ವನ್ಯಜೀವಿಗಳಿಗಿಂತ ಅವುಗಳ ರಕ್ಷಕರೇ ಅಪಾಯಕಾರಿಯಾದಾಗ..!
ಇಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಬೇಕಾಗಿರುವುದು ಪ್ರಾಮಾಣಿಕವಾದ ಸಾಮಾಜಿಕ ಅರಣ್ಯ ಯೋಜನೆಗಳು. ಇವುಗಳು ಸರಿಯಾಗಿ ಕಾರ್ಯಗತವಾದರೆ ಸ್ವಾಭಾವಿಕವಾಗಿ ಮಾನವ ವನ್ಯಜೀವಿ ಸಂಘರ್ಷ ಕಡಿಮೆಯಾಗಿ ಪರಿಸರ ಸಹ ಉಳಿಯಬಲ್ಲದು.
ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ನಿನ್ನೆ ಮೊನ್ನೆಯದಲ್ಲ. ಇದಕ್ಕೆ ಶತಮಾನಗಳ ಇತಿಹಾಸವಿದೆ. ಗ್ರಾಮೀಣ ಪ್ರದೇಶಗಳು ಮತ್ತು ನಗರ ಪ್ರದೇಶಗಳು ಹೆಚ್ಚಾದ ಹಾಗೆ ನಿಧಾನವಾಗಿ ಕಾಡಿನ ವಿಸ್ತೀರ್ಣ ಕಡಿಮೆಯಾಗಲು ಆರಂಭವಾಯಿತು. ಇನ್ನೊಂದೆಡೆ ಅತಿಯಾದ ನಗರೀಕರಣ ಮತ್ತು ಅಭಿವೃದ್ಧಿ ಮಾನವರನ್ನು ಕಾಡಿನ ಅಂಚಿಗೆ ತಂದು ನಿಲ್ಲಿಸಿತು. ಈ ಮಧ್ಯೆ ನಾಗರಿಕ ಸಮಾಜದಲ್ಲಿ ವನ್ಯಜೀವಿಗಳನ್ನು ರಕ್ಷಿಸುವ ಕಾಯ್ದೆ ಹೆಚ್ಚಾಯಿತು. ಬೇರೆ ದಾರಿ ಕಾಣದೆ ಅನಿವಾರ್ಯವಾಗಿ ಮಾನವ ಮತ್ತು ಪ್ರಾಣಿಗಳು ಆಗಾಗ ಸಂಧಿಸುವ ಸಂದರ್ಭ ಉಂಟಾಯಿತು. ಇಂದು ಆನೆ, ಚಿರತೆ, ಹುಲಿಯಂತಹ ಪ್ರಾಣಿಗಳು ರೈತರ ಮತ್ತು ಕಾರ್ಮಿಕರ ಬದುಕಿಗೆ ಆಘಾತವನ್ನು ಉಂಟು ಮಾಡುವ ಪರಿಸ್ಥಿತಿ ಬಂದಿದೆ. ಪ್ರತಿವರ್ಷ ಬಡ ರ್ಯೆತರು ಮತ್ತು ಕಾರ್ಮಿಕರು ವನ್ಯಜೀವಿಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಮನುಷ್ಯನ ದಾಳಿಯಿಂದ ಪ್ರಾಣಿಗಳು ಸಹ ಪ್ರಾಣವನ್ನು ಕಳೆದುಕೊಳ್ಳುತ್ತಿವೆ.
