varthabharthi


ಅನುಗಾಲ

ಮತದಾರನ ಮನದಲ್ಲಿರುವುದೇನು?

ವಾರ್ತಾ ಭಾರತಿ : 17 Mar, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ರಾಜ್ಯಗಳ ಚುನಾವಣೆಯಲ್ಲಿ ಅಗತ್ಯ ಬಿದ್ದರೆ ಹೊಂದಾಣಿಕೆಯನ್ನು ಮಾಡಿ ಹಿಂದೆ ನಿಲ್ಲಬೇಕಾಗುತ್ತದೆಂಬ ರಾಜಕಾರಣವನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಲೇ ಇಲ್ಲ ಮತ್ತು ಏಕಕಾಲಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಭಿನ್ನ ಸೂತ್ರಗಳನ್ನು ಅಳವಡಿಸಿಕೊಂಡರೆ ಮತದಾರರು ನಂಬುವುದಿಲ್ಲವೆಂಬುದನ್ನು ಮರೆಯಿತು. ಇದರಿಂದಾಗಿ ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಪಕ್ಷದೊಂದಿಗೆ ಹೊಂದಾಣಿಕೆಯನ್ನು ಮಾಡುತ್ತಲೇ ಕೇರಳದಲ್ಲಿ ಅದನ್ನು ವಿರೋಧಿಸಿತು. ಈ ವೈರಿಯ ವೈರಿ ಮಿತ್ರ ಎಂಬ ಸೂತ್ರ ಅದಕ್ಕೇ ಮುಳುವಾಗುತ್ತ ಬಂದಿದೆ. ಕಳೆದ ಅನೇಕ ಚುನಾವಣೆಗಳಲ್ಲಿ ಒಂದರ ಬಳಿಕ ಇನ್ನೊಂದರಲ್ಲಿ ಅದರ ಶಕ್ತಿ ಕುಂದುತ್ತಲೇ ಸಾಗಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾದ ಚುನಾವಣೆಗಳು ಮುಗಿದಿವೆ. ಪಂಜಾಬ್ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲೂ ಭಾರತೀಯ ಜನತಾ ಪಕ್ಷವು ನಿರೀಕ್ಷೆಯನ್ನೂ ಮೀರಿ ಗೆದ್ದಿದೆ. ಪಂಜಾಬಿನಲ್ಲಿ ಆಪ್ ಪಕ್ಷವು ಭಾರೀ ವಿಜಯ ಸಾಧಿಸಿದೆ. ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ಹೀನಾಯ ಸೋಲು ಕಂಡಿದೆ.

ಇದು 2024ರ ಒಕ್ಕೂಟ ಸರಕಾರದ ಚುನಾವಣೆಯ ದಿಕ್ಸೂಚಿಯೇ? ಈಗಲೇ ಹೇಳಲು ಸಾಧ್ಯವಿಲ್ಲ. ಏಕೆಂದರೆ ಈ ದೇಶದ ಮತದಾರರು ಯಾವುದೇ ಪ್ರಜ್ಞಾವಂತ ಲೆಕ್ಕಾಚಾರವನ್ನೂ ನಿರೀಕ್ಷೆಯನ್ನೂ ತಲೆಕೆಳಗು ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದ್ದರಿಂದ ಸದ್ಯ ಈ ಫಲಿತಾಂಶದ ಇಕ್ಕಟ್ಟು-ಬಿಕ್ಕಟ್ಟುಗಳನ್ನಷೆ್ಟೀ ಸ್ವಲ್ಪ ಮಟ್ಟಿಗೆ ಚರ್ಚಿಸಬಹುದು.

