತಿತ್ವದಲ್ಲಿರುವ ಈ ಶಿಕ್ಷಣ ಸಂಸ್ಥೆಗಳು ಮತ್ತು ಬೋಧಕ ವರ್ಗವು ನಮ್ಮ ಸಮಾಜದ ತುಳಿತಕ್ಕೊಳಗಾದ, ಶೋಷಣೆಗೊಳಗಾದ ಸಮುದಾಯಗಳ ಉದಯೋನ್ಮುಖ ಪ್ರತಿಭೆಗಳ ಸಮಸ್ಯೆಗಳು ಅಥವಾ ಕಳವಳಗಳೊಂದಿಗೆ ವ್ಯವಹರಿಸುವ ಸೂಕ್ಷ್ಮತೆಯನ್ನು ಹೊಂದಿವೆ ಎಂಬುದನ್ನು ಖಚಿತವಾಗಿ ಹೇಳಬಹುದೇ? ವಾಸ್ತವ ಸಂಗತಿಯೆಂದರೆ, ಉನ್ನತ ಶಿಕ್ಷಣದ ಸಂಸ್ಥೆಗಳು ಕೂಡ ಜಾತಿ, ಲಿಂಗ, ಸಮುದಾಯ ಆಧಾರಿತ ತಾರತಮ್ಯಕ್ಕೆ ಹೊರತಾಗಿಲ್ಲ. ದಶಕಗಳಿಂದ ಸಾಂವಿಧಾನಿಕ ಮೀಸಲಾತಿಗಳು ಅಸ್ತಿತ್ವದಲ್ಲಿದ್ದರೂ, ಈ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳ ಬೋಧಕ ವರ್ಗವು ತಥಾಕಥಿತ ಮೇಲ್ಜಾತಿಗಳಿಂದ ತುಂಬಿಹೋಗಿದೆ ಹಾಗೂ ಅದರ ಮನೋಭಾವ ತಾರತಮ್ಯಮುಕ್ತವಾಗಿಲ್ಲ.
ಇಂತಹ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಅನುಭವಿಸಿದ ತಾರತಮ್ಯದ ಕತೆಗಳು ಹಲವಾರಿವೆ. ಕೆಲವು ಪ್ರಕರಣಗಳಲ್ಲಿ, ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಅವುಗಳನ್ನು ಇಂತಹ ಪ್ರತಿಭೆಗಳ 'ಸಾಂಸ್ಥಿಕ ಕೊಲೆ' ಎಂಬುದಾಗಿ ಸರಿಯಾಗಿಯೇ ಬಣ್ಣಿಸಲಾಗಿದೆ.
ರೋಹಿತ್ ವೇಮುಲಾ (ಎಚ್‌ಸಿಯು, ಹೈದರಾಬಾದ್), ಪಾಯಲ್ ತಡವಿ (ಮೆಡಿಕಲ್ ಕಾಲೇಜು, ಮುಂಬೈ) ಮತ್ತು ಫಾತಿಮಾ ಲತೀಫ್ (ಐಐಟಿ, ಮದರಾಸು) ಆತ್ಮಹತ್ಯೆಗಳು ಇದನ್ನು ಸಾಬೀತುಪಡಿಸುತ್ತವೆ.
(https://countercurrents.org/2019/11/why-have-indias-elite-institutions-become-murderers-of-dalit-adivasi-muslim-scholars/)
ಭಾರತದಲ್ಲಿನ ಶೈಕ್ಷಣಿಕ ಸ್ವಾತಂತ್ರದ ಬಗ್ಗೆಯೂ ಇಲ್ಲಿ ಚರ್ಚೆಯಾಗಬೇಕು.
ಜಗತ್ತಿನಾದ್ಯಂತ ಬಲಪಂಥೀಯ ರಾಜಕೀಯವು ಮುನ್ನೆಲೆಗೆ ಬರುತ್ತಿದ್ದು, ಶೈಕ್ಷಣಿಕ ಸ್ವಾತಂತ್ರದ ಕಲ್ಪನೆಯೇ ಭಾರತ ಸೇರಿದಂತೆ ಜಗತ್ತಿನಾದ್ಯಂತ ಆಕ್ರಮಣಕ್ಕೆ ಗುರಿಯಾಗುತ್ತಿದೆ.
