‘ಜೇಮ್ಸ್’ ಚಿತ್ರದಲ್ಲಿ ಕಾಡುವ ಪುನೀತ್
‘ಜೇಮ್ಸ್’ ಚಿತ್ರ
ನಿಮಗೆ ‘ಮಸಣದ ಹೂವು’ ಚಿತ್ರ ನೆನಪಿರಬಹುದು. ಪುಟ್ಟಣ್ಣ ಕಣಗಾಲ್ ಅವರು ಅರ್ಧದಲ್ಲೇ ಬಿಟ್ಟು ಹೋದ ಚಿತ್ರ. ಚಿತ್ರೀಕರಣ ಪೂರ್ತಿಗೊಳ್ಳುವ ಮೊದಲೇ ಅವರು ತೀರಿಕೊಂಡರು. ಬಳಿಕ ಅವರ ಶಿಷ್ಯರಾದ ಕೆ.ಎಸ್.ಎಲ್. ಸ್ವಾಮಿ ಅವರು ಚಿತ್ರವನ್ನು ಪೂರ್ತಿಗೊಳಿಸಿದರು. ಒಬ್ಬನ ಕನಸನ್ನು ಇನ್ನೊಬ್ಬ ಕೈಗೆತ್ತಿ ಪೂರ್ತಿಗೊಳಿಸುವುದು ಸುಲಭವಲ್ಲ.
ಪುಟ್ಟಣ್ಣ ಅವರ ಮಸಣದ ಹೂವು, ಸ್ವಾಮಿಯವರ ಕೈಯಲ್ಲಿ ನಿಜಕ್ಕೂ ಅರಳಿತೆ? ಎನ್ನುವುದನ್ನು ನಿರ್ಧರಿಸುವವರು ಯಾರು? ಮಸಣದ ಹೂವು ಸಿನೆಮಾದ ವಸ್ತು ಅತ್ಯಂತ ಕ್ರಾಂತಿಕಾರಿಯಾದುದು.ನವನಟಿ ಅರ್ಪಣಾ ಮತ್ತು ಅಂಬರೀಷ್ ಅಭಿನಯವೂ ಮನೋಜ್ಞವಾಗಿದೆ.ಆದರೆ ಚಿತ್ರದ ಕೊನೆ ಮಾತ್ರ ಅವಸರದಿಂದ ಮುಗಿಯುತ್ತದೆ. ಶಂಕರ್ನಾಗ್ ಅವರ ಕೊನೆಯ ಚಿತ್ರ ‘ನಿಗೂಢ ರಹಸ್ಯ’. ಶಂಕರ್ನಾಗ್ ತೀರಿ ಹೋದ ಕಾರಣಕ್ಕೆ ಚಿತ್ರಕ್ಕೆ ಧ್ವನಿ ನೀಡಿದವರು ಅನಂತ್ ನಾಗ್. ಆದರೆ ಇಲ್ಲಿ ಚಿತ್ರ ನಿರ್ದೇಶಕನನ್ನು ಅವಲಂಬಿಸುವುದರಿಂದ ಚಿತ್ರಕ್ಕೆ ದೊಡ್ಡ ಧಕ್ಕೆಯಾಗುವುದಿಲ್ಲ. ಇದೀಗ ಬಿಡುಗಡೆಯಾಗಿರುವ ‘ಜೇಮ್ಸ್’ ಚಿತ್ರದ ಬಹುತೇಕ ದೃಶ್ಯಗಳೂ ಪುನೀತ್ ರಾಜ್ಕುಮಾರ್ ಇರುವಾಗಲೇ ಚಿತ್ರೀಕರಣವಾಗಿರುವುದರಿಂದ, ಚಿತ್ರಕ್ಕೆ ದೊಡ್ಡ ಸಮಸ್ಯೆಯೇನೂ ಆಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ‘ಜೇಮ್ಸ್’ನ್ನು ಇಂದು ನಾವು ಪುನೀತ್ ಅವರ ಅಂತಿಮ ವಿದಾಯದ ರೂಪದಲ್ಲಿ ಸ್ವೀಕರಿಸಿದ್ದೇವೆ. ಪುನೀತ್ ಅಭಿಮಾನಿಗಳು, ಅಭಿಮಾನಿಗಳಲ್ಲದವರೂ ಈ ಚಿತ್ರವನ್ನು ಪುನೀತ್ಗಾಗಿ ನೋಡಲು ಇಷ್ಟಪಡುತ್ತಾರೆ. ಪುನೀತ್ ಬಿಟ್ಟುಹೋದ ಕೊನೆಯ ನಗುವನ್ನು, ಆ್ಯಕ್ಷನ್ಗಳನ್ನು ಕಣ್ತುಂಬಿಕೊಳ್ಳುವುದಷ್ಟೇ ಪ್ರೇಕ್ಷಕರ ಉದ್ದೇಶ. ಆದುದರಿಂದ ಇಲ್ಲಿ ನಿರ್ದೇಶಕರಿಗೆ ಕೆಲಸವೇ ಇಲ್ಲ. ಅವರ ತಪ್ಪು ಒಪ್ಪುಗಳು ಯಾರಿಗೂ ಅಗತ್ಯವಿಲ್ಲ.
