varthabharthi


ತಿಳಿ ವಿಜ್ಞಾನ

ಜಾಗತಿಕ ತಾಪಮಾನಕ್ಕೆ ಕಾರಣವಾದ ಮಿಥೇನ್‌ನ್ನು ಮಣಿಸಬಹುದೇ?

ವಾರ್ತಾ ಭಾರತಿ : 13 Mar, 2022
ಆರ್.ಬಿ ಗುರುಬಸವರಾಜ

ಹವಾಮಾನ ವೈಪರೀತ್ಯ ದಿನೇ ದಿನೇ ಹತ್ತು ಹಲವು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಮಳೆಗಾಲದಲ್ಲಿ ಬಿಸಿಲು, ಚಳಿಗಾಲದಲ್ಲಿ ಮಳೆ ಮತ್ತು ಬೇಸಿಗೆಯಲ್ಲಿ ಮಾತ್ರ ಬಿರುಬಿಸಿಲು. ಇದರಿಂದ ಭೂಗ್ರಹದಲ್ಲಿನ ಜೀವ ಸಂಕುಲ ವ್ಯಾಕುಲಕ್ಕೊಳಗಾಗುತ್ತಿದೆ. ಮಿಥೇನ್ ಅಪಾಯಕಾರಿ ವಾಯು ಮಾಲಿನ್ಯಕಾರಕ ಮತ್ತು ಹಸಿರುಮನೆ ಅನಿಲವಾಗಿದ್ದು, ಇದರಿಂದ ಪ್ರತಿ ಒಂದು ಮಿಲಿಯನ್ ಜೀವಿಗಳ ಅಕಾಲಿಕ ಮರಣಕ್ಕೆ ಕಾರಣವಾಗಿದೆ. ಮಿಥೇನ್ ಶಕ್ತಿಯುತವಾದ ಹಸಿರುಮನೆ ಅನಿಲವೂ ಆಗಿದ್ದು, 20 ವರ್ಷಗಳ ಅವಧಿಯಲ್ಲಿ ಇಂಗಾಲದ ಡೈಆಕ್ಸೈಡ್‌ಗಿಂತ 80 ಪಟ್ಟು ಹೆಚ್ಚು ತಾಪಮಾನವನ್ನು ಹೆಚ್ಚಿಸಿದೆ ಎಂಬುದು ಖೇದಕರ ಸಂಗತಿ.

ಹಾಗಾದರೆ ಇಷ್ಟೊಂದು ಪ್ರಮಾಣದ ಮಿಥೇನ್ ಎಲ್ಲಿಂದ ಬಂತು? ಇದನ್ನು ತಡೆಗಟ್ಟಲು ಸಾಧ್ಯವಾಗಲಿಲ್ಲವೇಕೆ? ಈಗಲಾದರೂ ಇದನ್ನು ಹೊರಹಾಕಲು ಸಾಧ್ಯವಿಲ್ಲವೇ? ಎಂಬಿತ್ಯಾದಿ ಪ್ರಶ್ನೆಗಳು ಬರುವುದು ಸಹಜ. ಅಂತೆಯೇ ಇಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿದ್ದೂ, ಉತ್ತರಿಸಲಾರದ ಸ್ಥಿತಿಯಲ್ಲಿದ್ದೇವೆ. ಕಾರಣ ಸ್ಪಷ್ಟ. ಜಗತ್ತನ್ನೇ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬುದು ಕೆಲ ರಾಷ್ಟ್ರಗಳ ಹುನ್ನಾರ. ಅದೇನೆ ಇರಲಿ. ಈಗ ಮಿಥೇನ್‌ನ್ನು ವಾತಾವರಣದಿಂದ ಹೇಗೆ ತೆಗೆಯುವುದು ಎಂಬುದರ ಬಗ್ಗೆ ಚರ್ಚಿಸೋಣ. ಮಿಥೇನ್ ಹೊರಸೂಸುವಿಕೆಯ ಶೇ. 