(https://thewire.in/rights/academic-freedom-is-under-attack-globally-including-in-india-report)
ಭಾರತ ಈಗ ಧಾರ್ಮಿಕ ಬಹುಸಂಖ್ಯಾತ ಆಧಾರಿತ ಆಳ್ವಿಕೆಯತ್ತ ಹೊರಳಿದ್ದು, ದೇಶದ ಧಾರ್ಮಿಕ ಅಲ್ಪಸಂಖ್ಯಾತರನ್ನು ಮೂಲೆಗುಂಪಾಗಿಸಲಾಗುತ್ತಿದೆ. ಶೈಕ್ಷಣಿಕ ವಲಯದಲ್ಲಿನ ವಾತಾವರಣವು ಹಿಂದಿನಂತಿಲ್ಲ, ತುಂಬಾ ಬದಲಾಗಿದೆ. ಮೊದಲು ಯಾವುದೇ ವಿಷಯಗಳ ಬಗ್ಗೆ ಶೈಕ್ಷಣಿಕ ವಲಯದಲ್ಲಿ ವಿಮರ್ಶಾತ್ಮಕ ಹಾಗೂ ಮುಕ್ತ ಮನಸ್ಸಿನ ಚರ್ಚೆಗಳಾಗುತ್ತಿದ್ದವು. ಆದರೆ, ಈಗ ಅಧಿಕಾರದಲ್ಲಿರುವವರಿಗೆ ಪೂರಕವಲ್ಲದ ವಿಷಯಗಳ ಬಗ್ಗೆ ಇಂಥ ಮುಕ್ತ ಮನಸ್ಸಿನ ಚರ್ಚೆ ನಡೆಸುವುದು ಅಸಾಧ್ಯವಲ್ಲದಿದ್ದರೂ, ದಿನೇ ದಿನೇ ಕಷ್ಟವಾಗುತ್ತಿದೆ.
ವಿದೇಶಗಳಲ್ಲಿ ಮಾನವಶಾಸ್ತ್ರವನ್ನು ಅಧ್ಯಯನ ಮಾಡಲು ಸಾಮಾಜಿಕವಾಗಿ ತುಳಿತಕ್ಕೊಳಗಾದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಸ್ಕಾಲರ್‌ಶಿಪ್‌ಗೆ ಕತ್ತರಿ ಹಾಕುವ ನಿರ್ಧಾರವು ಅಧಿಕಾರದಲ್ಲಿರುವವರು ಬಹಿರಂಗವಾಗಿ ವ್ಯಕ್ತಪಡಿಸುತ್ತಿರುವ ವಿಚಾರಗಳಿಗೆ ಪೂರಕವಾಗಿಯೇ ಇದೆ. 2020ರ ನೂತನ ಶಿಕ್ಷಣ ನೀತಿಯು ಭಾರತದ ‘ವಿಶ್ವಗುರು’ ಪಾತ್ರವನ್ನು ಮರಳಿ ತರುವ ಕಲ್ಪನೆಯನ್ನು ಮುಂದಿಟ್ಟಿದೆ. ಕುತೂಹಲದ ಸಂಗತಿಯೆಂದರೆ, ಜಾತಿ ಮತ್ತು ಇತರ ಭೇದಭಾವಗಳ ಬಗ್ಗೆ ಅದು ವೌನವಾಗಿದೆ ಹಾಗೂ ಮೀಸಲಾತಿಗಳ ಬಗ್ಗೆಯೂ ಅದು ಮಾತನಾಡುವುದಿಲ್ಲ.
'ವೈಜ್ಞಾನಿಕ ಮನೋಭಾವ'ದಂಥ ನಿರುಪದ್ರವಿ ವಿಷಯಗಳ ಬಗ್ಗೆ ಏರ್ಪಡಿಸಲಾದ ಅಂತರ್‌ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ರದ್ದುಗೊಳಿಸಿದ, 'ಕಾಶ್ಮೀರ'ದ ಬಗ್ಗೆ ತರಗತಿಯಲ್ಲಿ ಚರ್ಚೆ ಏರ್ಪಡಿಸಿರುವುದಕ್ಕಾಗಿ ಅಥವಾ ತರಗತಿಯಲ್ಲಿ ರಾಷ್ಟ್ರೀಯತೆ ಬಗ್ಗೆ ಮುಕ್ತ ಚರ್ಚೆಯನ್ನು ಸಂಘಟಿಸಿರುವುದಕ್ಕಾಗಿ ಶಿಕ್ಷಕರನ್ನು ನ್ಯಾಯಾಯಲಕ್ಕೆ ಎಳೆದ ಅಥವಾ ಸರಕಾರದ ಹಸ್ತಕ್ಷೇಪವನ್ನು ವಿರೋಧಿಸಿ ರುವುದಕ್ಕಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಿದ ಉದಾಹರಣೆಗಳು ನಮ್ಮೆದುರು ಇವೆ.