ಈ ಪೈಕಿ ಮಣಿಪುರದ ಚುನಾವಣೆಯಲ್ಲಿ ಭಾಜಪವು ಗೆಲ್ಲಬಹುದೆಂಬ ನಿರೀಕ್ಷೆಯಿತ್ತು. ಆದರೆ ಇತರ ರಾಜ್ಯಗಳಲ್ಲಿ ಪ್ರತಿಪಕ್ಷಗಳು ತೀವ್ರ ಸ್ಪರ್ಧೆಯನ್ನೊಡ್ಡಬಹುದೆಂದು ಭಾವಿಸಲಾಗಿತ್ತು. ಸಾಮಾನ್ಯ ವೀಕ್ಷಕರ ಅಭಿಪ್ರಾಯದಂತೆ ಉತ್ತರಪ್ರದೇಶದಲ್ಲಿ ಸ್ವಲ್ಪ ಕಷ್ಟಕರವಾದರೂ ಭಾಜಪ ಗೆಲ್ಲಬಹುದು, ಪಂಜಾಬಿನಲ್ಲಿ ಆಪ್ ಪಕ್ಷ ಗೆಲ್ಲಬಹುದು, ಉತ್ತರಾಖಂಡದಲ್ಲಿ ಕಾಂಗ್ರೆಸ್ ಮತ್ತು ಗೋವಾದಲ್ಲಿ ಮಿಶ್ರ ಫಲಿತಾಂಶ ಬರಬಹುದು ಎಂದೇ ಹೇಳಲಾಗುತ್ತಿತ್ತು.

 ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಈ ರಾಜ್ಯಗಳಲ್ಲಿ ರೈತರು ಸಾಕಷ್ಟಿದ್ದುದರಿಂದ ಮತ್ತು ಕಳೆದ ನವೆಂಬರ್‌ನ ವರೆಗೆ ಒಂದು ವರ್ಷ ಕಾಲ ಅವರು ನಡೆಸಿದ ಚಳವಳಿಯು ಅಕ್ಷರಶಃ ಮೋದಿ ಸರಕಾರವನ್ನು ಅಲುಗಾಡಿಸಿದ್ದರಿಂದ ಮತ್ತು ಪ್ರಧಾನಿಯವರೇ ಕೃಷಿ ಕಾನೂನನ್ನು ಹಿಂಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾದ್ದರಿಂದ ಮತ್ತು ಇಷ್ಟಾದರೂ ಕನಿಷ್ಠ ಬೆಂಬಲ ಬೆಲೆ ಘೋಷಣೆಯಾಗದ್ದರಿಂದ ತಾವು ಚಳವಳಿಯನ್ನು ಮುಂದುವರಿಸುವುದಾಗಿ ರೈತ ನಾಯಕರು ಘೋಷಿಸಿದ್ದರಿಂದ ಭಾಜಪವು ತೀವ್ರ ಪ್ರತಿಕೂಲ ಪರಿಣಾಮವನ್ನೆದುರಿಸಬೇಕಾಗಬಹುದೆಂದೂ ಇದರ ಲಾಭವನ್ನು ಪ್ರತಿಪಕ್ಷಗಳು ಪಡೆಯಬಹುದೆಂದೂ ಹೇಳಲಾಗುತ್ತಿತ್ತು. ಉತ್ತರ ಪ್ರದೇಶದಲ್ಲಿ ಬೈಸಿಕಲ್ ಚಿಹ್ನೆಯ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಆರಂಭದಲ್ಲಿ ನಿಧಾನಗತಿಯ ಪ್ರಚಾರವನ್ನು ಹೊಂದಿದ್ದರೂ ಆನಂತರ ಬೈಸಿಕಲ್‌ನ ವೇಗ ಮತ್ತು ವರ್ಚಸ್ಸು ಹೆಚ್ಚಿತ್ತು. ಇದರ ಪ್ರಭಾವದಿಂದಾಗಿ ಅನೇಕ ಭಾಜಪ ನಾಯಕರು ಪಕ್ಷವನ್ನು ತ್ಯಜಿಸಿ ಸಮಾಜವಾದಿ ಪಕ್ಷವನ್ನು ಸೇರಿದರು. ಇತರ ಪಕ್ಷಗಳಾದ ಕಾಂಗ್ರೆಸ್ ಮತ್ತು ಮಾಯಾವತಿಯ ಬಿಎಸ್‌ಪಿ ಮಂದ ಗತಿಯ ಪ್ರಚಾರ ಮತ್ತು ಪತ್ರಿಕಾ ಗೋಷ್ಠಿಯಲ್ಲೇ ತೃಪ್ತರಾದರು. ಕೊನೆಯ ಘಳಿಗೆಯಲ್ಲಿ ಈ ಎರಡೂ ಪಕ್ಷಗಳು ತಾವಿದ್ದೇವೆಂದು ತೋರಿಸಲು ಹೊರಟರೂ ಮುಖ್ಯ ಸ್ಪರ್ಧೆಯು ಭಾಜಪ ಮತ್ತು ಸಮಾಜವಾದಿ ಪಕ್ಷದ ನಡುವೆ ನಿರ್ಮಾಣವಾದಂತಿತ್ತು. ಸಾಕಷ್ಟು ಮುಸ್ಲಿಮ್ ಮತದಾರರಿರುವ ಉತ್ತರ ಪ್ರದೇಶದಲ್ಲಿ ಉವೈಸಿಯ ಎಐಎಂಎಂ ಪಕ್ಷವೂ ತನ್ನ ಟವೆಲನ್ನು ಎಸೆಯಿತು. ಆದರೆ ಭಾಜಪ ಕಳೆದ ಬಾರಿಯಷ್ಟಲ್ಲದಿದ್ದರೂ ಎಲ್ಲರ ನಿರೀಕ್ಷೆಗಳನು್ನ ಸುಳ್ಳಾಗಿಸಿ ಬಹುಮತ ಪಡೆಯಿತು.

