ಎಸ್ಸಿ ,ಎಸ್ಪಿ, ಟಿಎಸ್ಪಿ ಸಹಾಯಧನ ಮೊತ್ತಕ್ಕೆ ಕುತ್ತು, ಸದ್ದಿಲ್ಲದೆ ತಯಾರಿ ನಡೆಸಿದ ಇಂಧನ ಇಲಾಖೆ
ಬೆಂಗಳೂರು: ನೀರಾವರಿ ಪಂಪ್‌ಸೆಟ್ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿಯಡಿ ಫಲಾನುಭವಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿ ಗ್ರಾಹಕರಿಗೆ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಉಪಯೋಜನೆಯಡಿ ನೀಡುತ್ತಿರುವ ಸಹಾಯಧನ ಮೊತ್ತ ವನ್ನು ಮಿತಿಗೊಳಿಸಲು ಇಂಧನ ಇಲಾಖೆಯಲ್ಲಿ ಸದ್ದಿಲ್ಲದೇ ತಯಾರಿ ನಡೆಯುತ್ತಿದೆ.
ವಿದ್ಯುತ್ ಪೂರೈಕೆ ಖಾಸಗೀಕರಣ ಮಸೂದೆಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿಯಡಿ ನೀಡುತ್ತಿರುವ ಸಹಾಯ ಧನ ಮೊತ್ತವನ್ನು ಮಿತಿಗೊಳಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ’ದಿ ಫೈಲ್’ಗೆ ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.
ಇಂಧನ ಇಲಾಖೆಯು ವಿದ್ಯುತ್ ಸಹಾಯಧನವನ್ನು ಎಸ್ಸಿಪಿ ಮತ್ತು ಟಿಎಸ್ಪಿಯೆಂದು ವರ್ಗೀಕರಿಸದೇ ಕೇವಲ ಲೆಕ್ಕ ಶೀರ್ಷಿಕೆ 106ರ ಅಡಿ ಒದಗಿಸಬೇಕು ಮತ್ತು ಈ ಎರಡೂ ಉಪ ಯೋಜನೆಗಳ ಗ್ರಾಹಕರಿಗೆ ನೀಡುತ್ತಿರುವ ಸಹಾಯಧನ ಮೊತ್ತವನ್ನು ಮಿತಿಗೊಳಿಸಲು ಪ್ರಸ್ತಾವವನ್ನು ಮಂಡಿಸಿದೆ. ಇದಕ್ಕೂ ಮೊದಲು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಸಮಿತಿಯು ಸರಕಾರವು ಆಯವ್ಯಯದಲ್ಲಿ ಹಂಚಿಕೆ ಮಾಡಿ ಒದಗಿಸುವ ಸಹಾಯಧನವನ್ನು ಸಾಮಾನ್ಯ, ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆಯಾಗಿ ವರ್ಗೀಕರಿಸದೇ ಒಂದೇ ಲೆಕ್ಕ ಶೀರ್ಷಿಕೆಯಡಿ ಒದಗಿಸಬೇಕೆಂದು 2020ರ ಫೆ.5ರಂದು ಸೂಚಿಸಿತ್ತು. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯ ಫಲಾನುಭವಿಗಳ ಅಂಕಿ ಅಂಶಗಳ ಕುರಿತು ನಿರ್ದಿಷ್ಟ ಮಾಹಿತಿ ಇಲ್ಲದ್ದರಿಂದಾಗಿ 2020-21ರಲ್ಲಿ ಈ ಎರಡೂ ಉಪ ಯೋಜನೆಯಡಿ ಒದಗಿಸಿದ್ದ ಸಹಾಯ ಧನ ಹಂಚಿಕೆಯನ್ನು ವಿದ್ಯುತ್ ಸರಬರಾಜು ಕಂಪೆನಿಯವರು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಅನುಮೋದಿಸಿದ್ದ ಒಟ್ಟಾರೆ ಸಹಾಯ ಧನದ ಅನುಪಾತದಲ್ಲಿ ಹಂಚಿಕೆ ಮಾಡಿತ್ತು.
ಆದರೀಗ ಈ ಎರಡೂ ಉಪಯೋಜನೆ ಫಲಾನುಭವಿಗಳ ನಿರ್ದಿಷ್ಟ ಅಂಕಿ ಅಂಶಗಳು ಲಭ್ಯವಾಗುತ್ತಿದ್ದಂತೆ ಸಹಾಯಧನದ ಮೊತ್ತವನ್ನು ಮಿತಿಗೊಳಿಸಲು ಚಾಲನೆ ನೀಡಿರುವುದು ಈ ಎರಡೂ ವರ್ಗಗಳ ಫಲಾನುಭವಿ ಗ್ರಾಹಕರ ವಲಯದಲ್ಲಿ ವಿರೋಧ ವ್ಯಕ್ತವಾಗುವ ಸಾಧ್ಯತೆಗಳೂ ಇವೆ.
ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಅಂಕಿ ಅಂಶಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. 2021ರ ಡಿಸೆಂಬರ್ 31ರ ಅಂತ್ಯಕ್ಕೆ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆ ಯಡಿಯಲ್ಲಿ ಪರಿಶಿಷ್ಟ ಜಾತಿಯಲ್ಲಿ 4,36,702 ಗ್ರಾಹಕರಿದ್ದರೇ, (ಶೇ.15.15)ಪರಿಶಿಷ್ಟ ಪಂಗಡದಲ್ಲಿ 1,64,851 (ಶೇ. 5.72) ಗ್ರಾಹಕರು ಸೇರಿದಂತೆ ಒಟ್ಟಾರೆ 6,01,553 ಗ್ರಾಹಕರಿದ್ದಾರೆ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಅದೇ ರೀತಿ 10 ಎಚ್‌ಪಿವರೆಗಿನ ನೀರಾವರಿ ಪಂಪ್ ಸೆಟ್‌ಗಳನ್ನು ಹೊಂದಿರುವ ಗ್ರಾಹಕರ ಪೈಕಿ ಪರಿಶಿಷ್ಟ ಜಾತಿಯಲ್ಲಿ 1,70,241 (ಶೇ.5.29) ಗ್ರಾಹಕರು, 94,851 (ಶೇ.2.95)ಸಂಖ್ಯೆಯ ಗ್ರಾಹಕರು ಪರಿಶಿಷ್ಟ ಪಂಗಡದಲ್ಲಿದ್ದಾರೆ. 10 ಎಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್ ಮತ್ತು ಭಾಗ್ಯ ಜ್ಯೋತಿ, ಕುಟೀರ ಜ್ಯೋತಿಯನ್ನೂ ಒಳಗೊಂಡಂತೆ ಪರಿಶಿಷ್ಟ ಜಾತಿಯ 6,06,943 (ಶೇ.9.95) ಗ್ರಾಹಕರು, ಪರಿಶಿಷ್ಟ ಪಂಗಡಕ್ಕೆ ಸೇರಿದ 2,59,702 (ಶೇ.4.26) ಗ್ರಾಹಕರಿದ್ದಾರೆ ಎಂದು ವಿದ್ಯುತ್ ಸರಬರಾಜು ಕಂಪೆನಿ ಗಳು ಇಂಧನ ಇಲಾಖೆಗೆ ಮಾಹಿತಿ ಒದಗಿಸಿದೆ ಎಂದು ಗೊತ್ತಾಗಿದೆ.
2017-18ನೇ ಸಾಲಿನಿಂದ ಸಾಮಾನ್ಯ ಕಾರ್ಯಕ್ರಮಗಳಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಎಂಬುದಾಗಿ ಹಂಚಿಕೆಯನ್ನು ವಿಂಗಡಿಸಿತ್ತು. ಈ ಹಿನ್ನೆಲೆಯಲ್ಲಿ 2022-23ನೇ ಸಾಲಿನ ಆಯವ್ಯಯದಲ್ಲಿ ಉಚಿತ ವಿದ್ಯುತ್ ಸರಬರಾಜಿನ ಸಹಾಯಧನ ಹಂಚಿಕೆ ಮಾಡುವ ಸಂದ ರ್ಭದಲ್ಲಿ ಎರಡೂ ವರ್ಗಗಳ ಉಪ ಯೋಜನೆಯಡಿಯಲ್ಲಿ ಒದಗಿಸುತ್ತಿರುವ ಸಹಾಯಧನದ ಮೊತ್ತವನ್ನು ಮಿತಿಗೊಳಿಸುವುದಕ್ಕೆ ಇಂಧನ ಇಲಾಖೆಯು ಪ್ರಸ್ತಾಪಿಸಿರುವುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.
2022-23ನೇ ಸಾಲಿನ ಆಯವ್ಯಯದಲ್ಲಿ ನೀರಾವರಿ ಪಂಪ್‌ಸೆಟ್‌ಗಳು, ಭಾಗ್ಯಜ್ಯೋತಿ/ಕುಟೀರ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಸರಬರಾಜು ಮಾಡುವುದಕ್ಕಾಗಿ (ಲೆಕ್ಕ ಶೀರ್ಷಿಕೆ- 2801-80-101--1-04-106) 32,200.52 ಕೋಟಿ ರೂ. ಸಹಾಯಧನ ವೆಚ್ಚವೆಂದು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿರುವುದು ನಿರ್ವಹಣಾ ಮುಂಗಡ ಪತ್ರದಿಂದ ಗೊತ್ತಾಗಿದೆ.