ಈ ರೀತಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗಿ ಪ್ರಾಣ ಹಾನಿಯಾದಾಗ ಮಾಧ್ಯಮಗಳು ಎಚ್ಚೆತ್ತುಕೊಳ್ಳುತ್ತವೆ. ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ವಿಚಾರ ಸ್ವಲ್ಪ ಕಾಲ ಬಿಸಿ ಬಿಸಿಯಾಗಿ ಚರ್ಚೆಗೆ ಬರುತ್ತದೆ. ಸರಕಾರ ಸಹ ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಗೆೆ ಕೋಟ್ಯಂತರ ಹಣವನ್ನು ನಿಗದಿಪಡಿಸುತ್ತದೆ. ಆಗ ದಿಢೀರ್ ಎಂದು ರಾತ್ರೋರಾತ್ರಿ ಪರಿಸರ ತಜ್ಞರು ಸಿಕ್ಕಸಿಕ್ಕ ಕಡೆ ರಾಜ್ಯದ ಉದ್ದಕ್ಕೂ ಹುಟ್ಟಿಕೊಳ್ಳುತ್ತಾರೆ. ಈ ಮಧ್ಯೆ ಪರಿಸರ ರಕ್ಷಣೆ ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ) ಎನ್ನುವ ಇನ್ನೊಂದು ಪರ್ಯಾಯ ವ್ಯವಸ್ಥೆ ಎಚ್ಚೆತ್ತುಕೊಳ್ಳುತ್ತವೆ. ಕೆಲವು ಎನ್‌ಜಿಒಗಳು ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ವಕ್ರದೃಷ್ಟಿ ಬೀರಲು ಬಹಳ ಹಿಂದೆಯೇ ಆರಂಭಿಸಿವೆ. ಅಂದ ಮಾತ್ರಕ್ಕೆ ಎಲ್ಲ ಪರಿಸರ ಮತ್ತು ವನ್ಯಜೀವಿ ಸಂರಕ್ಷಿತ ಸಂಬಂಧಿತ ಸ್ವಯಂಸೇವಾ ಸಂಸ್ಥೆಗಳು ಅನಧಿಕೃತ ಎಂದು ಹೇಳಲು ಬರುವುದಿಲ್ಲ. ಕೆಲವು ಪ್ರಾಮಾಣಿಕ ಎನ್‌ಜಿಒಗಳು ಸಹ ಇವೆ. ಕೆಲವು ಎನ್‌ಜಿಒಗಳು ಪರಿಸರದ ಹೆಸರಿನಲ್ಲಿ ಕೋಟಿ ಕೋಟಿ ಹಣದ ವಹಿವಾಟು ನಡೆಸುತ್ತಿರುವುದು ಅಷ್ಟೇ ಸತ್ಯ. ವಿದೇಶಗಳಿಂದ ಕೋಟ್ಯಂತರ ಹಣ ನೀರಿನಂತೆ ಭಾರತದ ಸ್ವಯಂಸೇವಾ ಸಂಸ್ಥೆಗಳಿಗೆ ಮತ್ತು ಪರಿಸರ ತಜ್ಞರಿಗೆ ಹರಿದು ಬರುತ್ತಿರುವುದು ಅಷ್ಟೇ ಸತ್ಯ. ಭಾರತದ ಪರಿಸರ ಮತ್ತು ವನ್ಯಜೀವಿಗಳ ವಿಚಾರದಲ್ಲಿ ಇಂತಹ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸಂಬಂಧ ಪಡೆದಿರುವ ಮೂರನೇ ದೇಶಗಳು ಸಹ ನಮ್ಮ ಪರಿಸರ ಮತ್ತು ಅರಣ್ಯ ವಿಚಾರದಲ್ಲಿ ಮೂಗು ತೂರಿಸಲು ಆರಂಭಿಸಿ ಹಲವಾರು ವರ್ಷಗಳೇ ಕಳೆದಿವೆ. ಇತ್ತೀಚೆಗೆ ಒಂದು ಎನ್‌ಜಿಒದ ಸದಸ್ಯರು ಜೀವವನ್ನು ಒತ್ತೆ ಇಟ್ಟು ವಿಷಕಾರಿ ಹಾವು ಸಂರಕ್ಷಿಸುವ ದೃಶ್ಯವನ್ನು ವೀಡಿಯೊ ಮಾಡಿ ಹರಿಬಿಟ್ಟಿದ್ದರು. ನಂತರ ಗೊತ್ತಾಗಿದ್ದು ಆ ವೀಡಿಯೊ ಸಂಪೂರ್ಣ ನಕಲಿಯೆಂದು! ಅಂತಹ ವೀಡಿಯೊಗಳನ್ನು ತೋರಿಸಿ ಸೇವಾ ಸಂಸ್ಥೆಗಳು ದಾನಿಗಳಿಂದ ಹಣ ಪಡೆಯುತ್ತವೆೆ.