ಇದಕ್ಕೆ ನೂರಾರು ಕಾರಣಗಳನ್ನು ಆಯಾಯ ಪಕ್ಷಗಳು ನೀಡಬಹುದು. ಆದರೆ ಪ್ರತಿಪಕ್ಷಗಳ ನಡುವೆ ಹೊಂದಾಣಿಕೆಯಿಲ್ಲದಿರುವುದೇ ಇಂತಹ ಸೋಲಿಗೆ ಕಾರಣವೆಂಬುದು ಸ್ಪಷ್ಟವಾಗಿದೆ. ಮಾಯಾವತಿ ಮತ್ತು ಉವೈಸಿ ತಮ್ಮ ಅಭ್ಯರ್ಥಿಗಳನ್ನು ಹಾಕಿ ಉದ್ದೇಶಪೂರ್ವಕವೋ ಅಥವಾ ಉದ್ದೇಶವಿಲ್ಲದೆಯೋ ಭಾಜಪಕ್ಕೆ ಅನುಕೂಲ ಮಾಡಿಕೊಟ್ಟರೆಂಬುದು ಸ್ಪಷ್ಟವಾಗಿದೆ. ಕೆಲವು ಸ್ಥಾನಗಳು ಕೆಲವೇ ನೂರು ಮತಗಳ ಅಂತರದ ಫಲಿತಾಂಶಗಳನ್ನು ಕಂಡಿವೆ. ಇಲ್ಲೆಲ್ಲ ಮಾಯಾವತಿ ಮತ್ತು /ಅಥವಾ ಉವೈಸಿ ತಮ್ಮ ಶಕ್ತಿಹೀನತೆಯನ್ನು ಬಿಚ್ಚಿ ತೋರಿಸುವುದರೊಂದಿಗೆ ಭಾಜಪದ ಗೆಲುವಿಗೆ ಸಹಕಾರಿಯಾದರು. ಜೊತೆಗೆ ರೈತ ನಾಯಕರು ಭಾಜಪವನ್ನು ವಿರೋಧಿಸುವ ಗೌಜಿ-ಗೋಜಿಯಲ್ಲಿ ಇತರ ಯಾವುದೇ ಪಕ್ಷದ ಪರವಾಗಿ ನಿಲ್ಲದೆ ಗೊಂದಲಮಯವಾಗಿ ಮತ್ತೆ ಭಾಜಪಕ್ಕೆ ಅನುಕೂಲರಾದರು. ಹೀಗಾಗಿ ರೈತ ಚಳವಳಿಯು ಉತ್ತರ ಪ್ರದೇಶದಲ್ಲಿ ಯಾವ ಪರಿಣಾಮವನ್ನೂ ಬೀರದಾಯಿತು. ಜೊತೆಗೆ ಅಭಿವೃದ್ಧಿ, ನಿರುದ್ಯೋಗ, ಬಡತನ ಮುಂತಾದ ವಿದ್ಯಮಾನಗಳನ್ನು ಮೀರಿ ಮತೀಯ ಪ್ರಜ್ಞೆಯು ಕೆಲಸಮಾಡಿತು. ಯೋಗಿಯ 80/20 ಬೇರೇನಲ್ಲದಿದ್ದರೂ ಚುನಾವೆಯನ್ನು ಗೆಲ್ಲಲು ಸಹಕಾರಿಯಾಯಿತು.

