ಕಾಪು ಮಾರಿಪೂಜೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಮುಸ್ಲಿಮರಿಗೆ ನಿರ್ಬಂಧ
ʼಸಂವಿಧಾನ ವಿರೋಧಿ ನಿರ್ಣಯದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯʼ
ಕಾಪು : ಕರ್ನಾಟಕ ಸರಕಾರ ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿ ಇಲಾಖೆಯ ಅಧೀನದಲ್ಲಿರುವ ಕಾಪು ಮಾರಿಗುಡಿ ದೇವಸ್ಥಾನದಲ್ಲಿ ಮಾ. 22 ಹಾಗೂ 23ರಂದು ನಡೆಯಲಿರುವ ಸುಗ್ಗಿ ಮಾರಿ ಪೂಜೆ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ಅಂಗಡಿಗಳನ್ನು ನೀಡದಿರುವ ಕುರಿತ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶಿಸಿ ಸಂವಿಧಾನ ವಿರೋಧಿ ನಿರ್ಣಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಹಿಂದೂ ಜಾಗರಣಾ ವೇದಿಕೆ ಗುರುವಾರ ಕಾಪು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಹಾಗೂ ಮೂರು ಮಾರಿಗುಡಿಯ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿ, ಮಾರಿಪೂಜೆಯಲ್ಲಿ ಯಾವುದೇ ಮುಸ್ಲಿಮರಿಗೆ ಅಂಗಡಿ/ಸ್ಟಾಲ್‌ಗಳನ್ನು ನಡೆಸಲು ಅವಕಾಶ ನೀಡಬಾರದು. ನೀಡಿದರೆ ಮುಂದೆ ಉಂಟಾಗುವ ಯಾವುದೇ ಅನಾಹುತಗಳಿಗೆ ನೀವೇ ಜವಾಬ್ದಾರರೆಂದು ಎಚ್ಚರಿಕೆ ನೀಡಿದ್ದರು.
ಈ ಸಂಬಂಧ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸಭೆ ಕರೆದಿದ್ದು, ಜಾತ್ರೆಯಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ಅಂಗಡಿಗಳನ್ನು ನೀಡಲು ನಿರ್ಧರಿಸಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಶಾಂತ್ ಶೆಟ್ಟಿ, ಇಲಾಖೆಯ ಕಾಯ್ದೆಯ ಪ್ರಕಾರ ದೇವಸ್ಥಾನಕ್ಕೆ ಸೇರಿದ ಕಟ್ಟಡ ಹಾಗೂ ನಿವೇಶನಗಳನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ ಎಂಬ ನಿಯಮವಿದೆ. ಅದರಂತೆ ಸುಗ್ಗಿ ಮಾರಿಪೂಜೆಯಲ್ಲಿ ಹಿಂದೂಗಳಿಗೆ ಮಾತ್ರ ಅಂಗಡಿಗಳನ್ನು ನೀಡಲು ನಿರ್ಧರಿ ಸಲಾಗಿದೆ ಎಂದರು.
ಸಿಪಿಎಂ ಡಿಸಿಗೆ ಮನವಿ: ಕಾಪು ಮಾರಿಗುಡಿ ಜಾತ್ರೆಯಲ್ಲಿ ಹಿಂದೂಯೇತರ ಸಮುದಾಯದ ವ್ಯಾಪಾರಸ್ಥರು ಅಂಗಡಿ ತೆರೆಯಲು ಅವಕಾಶ ನೀಡದಿರುವ ಬಗ್ಗೆ ತೆಗೆದುಕೊಂಡ ನಿರ್ಣಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಸಿಪಿಐಎಂ ಶನಿವಾರ ಉಡುಪಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಮನವಿ ಸಲ್ಲಿಸಿದೆ.