ಅಂಕಿ-ಅಂಶಗಳ ಪ್ರಕಾರ ಒಂದು ದೇಶವು ಸುಭಿಕ್ಷವಾಗಿರಲು ಹೆಚ್ಚುಕಡಿಮೆ ಶೇ. ಮೂವತ್ತನಾಲ್ಕು ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಡುಗಳನ್ನು ತನ್ನ ಭೌಗೋಳಿಕ ವ್ಯಾಪ್ತಿಯಲ್ಲಿ ಹೊಂದಿರಬೇಕಾಗುತ್ತದೆ. ಆದರೆ ಇತ್ತೀಚಿನ ಪ್ರಕಾರ ಇದರ ಪ್ರಮಾಣ ಭಾರತದಲ್ಲಿ ಶೇ. 26ಕ್ಕೆ ಇಳಿದಿದೆ. ಹೆಚ್ಚಿನ ಜಲಾಶಯಗಳು, ಹೋಂಸ್ಟೇಗಳು, ರೆಸಾರ್ಟ್‌ಗಳು ಹಸಿರು ಪ್ರವಾಸೋದ್ಯಮ, ಕಾಡು ಪ್ರವಾಸೋದ್ಯಮ ಕಾಡುಮನೆ ಇತರ ಅಭಿವೃದ್ಧಿ ಕಾರ್ಯಗಳು ಅರಣ್ಯದಲ್ಲಿ ಪ್ರಾರಂಭವಾದಾಗ ಅರಣ್ಯ ಮತ್ತು ವನ್ಯಜೀವಿ ಎರಡಕ್ಕೂ ಅಧಿಕೃತವಾಗಿ ಕುತ್ತು ಬಂದಿದ್ದು ನಿಜ. ಇಂತಹ ಹಲವಾರು ಯೋಜನೆಗಳಿಂದ ಸರಕಾರದ ಬೊಕ್ಕಸ ತುಂಬಿದ್ದಂತೂ ನಿಜ. ಜೊತೆಗೆ ಪರಿಸರದ ರಕ್ಷಣೆ ಹೋರಾಟದಲ್ಲಿ ಮೂರನೇ ಮಂದಿ ಸಹ ತಮ್ಮ ಜೇಬನ್ನು ತುಂಬಿಸಿಕೊಂಡರು. ಪರಿಸರ-ವನ್ಯಜೀವಿ ಸಂಬಂಧಪಟ್ಟ ಯಾವುದೇ ಹೊಸ ಯೋಜನೆ ಬಂದರೂ ಅಲ್ಲಿ ರಾತ್ರೋರಾತ್ರಿ ನಕಲಿ ಹೋರಾಟಗಾರರು ತಾತ್ಕಾಲಿಕವಾಗಿ ಹುಟ್ಟಿಕೊಳ್ಳುತ್ತಾರೆ. ಅನವಶ್ಯಕವಾಗಿ ಗುಲ್ಲು ಎಬ್ಬಿಸಿ ನ್ಯಾಯಾಲಯದ ಬಾಗಿಲು ತಟ್ಟುತ್ತಾರೆ. ಕೆಲವು ಪರಿಸರ ಹೋರಾಟಗಾರರು ವನ್ಯಜೀವಿ ಗಳಿಗಿಂತ ಅಪಾಯಕಾರಿಗಳಾಗಿ ಬದಲಾಗಿದ್ದೇ ಇಲ್ಲಿ. ಈ ಮಧ್ಯೆ ಹೊಟ್ಟೆಪಾಡಿಗಾಗಿ ಅರಣ್ಯವನ್ನು ಅವಲಂಬಿಸಿರುವ ಬಡಜನರು ಮತ್ತು ಆದಿವಾಸಿಗಳದ್ದು ಇಲ್ಲಿ ಮೂಕಪ್ರೇಕ್ಷಕರ ಪಾತ್ರ. ನೂರಾರು ವರ್ಷಗಳಿಂದ ಪರಿಸರ ಮತ್ತು