ಕಾಂಗ್ರೆಸ್ ಪಕ್ಷವು ತನ್ನನ್ನು ತಾನು ಪರೀಕ್ಷೆಗೊಳಪಡಿಸಲೇ ಇಲ್ಲ. ಅದಿನ್ನೂ ತನ್ನ ದೀರ್ಘ ಇತಿಹಾಸದ ವೈಭವೀಕರಣದಲ್ಲೇ ತಲ್ಲೀನವಾಗಿದೆ. ಜನರ ಬಡತನ, ಅಜ್ಞಾನವೇ ಬಂಡವಾಳಗಳಾಗಿದ್ದ ಮತ್ತು ಕಾಂಗ್ರೆಸಿನ ಹೊರತು ಇತರ ಪಕ್ಷಗಳು ನಿಶ್ಶಕ್ತವಾಗಿದ್ದ ಕಾಲದ ಚುನಾವಣೆಗಳು ಬೇರೆ; 1975ರ ಆನಂತರದ ಚುನಾವಣಾ ರಂಗವೇ ಬೇರೆ. ತುರ್ತುಸ್ಥಿತಿಯ ಆನಂತರದ ಚುನಾವಣೆಯಲ್ಲಿ ಪ್ರತಿಪಕ್ಷಗಳೆಲ್ಲವೂ ಒಟ್ಟಾದರೆ (ಅವು ಒಟ್ಟಾದವು ಮಾತ್ರವಲ್ಲ, ಒಂದಾದವು!) ಕಾಂಗ್ರೆಸನ್ನು ಸೋಲಿಸಬಹುದು ಎಂದು ಮತದಾರರಿಗೆ ಮೊದಲ ಬಾರಿಗೆ ತಿಳಿವಳಿಕೆ ಬಂತು. ಈ ತಿಳಿವಳಿಕೆಯು ಕಾಂಗ್ರೆಸ್ ಮಾತ್ರವಲ್ಲ ಆಡಳಿತದಲ್ಲಿರುವ ಯಾವುದೇ ಪಕ್ಷವನ್ನು ಸೋಲಿಸಲು ಸಹಾಯವಾಗಬಹುದು ಎಂಬ ಹೊಸ ಪ್ರಜ್ಞೆ ಬಂದದ್ದು ಕಾರಣವಾಗಿ ಯಾವುದೇ ರಾಷ್ಟ್ರೀಯ ಪಕ್ಷವೂ ಎಲ್ಲಾ ರಾಜ್ಯಗಳಲ್ಲಿ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಲು ಸಾಧ್ಯವಿಲ್ಲವೆಂಬ ಹೊಸ ಚರಿತ್ರೆ, ರಾಜಕೀಯ ಆರಂಭವಾಯಿತು. ಒಡಿಶಾ ನವೀನ್ ಪಟ್ನಾಯಕ್ ಪಾಲಾಯಿತು; ಪಶ್ಚಿಮ ಬಂಗಾಳದಲ್ಲಿ ದೀದಿಯ ತೃಣಮೂಲ ಕಾಂಗ್ರೆಸ್ ಅಧಿಕೃತವಾಯಿತು; ದಕ್ಷಿಣ ಭಾರತದಲ್ಲಂತೂ ಹಳೆಯ ಮತ್ತು ಹೊಸ ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು, ಕೇರಳ ಇವೆಲ್ಲ ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟವು. ಕೆಲವೇ ಕೆಲವು ರಾಜ್ಯಗಳು ಮಾತ್ರ ರಾಷ್ಟ್ರೀಯ ಪಕ್ಷಗಳ ತುತ್ತಾದವು.

