ಶ್ರೀನಿವಾಸ ತುಂಗರಿಗೆ ಕೊನೆಗೂ ಸಿಕ್ಕಿದ ನ್ಯಾಯ; ತಿಂಗಳಿಗೆ 9 ಸಾವಿರ ರೂ. ಪರಿಹಾರ ನೀಡಲು ಆದೇಶ
ಶ್ರೀನಿವಾಸ ತುಂಗ
ಉಡುಪಿ : ಉತ್ತಮ ಉದ್ಯೋಗದಲ್ಲಿದ್ದ ಮೂವರು ಮಕ್ಕಳಿಂದ ಅವಗಣನೆಗೆ ಒಳಗಾಗಿ, ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುತಿದ್ದ ಸಾಸ್ತಾನ ಮೂಲದ 72ರ ಹರೆಯದ ಶ್ರೀನಿವಾಸ ತುಂಗರ ಸುಮಾರು ಮೂರು ವರ್ಷಗಳ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ಅವರ ಪರವಾಗಿ ನಿರಂತರವಾಗಿ ಹೋರಾಟ ನಡೆಸಿದ್ದ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಡಾ.ರವೀಂದ್ರನಾಥ ಶಾನುಭಾಗ್ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ.
‘ವಾರ್ತಾಭಾರತಿ’ ಮಾ.8ರ ಸಂಚಿಕೆಯಲ್ಲಿ ‘ಮಕ್ಕಳಿಂದ ಅವಗಣನೆ; ನ್ಯಾಯಕ್ಕಾಗಿ ಹೋರಾಡುತ್ತಿರುವ ಶ್ರೀನಿವಾಸ ತುಂಗ’ ಶೀರ್ಘಿಕೆಯಲ್ಲಿ ಅವರ ಬವಣೆಯನ್ನು ವರದಿ ಮಾಡಿತ್ತು. ಇದೀಗ ಕುಂದಾಪುರದ ಹಿರಿಯ ನಾಗರಿಕರ ನ್ಯಾಯಮಂಡಳಿ, ಶ್ರೀನಿವಾಸ ತುಂಗರು ಮಕ್ಕಳಿಂದ ಮಾಸಾಶನವನ್ನು ಕೊಡಿಸುವಂತೆ ಕೋರಿ ಸಲ್ಲಿಸಿದ ದೂರು ಅರ್ಜಿಯ ವಿಚಾರಣೆಯನ್ನು ಮುಗಿಸಿ ತೀರ್ಪನ್ನು ಪ್ರಕಟಿಸಿದ್ದು, ಮೂವರು ಮಕ್ಕಳು ಪ್ರತಿ ತಿಂಗಳು ತಲಾ 3000ರೂ. ಗಳನ್ನು ತುಂಗಾರ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಆದೇಶಿಸಿದೆ.
‘ಫಿರ್ಯಾದಿದಾರರ (ಶ್ರೀನಿವಾಸ ತುಂಗ) ಮನವಿಯನ್ನು ಪುರಸ್ಕರಿಸಲಾಗಿದೆ. ಫಿರ್ಯಾದಿದಾರರ ಜೀವಿತ ಕಾಲದವರೆಗೆ ಅವರ ದೈನಂದಿನ ಖರ್ಚು, ವೈದ್ಯಕೀಯ ವೆಚ್ಚ ಹಾಗೂ ಇನ್ನಿತರ ಖರ್ಚುವೆಚ್ಚಗಳಿಗಾಗಿ ಶ್ರೀನಿವಾಸ ತುಂಗರ ಮಕ್ಕಳಾದ ಎಸ್.ಪ್ರಶಾಂತ್, ಎಸ್.ಪ್ರಸಾದ್ ಹಾಗೂ ಎಸ್.ಪ್ರತಿಮಾ ಪ್ರತಿ ತಿಂಗಳು ತಲಾ 3000ರೂ.ನಂತೆ ಒಟ್ಟು 9000ರೂ.ವನ್ನು ಜೀವನಾಂಶವಾಗಿ ಫಿರ್ಯಾದಿದಾರರ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ನಿರ್ದೇಶಿಸಿದೆ.
ಇದಕ್ಕೆ ತಪ್ಪಿದಲ್ಲಿ ಕಾಯ್ದೆಯ ಕಲಂ 5(8)ರಡಿ ಮಕ್ಕಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ನಿರ್ವಹಣಾ ನ್ಯಾಯ ಮಂಡಳಿಯ ಅಧ್ಯಕ್ಷರು ಮಾ.3ರಂದು ಆದೇಶಿಸಿದ್ದಾರೆ ಎಂದು ಡಾ.ರವೀಂದ್ರನಾಥ ಶಾನುಭಾಗ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.