40 ಭಾಗದಷ್ಟು ನೈಸರ್ಗಿಕವಾಗಿ ಸಂಭವಿಸಿದರೆ, ಉಳಿದ ಶೇ. 60 ಮಾನವ ಚಟುವಟಿಕೆಯ ಪರಿಣಾಮವಾಗಿದೆ. ಕೃಷಿಯು ಮಾನವ ಪ್ರೇರಿತ ಮಿಥೇನ್‌ನ ಪ್ರಮುಖ ಮೂಲವಾಗಿದೆ. ಇದು ಒಟ್ಟು ಹೊರಸೂಸುವಿಕೆಯ ಕಾಲು ಭಾಗಕ್ಕೆ ಕಾರಣವಾಗಿದೆ. ಜಾಗತಿಕವಾಗಿ ಮಾಂಸ ಉದ್ಯಮಕ್ಕಾಗಿ ಸಾಕಿದ ಜಾನುವಾರುಗಳು ಮತ್ತು ಇತರ ಜಾನುವಾರುಗಳು ವಾರ್ಷಿಕವಾಗಿ ಸುಮಾರು 145 ಮೆಟ್ರಿಕ್ ಟನ್‌ನಷ್ಟು ಮಿಥೇನ್‌ನ್ನು ಹೊರಸೂಸುತ್ತವೆ. ಅಂದರೆ ಜಾನುವಾರುಗಳು ಮೇವನ್ನು ತಿಂದು ಅರಗಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮಿಥೇನ್ ಉತ್ಪತ್ತಿಯಾಗುತ್ತದೆ. ಇಂಧನ ವಲಯವು 2020ರಲ್ಲಿ ಕಲ್ಲಿದ್ದಲು, ತೈಲ, ಅನಿಲಗಳ ಬಳಕೆಯಿಂದ ಸುಮಾರು 134 ಮೆಟ್ರಿಕ್ ಟನ್‌ನಷ್ಟು ಮಿಥೇನ್‌ನ್ನು ಹೊರಸೂಸುವ ಮೂಲಕ ಎರಡನೇ ಸ್ಥಾನದಲ್ಲಿದೆ. ತೈಲ ಮತ್ತು ಅನಿಲ ಕಾರ್ಖಾನೆಗಳಲ್ಲಿ ನಿರ್ವಹಿಸಲಾದ ಕಳಪೆ ಗುಣಮಟ್ಟದ ವ್ಯವಸ್ಥೆಯೂ ಮಿಥೇನ್ ವಾತಾವರಣಕ್ಕೆ ಸೇರಲು ಕಾರಣವಾಗಿದೆ. ಹವಾಮಾನ ಬದಲಾವಣೆ ಕುರಿತು ಅರೆ ಸರಕಾರಿ ಸಂಸ್ಥೆ (ಐಇಇ )ಯ ವರದಿಯು ಮಿಥೇನ್ ಹೊರಸೂಸುವಿಕೆಯಲ್ಲಿ ಬಲವಾದ, ಕ್ಷಿಪ್ರ ಮತ್ತು ನಿರಂತರ ಕಡಿತಕ್ಕೆ ಕರೆ ನೀಡಿದೆ. ಅದು ವಾತಾವರಣಕ್ಕೆ ಸೇರುವ ಮಿಥೇನ್‌ನ್ನು ಕಡಿಮೆ ಮಾಡಲು ಕೆಲವು ಮಾರ್ಗಗಳನ್ನು ಸೂಚಿಸಿದೆ. ಹಸುಗಳ ಆಹಾರ ಪದ್ಧತಿಯನ್ನು ಬದಲಾಯಿಸುವುದರಿಂದ ಹಿಡಿದು ಸೋರುವ ಪಳೆಯುಳಿಕೆ ಇಂಧನ ಮೂಲಸೌಕರ್ಯವನ್ನು ನವೀಕರಿಸುವವರೆಗೆ ವಿವಿಧ ಮಾರ್ಗಗಳನ್ನು ಅದು ತೋರಿಸಿದೆ. ಯುಕೆ ಆತಿಥ್ಯ ವಹಿಸಿದ್ದ ಇ

-26 ಹವಾಮಾನ ಮಾತುಕತೆಯೊಂದಿಗೆ, ಮಿಥೇನ್ ಹೊರಸೂಸುವಿಕೆಯನ್ನು ನಿಗ್ರಹಿಸುವ ವಿಶ್ವ ನಾಯಕರ ಒಪ್ಪಂದದ ಪ್ರಕಾರ 2050ರ ವೇಳೆಗೆ ನಿವ್ವಳ ಶೂನ್ಯವನ್ನು ತಲುಪುವ ಪ್ರಯತ್ನಗಳನ್ನು ಕೈಗೊಳ್ಳುವುದು ಅದರ ಪ್ರಮುಖ ಭಾಗವಾಗಿದೆ. ಅದೇ ರೀತಿಯಲ್ಲಿ ಜಾಗತಿಕ ಕಾನೂನು ಅಪಾಯಕಾರಿ ಓರೆನ್-ಸವಕಳಿಸುತ್ತಿರುವ ಸಿಎಫ್‌ಸಿ ರಾಸಾಯನಿಕಗಳನ್ನು ಹೊರಹಾಕಲು ಒಮ್ಮತದ ಅಭಿಪ್ರಾಯಗಳನ್ನು ಮಂಡಿಸಿವೆ. ತೈಲ ಮತ್ತು ಅನಿಲ ಮೂಲಸೌಕರ್ಯವನ್ನು ಪ್ರಸ್ತುತ ದಿನಕ್ಕೆ ತಕ್ಕಂತೆ ನವೀಕರಿಸುವುದು ಅಥವಾ ಬದಲಿಸುವುದು ಹಾಗೂ ಹಳೆಯ ತೈಲ ಮತ್ತು ಅನಿಲ ಬಾವಿಗಳಿಂದ ವಾತಾವರಣಕ್ಕೆ ಮಿಥೇನ್ ಸೋರಿಕೆಯನ್ನು ತಡೆಯುವುದು ಸಹ ಈ ಒಪ್ಪಂದದಲ್ಲಿ ಸೇರಿದೆ. ಯುರೋಪಿಯನ್ ಒಕ್ಕೂಟದಂತಹ ಪ್ರಮುಖ ಅನಿಲ ಆಮದುದಾರರು ತಾನು ಖರೀದಿಸುವ ಅನಿಲ ಆಮದುಗಳನ್ನು ಸ್ವಚ್ಛಗೊಳಿಸಲು ಆಡಿಟಿಂಗ್ ಕಾರ್ಯವಿಧಾನಗಳನ್ನು ಸ್ಥಾಪಿಸಲು ಸೂಕ್ತ ಮಾರ್ಗದರ್ಶನ ನೀಡಿದೆ. ಈ ಹಿನ್ನಲೆೆಯಲ್ಲಿ ನೈಸರ್ಗಿಕ ಅನಿಲ ಆಮದುಗಳಿಂದ ಮಿಥೇನ್ ಹೊರಸೂಸುವಿಕೆಯನ್ನು ಉತ್ತಮವಾಗಿ ನಿರ್ವಹಿಸಲು, ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಿಸಲು ಕ್ರಮಗಳನ್ನು ಜಾರಿಗೊಳಿಸುವ ಅಗತ್ಯ ಇದೆ.