ಅದೂ ಅಲ್ಲದೆ, ಬಲ ಪಂಥೀಯ ಶಕ್ತಿಗಳು ಬೃಹತ್ ಬಹುಮತದೊಂದಿಗೆ ಸರಕಾರ ನಡೆಸುತ್ತಿರುವುದರಿಂದ, ಮಾನವಶಾಸ್ತ್ರ ಅಧ್ಯಯನದ ವಿಷಯಗಳಲ್ಲಿಯೂ ಆಮೂಲಾಗ್ರ ಬದಲಾವಣೆಗಳಾಗಿವೆ. ವಾಸ್ತವಾಂಶಗಳನ್ನು ಬದಿಗೆ ಸರಿಸಿ ಪುರಾಣಗಳನ್ನು ಹೇರಲಾಗುತ್ತಿದೆ. ಉದಾಹರಣೆಗೆ; ಯುಜಿಸಿ ಮುಂದಿಟ್ಟಿರುವ ಇತಿಹಾಸದ ಕರಡು ಪಠ್ಯಕ್ರಮವು ಜಾತಿ ವ್ಯವಸ್ಥೆಯ ಉಗಮದ ಬಗ್ಗೆ ಸಿದ್ಧಾಂತವೊಂದನ್ನು ಪ್ರತಿಪಾದಿಸುತ್ತದೆ ಹಾಗೂ ಭಾರತದಲ್ಲಿನ 'ಮುಸ್ಲಿಮ್ ಆಳ್ವಿಕೆ'ಗೂ ಜಾತಿ ವ್ಯವಸ್ಥೆಗೂ ಅದು ನಂಟು ಕಲ್ಪಿಸುತ್ತದೆ ಎಂಬುದಾಗಿ ಆರೋಪಿಸಲಾಗಿದೆ.
(https://thewire.in/education/ugcs-new-draft-history-syllabus-plays-up-mythology-faces-allegations-of-saffronisation)
ಈ ತುಳಿತಕ್ಕೊಳಗಾದ ಸಮುದಾಯಗಳಿಗೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳು ಜಾತಿ, ಸಮುದಾಯ ಅಥವಾ ವರ್ಗ ಆಧಾರಿತ ವಂಚನೆ, ತಾರತಮ್ಯವನ್ನು ತಮ್ಮ ಚಿಕ್ಕಂದಿನಲ್ಲಿ ಈಗಾಗಲೇ ಅನುಭವಿಸಿದ್ದಾರೆ. ವಿದೇಶಗಳಲ್ಲಿ ಅಧ್ಯಯನ ಮಾಡಲು ಸ್ಕಾಲರ್‌ಶಿಪ್ ಪಡೆಯಲು ಉತ್ಸುಕವಾಗಿರುವ ಈ ವಿದ್ಯಾರ್ಥಿಗಳು ಇಂತಹ ಕಚಡವನ್ನು ಬೌದ್ಧಿಕ ಅಧ್ಯಯನವಾಗಿ ಸ್ವೀಕರಿಸಲು ತಯಾರಿದ್ದಾರೆಯೇ? ಖಂಡಿತ ಇಲ್ಲ.
ವಿದೇಶಗಳಲ್ಲಿ ಮಾನವಶಾಸ್ತ್ರವನ್ನು ಅಧ್ಯಯನ ಮಾಡಲು ಸಾಮಾಜಿಕವಾಗಿ ತುಳಿತಕ್ಕೊಳಗಾದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಸ್ಕಾಲರ್‌ಶಿಪ್‌ಗೆ ಕತ್ತರಿ ಹಾಕುವ ನಿರ್ಧಾರವು ಅಧಿಕಾರದಲ್ಲಿರುವವರು ಬಹಿರಂಗವಾಗಿ ವ್ಯಕ್ತಪಡಿಸುತ್ತಿರುವ ವಿಚಾರಗಳಿಗೆ ಪೂರಕವಾಗಿಯೇ ಇದೆ. 2020ರ ನೂತನ ಶಿಕ್ಷಣ ನೀತಿಯು ಭಾರತದ 'ವಿಶ್ವಗುರು' ಪಾತ್ರವನ್ನು ಮರಳಿ ತರುವ ಕಲ್ಪನೆಯನ್ನು ಮುಂದಿಟ್ಟಿದೆ. ಕುತೂಹಲದ ಸಂಗತಿಯೆಂದರೆ, ಜಾತಿ ಮತ್ತು ಇತರ ಭೇದಭಾವಗಳ ಬಗ್ಗೆ ಅದು ವೌನವಾಗಿದೆ ಹಾಗೂ ಮೀಸಲಾತಿಗಳ ಬಗ್ಗೆಯೂ ಅದು ಮಾತನಾಡುವುದಿಲ್ಲ. ಅದು ಎಸ್‌ಸಿ/ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು 'ಎಸ್‌ಇಡಿಜಿಗಳು' (ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಗುಂಪುಗಳು) ಎಂಬುದಾಗಿ ಒಟ್ಟಿಗೆ ಸೇರಿಸಿದೆ.