 ರಾಜ್ಯಗಳ ಚುನಾವಣೆಯಲ್ಲಿ ಅಗತ್ಯ ಬಿದ್ದರೆ ಹೊಂದಾಣಿಕೆಯನ್ನು ಮಾಡಿ ಹಿಂದೆ ನಿಲ್ಲಬೇಕಾಗುತ್ತದೆಂಬ ರಾಜಕಾರಣವನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಲೇ ಇಲ್ಲ ಮತ್ತು ಏಕಕಾಲಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಭಿನ್ನ ಸೂತ್ರಗಳನ್ನು ಅಳವಡಿಸಿಕೊಂಡರೆ ಮತದಾರರು ನಂಬುವುದಿಲ್ಲವೆಂಬುದನ್ನು ಮರೆಯಿತು. ಇದರಿಂದಾಗಿ ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಪಕ್ಷದೊಂದಿಗೆ ಹೊಂದಾಣಿಕೆಯನ್ನು ಮಾಡುತ್ತಲೇ ಕೇರಳದಲ್ಲಿ ಅದನ್ನು ವಿರೋಧಿಸಿತು. ಈ ವೈರಿಯ ವೈರಿ ಮಿತ್ರ ಎಂಬ ಸೂತ್ರ ಅದಕ್ಕೇ ಮುಳುವಾಗುತ್ತ ಬಂದಿದೆ. ಕಳೆದ ಅನೇಕ ಚುನಾವಣೆಗಳಲ್ಲಿ ಒಂದರ ಬಳಿಕ ಇನ್ನೊಂದರಲ್ಲಿ ಅದರ ಶಕ್ತಿ ಕುಂದುತ್ತಲೇ ಸಾಗಿದೆ.

ಇನ್ನೂ ಒಂದು ಅಂಶವು ಕಾಂಗ್ರೆಸ್ ಪಕ್ಷವನ್ನು ಕಾಡುತ್ತಲೇ ಬಂದಿದೆ. ಕುಟುಂಬ ರಾಜಕಾರಣದ ಕಲೆಯನ್ನು ದೇಶದ ಬಹುತೇಕ ಎಲ್ಲ ಪಕ್ಷಗಳೂ ಹೊಂದಿವೆಯಾದರೂ ಅದರ ಕೃತಿಸ್ವಾಮ್ಯ ಮಾತ್ರ ಕಾಂಗ್ರೆಸಿಗೇ ಅಂಟಿದೆ. ಈ ಪರಿಸ್ಥಿತಿಯನ್ನು ಕಾಂಗ್ರೆಸ್ ಮನಗಂಡಂತಿಲ್ಲ. ಅದರ ನಾಯಕತ್ವವನ್ನು ಅದರ ಪಕ್ಷದಲ್ಲೇ ಜಿ-23ರ ಅನೇಕ ಅನುಭವಿ ಹಳಬರು ಪ್ರಶ್ನಿಸತೊಡಗಿದರು. ಆದರೆ ಉಳಿದವರು ಸದಾ ಗುಲಾಮರೇ ಅಗಿ ಉಳಿದಿರುವುದರಿಂದ ಪಕ್ಷದ ನಾಯಕತ್ವವು ಬದಲಾಗಲೇ ಇಲ್ಲ.

ಭಾಜಪದ ಸಾಕಷ್ಟು ಧುರೀಣರು ಕುಟುಂಬ ರಾಜಕಾರಣದವರೇ. ದೇವೇಗೌಡರ ಜೆಡಿಎಸ್‌ನಂತಹ ಪ್ರಾದೇಶಿಕ ಪಕ್ಷವಂತೂ ಒಂದೇ ಕುಟುಂಬದ ಆರೋ-ಏಳೋ ಸಂಸದ/ಶಾಸಕರನ್ನು ಹೊಂದಿ ವಿಶ್ವಕುಟುಂಬಿಯಾಗಿದೆ. ಆಪ್ ಸೇರಿದಂತೆ ಇತರ ಪ್ರಾದೇಶಿಕ ಪಕ್ಷಗಳೂ ಏಕವ್ಯಕ್ತಿಯ ಪ್ರಭಾವದಿಂದ ನಡೆಯುವವು. ಹೀಗಾಗಿ ನೈಜ ಪ್ರಜಾಪ್ರಭುತ್ವವು ಯಾವುದೇ ಪಕ್ಷಗಳಲ್ಲಿಲ್ಲದಿದ್ದರೂ ಮತದಾರರು ಅದನ್ನು ಗಣಿಸಿದಂತಿಲ್ಲ. ಹತ್ತಾರು ಬಗೆಯ ವಿಷಯಗಳಲ್ಲಿ ನಮಗೆ ಪ್ರಿಯವಾದ್ದನ್ನಲ್ಲ-ಸಹನೀಯವಾದ್ದನ್ನು ಸ್ವೀಕರಿಸಬೇಕಷ್ಟೇ.

