ವಿಶ್ವಕರ್ಮ ಪ್ರತಿಭಾ ಪುರಸ್ಕಾರ -ವಿದ್ಯಾರ್ಥಿವೇತನ ವಿತರಣೆ
ಉಡುಪಿ : ಉಡುಪಿ ಜಿಲ್ಲಾ ವಿಶ್ವಕರ್ಮ ಎಜುಕೇಶನಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣಾ ಕಾರ್ಯ ಕ್ರಮವು ಇತ್ತೀಚೆಗೆ ಉಡುಪಿ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರಗಿತು.
ಕಾರ್ಯಕ್ರಮವನ್ನು ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಧರ್ಮದರ್ಶಿ ಎಂ. ಲೋಕೇಶ್ ಆಚಾರ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ಡಾ.ದಾಸ್ ಆಚಾರ್ಯ ವಹಿಸಿದ್ದರು. ಬೆಂಗಳೂರಿನ ಜೈನ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ್ ಬಡಿಗೇರ್ ಮುಖ್ಯ ಅತಿಥಿಯಾಗಿದ್ದರು.
ಈ ಸಂದರ್ಭದಲ್ಲಿ ಸಮಾಜದ ೧೫೬ ವಿದ್ಯಾರ್ಥಿಗಳಿಗೆ ೬.೧೬ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು. ತೆಂಕನಿಡಿಯೂರಿನ ಸ್ನಾತಕೋತ್ತರ ಅಧ್ಯ ಯನ ಕೇಂದ್ರದ ಎಂಎ ವಿದ್ಯಾರ್ಥಿನಿ ಸ್ವಾತಿ ಸಿದ್ಧಾಪುರಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಂಗಳೂರು ವಿವಿ ೨೦೧೯-೨೦ನೆ ಸಾಲಿನ ಎಂ.ಕಾಂ. ಪರೀಕ್ಷೆಯಲ್ಲಿ ೬ನೆ ರಾಂಕ್ ಪಡೆದ ಸ್ವಾತಿ ಅಂಬಲಪಾಡಿ ಅವರನ್ನು ಅಭಿನಂದಿಸ ಲಾಯಿತು.
ಇತ್ತೀಚಿಗೆ ಮಾಹೆ ಪಿಎಚ್‌ಡಿ ಪದವಿ ಪಡೆದ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಅಶ್ವಿನ್ ಕುಮಾರ್ ಅವರನ್ನು ಸನ್ಮಾನಿಸ ಲಾಯಿತು. ಉದ್ಯಮಿ ಎಂ.ರಾಘವೇಂದ್ರ ಆಚಾರ್ಯ ಕೋಟ, ಉಡುಪಿ ರಾಷ್ಟ್ರೀಯ ವಿಶ್ವಬ್ರಾಹ್ಮಾಣ ಸಮಾಜಸೇವಾ ಸಂಘದ ಅಧ್ಯಕ್ಷ ರತ್ನಾಕರ ಆಚಾರ್ಯ ಮಾತನಾಡಿದರು. ಕೋಶಾಧಿಕಾರಿ ಬಿ.ಎ.ಆಚಾರ್ಯ ಮಣಿಪಾಲ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.
ಉಪಾಧ್ಯಕ್ಷ ಚಂದ್ರಯ್ಯ ಆಚಾರ್ಯ ಸ್ವಾಗತಿಸಿದರು. ಟಿ.ಜಿ.ಆಚಾರ್ಯ ಹೆಬ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ಚಂದ್ರ, ಗಣಪತಿ ಆಚಾರ್ಯ ಹಾಗೂ ಡಾ.ಪ್ರತಿಮಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಭಾಸ್ಕರ್ ಆಚಾರ್ಯ ವಂದಿಸಿದರು.