varthabharthi


ಬುಡಬುಡಿಕೆ

ಫ್ರಿಜ್ಜಿನಲ್ಲಿ ಹಳಸಿದ ಬಿರಿಯಾನಿ ಉಂಟು, ಕೊಡಲಾ?

ವಾರ್ತಾ ಭಾರತಿ : 13 Mar, 2022
ಚೇಳಯ್ಯ

‘‘ಸಿಯೆಮ್ಮು ರಾಜೀನಾಮೆ’’ ಎಂದು ಕೇಳಿದ್ದೇ ಪತ್ರಕರ್ತ ಎಂಜಲು ಕಾಸಿ ಬೆಚ್ಚಿ ಬಿದ್ದ. ಅರೆ! ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದಿಂದ ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ಯಾಕೆ ಕೊಡಬೇಕು? ಎನ್ನುವುದು ಅರ್ಥವಾಗದೆ ತಲೆ ಕೆರೆದುಕೊಂಡ. ಅಷ್ಟರಲ್ಲಿ ಯಾರೋ ತಲೆಗೆ ಮೊಟಕಿ ‘‘ಇದು ಆ ಸಿಯೆಮ್ಮು ಅಲ್ಲ. ಪರ್ಮನೆಂಟ್ ಸಿಯೆಮ್ಮು ಸಾಹೇಬ್ರು.....’’

‘‘ಪರ್ಮನೆಂಟ್ ಸಿಯೆಂ ?’’ ಕಾಸಿ ಮತ್ತೆ ತಲೆ ಕೆರೆದುಕೊಂಡ.

‘‘ಅದೇ ಕಣ್ರೀ ಸಿಎಂ ಅರೆಬಾಯಿ! ಬಾಯಿ ತೆರೆದರೆ ಸಂಸ್ಕೃತ ಉದುರಿಸುತ್ತಾರಲ್ಲ?’’ ಎಂದದ್ದೇ ಕಾಸಿಗೆ ಹೊಳೆಯಿತು. ನೇರವಾಗಿ ಸಿಎಂ ಅರೆಬಾಯಿಯವನ್ನು ಹುಡುಕುತ್ತಾ ಹೊರಟೇಬಿಟ್ಟ.

ಅರೆಬಾಯಿಯವರು ದೇವೇಗೌಡರ ಶಾಲಿನಿಂದ ಕಣ್ಣೀರು ಒರೆಸುತ್ತಾ ಕೂತಿದ್ದರು.

‘‘ಸಾರ್ ನಮಸ್ಕಾರ.... ನಾನು....’’ ಎಂದು ಕಾಸಿ ಹಲ್ಲುಕಿರಿಯುತ್ತಾ ಅವರ ಮುಂದೆ ನಿಂತ.

‘‘ಬನ್ರೀ ಕಾಸಿಯವ್ರೇ... ನಿಮ್ಮನ್ನು ನೋಡಿದಾಗ ನನಗೆ ಕಾಶಿ ವಿಶ್ವನಾಥರನ್ನು ನೆನಪಾಯಿತು. ಒಮ್ಮೆ ನಮ್ಮ ಮೋದಿಯವರ ವಿಶ್ವನಾಥ ಕಾರಿಡಾರ್‌ಗೆ ಭೇಟಿ ನೀಡಿ ನಾನು ಜೀವನದಲ್ಲಿ ಮಾಡಿದ ಸಾಲವನ್ನೆಲ್ಲ ಗಂಗಾನದಿಯಲ್ಲಿ ತೇಲಿ ಬಿಡಬೇಕು ಎಂದಿದ್ದೇನೆ...’’ ಎನ್ನುವ ಅರೆಬಾಯಿಯವರು ನಿಟ್ಟುಸಿರಿಟ್ಟರು.

‘‘ಸಾರ್, ರಾಜೀನಾಮೆ ಕೊಟ್ರಂತೆ...?’’ ವಿಷಾದ ಮುಖಭಾವದಿಂದ ಕಾಸಿ ಕೇಳಿದ.

‘‘ಹೂಂ...ನೋವಿನಿಂದ ತಡೆಯಕ್ಕಾಗಲಿಲ್ಲ. ಕೊಟ್ಟು ಬಿಟ್ಟೆ....’’ ಅರೆ ಬಾಯಿಯವರು ಗಳಗಳನೆ ಮತ್ತೊಮ್ಮೆ ಅತ್ತರು.

‘‘ಮುಂದೇನು ಯಾವ ಪಕ್ಷ ಸಾರ್...’’ ಕಾಸಿ ಕೇಳಿದ.