ಕಾಡು ಪ್ರಾಣಿಗಳೊಂದಿಗೆ ಬದುಕನ್ನು ಕಟ್ಟಿಕೊಂಡ ಜನರು ಇಂದು ಅವುಗಳ ರಕ್ಷಣೆಗೆ ಬಂದ ಕೆಲವರನ್ನು ನೋಡಿ ಭಯ ಪಡುವಂತಹ ವಾತಾವರಣ ಸೃಷ್ಟಿಯಾಗಿದ್ದು ಮಾತ್ರ ಅಷ್ಟೇ ಸತ್ಯ. ಈ ಮಧ್ಯೆ ಇದುವರೆಗೂ ಜನಮಾನಸದಿಂದ ದೂರ ಇದ್ದ ಅರಣ್ಯ ಇಲಾಖೆ ದಿಢೀರೆಂದು ಬೆಳಕಿಗೆ ಬರಲು ಆರಂಭವಾಯಿತು. ರಾಜ್ಯದ ಲಕ್ಷಾಂತರ ಚದರ ಕಿಲೋಮೀಟರ್ ಅರಣ್ಯ ರಕ್ಷಣೆಯ ಜವಾಬ್ದಾರಿ ಹೊತ್ತ ಇಲಾಖೆ ಇದು. ಮೊದಲೆಲ್ಲಾ ಅರಣ್ಯ ಇಲಾಖೆಗೆ ಸರಕಾರ ಬಜೆಟ್‌ನಲ್ಲಿ ಅಷ್ಟೇನೂ ಹಣ ನೀಡುತ್ತಿರಲಿಲ್ಲ. ಆದರೆ ಪರಿಸರ ಮತ್ತು ವನ್ಯಜೀವಿಗಳ ಸಂಘರ್ಷ, ಇದರ ಹೆಸರಿನಲ್ಲಿರುವ ಚಳವಳಿಗಳು ಮತ್ತು ಹಣದ ಅರಿವು ಹೋರಾಟಗಳು, ನ್ಯಾಯಾಲಯದ ಮಧ್ಯ ಪ್ರವೇಶ ಹೆಚ್ಚಾದಂತೆ ಸರಕಾರವು ಸಹ ಈ ಇಲಾಖೆಯನ್ನು ರಿಪೇರಿ ಮಾಡಲು ಆರಂಭಿಸಿತು. ಅರಣ್ಯ ಸಂರಕ್ಷಣೆ ಕಾಯ್ದೆಗಳು ಬಿಗಿ ಆಗತೊಡಗಿತು. ಅಖಿಲ ಭಾರತೀಯ ಸೇವೆಗಳು ಆರಂಭವಾದವು. ನೇಮಕಾತಿಗಳು ನಡೆದವು, ಕೋಟ್ಯಂತರ ಹಣವನ್ನು ಬಜೆಟ್‌ನಲ್ಲಿ ಸರಕಾರ ಇಡಲು ಆರಂಭಿಸಿತು. ಇಷ್ಟೆಲ್ಲ ಮಾಡಿದ್ದೇ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ. ಕೆಲವೊಂದು ದಾಖಲೆಗಳ ಪ್ರಕಾರ ಒಂದು ವರ್ಷಕ್ಕೆ ಅರಣ್ಯ ಇಲಾಖೆ ಸರಕಾರಕ್ಕೆ ಕಡಿಮೆ ಎಂದರೆ ರೂ. 3,000 ಕೋಟಿಗಿಂತ ಹೆಚ್ಚಿನ ಆದಾಯವನ್ನು ಕೊಡುತ್ತದೆ. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ರಾಜ್ಯದ ಅರಣ್ಯ ಶೇ. ಪ್ರಮಾಣ ತುಂಬಾ ಗಂಭೀರ ಮಟ್ಟಕ್ಕೆ ಕುಸಿದಿರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈಗ ಅರಣ್ಯ ಇಲಾಖೆ ಒಂದು ಬೃಹತ್ ಇಲಾಖೆ ಯಾಗಿ ಪರಿವರ್ತನೆ ಹೊಂದಿದ್ದು ತಜ್ಞರ ಪ್ರಕಾರ ಈ ಇಲಾಖೆಯನ್ನು ಸಾಕಲೆಂದೇ ಅರಣ್ಯಗಳಿಂದ ಬರುವ ಆದಾಯವನ್ನು ಬಳಸಿಕೊಳ್ಳುತ್ತಿದೆ ಎನ್ನಲಾಗುತ್ತದೆ. ಇಲ್ಲಿ ಅದಕ್ಕಿಂತ ಬಹುಮುಖ್ಯ ಸಮಸ್ಯೆಯೆಂದರೆ ಇತ್ತೀಚಿನ ಕೆಲವು ವರದಿಗಳ ಪ್ರಕಾರ ಅರಣ್ಯ ಇಲಾಖೆಯ ಕೆಲವರು ಟಿಂಬರ್ ಮಾಫಿಯಾ, ಬೇಟೆೆ, ಬೆಲೆಬಾಳುವ ಮರಗಳ ಕಳ್ಳ ಸಾಗಣೆೆ, ಅರಣ್ಯ ಒತ್ತುವರಿ ಇತ್ಯಾದಿ ವಿಚಾರಗಳಲ್ಲಿ ಘಾತಕ ಶಕ್ತಿಗಳನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವುದು ಇಂದು ರಹಸ್ಯವಾಗಿ ಉಳಿದಿಲ್ಲ. ಪರಿಸರ ಮತ್ತು ವನ್ಯಜೀವಿಗಳ ಹೊಳಪಿಗೆ ಹೋರಾಡುತ್ತೇವೆ ಎಂದು ಟೊಂಕ ಕಟ್ಟಿಕೊಂಡು ನಿಂತಿರುವ ಕೆಲವು ಎನ್‌ಜಿಒಗಳು ಮತ್ತು ಇತರರ ಇತಿಹಾಸವನ್ನು ಕೆದಕುತ್ತಾ ಹೋದರೆ ಖಂಡಿತವಾಗಿಯೂ ಬಹಳಷ್ಟು ಬೆಚ್ಚಿಬೀಳುವಂತಹ ಸಂಗತಿಗಳು ಬೆಳಕಿಗೆ ಬರುತ್ತವೆ. ಸಂಸ್ಥೆಗಳ ವಾರ್ಷಿಕ ಆಡಿಟ್ ವರದಿಯನ್ನು ಗಮನಿಸಿದರೆ ಕೋಟಿ ಕೋಟಿ ಹಣ ವಿದೇಶಗಳಿಂದ ಬಂದಿರುತ್ತವೆ. ಯಾರಾದರೂ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಹೊರಟರೆ ಇವರ ದರ್ಶನ ಪಡೆಯುವ ಪರಿಸ್ಥಿತಿ ಇದೆ. ಇವರು ಭಾರತದ ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಯಾವ-ಯಾವ ರೀತಿ ವಿದೇಶಿ ಧನ ಸಹಾಯ ಸಂಸ್ಥೆಗಳ ಕಿವಿಯನ್ನು ಊದಿದ್ದಾರೋ ಆ ದೇವರಿಗೆ ಗೊತ್ತು. ಹಾಗಾಗಿ ಇಂದು ದೇಶದ ಪರಿಸರ ಮತ್ತು ವನ್ಯಜೀವಿಗಳ ನೀತಿ-ನಿರೂಪಣೆ ವಿಚಾರದಲ್ಲಿ ಸರಕಾರವೇ ಪರಿಸರ ಹೋರಾಟಗಾರರಿಗೆ ಮಣಿಯುವಂತಹ ವಾತಾವರಣ ಉಂಟಾಗಿದೆ. ಆದಿವಾಸಿಗಳಿಗೆ ಅರಣ್ಯ ಹಕ್ಕು ಪತ್ರಗಳನ್ನು ನೀಡುವ ವಿಚಾರದಲ್ಲಿ ಸಹ ಕೆಲವು ಸಂಸ್ಥೆಗಳು ಕೋರ್ಟಿನ ಬಾಗಿಲು ತಟ್ಟಿ ಆ ವಿಚಾರವನ್ನು ರಾಡಿ ಮಾಡಿ ಆದಿವಾಸಿಗಳ ಬದುಕ್ಕನ್ನೇ ಮೂರಾಬಟ್ಟೆ ಮಾಡಿವೆ. ಅರಣ್ಯದ ಉಪ ಉತ್ಪನ್ನಗಳ ಮೇಲೆ ಜೀವನ ಕಟ್ಟಿಕೊಂಡಿದ್ದ ಸಾವಿರಾರು ಆದಿವಾಸಿಗಳ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಕೆಲವು ಸಂಸ್ಥೆಗಳು ನೇರವಾಗಿ ಮಾಡಿರುವುದು ಸುಳ್ಳಲ್ಲ. ಕೆಲವೊಮ್ಮೆ ಸರಕಾರಗಳು ಸಹ ಈ ಸ್ವಯಂ ಸೇವಾ ಸಂಸ್ಥೆಗಳ ಮಾತುಗಳನ್ನೇ ಕೇಳುತ್ತವೆ. ಅಷ್ಟರಮಟ್ಟಿಗೆ ಇವುಗಳು ಕಾಡಿನಲ್ಲಿ ಬೇರುಬಿಟ್ಟಿವೆ. ಇಂದು ಹೆಚ್ಚಿನ ಪರಿಸರ ಚಳವಳಿಗಳು ರಾಜಕೀಯ- ಅರ್ಥವ್ಯವಸ್ಥೆಯ ಮುಂದುವರಿದ ಭಾಗವಾಗಿ ಬದಲಾಗಿದೆ. ಇಂತಹ ಹೋರಾಟಗಳಲ್ಲಿ ರಾಜಕೀಯ ಪಿತೂರಿ ಮತ್ತು ಹಣದ ಹೊಳೆ ಎರಡೂ ಇರುತ್ತದೆ. ಜನಸಾಮಾನ್ಯರಿಗೆ ಇದರ ಬಗ್ಗೆ ಅರಿವಿರುವುದಿಲ್ಲ ಅಷ್ಟೇ. ಇದೆಲ್ಲವನ್ನೂ ಗಮನಿಸಿದರೆ ಪರಿಸರ ಮತ್ತು ವನ್ಯಜೀವಿಗಳ ರಕ್ಷಕರೇ ಇದೀಗ ಒಂದು ರೀತಿಯಲ್ಲಿ ಅಪಾಯಕಾರಿಗಳಾಗಿ ಬದಲಾಗುತ್ತಿರುವುದು ಸತ್ಯ ಎನ್ನುತ್ತಾರೆ ಕೆಲವು ತಜ್ಞರು.