ಆದರೆ ಕಾಂಗ್ರೆಸ್ ಈ ಜಾಡ್ಯವನ್ನು ಬಹುಕಾಲದಿಂದ ತಲೆಮಾರುಗಳಷ್ಟು ಕಾಲ ಆನುವಂಶಿಕದಂತೆ ನಡೆಸಿಕೊಂಡು ಬಂದ ಏಕೈಕ ರಾಷ್ಟ್ರೀಯ ಪಕ್ಷ. ಹೀಗೆ ಹೇಳುವಾಗ ಅದರಷ್ಟು ದೀರ್ಘ ಚರಿತ್ರೆ ಇತರ ಯಾವ ಪಕ್ಷಗಳಿಗೂ ಇಲ್ಲವೆಂಬುದನ್ನು ಮರೆಯಲಾಗದು, ಭಾಜಪವು ಒಂದೆರಡು ದಶಕಗಳಲ್ಲೇ ಕೊಳೆಯಲಾರಂಭಿಸಿದೆಯೆಂಬುದನ್ನು ಇಲ್ಲಿ ಸ್ಮರಿಸಬೇಕು. ಅದರಲ್ಲೀಗ ಸಾಕಷ್ಟು ಪ್ರಮಾಣದ ಚುನಾಯಿತ ಧುರೀಣರು ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದವರೇ. ಕಮ್ಯುನಿಸ್ಟರು ಅಧಿಕಾರದ ಬಹು ಸನಿಹಕ್ಕೆ ಬಂದಾಗ ಜ್ಯೋತಿಬಸು ಪ್ರಧಾನಿಯಾಗುವುದನ್ನು ತಪ್ಪಿಸಿ(ಕೊಂಡು) ಈಗ ಕೇರಳಕ್ಕೆ ಸೀಮಿತವಾಗಿದ್ದಾರೆ. ಇನ್ನುಳಿದ ಪಕ್ಷಗಳು ಯಾವಾಗ ಯಾರ ಜೊತೆಗೆ ಹೋಗುತ್ತಾರೆಂದು ನಂಬಲಾಗದು. ಪಿಡಿಪಿ ಮತ್ತು ಭಾಜಪಗಳು ಜೊತೆಗೂಡಿದ್ದನ್ನು ನೋಡಿದರೆ ಈ ದೇಶದ ಸೈದ್ಧಾಂತಿಕ ರಾಜಕೀಯದ ತಳಮಟ್ಟ ಕಾಂಗ್ರೆಸ್‌ಗಿಂತ ಬೇರೆಯಲ್ಲವೆಂಬುದು ಗೊತ್ತಾಗುತ್ತದೆ. ಕಾಂಗ್ರೆಸ್ ಮುಳುಗುವ ಹಡಗಿನಂತೆ ವರ್ತಿಸುತ್ತಿದೆ. ಅದರ ಅನೇಕ ನಾಯಕರು ಮನಬಂದಂತೆ ಪರಸ್ಪರ ಟೀಕೆಯಲ್ಲಿ ಮಗ್ನರಾಗಿದ್ದಾರೆ. ಪಕ್ವತೆ ಹೋಗಲಿ, ತಂತ್ರಗಾರಿಕೆಯ ನಾಯಕತ್ವವೂ ಅದಕ್ಕಿಲ್ಲ. ಸೋನಿಯಾ ರಾಜಮಾತೆಯರಂತೆ ಕಾಣಿಸಿಕೊಳ್ಳುತ್ತಾರೆಯೇ ಹೊರತು ಪಕ್ಷದ ಫಲಾಫಲಗಳಲ್ಲಿ ಮಗ್ನರಾಗಿಲ್ಲ. ರಾಹುಲ್ ಗಾಂಧಿ ಶೇಕ್ಸ್‌ಪಿಯರಿನ ಹ್ಯಾಮ್ಲೆಟ್‌ನಂತೆ ವರ್ತಿಸುವುದನ್ನು ನಿಲ್ಲಿಸಿದರೆ ಪಕ್ಷಕ್ಕಲ್ಲದಿದ್ದರೂ ಅವರಿಗಾದರೂ ಹಿತ. ಒಮ್ಮೆಮ್ಮೆ ವಿವೇಕದ ಮಾತನಾಡಿ ನಾಯಕತ್ವವನ್ನು ತೋರಿಸಿದರೂ ಇದ್ದಕ್ಕಿದ್ದಂತೆ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಹಾರುವುದನ್ನು ರಾಜಕೀಯದಲ್ಲಿ ಯಾರೂ ಸಹಿಸರು. ಪ್ರಿಯಾಂಕಾ ಗಾಂಧಿ ಎಂಬ ಸಾಕಷ್ಟು ನಾಯಕತ್ವದ ಗುಣಗಳನ್ನು ಹೊಂದಿದ ಆದರೆ ಅನಿಶ್ಚಿತತೆಯೇ ಜೀವತಳೆದಂತಿರುವ ಮಹಿಳೆ ಸದ್ಯ ಕಾಂಗ್ರೆಸಿಗೆ ದಾರಿ ತೋರರು. ಆಕೆಯ ಪತಿಯೂ ಸಲ್ಲದ ಹಗರಣಗಳಲ್ಲಿ ತೊಡಗಿಕೊಳ್ಳುುದು ಪಕ್ಷಕ್ಕೆ ಮಾರಕವಾಗುತ್ತಿದೆ.