ಸಚಿವಾಲಯದ ಈ ಕ್ರಮಕ್ಕೆ ಅಂತರ್‌ರಾಷ್ಟ್ರೀಯ ಶೈಕ್ಷಣಿಕ ಸಮುದಾಯದ ಸದಸ್ಯರು ಮತ್ತು ಜಗತ್ತಿನಾದ್ಯಂತ ಹರಡಿ ಹೋಗಿರುವ ಭಾರತೀಯ ವಿದ್ವಾಂಸರು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನುವುದನ್ನು ಇಲ್ಲಿ ಗಮನಿಸಬೇಕಾಗಿದೆ. ನೂತನ ಶಿಕ್ಷಣ ನೀತಿಯಲ್ಲಿನ ಈ ತಕ್ಷಣದ ಬದಲಾವಣೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
(https://www.academicfreedomindia.com/open-letter-against-2022-2023-nos-restrictions)
ಭಾರತದ ಬಗ್ಗೆ ಅಧ್ಯಯನ ಮಾಡಲು ವಿದೇಶಕ್ಕೆ ಹೋಗಬೇಕಾಗಿಲ್ಲ ಎಂಬ ವಾದವು ಬೌದ್ಧಿಕವಾಗಿ ಎಷ್ಟು ದೋಷಪೂರಿತವಾಗಿದೆ ಎನ್ನುವುದನ್ನು ನೂತನ ಶಿಕ್ಷಣ ನೀತಿಯು ಸಾಬೀತುಪಡಿಸುತ್ತದೆ. ಭಾರತೀಯ ವಿದ್ವಾಂಸರನ್ನು ಜಗತ್ತಿನ ಉಳಿದ ಭಾಗದಿಂದ ಬೇರ್ಪಡಿಸುವ ಕೆಲಸವನ್ನಷ್ಟೇ ಇದು ಮಾಡುತ್ತದೆ. ಇಂದು ವಿವಿಧ ಕ್ಷೇತ್ರಗಳಲ್ಲಿನ ಸಂಶೋಧನೆಯನ್ನು ಹೇಗೆ ಮಾಡಲಾಗುತ್ತದೆ ಎನ್ನುವ ತಿಳುವಳಿಕೆಯ ಕೊರತೆಯಿದೆ ಎನ್ನುವುದನ್ನು ಶಿಕ್ಷಣ ನೀತಿಯ ತಿದ್ದುಪಡಿಗಳು ಎತ್ತಿ ತೋರಿಸುತ್ತವೆ. ನೈಸರ್ಗಿಕ ವಿಜ್ಞಾನ, ಕಾನೂನು, ಇತಿಹಾಸ, ಸಮಾಜ ಅಧ್ಯಯನ ಮತ್ತು ಮಾನವಶಾಸ್ತ್ರ ಕ್ಷೇತ್ರಗಳು ರಾಷ್ಟ್ರೀಯ ಗಡಿಗಳನ್ನು ಮೀರಿ ಜೊತೆಯಾಗಿ ಕೆಲಸ ಮಾಡುತ್ತವೆ ಎನ್ನುವ ತಿಳುವಳಿಕೆಯ ಕೊರತೆಯನ್ನೂ ಇದು ಬಿಂಬಿಸುತ್ತದೆ.
ನೂತನ ಶಿಕ್ಷಣ ನೀತಿಯು ಆಡಳಿತಾರೂಢ ವ್ಯವಸ್ಥೆಯು ತೋರಿಕೆಗೆ ಎಷ್ಟು ಬಲಿಷ್ಠವಾಗಿದೆ, ಆದರೆ ಭಾರತೀಯ ಸಮಾಜದ ಆಳದಲ್ಲಿರುವ ಗಂಭೀರ ದೋಷಗಳ ಬಗ್ಗೆ ಎಷ್ಟು ಅಭದ್ರತೆ ಮತ್ತು ಚಿತ್ತಭ್ರಾಂತಿಯನ್ನು ಹೊಂದಿದೆ ಎನ್ನುವುದನ್ನೂ ಬಿಂಬಿಸುತ್ತದೆ.
ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆಯಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಪಾಶ್ಚಿಮಾತ್ಯ ವಿದ್ವಾಂಸರಲ್ಲಿ ಕುತೂಹಲ ಹೆಚ್ಚುತ್ತಿರುವುದು ಭಾರತೀಯ ಅಧಿಕಾರಸ್ತರಿಗೆ ಚಿಂತೆಯ ವಿಷಯವಾಗಿದೆ. ಜಾತಿಗಳು ಮತ್ತು ಅದರೊಂದಿಗೆ ಹಾಸುಹೊಕ್ಕಾಗಿರುವ ತಾರತಮ್ಯಗಳ ಬಗ್ಗೆಯೂ ಪಾಶ್ಚಾತ್ಯ ವಿದ್ವಾಂಸರು ಹೆಚ್ಚು ಹೆಚ್ಚು ಆಸಕ್ತರಾಗುತ್ತಿದ್ದಾರೆ. ಅದೂ ಅಲ್ಲದೆ, ವಿದೇಶಗಳಲ್ಲಿರುವ ದಲಿತ ಹೋರಾಟಗಾರರು ಮತ್ತು ವಿದ್ವಾಂಸರು ಅಲ್ಲಿ ವಿವಿಧ ಮಟ್ಟಗಳಲ್ಲಿ ಈ ವಿಷಯಗಳನ್ನು ಕೈಗೆತ್ತಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದಾಗಿ, ಈ ತಾರತಮ್ಯಕಾರಿ ಶ್ರೇಣೀಕೃತ ವ್ಯವಸ್ಥೆಯ ಪ್ರತಿಪಾದಕರು ಜಗತ್ತಿನ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ, ಕ್ಯಾಲಿಫೋರ್ನಿಯ ಸ್ಟೇಟ್ ವಿಶ್ವವಿದ್ಯಾನಿಲಯವು ತನ್ನ ತಾರತಮ್ಯ ನಿಷೇಧ ನೀತಿಗೆ ಜಾತಿಯನ್ನೂ ಸೇರಿಸಿದೆ. ಆ ಮೂಲಕ, ತನ್ನ 23 ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸಿದೆ.
ದಲಿತ, ಆದಿವಾಸಿ ಮತ್ತು ಸಮಾಜದ ಇತರ ವಂಚಿತ ಸಮುದಾಯಗಳ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ವಿದೇಶಗಳಿಗೆ ಹೋದರೆ, ಇಂತಹ ಇನ್ನೂ ಹಲವು ಮುಜುಗರಕಾರಿ ಪರಿಸ್ಥಿತಿಗಳನ್ನು ಎದುರಿಸಲು ತಾನು ಸಿದ್ಧವಾಗಿರಬೇಕಾಗುತ್ತದೆ ಎನ್ನುವುದು ಸರಕಾರಕ್ಕೆ ಚೆನ್ನಾಗಿ ತಿಳಿದಿದೆ. ಜಾತಿಯನ್ನು ಖಾಯಂ ಆಗಿ ಕಾಣದಂತೆ ಮಾಡಲು ಸರಕಾರವು ಉತ್ಸುಕವಾಗಿದೆ. ಆ ನಿಟ್ಟಿನಲ್ಲಿ ಅದು ಈ ಎಲ್ಲ ಶೋಷಿತ ವರ್ಗಗಳನ್ನು- ಪರಿಶಿಷ್ಟ ಜಾತಿ (ಎಸ್‌ಸಿ)/ಪರಿಶಿಷ್ಟ ಪಂಗಡ (ಎಸ್‌ಟಿ), ಇತರ ಹಿಂದುಳಿದ ಜಾತಿಗಳು (ಒಬಿಸಿ) ಮತ್ತು ಅಲ್ಪಸಂಖ್ಯಾತ ಸಮುದಾಯಗಳು- ಎಸ್‌ಇಡಿಜಿಗಳು (Socially and Economically Disadvantaged Groups) ಎಂಬ ಒಂದೇ ಗುಂಪಿನಲ್ಲಿ ಒಗ್ಗೂಡಿಸಿದೆ. ಆದರೆ, ವಾಸ್ತವ ಮಾತ್ರ ಬೇರೆಯೇ ಇರುತ್ತದೆ ಹಾಗೂ ಅದು ಅದನ್ನು (ಸರಕಾರ) ನಿರಂತರವಾಗಿ ಕಾಡುತ್ತಿರುತ್ತದೆ.
ಕೃಪೆ: countercurrents.org