ಬಂದ್ ಯಾರ ವಿರುದ್ಧವೂ ಅಲ್ಲ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ
ಉಡುಪಿ : ಹಿಜಾಬ್‌ನ ಕುರಿತು ಉಚ್ಚ ನ್ಯಾಯಾಲಯ ನೀಡಿದ ನಿರಾಶಾದಾಯಕ ತೀರ್ಪು ಮುಸ್ಲಿಮ್ ಸಮುದಾಯದ ಸಂವಿಧಾನ ಬದ್ಧ ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕಿಗೆ ಪುರಸ್ಕಾರ ನೀಡದೆ ಸರಕಾರ ಮನಸೋ ಇಚ್ಛೆ ತೆಗೆದುಕೊಂಡ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದಾಗಿದೆ. ತಮ್ಮ ನಿರಾಶೆ ಮತ್ತು ಅಸಮ್ಮತಿ ಪ್ರಕಟಿಸುವುದಕ್ಕಾಗಿ ಮುಸ್ಲಿಮ್ ಸಂಘಟನೆಗಳು ಕರೆ ನೀಡಿದ ಬಂದ್‌ಗೆ ಸಮುದಾಯ ಬಾಂಧವರು ಹಾಗೂ ಇತರ ಸಮಾನ ಮನಸ್ಕರು ತಮ್ಮ ವ್ಯಾಪಾರ ವಹಿವಾಟುಗಳನ್ನು ಮುಚ್ಚಿ ಇಂದಿನ ಬಂದ್‌ಗೆ ಬೆಂಬಲ ನೀಡಿ ಯಶಸ್ವಿಗೊಳಿಸಿ ದ್ದಾರೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತಿಳಿಸಿದೆ.
ಮೊದಲೇ ಸೂಚಿಸಿದಂತೆ ಈ ಬಂದ್ ಯಾರ ವಿರುದ್ಧವು ಆಗಿರಲ್ಲಿಲ್ಲ. ಬಂದ್ ಸಮಯದಲ್ಲಿ ಅಹಿತಕರ ಘಟನೆಗಳು ನಡೆಯದೆ, ಈ ಬಂದ್ ಸತ್ಯ ಹಾಗೂ ಸಾಂವಿಧಾನಿಕ ಸ್ಪೂರ್ತಿಯ ನ್ಯಾಯಕ್ಕಾಗಿ ಆಗ್ರಹಿಸುವ ಒಂದು ಸತ್ಯಾಗ್ರಹ ವಾಗಿತ್ತು. ತಮಗಾಗಿರುವ ನೋವನ್ನು ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆಯ ದಿರುವ ಮೂಲಕ ಸಮುದಾಯ ವ್ಯಕ್ತಪಡಿಸಿದೆ.
ಇದು ಬೀದಿಗಿಳಿಯದೆ, ಘೋಷಣೆಗಳ ಆಡಂಬರವಿಲ್ಲದೆ, ಬಂದ್‌ಗೆ ಸೇರಿ ಕೊಂಡು ಬೆಂಬಲಿಸುವಂತೆ ಬಲವಂತ ಮಾಡದ ಬಂದ್ ಆಗಿತ್ತು. ಗೊಂದಲ ಸೃಷ್ಟಿಯೇ ಬಂದ್ ಎಂಬಂತೆ ನಡೆಸಲ್ಪಡುವ ಸಾಮಾನ್ಯ ಬಂದ್‌ಗಳಿಗೆ ವ್ಯತಿರಿಕ್ತ ವಾಗಿ ವ್ಯವಸ್ಥೆಯ ನಿಲುವುಗಳಿಗೆ ಅಸಮ್ಮತಿಯನ್ನು ಮಾದರಿ ಯೋಗ್ಯವಾಗಿ ವ್ಯಕ್ತಪಡಿಸಿದ್ದಕ್ಕಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕೃತಜ್ಞತೆ ವ್ಯಕ್ತಪಡಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.