‘‘ನೋಡಬೇಕು....ಸಿದ್ದರಾಮಯ್ಯ ಅವರು ಅವಕಾಶ ಕೊಟ್ಟರೆ ಕಾಂಗ್ರೆಸ್ ಸೇರಬೇಕು ಎಂದಿದ್ದೇನೆ....’’ ಅರೆಬಾಯಿಯವರು ಬಾಯಿ ತಪ್ಪಿ ಹೇಳಿ ಬಿಟ್ಟರು.

‘‘ನೀವೀಗ ರಾಜೀನಾಮೆ ಕೊಟ್ಟಿರುವುದು ಕಾಂಗ್ರೆಸ್ ಪಕ್ಷಕ್ಕೆ ಸಾರ್....’’ ಕಾಸಿ ನೆನಪಿಸಿದ.

ಬೆಚ್ಚಿ ಬಿದ್ದ ಅರೆಬಾಯಿಯವರು ‘‘ಆಗಾಗ ಬದಲಿಸುತ್ತಿರುತ್ತೇನಲ್ಲ....ಮರೆತು ಬಿಟ್ಟಿದ್ದೆ. ಅಂದ ಹಾಗೆ ಸದ್ಯಕ್ಕೆ ಕಣ್ಣೀರು ಒರೆಸಲು ದೇವೇಗೌಡರು ಅವರ ಶಾಲನ್ನು ನನಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಶಾಲೇ ನನಗೆ ಗತಿ. ಜೆಡಿಎಸ್‌ನಲ್ಲಿ ನಿಲ್ಲಬೇಕು ಎಂದಿದ್ದೇನೆ’’

‘‘ಜೆಡಿಎಸ್‌ಗೆ ಸೇರಿ ಎಷ್ಟು ತಿಂಗಳಲ್ಲಿ ರಾಜೀನಾಮೆ ನೀಡಬೇಕು ಎಂದಿದ್ದೀರಿ?’’ ಕಾಸಿ ಕೇಳಿದ.

‘‘ಸದ್ಯಕ್ಕೆ ನನ್ನ 50 ಕೋಟಿ ರೂಪಾಯಿ ಸಾಲ ತೀರುವವರೆಗೆ ಜೆಡಿಎಸ್‌ಗೆ ನನ್ನನ್ನು ಅರ್ಪಿಸಬೇಕು ಎಂದಿದ್ದೇನೆ’’ ಅರೆಬಾಯಿಯವರು ಸ್ಪಷ್ಟಪಡಿಸಿದರು.

‘‘ನಿಮ್ಮ ಸಾಲ ತೀರಿಸುವ ಭರವಸೆಯನ್ನು ದೇವೇಗೌಡರು ನೀಡಿದ್ದಾರೆಯೆ?’’ ಕಾಸಿ ಕುತೂಹಲದಿಂದ ಕೇಳಿದ.

‘‘ಬಿಜೆಪಿಯ ಜೊತೆಗೆ ಜೆಡಿಎಸ್ ನಿಖಾ ನಡೆದರೆ, ಅವರು ಕೊಡುವ ವಧುದಕ್ಷಿಣೆಯ ಅರ್ಧ ಹಣ ನನಗೆ ಕೊಡುವ ಭರವಸೆ ಕೊಟ್ಟಿದ್ದಾರೆ. ನಿಖಾ ಮಾಡಿಸಿಕೊಡುವ ಭರವಸೆಯನ್ನು ನಾನೂ ಅವರಿಗೆ ನೀಡಿದ್ದೇನೆ....ಒಟ್ಟಾರೆ ‘ಕಬೂಲ್ ಕಬೂಲ್ ಕಬೂಲ್’ ಎಂದು ಕುಮಾರಸ್ವಾಮಿಯವರು ಮೂರು ಬಾರಿ ಹೇಳಿದರೆ ಆಯಿತು. ಒಟ್ಟಿನಲ್ಲಿ ನನ್ನ ಸಾಲ ತೀರಬೇಕು...’’

‘‘ಮತ್ತೆ ನಿಮ್ಮ ಮಕ್ಕಳ ಮದುವೆ?’’ ಕಾಸಿ ವಿಚಾರಿಸಿದ.

‘‘ಮೊದಲು ಈ ಮದುವೆ ಶುಭ ಮುಹೂರ್ತದಲ್ಲಿ ನಡೆದರೆ ಉಳಿದೆಲ್ಲ ಮದುವೆಗಳು ಸಾಂಗವಾಗಿ ನಡೆಯಲಿವೆೆ...’’ ಅರೆಬಾಯಿಯವರು ವಿವರಿಸಿದರು.

‘‘ಒಂದು ವೇಳೆ ಬಿಜೆಪಿಗೆ ಜೆಡಿಎಸ್‌ನ ವರನ ಅಗತ್ಯವೇ ಇಲ್ಲ ಎಂದಾದರೆ? ಆಗ ನಿಮ್ಮ ಸಾಲ ತೀರಿಸುವವರು ಯಾರು?’’

