ಮಾ.20ರಂದು ಪದ್ಮಶಾಲಿ ಕ್ರೀಡೋತ್ಸವ
ಉಡುಪಿ : ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ ಆಶ್ರಯದಲ್ಲಿ ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಆತಿಥ್ಯದಲ್ಲಿ ಮಹಾಸಭಾದ ಅಮೃತ ಮಹೋತ್ಸವ ಸಡಗರದ ೨೯ನೇ ಪದ್ಮಶಾಲಿ ಕ್ರೀಡೋತ್ಸವವನ್ನು ಮಾ.೨೦ರಂದು ಉಡುಪಿ ಅಜ್ಜರಕಾಡಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ ೯ ಗಂಟೆಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿರುವರು. ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಎಂ. ಜಯರಾಮ್ ಅಧ್ಯಕ್ಷತೆ ವಹಿಸಲಿರುವರು. ಶಾಸಕ ಕೆ. ರಘುಪತಿ ಭಟ್ ಕ್ರೀಡಾ ಜ್ಯೋತಿ ಹಸ್ತಾಂತರಿಸಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಓಂಪ್ರಕಾಶ್ ಡಿ ಶೆಟ್ಟಿಗಾರ್ ಅಧ್ಯಕ್ಷತೆ ನಡೆಯಲಿದೆ. ೧೧ ವರ್ಷ ಮೇಲ್ಪಟ್ಟ ಎಲ್ಲ ವಯೋಮಿತಿಯವರಿಗೆ ಪುರುಷರು ಮತ್ತು ಮಹಿಳೆಯರ ಪ್ರತ್ಯೇಕ ವಿಭಾಗಗಳಲ್ಲಿ ಮತ್ತು ಪ್ರತ್ಯೇಕ ವಯೋಮಿತಿಯ ವಿವಿಧ ವಿಭಾಗಗಳಲ್ಲಿ ೫೦, ೧೦೦, ೨೦೦, ೪೦೦ ಮೀಟರ್ ಓಟದ ಸ್ಪರ್ಧೆಗಳು, ಉದ್ದ ಜಿಗಿತ, ಗುಂಡೆಸೆತ, ಅದೃಷ್ಟ ವೃತ್ತ, ವಾಲಿಬಾಲ್, ತ್ರೋ ಬಾಲ್, ರಿಲೇ ಇತ್ಯಾದಿ ಸ್ಪರ್ಧೆಗಳು ನಡೆಯಲಿವೆ.
ಇದೇ ಸಂದರ್ಭದಲ್ಲಿ ಉಭಯ ಜಿಲ್ಲೆಗಳ ಪ್ರಾಥಮಿಕ ನೇಕಾರರ ಸಂಘಗಳ ಆಶಯದಲ್ಲಿ ನವೀನ ಮಾದರಿಯ ಕೈಮಗ್ಗದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಅಧ್ಯಕ್ಷ ಜಯರಾಮ್ ಶೆಟ್ಟಿಗಾರ್, ಉಪಾಧ್ಯಕ್ಷ ರಾಮದಾಸ್ ಶೆಟ್ಟಿಗಾರ್, ನೇಕಾರ ಪ್ರತಿಷ್ಠಾನದ ಉಪಾಧ್ಯಕ್ಷೆ ಸರೋಜಾ ಯಶವಂತ್ ಶೆಟ್ಟಿಗಾರ್, ಕ್ರೀಡಾ ನಿರ್ದೇಶಕ ಸದಾಶಿವ ಗೋಳಿಜೋರ, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಉಪಸ್ಥಿತರಿದ್ದರು.