ಕಾಪು ಪುರಸಭೆ ಮತ್ತು ಮಾರಿಗುಡಿ ವ್ಯವಸ್ಥಾಪನಾ ಸಮಿತಿಯು ಭಿನ್ನ ಕಾರಣ ನೀಡಿ, ಈ ರೀತಿಯ ನಿರ್ಣಯ ಕೈಗೊಂಡಿರುವುದು ಸರಿಯಲ್ಲ. ಜಾತ್ಯಾತೀತ ಭಾರತದಲ್ಲಿ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಾಣಬೇಕು. ಈಗ ತೆಗೆದುಕೊಂಡಿರುವ ನಿರ್ಣಯದಿಂದ ಅಪನಂಬಿಕೆಗಳು ಇನ್ನಷ್ಟು ಹೆಚ್ಚಲಿದೆ ಮತ್ತು ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಮೊದಲಾದ ಸಮುದಾಯದವರು ವ್ಯಾಪಾರ ಮಾಡುವಂತಿಲ್ಲ.
ಇದು ಮುಂದುವರಿದು ಬೇರೆ ಬೇರೆ ಆಯಾಮ ಪಡೆದು, ಇಡೀ ರಾಜ್ಯಕ್ಕೆ ವಿಸ್ತರಿಸುವ ಸಂಭವ ಇದೆ. ಇನ್ನಷ್ಟು ಕೋಮು ವಿಭಜನೆಗೆ ಇದು ಕಾರಣ ವಾಗುತ್ತದೆ. ತಾವು ಈ ಕೂಡಲೇ ಮಧ್ಯ ಪ್ರವೇಶ ಮಾಡಿ ಕಾನೂನು ಸುವ್ಯವಸ್ಥೆಯ ಹೆಸರಲ್ಲಿ ಸಂವಿಧಾನ ವಿರೋಧಿ ನಿರ್ಣಯ ಕೈಗೊಳ್ಳದಂತೆ ಕ್ರಮ ವಹಿಸಬೇಕು. ಈ ಸಂಬಂಧ ಎಲ್ಲಾ ಸಮುದಾಯದ ಮುಖಂಡರನ್ನು ಕರೆದು, ಮಾತುಕತೆ ನಡೆಸಿ, ಸೌಹಾರ್ದ ವಾತಾವರಣ ನಿರ್ಮಾಣ ಮಾಡಬೇಕೆಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಹಬಾಳ್ವೆ ವಿರೋಧ: ಜಾತ್ರೆಯಲ್ಲಿ ಮುಸ್ಲಿಮ್ ವರ್ತಕರಿಗೆ ವ್ಯಾಪಾರ ನಡೆಸಲು ಅವಕಾಶ ನೀಡದಿರುವ ಬಗ್ಗೆ ಸಹಬಾಳ್ವೆ ಉಡುಪಿ ಸಂಘಟನೆಯು ವಿರೋಧ ವ್ಯಕ್ತಪಡಿಸಿದ್ದು, ಸಮಾಜ ಒಡೆಯುವಂತಹ ಇಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದೆ.
ಇದು ಬಹಳ ದುರದೃಷ್ಟಕರವಾದ ಬೆಳವಣಿಗೆಯಾಗಿದ್ದು, ಉಡುಪಿಯ ಸಮಾಜ ಎಂದಿಗೂ ಈ ರೀತಿಯಲ್ಲಿ ಧಾರ್ಮಿಕ ವಿಭಜನೆ ಆಗಿರಲಿಲ್ಲ. ಜಾತಿ- ಮತಗಳ ಭೇದಬಾವ ಇಲ್ಲದೆ ಹಲವಾರು ಉತ್ಸವಗಳು ಇಲ್ಲಿ ನಡೆದುಕೊಂಡು ಬರುತ್ತಿವೆ. ದಿವಂಗತ ಹಾಜಿ ಅಬ್ದುಲ್ಲಾ ಉಡುಪಿ ಕೃಷ್ಣ ಮಠಕ್ಕೆ ಸಹಾಯ ಮಾಡಿದ್ದು ಇತಿಹಾಸ ಇದೆ ಎಂದರು.