‘‘ಆಗ ನಾನು ಜೆಡಿಎಸ್‌ಗೆ ತಲಾಕ್ ತಲಾಕ್ ತಲಾಕ್ ಎಂದು ಹೇಳಿ....ಬಿಜೆಪಿಯ ಮದುವೆ ಮನೆಯನ್ನು ಸೇರಿಕೊಳ್ಳುವೆ’’ ಎನ್ನುತ್ತಾ ಹ್ಹಹ್ಹ ಎಂದು ನಕ್ಕರು.

‘‘ಬಿಜೆಪಿಯವರು ತ್ರಿವಳಿ ತಲಾಕ್‌ನ್ನು ನಿಷೇಧಿಸಿದ್ದಾರಲ್ಲ?’’ ಕಾಸಿ ಕೇಳಿದ.

‘‘ತ್ರಿವಳಿ ತಲಾಕ್ ಹೇಳದೆಯೇ ಬಿಜೆಪಿ ಸೇರಿದರಾಯಿತು. ತ್ರಿವಳಿ ತಲಾಕ್ ಹೇಳುವ ಕಷ್ಟ ಮುಸ್ಲಿಮ್ ಪುರುಷರಿಗೆ ಬರುವುದು ಬೇಡ ಎಂದೇ ಈ ಕಾನೂನು ತಂದಿದ್ದಾರೆ. ನನ್ನ ಹಾಗೆಯೇ ತಲಾಕ್ ಹೇಳದೆ ಪತ್ನಿಯನ್ನು ತ್ಯಜಿಸಿ ಎಂದು ಚೌಕೀದಾರರು ಕರೆ ನೀಡಿರುವುದು...’’

‘‘ಬಿಜೆಪಿಯವರು ನಿಮ್ಮನ್ನು ಸೇರಿಸಿಕೊಳ್ಳುತ್ತಾರೆಯೆ?’’

‘‘ನೋಡಿ, ನಾಯಿ ಹಸಿದಿದೆ. ಬಿರಿಯಾನಿ ಹಳಸಿದೆ. ಹಳಸಿದ ಬಿರಿಯಾನಿಗೆ ರಾಜಕೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದೇ ಇದೆ. ನನಗೆ ವಕ್ಫ್ ಖಾತೆಯ ಬೀಗದ ಕೈಕೊಟ್ಟರೆ ಸಾಕು. ನನ್ನ ಸಾಲ ತೀರಿಸಿ, ಐದು ಮಕ್ಕಳ ಮದುವೆ ಮಾಡಿ ಮತ್ತು ಕಾಂಗ್ರೆಸ್‌ಗೆ ಸೇರಿ ಕೋಮುವಾದದ ವಿರುದ್ಧ ಹೋರಾಟ ಮಾಡುತ್ತೇನೆ...’’ ಎಂದು ತನ್ನ ಭವಿಷ್ಯದ ರಾಜಕೀಯದ ನೀಲನಕ್ಷೆಯನ್ನು ಬಿಚ್ಚಿಟ್ಟರು.

‘‘ಸರಿ ಸಾರ್...ಬಿರಿಯಾನಿ ಎಂದಾಗ ನೆನಪಾಯಿತು. ಹಸಿವಾಗುತ್ತಿದೆ. ಹೊಟೇಲ್‌ಗೆ ಹೋಗಿ ಊಟ ಮಾಡಿ ಬರುವೆ...’’ ಕಾಸಿ ಎದ್ದು ನಿಂತ.

‘‘ಫ್ರಿಜ್ಜಿನಲ್ಲಿ ಹಳಸಿದ ಬಿರಿಯಾನಿ ಉಂಟು. ಕೊಡಲಾ?’’ ಅರೆಬಾಯಿಯವರು ಕೇಳಿದರು.

‘‘ಬೇಡ ಸಾರ್ ಬೇಡ’’ ಕಾಸಿ ಗಾಬರಿಯಿಂದ ಹೇಳಿದ.

‘‘ಹಾಗಾದರೆ ನನ್ನದೊಂದು ಸಂಸ್ಕೃತ ಶ್ಲೋಕ ಕೇಳಿಕೊಂಡು ಹೋಗಿ....’’ ಎನ್ನುತ್ತಿದ್ದಂತೆಯೇ ಕಾಸಿ ತನ್ನ ಜೋಳಿಗೆಯೊಂದಿಗೆ ಅಲ್ಲಿಂದ ಓಡತೊಡಗಿದ.

► ಚೇಳಯ್ಯ

chelayya@gmail.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)