ಸೈಬರ್ ದಾಳಿ ಬಗ್ಗೆ ಎಚ್ಚರಿಕೆ: ತಜ್ಞ ಡಾ. ಅನಂತ್ ಪ್ರಭು
ಮಂಗಳೂರು : ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರವು ಸದ್ಯ ಸುದ್ದಿಯಲ್ಲಿದ್ದು, ಸೈಬರ್ ಕಳ್ಳರು ಅದನ್ನೇ ಬಂಡವಾಳ ಮಾಡಿಕೊಂಡು ಸೈಬರ್ ದಾಳಿ ಮಾಡುತ್ತಿದ್ದಾರೆ. ಚಿತ್ರದ ಫ್ರೀ ಡೌನ್‌ಲೋಡ್ ಲಿಂಕ್ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಕ್ಲಿಕ್ ಮಾಡಿದರೆ, ವೈರಸ್ ದಾಳಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಸೈಬರ್ ತಜ್ಞ ಡಾ. ಅನಂತ್ ಪ್ರಭು ಎಚ್ಚರಿಸಿದ್ದಾರೆ.
ಡೌನ್‌ಲೋಡ್ ಲಿಂಕ್ ಹೆಸರಲ್ಲಿ ಸೈಬರ್ ಹ್ಯಾಕರ್ಸ್ ವೈರಸ್ ಕಳುಹಿಸುತ್ತಿದ್ದು, ಅದರ ಮೂಲಕ ಆಂಡ್ರಾಯ್ಡ್ ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿರುವ ಮಾಹಿತಿಗಳನ್ನು ಕದಿಯಬಹುದು. ವೈರಸ್ ಮೂಲಕ ಸ್ಮಾರ್ಟ್ ಫೋನ್ ಅನ್ನು ಹ್ಯಾಕ್ ಮಾಡುವ ಸೈಬರ್ ಕಳ್ಳರು, ಅರಿವಿಲ್ಲದಂತೆ ಮೊಬೈಲ್ ಜೊತೆಗೆ ಲಿಂಕ್ ಆಗಿರುವ ಬ್ಯಾಂಕ್ ಮಾಹಿತಿಗಳನ್ನು ಪಡೆಯುತ್ತಾರೆ. ಮೊಬೈಲ್ ಒಳಗಿರುವ ಇತರ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳ ಬಹುದು. ಸುಲಭದಲ್ಲಿ ಸಿನಿಮಾ ನೋಡಬಹುದು ಎಂದು ಲಿಂಕ್ ಒತ್ತಿ ಅಪಾಯಕ್ಕೆ ಸಿಲುಕಬಾರದು ಎಂದು ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಡಾ. ಅನಂತ ಪ್ರಭು, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು, ಪೊಲೀಸ್ ಇಲಾಖೆಗೆ ಸೈಬರ್ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡುತ್ತಾರೆ.