ನಿರ್ದೇಶಕನನ್ನು ಸಂಪೂರ್ಣ ಮರೆತು ಪುನೀತ್ಗಾಗಿಯೇ ಈ ಚಿತ್ರವನ್ನು ನೋಡುತ್ತಾ ಹೋದರೆ ಚಿತ್ರದುದ್ದಕ್ಕೂ ನಾವು ಭಾವುಕರಾಗಬೇಕಾಗುತ್ತದೆ. ಪುನೀತ್ರನ್ನು ಮರೆತು ಚಿತ್ರ ನಿರ್ದೇಶಕನನ್ನು ನೆನಪಿಸಿಕೊಂಡು ಚಿತ್ರ ನೋಡುವುದಾದರೆ ಇಲ್ಲಿ ಹಲವು ಕೊರತೆಗಳು ಎದ್ದು ಕಾಣುತ್ತವೆ. ಆದರೆ ಎಲ್ಲ ಕೊರತೆಗಳು ಪುನೀತ್ ದೆಸೆಯಿಂದಾಗಿಯೇ ಬದಿಗೆ ಸರಿಯುತ್ತದೆ. ಜೇಮ್ಸ್ ಒಬ್ಬ ಯೋಧನನ್ನಿಟ್ಟು ಹೆಣೆದಿರುವ ಕತೆ. ಪಾತಕ ಲೋಕದ ವಿರುದ್ಧ ಹೋರಾಟ, ಸೈನಿಕರ ರಕ್ಷಣೆ ಇತ್ಯಾದಿಗಳೆಲ್ಲ ಚಿತ್ರದಲ್ಲಿದೆ ಎಂದರೆ ಇದೊಂದು ಆ್ಯಕ್ಷನ್ ಚಿತ್ರ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ತನ್ನ ಅಭಿಮಾನಿಗಳಿಗಾಗಿಯೇ
ಪುನೀತ್ ಪಾತ್ರವನ್ನು ನಿಭಾಯಿಸಿದ್ದಾರೆ. ಆದರೆ ಜೇಮ್ಸ್ ಪುನೀತ್ ಅವರ ಕಟ್ಟ ಕಡೆಯ ಚಿತ್ರ ಎನ್ನುವಾಗ ದಟ್ಟವಾದ ನಿರಾಸೆಯೊಂದು ಕಾಡುತ್ತದೆ. ‘ಬೆಟ್ಟದ ಹೂವು’ನಂತಹ ಚಿತ್ರದಲ್ಲಿ ಅಪರೂಪದ ಮುಖ್ಯ ಬಾಲಪಾತ್ರದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಗೆದ್ದ ನಟನೊಬ್ಬನನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿರ್ದೇಶಕರ ಕೊರತೆ ಕನ್ನಡದಲ್ಲಿತ್ತು. ಅಂತಹ ನಿರ್ದೇಶಕರಿದ್ದಿದ್ದರೆ ಪುನೀತ್ರಂತಹ ಪ್ರತಿಭಾವಂತ ನಟ, ತನ್ನ ನಟನೆಗಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಮಿಲನ, ಪೃಥ್ವಿ, ಹುಡುಗರು, ಯಾರೇ ಕೂಗಾಡಲಿ, ಜಾಕಿ, ಪರಮಾತ್ಮ, ಮೈತ್ರಿ, ರಾಜಕುಮಾರದಂತಹ ಚಿತ್ರಗಳಲ್ಲಿ ಭಿನ್ನವಾಗಿ ಮಿಂಚಿರುವ ಮಿಂಚಿನ ಬಳ್ಳಿ ಪುನೀತ್, ಮೈತ್ರಿ ಚಿತ್ರದಲ್ಲಿ ತುಸು ವಿಶಿಷ್ಟವಾದ ಪುನೀತ್ ಪಾತ್ರವನ್ನೇ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಆದರೆ ಅವರ ಮೈಕಟ್ಟು, ಪ್ರತಿಭೆಯನ್ನು ಸಂಪೂರ್ಣವಾಗಿ ದುಡಿಸಿಕೊಳ್ಳುವ ನಿರ್ದೇಶಕನೊಬ್ಬ ಅವರಿಗೆ ಸಿಗಬೇಕಾಗಿತ್ತು. ಅವರ ಪ್ರತಿಭೆಗೆ ನಿಜಕ್ಕೂ ಆಗ ನ್ಯಾಯ ಸಿಗುತ್ತಿತ್ತು ಎನ್ನುವುದು ಜೇಮ್ಸ್ ಚಿತ್ರವನ್ನು ನೋಡುವಾಗ ನಮ್ಮನ್ನು ಕಾಡುತ್ತದೆ.