ಪಳೆಯುಳಿಕೆ ಇಂಧನಗಳ ಮೇಲಿನ ನಮ್ಮ ಅವಲಂಬನೆಯನ್ನು ಮುರಿಯದ ಹೊರತು ಈ ಶತಮಾನದ ಮಧ್ಯಭಾಗದವರೆಗೆ ಭೂಗ್ರಹವನ್ನು ತಂಪಾಗಿಸಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಮಿಥೇನ್ ಹೊರಸೂಸುವಿಕೆಯನ್ನು ಅಲ್ಪಾವಧಿಯಲ್ಲಿ ಕಡಿತಗೊಳಿಸುವುದು ದೊಡ್ಡ ಪರಿಣಾಮವನ್ನು ಬೀರಬಹುದು. ಹವಾಮಾನ ಗುರಿಗಳನ್ನು ಪೂರೈಸಲು ಭೂಗ್ರಹದ ಅಮೂಲ್ಯ ಸಮಯವನ್ನು ಅದಕ್ಕಾಗಿ ಮೀಸಲಿರಿಸಬೇಕಾಗುತ್ತದೆ. ‘‘ಹವಾಮಾನ ಬದಲಾವಣೆಯು ಮ್ಯಾರಥಾನ್‌ನಂತಿದೆ, ನಾವು ಈ ಓಟದಲ್ಲಿ ಉಳಿಯಬೇಕಾಗಿದೆ’’ ಎಂದು ಐಪಿಸಿಸಿಯ ಅಧ್ಯಕ್ಷ ಝೆಲ್ಕೆ ‘ದಿ ಗಾರ್ಡಿಯನ್’ಗೆ ತಿಳಿಸಿದ್ದಾರೆ. ‘‘ಇಂಗಾಲದ ಡೈಆಕ್ಸೈಡ್ ಅನ್ನು ಕಡಿತಗೊಳಿಸುವುದರಿಂದ ಮಾತ್ರ ಮುಂದಿನ 10 ವರ್ಷಗಳಲ್ಲಿ ವಾತಾವರಣ ತಂಪಾಗಿಸಲು ಕಾರಣವಾಗುವುದಿಲ್ಲ. ಅದಕ್ಕೂ ಮೀರಿ ಹವಾಮಾನ ಬದಲಾವಣೆಯನ್ನು ನಿಭಾಯಿಸುವ ನಮ್ಮ ಸಾಮರ್ಥ್ಯವನ್ನು ತುಂಬಾ ತೀವ್ರವಾಗಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಮಿಥೇನ್‌ನ ಪ್ರಮಾಣ ತಗ್ಗಿಸುವುದರಿಂದ ಮಾತ್ರ ನಮಗೆ ಅದು ಸಾಧ್ಯವಾಗುತ್ತದೆ’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಿಶ್ವಸಂಸ್ಥೆಯ ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (ಯುಎನ್‌ಇಪಿ) ವರದಿಯು ಈ ದಶಕದೊಳಗೆ ಮಾನವ ಪ್ರೇರಿತ ಮಿಥೇನ್ ಹೊರಸೂಸುವಿಕೆಯಲ್ಲಿ ಶೇ. 45 ಕಡಿತವನ್ನು ಸಾಧಿಸಬಹುದು, 2045ರ ವೇಳೆಗೆ ಸುಮಾರು 0.30ಇ ಜಾಗತಿಕ ತಾಪಮಾನವನ್ನು ತಡೆಯಬಹುದು ಎಂದು ಹೇಳಿದೆ. ಯುಎನ್‌ಇಪಿ ಮತ್ತು ಕ್ಲೀನ್ ಏರ್ ಒಕ್ಕೂಟದ ಇತ್ತೀಚಿನ ಮೌಲ್ಯಮಾಪನವು ಹವಾಮಾನ ಬದಲಾವಣೆಯ ವಿರುದ್ಧದ ಯುದ್ಧದಲ್ಲಿ ಕೃಷಿ ಸಂಬಂಧಿತ ಮಿಥೇನ್ ಹೊರಸೂಸುವಿಕೆಯನ್ನು ಕಡಿತಗೊಳಿಸುವುದು ಪ್ರಮುಖವಾಗಿದೆ ಎಂದು ಕಂಡುಹಿಡಿದಿದೆ.

