ಮಾಹೆಯಲ್ಲಿ ಕಲೆ ಕುರಿತ ಸರ್ಟಿಫಿಕೇಟ್ ಕೋರ್ಸ್: ಡಾ.ಸಭಾಹಿತ್
ಕೋಳ್ಯೂರುಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ
ಉಡುಪಿ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕಲೆ ಹಾಗೂ ಸಂಸ್ಕೃತಿ ಕುರಿತ ಸರ್ಟಿಫಿಕೇಟ್ ಕೋರ್ಸ್ ಒಂದನ್ನು ಪ್ರಾರಂಭಿಸಲಿದ್ದು, ಇದಕ್ಕಾಗಿ ಯಕ್ಷಗಾನ, ಪಾಡ್ದನ, ಕೋಲ ಸೇರಿದಂತೆ ಕರಾವಳಿಯ ಎಲ್ಲಾ ಕಲೆ, ಸಂಸ್ಕೃತಿಗೆ ಸಂಬಂಧಿಸಿದ ವೀಡಿಯೋ ಸಿದ್ಧ ಪಡಿಸುತ್ತಿದೆ ಎಂದು ಮಾಹೆಯ ಕುಲಸಚಿವ ಡಾ.ನಾರಾಯಣ ಸಭಾಹಿತ್ ಹೇಳಿದ್ದಾರೆ.
ಇಲ್ಲಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು, ಮಾಹೆ, ಎಂಜಿಎಂ ಕಾಲೇಜು ಉಡುಪಿ ಹಾಗೂ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಸಮಿತಿ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಪ್ರಸಿದ್ಧ ಸ್ತ್ರೀವೇಷಧಾರಿ ಕೋಳ್ಯೂರು ರಾಮಚಂದ್ರ ರಾಯರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು.
ಮಾಹೆ ಪ್ರಾರಂಭದಿಂದಲೂ ಕಲೆಗೆ ಪ್ರೋತ್ಸಾಹ ನೀಡುತ್ತಿದೆ. ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದೀಗ ಕರಾವಳಿಯ ಕಲೆ, ಸಂಸ್ಕೃತಿಯನ್ನು ಹೊರಗಿನವರೂ ಗುರುತಿಸುವಂತೆ ಹೊಸ ಕೋರ್ಸ್‌ನ್ನು ಶೀಘ್ರವೇ ಪ್ರಾರಂಭಿಸಲಿದೆ ಎಂದರು.
ಇಲ್ಲಿರುವ ಪ್ರಾದೇಶಿಕ ಸಂಶೋಧನಾ ಕೇಂದ್ರ (ಆರ್‌ಆರ್‌ಸಿ)ಯ ವೆಬ್‌ಸೈಟ್ ಒಂದು ಸಿದ್ಧಗೊಳ್ಳುತಿದ್ದು, ಶೀಘ್ರವೇ ಅನಾವರಣಗೊಳ್ಳಲಿದೆ. ಅಲ್ಲದೇ ಇದರ ಮ್ಯೂಸಿಯಂನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆ ಭರದಿಂದ ನಡೆಯುತಿದ್ದು, ಕೆಲವೇ ದಿನಗಳಲ್ಲಿ ಅದು ಉದ್ಘಾಟನೆಗೊಳ್ಳಲಿದೆ ಎಂದು ಡಾ.ಸಭಾಹಿತ್ ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ 90ರ ಹರೆಯ ಕೋಳ್ಯೂರು ಮಾತನಾಡಿ, ನನ್ನ ಅಜ್ಜಿ ಹಾಗೂ ಅಮ್ಮ ಮನೆಯಲ್ಲಿ ಹೇಳುತಿದ್ದ ಪುರಾಣ ಚಿಕ್ಕಂದಿನಲ್ಲಿ ನನ್ನ ಮೇಲೆ ಪ್ರಭಾವ ಬೀರಿದೆ. ನನ್ನ ಬಂಧುವೂ ಆಗಿರುವ ಮುಳಿಯ ತಿಮ್ಮಪ್ಪಯ್ಯ ಅವರನ್ನು ನೋಡಿರುವ ಅಸ್ಪಷ್ಟ ನೆನಪು ನನಗಿದೆ. ಮುಳಿಯ ತಿಮ್ಮಪ್ಪಯ್ಯ ಅವರು ಪಾರ್ತಿ ಸುಬ್ಬ ಬಗ್ಗೆ ಬರೆದ ಕೃತಿ ಯಕ್ಷಗಾನ ಸಂಶೋಧಕರಿಗೆಲ್ಲಾ ಆಕರ ಕೃತಿ. ಸಾಹಿತ್ಯ, ಸಂಶೋಧನೆಯ ಮೇರು ವ್ಯಕ್ತಿತ್ವದ ಮುಳಿಯರ ನೆನಪಿನ ಈ ಪ್ರಶಸ್ತಿ ನನಗೆ ರಾಜ್ಯ ಪ್ರಶಸ್ತಿಯಷ್ಟೇ ಮಹತ್ವದ್ದು ಎಂದರು.
ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಯಕ್ಷಗಾನ ಕಲಾವಿದ ಪ್ರೊ.ಎಂ.ಎಲ್.ಸಾಮಗ ಕೋಳ್ಯೂರು ಅಭಿನಂದನಾ ಭಾಷಣ ಮಾಡಿದರು. ಮುಳಿಯ ಕುಟುಂಬದ ಸದಸ್ಯರೂ, ಪ್ರಶಸ್ತಿ ಸಮಿತಿಯ ಪದಾಧಿಕಾರಿಗಳೂ ಆದ ಮಂಗಳೂರಿನ ಮನೋರಮ ಎಂ. ಭಟ್, ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಆರ್.ನರಸಿಂಹ ಮೂರ್ತಿ, ಮುಳಿಯ ರಾಘವಯ್ಯ ಉಪಸ್ಥಿತರಿದ್ದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಕವಿ ಗೋವಿಂದ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ನವ್ಯಾಶ್ರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.