ಇತ್ತೀಚಿನ ದಿನಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಅರಣ್ಯ ಇಲಾಖೆಯ ವರದಿಗಳ ಪ್ರಕಾರ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 103 ರೈತರು, ಕೂಲಿ ಕಾರ್ಮಿಕರು ಮತ್ತು ಇತರರು ಕಾಡು ಪ್ರಾಣಿಗಳಿಂದ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಎಕರೆ ಕೃಷಿ ಬೆಳೆ ನಾಶವಾಗಿದೆ. ಸಾಕು ಪ್ರಾಣಿಗಳನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಮಂದಿ ವನ್ಯಜೀವಿಗಳ ನಿರಂತರ ದಾಳಿಯಿಂದ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಕಾಡು ಪ್ರಾಣಿಗಳ ಹಾವಳಿಯಿಂದ ಪ್ರಾಣ ಕಳೆದುಕೊಂಡಾಗ ತಕ್ಷಣ ಬರುವ ಅಧಿಕಾರಿಗಳು ಒಂದಿಷ್ಟು ಹಣವನ್ನು ಪರಿಹಾರದ ರೂಪದಲ್ಲಿ ನೀಡಿ ಫೋಟೊ ತೆಗೆಸಿ ಅಲ್ಲಿಂದ ಮಾಯವಾಗುತ್ತಾರೆ. ಮತ್ತೆ ಅವರು ಕಾಣಿಸಿಕೊಳ್ಳುವುದು ಈ ರೀತಿಯ ಘಟನೆ ಮತ್ತೆ ನಡೆದಾಗ ಮಾತ್ರ. ಮಾನವ ವನ್ಯಜೀವಿಗಳ ಸಂಘರ್ಷ ಕಳೆದ ಒಂದೂವರೆ ದಶಕಗಳಿಂದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದರೂ ಪರಿಸರ ಸಂಸ್ಥೆಗಳು ಇದರ ಬಗ್ಗೆ ಗಂಭೀರ ಧ್ವನಿ ಎತ್ತಿಲ್ಲ. ಇದರ ತಡೆಗೆ ಬೇಕಾದ ವಿಚಾರಗಳ ಕುರಿತು ಸರಕಾರದ ಮೇಲೆ ಒತ್ತಡ ಹಾಕುವುದಿಲ್ಲ. ಏಕೆಂದರೆ ಕೆಲವರಿಗೆ ಇಂತಹ ಸಂಗತಿಗಳು ಸಾಧ್ಯವಾದಷ್ಟು ನಡೆಯುತ್ತಲೇ ಇರಬೇಕು. ಆಗ ಮಾತ್ರ ಅವರಿಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯ. ಇಂತಹ ಸಂಘರ್ಷಗಳು ಕಡಿಮೆಯಾದರೆ ಅವರಿಗೆ ಕೆಲಸವೇ ಇರುವುದಿಲ್ಲ. ಕೆಲಸವಿಲ್ಲ ಎಂದರೆ ವಿದೇಶಗಳಿಂದ ಹಣ ಬರುವುದಿಲ್ಲ.
ಇಂದು ಹೆಚ್ಚಿನ ಅರಣ್ಯ ಸಂರಕ್ಷಣೆ ಯೋಜನೆಗಳ ಮುಖ್ಯ ಸಮಸ್ಯೆ ಏನೆಂದರೆ ಅವುಗಳು ಸ್ಥಳೀಯ ಸಮುದಾಯಗಳ ಸಹಭಾಗಿತ್ವದಲ್ಲಿ ನಡೆಯುವುದಿಲ್ಲ. ಕೇವಲ ಸ್ವಯಂಸೇವಾ ಸಂಸ್ಥೆಗಳು ಮತ್ತು ಸರಕಾರದ ಕಣ್ಗಾವಲಿನಲ್ಲಿ ನಡೆಯುತ್ತವೆ. ಸರಕಾರದ ನೀತಿ ನಿರೂಪಣೆಗಳು ಏಕರೂಪತೆಯನ್ನು ಹೊಂದಿರುವುದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ. ಇಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಬೇಕಾಗಿರುವುದು ಪ್ರಾಮಾಣಿಕವಾದ ಸಾಮಾಜಿಕ ಅರಣ್ಯ ಯೋಜನೆಗಳು. ಇವುಗಳು ಸರಿಯಾಗಿ ಕಾರ್ಯಗತವಾದರೆ ಸ್ವಾಭಾವಿಕವಾಗಿ ಮಾನವ ವನ್ಯಜೀವಿ ಸಂಘರ್ಷ ಕಡಿಮೆಯಾಗಿ ಪರಿಸರ ಸಹ ಉಳಿಯಬಲ್ಲದು.