ಜಾನುವಾರು ಹೊರಸೂಸುವಿಕೆಗಳು, ಗೊಬ್ಬರ ಮತ್ತು ಗ್ಯಾಸ್ಟ್ರೋಎಂಟರಿಕ್ ಬಿಡುಗಡೆಗಳಿಂದ ಸರಿಸುಮಾರು 32 ಪ್ರತಿಶತದಷ್ಟು ಮಾನವ ಉಂಟುಮಾಡುವ ಮಿಥೇನ್ ಹೊರಸೂಸುವಿಕೆಗೆ ಕಾರಣವಾಗಿದೆ. ಜನಸಂಖ್ಯೆಯ ಬೆಳವಣಿಗೆ, ಆರ್ಥಿಕ ಅಭಿವೃದ್ಧಿ ಮತ್ತು ನಗರ ವಲಸೆಯು ಪ್ರಾಣಿಗಳ ಪ್ರೋಟೀನ್‌ಗೆ ಅಭೂತಪೂರ್ವ ಬೇಡಿಕೆಯನ್ನು ಉತ್ತೇಜಿಸಿದೆ ಮತ್ತು ಜಾಗತಿಕ ಜನಸಂಖ್ಯೆಯು 10 ಬಿಲಿಯನ್‌ಗೆ ಸಮೀಪಿಸುತ್ತಿದೆ. ಈ ಹಸಿವು 2050ರ ವೇಳೆಗೆ ಶೇಕಡಾ 70ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಮಿಥೇನ್ ಪ್ರಾಣಿಗಳಿಂದ ಮಾತ್ರ ಬರುವುದಿಲ್ಲ. ಭತ್ತದ ಕೃಷಿಯೂ ಕಾರಣವಾಗಿದೆ. ಭತ್ತದ ಕೃಷಿಯಿಂದ ಪ್ರವಾಹಕ್ಕೆ ಒಳಗಾದ ಹೊಲಗಳು ಮಣ್ಣಿನಲ್ಲಿ ಆಮ್ಲಜನಕವನ್ನು ಭೇದಿಸುವುದನ್ನು ತಡೆಯುತ್ತದೆ. ಮಿಥೇನ್ ಹೊರಸೂಸುವ ಬ್ಯಾಕ್ಟೀರಿಯಾಗಳಿಗೆ ಸೂಕ್ತವಾದ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ‘‘ಕೃಷಿ ಮತ್ತು ಜಾನುವಾರು ಉತ್ಪಾದನೆಗೆ ನಮ್ಮ ವಿಧಾನಗಳನ್ನು ಮರುಚಿಂತನೆ ಮಾಡುವ ಮೂಲಕ ಹೊಸ ಜಗತ್ತು ಪ್ರಾರಂಭಿಸಬೇಕಾಗಿದೆ’’ ಎಂದು ಯುಎನ್‌ಇಪಿ ಆಹಾರ ವ್ಯವಸ್ಥೆ ಮತ್ತು ಕೃಷಿ ಸಲಹೆಗಾರ ಜೇಮ್ಸ್ ಲೊಮ್ಯಾಕ್ಸ್ ಅವರು ಹೇಳುತ್ತಾರೆ. ಹೊಸ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು, ಸಸ್ಯ ಸಮೃದ್ಧ ಆಹಾರಗಳ ಕಡೆಗೆ ಬದಲಾಯಿಸುವುದು ಮತ್ತು ಪ್ರೋಟೀನ್‌ನ ಪರ್ಯಾಯ ಮೂಲಗಳನ್ನು ಅಳವಡಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದ ಗುರಿಯಾದ ಮಾನವೀಯತೆಯು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿತಗೊಳಿಸಿದರೆ ಮತ್ತು ಜಾಗತಿಕ ತಾಪಮಾನವನ್ನು 1.50ಇಗೆ ಕಡಿಮೆ ಮಾಡಲು ಸಾಧ್ಯ ಎಂದು ಲೋಮ್ಯಾಕ್ಸ್ ಹೇಳುತ್ತಾರೆ.