ಸಮಾಜ ಒಡೆಯುವ ಕೋಮುವಾದಿ ಶಕ್ತಿಗಳು ಸಮಸ್ತ ಹಿಂದೂ ಸಮಾಜ ವನ್ನು ಪ್ರತಿನಿಧಿಸುವುದಿಲ್ಲವಾದರೂ, ಈ ರೀತಿ ಒಡೆಯುವ ಭಾವನೆಯನ್ನು ಕೊಟ್ಟು, ಹಿಂದೂ-ಮುಸ್ಲಿಂ ಸಮುದಾಯದ ನಡುವೆ ದ್ವೇಷವನ್ನು ಬಿತ್ತುತ್ತಿದ್ದಾರೆ, ಇದನ್ನು ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ. ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ಸುಗ್ಗಿ ಮಾರಿಪೂಜೆಯಲ್ಲಿ ಹಿಂದಿನ ಸಂಪ್ರದಾಯವನ್ನು ಮುಂದುವರೆಸಬೇಕು ಎಂದು ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಆಗ್ರಹಿಸಿದ್ದಾರೆ.
ಹಿಂದೂಗಳಿಗೆ ಮಾತ್ರ ಅವಕಾಶ: ಲಾಲಾಜಿ
ಸುಗ್ಗಿ ಮಾರಿಪೂಜೆ ಜಾತ್ರೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ನಡೆಸಲು ಹಿಂದೂ ಧರ್ಮಿಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಾಸಕ ಹಾಗೂ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಲಾಲಾಜಿ ಆರ್.ಮೆಂಡನ್ ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಧರ್ಮ ಅಮಲನ್ನು ಪ್ರತ್ಯೇಕತೆಯ ಮಾನಸಿಕತೆಯಿಂದ ಬಿತ್ತಿ ಮುಗ್ದ ಮಕ್ಕಳ ಮನಸ್ಸನ್ನು ಹಾಳು ಮಾಡಿ, ಅವರುಗಳ ಶೈಕ್ಷಣಿಕ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವವರು ದೇಶದ ಸಂವಿಧಾನದಿಂದ ರೂಪಿತವಾದ ನ್ಯಾಯಾಂಗ ವ್ಯವಸ್ಥೆಯು ನೀಡಿದ ಆದೇಶವನ್ನೇ ಪ್ರಶ್ನಿಸಿ, ಅಗೌರವ ತೋರಿ ಸಾರ್ವಜನಿಕ ವ್ಯವಹಾರಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದವರು, ನಮ್ಮ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ವ್ಯವಹಾರ ನಡೆಸಲು ನೈತಿಕತೆ ಇದೆಯೇ ಎನ್ನುವ ಪ್ರಶ್ನೆ ತಮ್ಮಲ್ಲಿ ತಾವು ಮಾಡಿಕೊಳ್ಳಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರೆ ಜಾತ್ರೆಯಲ್ಲೂ ನಿರ್ಬಂಧ
ಪಡುಬಿದ್ರಿಯ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.21 ಮತ್ತು 22 ರಂದು ನಡೆಯುವ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿರ್ಧರಿಸಿದೆ.
ಈ ಸಂಬಂಧ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾಪು ಪ್ರಖಂಡ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದ್ದು, ಅದರಂತೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಬಜರಂಗದಳ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ತುರ್ತು ಸಭೆ ನಡೆಸಿ ಹಿಂದೂಯೇತರರಿಗೆ ದೇವಸ್ಥಾನದ ವಠಾರದಲ್ಲಿ ಅಂಗಡಿಗಳನ್ನು ನೀಡದೆ ಇರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
"ಕಾಪು ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಯಾವ ರೀತಿ ನಿರ್ಣಯ ತೆಗೆದು ಕೊಳ್ಳಲಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ".
-ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ, ಉಡುಪಿ