ರಾಜ್ಯಗಳ ನಾಯಕತ್ವದಲ್ಲಿಯೂ ಕಾಂಗ್ರೆಸಿನ ಇಚ್ಛಾಶಕ್ತಿಯು ದಯನೀಯ. ಯುವನಾಯಕರನ್ನು ಬೆಳೆಯಗೊಡದ ಪಕ್ಷ ಕಾಂಗ್ರೆಸ್. ಎಲ್ಲಿ ಬೇಡವೊ ಅಲ್ಲಿ ಹಳಬರನ್ನೇ ಸ್ಥಾಪಿಸಿ, ಎಲ್ಲಿ ಬೇಕೋ ಅಲ್ಲಿ ಅವರ ಸಲಹೆಯನ್ನು ಮಾನಿಸದೆ ಗೊಂದಲದ ಗೂಡು ಮಾತ್ರವಲ್ಲ ಬೀಡಾಗಿದೆ ಕಾಂಗ್ರೆಸ್.

 ಪಂಜಾಬಿನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತು. ಆದರೆ ಚುನಾವಣೆಗೆ ಮುನ್ನವೇ ಅಲ್ಲಿ ಕಾಂಗ್ರೆಸಿನ ಸಹಜ ಲಕ್ಷಣಗಳಲ್ಲೊಂದಾದ ಒಳಜಗಳ ಕಾಣಿಸಿತ್ತು. ಕ್ರಿಕೆಟಿಗ ಮತ್ತು ಕಾಮೆಡಿಗ ನವಜೋತ್ ಸಿಧು ರಾಜ್ಯಾಧ್ಯಕ್ಷರಾದಲ್ಲಿಂದ ಪ್ರತಿಕೂಲ ಸಾಕ್ಷಿಯಂತೆ ವರ್ತಿಸಿದರು. ಕ್ಯಾಪ್ಟನ್ ಅಮರೀಂದರ್ ಸಿಂಗ್ ಬಹುಕಾಲದಿಂದ ಕಾಂಗ್ರೆಸಿನಲ್ಲಿದ್ದವರು. ಪಕ್ಷದ ಉಳಿವಿಗೆ ಅವರ ಅಗತ್ಯವಿದ್ದರೂ ಅವರನ್ನು ಅವಮಾನಿಸಿ ಹೊರಹೋಗುವಂತೆ ಮಾಡಲಾಯಿತು. ಬದಲಿಯಾಗಿ ಮಾಡಿದ ಆಯ್ಕೆ ಕೈಕೊಟ್ಟಿತು. ಈಗ ಅದೂ ಇಲ್ಲ, ಇದೂ ಇಲ್ಲ. ಯಾವುದೇ ಪಕ್ಷವು ಅನೇಕ ಕೊರತೆಗಳನ್ನು, ಲೋಪದೋಷಗಳನ್ನು ಹೊಂದಿರುತ್ತದೆ. ಅಲ್ಲಿ ಎಲ್ಲವೂ ಸರಿಯಿರುವುದಿಲ್ಲವೆಂಬುದು ಎಲ್ಲರಿಗೂ ಗೊತ್ತು. ಮತದಾರರು ಸ್ಪರ್ಧಿಸುವ ಪಕ್ಷಗಳಲ್ಲಿ ಯಾವುದು ಕಡಿಮೆ ಹಾನಿಕಾರಕವೆಂದು ಆಯ್ಕೆ ಮಾಡುತ್ತಾರೆಯೇ ವಿನಃ ಉಪಕಾರಿಯೆಂದಲ್ಲ. ಇದರ ಫಲವನ್ನು ಆಪ್ ಪಡೆಯಿತು. ಅದು ನಿಧಾನವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಆದರೂ ಇದರ ಒಟ್ಟಾೆ ಪರಿಣಾಮ ಈಗಲೇ ಹೇಳಲಾಗದು.