‘‘ಮಿಥೇನ್‌ನ್ನು ತೆಗೆದುಹಾಕುವುದಕ್ಕಿಂತ ಮುಂದಿನ ಕೆಲವು ದಶಕಗಳಲ್ಲಿ ಗರಿಷ್ಠ ತಾಪಮಾನವನ್ನು ಕಡಿಮೆ ಮಾಡುವುದರ ಮೇಲೆ ದೊಡ್ಡ ಪರಿಣಾಮವನ್ನು ಬೀರಲು ನಾವು ಬಹುಶಃ ಏನನ್ನೂ ಮಾಡಲಾಗುವುದಿಲ್ಲ’’ ಎಂದು ಸ್ಟ್ಯಾನ್‌ಫೋರ್ಡ್‌ನ ಸಂಶೋಧಕ ಮತ್ತು ಲೇಖಕ ರಾಬ್ ಜಾಕ್ಸನ್ ಹೇಳುತ್ತಾರೆ. ಮಿಥೇನ್ ತುಲನಾತ್ಮಕವಾಗಿ ವಿರಳ ಅನಿಲ. ಇಂಗಾಲದ ಡೈಆಕ್ಸೈಡ್ ವಾತಾವರಣದಲ್ಲಿ ಸುಮಾರು 200 ಪಟ್ಟು ಹೆಚ್ಚು ಕೇಂದ್ರೀಕೃತವಾಗಿದೆ. ಮಿಥೇನ್ ಇಲ್ಲಿಯವರೆಗಿನ ಒಟ್ಟು ಜಾಗತಿಕ ತಾಪಮಾನದ ಸುಮಾರು ಶೇ. 30 ಅಥವಾ ಸುಮಾರು 0.50ಇ

ಕೊಡುಗೆ ನೀಡಿದೆ. ವಾತಾವರಣದಲ್ಲಿ ಅದರ ಜೀವಿತಾವಧಿಯು ಕೇವಲ 10 ವರ್ಷಗಳಾಗಿದ್ದರೂ, ಅಲ್ಪಾವಧಿಯ ಚೌಕಟ್ಟುಗಳಲ್ಲಿ ಇದು ಇಂಗಾಲದ ಡೈಆಕ್ಸೈಡ್‌ಗಿಂತ 86 ಪಟ್ಟು ಶಕ್ತಿಯುತವಾದ ಹಸಿರುಮನೆ ಅನಿಲವಾಗಿದೆ. ವಾತಾವರಣದಿಂದ ಮಿಥೇನ್‌ನ್ನು ತೆಗೆದು ಹಾಕುವುದು ಕಷ್ಟವಲ್ಲ. ಆದರೆ ಅದರಿಂದ ಉಂಟಾಗುವ ಸಮಸ್ಯೆಗಳನ್ನು ಇದು ಕಡಿಮೆ ಮಾಡುವುದು ಕಷ್ಟ ಎಂಬುದು ಅವರ ನಿಲುವು. ಕೃಷಿ ಹಾಗೂ ಕೈಗಾರಿಕೆಗಳಿಂದ ಮಿಥೇನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿದರೆ ಇದು ಜನಸಂಖ್ಯೆಯು ಬೆಳೆದಂತೆ ಆಹಾರ ಹಾಗೂ ಉದ್ಯೋಗ ಸಮಸ್ಯೆಗಳನ್ನು ತಂದೊಡ್ಡುತ್ತದೆ. ವಾಣಿಜ್ಯ ಮಿಥೇನ್‌ನ್ನು ವಾತಾವರಣದಿಂದ ಹೊರ ತೆಗೆಯುವ ಸಾಹಸಗಳು ಅಲ್ಲಲ್ಲಿ ಮೊಳಕೆಯೊಡೆಯಲು ಪ್ರಾರಂಭಿಸಿವೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ. ಹೊರಸೂಸಿದ ಮಿಥೇನ್‌ನ್ನು ಕಡಿಮೆ ಮಾಡುವ ತಂತ್ರಜ್ಞಾನ ಅಳವಡಿಸುವ ಬದಲು, ಮಿಥೇನ್ ಹೊರಸೂಸದಂತೆ ನೋಡಿಕೊಳ್ಳುವ ತಂತ್ರಜ್ಞಾನದ ಆವಿಷ್ಕಾರ ಆಗಬೇಕಿದೆ. ಮೊದಲು ತಗ್ಗಿಸಿ ನಂತರ ತೆಗೆದುಹಾಕುವ ಕಾರ್ಯಕ್ಕೆ ತೊಡಗಬೇಕಿದೆ. ಒಪ್ಪಂದಗಳು, ಹೇಳಿಕೆಗಳು ಕೇವಲ ಕಡತಗಳಾಗಿ ಉಳಿಯುತ್ತವೆಯೋ ಅಥವಾ ಕಾರ್ಯರೂಪಕ್ಕೆ ಬರುವ ಮೂಲಕ ಜಾಗತಿಕ ತಾಪಮಾನವನ್ನು ತಗ್ಗಿಸುವ ಕಾರ್ಯ ತಂತ್ರಗಳಾಗುತ್ತವೆಯೋ ಕಾದು ನೋಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)