 ಸರಿಯಾದ ಪ್ರತಿಪಕ್ಷಗಳಿಲ್ಲದಿರುವುದು, ಇರುವ ಪ್ರತಿಪಕ್ಷಗಳಲ್ಲೂ ವೈಯಕ್ತಿಕ ಪ್ರತಿಷ್ಠೆಯನ್ನು ಮೀರಿದ ಸಮೂಹಹಿತ, ಸಾಮಾಜಿಕಹಿತ ಇವು ಕಾಣದಿರುವುದು ಒಂದೊಂದು ಪಕ್ಷವನ್ನೂ ಒಂದೊಂದು ದಿಕ್ಕಿನಲ್ಲಿ ಓಡುವಂತೆ ಮಾಡುತ್ತಿದೆ. ತನ್ನ ಒಂದು ಕಣ್ಣು ಕುರುಡಾದರೂ ಸರಿ, ವೈರಿಯ ಎರಡೂ ಕಣ್ಣುಗಳು ಕುರುಡಾಗಲಿ ಎಂಬ ತರ್ಕವನ್ನು ಪ್ರತಿಪಕ್ಷಗಳು ಇಟ್ಟುಕೊಂಡಿವೆ. ಇದರ ಲಾಭವನ್ನು ಭಾಜಪ ಪಡೆದುಕೊಳ್ಳುತ್ತಿದೆ. ಪ್ರತಿಪಕ್ಷಗಳ ಅತೃಪ್ತರು ಮುಕ್ತಿ ಕಾಣುವುದಕ್ಕಾಗಿ ಭಾಜಪದತ್ತಲೇ ಧಾವಿಸುತ್ತಿದ್ದಾರೆ. ಇದು ಇನ್ನೂ ಕೆಲಕಾಲ ಮುಂದುವರಿಯಬಹುದು. ಕಾಲ ಕೆಟ್ಟಿಲ್ಲ. ನಾವು ಕೆಟ್ಟಿದ್ದೇವೆ. ತನ್ನ ಅಗತ್ಯ ಸಮಸ್ಯೆಗಳನ್ನು ನುಂಗಿಕೊಂಡು ಈ ದೇಶದ ಮತದಾರ ಮೂಲಭೂತವಾದದ, ಮತೀಯ, ಜಾತೀಯ ಭ್ರಾಂತಿಯಲ್ಲಿದ್ದಾನೆ. ಇದಕ್ಕೆ ಪೂರಕವಾದ ಎಲ್ಲ ವ್ಯವಸ್ಥೆಗಳೂ ವಿಜೃಂಭಿಸುತ್ತಿವೆ. ಯಾವುದೇ ಸ್ಥಿತಿಯಲ್ಲೂ, ಸಂದರ್ಭದಲ್ಲೂ ಮತದಾರನ ಮನಸ್ಸನ್ನು, ಮಿದುಳನ್ನು ಅಳೆಯಲಾಗದ ಪರಿಸ್ಥಿತಿಯಲ್ಲಿ ಇದು ಒಳ್ಳೆಯದೋ ಕೆಟ್ಟದೋ ಎಂಬುದನ್ನು ಭವಿಷ್ಯವೇ ನಿರ್ಧರಿಸಬೇಕಷ್ಟೇ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)