ಪ್ರಸ್ತಾವದಲ್ಲೇನಿದೆ?: ಲೆಕ್ಕ ಶೀರ್ಷಿಕೆ 2801-80-101-1-04 ಅಡಿ ನೀರಾವರಿ ಪಂಪ್‌ಸೆಟ್ ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿಗೆ ಸಹಾಯಧನ-106-ಸಹಾಯಧನದ ಅಡಿಯಲ್ಲಿ ಶೇ.100ರಷ್ಟು ಸಹಾಯಧನ ಒದಗಿಸುವುದು. ಅಥವಾ ಲೆಕ್ಕ ಶೀರ್ಷಿಕೆ 2801-80-101-1-04 ನೀರಾವರಿ ಪಂಪ್‌ಸೆಟ್ ಭಾಗ್ಯ ಜ್ಯೋತಿ/,ಕುಟೀರ ಜ್ಯೋತಿ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿಗೆ ಸಹಾಯ ಧನ-422-ಪರಿಶಿಷ್ಟ ಜಾತಿ ಉಪಯೋಜನೆಯಡಿ ಒದಗಿಸುವ ಸಹಾಯಧನ ಮೊತ್ತವನ್ನು ಶೇ.10ಕ್ಕೆ ಮಿತಿಗೊಳಿಸಿ ಒದಗಿಸುವುದು.
ಹಾಗೆಯೇ ಲೆಕ್ಕ ಶೀರ್ಷಿಕೆ 2801-80-101-1-04 ಅಡಿ ನೀರಾವರಿ ಪಂಪ್‌ಸೆಟ್ ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿಗೆ ಸಹಾಯಧನ-423-ಗಿರಿಜನ ಉಪಯೋಜನೆಯಡಿ ಒದಗಿಸುವ ಸಹಾಯಧನ ಮೊತ್ತವನ್ನು ಶೇ.4.50ಕ್ಕೆ ಮಿತಿಗೊಳಿಸಿ ಒದಗಿಸುವುದು ಎಂದು ಪ್ರಸ್ತಾಪಿ ಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಒಟ್ಟಾರೆಯಾಗಿ ಲೆಕ್ಕ ಶೀರ್ಷಿಕೆ (2801-80-101-1-04-106) ಸಹಾಯಧನ ಸಾಮಾನ್ಯ ಅಡಿ ಶೆ.85.5ರಷ್ಟು ಅನುದಾನ ಒದಗಿಸುವುದು ಸೇರಿದಂತೆ ಈ ಪ್ರಸ್ತಾವಗಳಿಗೆ ಅನುಮೋದನೆ ಕೋರಿ ಆರ್ಥಿಕ ಇಲಾಖೆಯ ಪರಿಶೀಲನೆ ಮತ್ತು ಸಹಮತಿಗಾಗಿ ಇಂಧನ ಇಲಾಖೆಯು ಕಡತ ಮಂಡಿಸಿದೆ.
ಆರ್ಥಿಕ ಇಲಾಖೆ ಕ್ರಮವೇನು?: ಆಡಳಿತ ಇಲಾಖೆಯು ಸಲ್ಲಿಸಿರುವ ಪ್ರಸ್ತಾವವನ್ನು ಅ ಲೋಕಿಸಿರುವ ಆರ್ಥಿಕ ಇಲಾಖೆಯು ಈ ಎರಡೂ ಉಪಯೋಜನೆ ಫಲಾನುಭವಿಗಳ ನಿರ್ದಿಷ್ಟ ಅಂಕಿ ಅಂಶಗಳ ಸಂಗ್ರಹ ಕಾರ್ಯ ಪೂರ್ಣಗೊಂಡಿದೆಯೇ ಎಂದು ಪ್ರಶ್ನಿಸಿದೆ. ಒಂದು ವೇಳೆ ಪೂರ್ಣಗೊಳ್ಳದಿದ್ದರೆ ಎಸ್ಸಿ ಮತ್ತು ಎಸ್ಟಿ ಸಮುದಾಯದ ರೈತರನ್ನು ಈ ಯೋಜನೆಗೆ ಒಳಪಡಿಸಲು ಶ್ರಮವೇಕೆ ಹಾಕುತ್ತಿಲ್ಲ. ಇದು ಸಾಧ್ಯವಾಗದಿದ್ದಲ್ಲಿ ಈ ಸಂಖ್ಯೆಯನ್ನು ನಿಗದಿಪಡಿಸಲು ಯಾವ ಮಾನದಂಡಗಳಿವೆ ಎಂಬ ವಿವರಣೆಯನ್ನು ಕೋರಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ರಾಜ್ಯದ ರೈತರ 10 ಎಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್ ವಿದ್ಯುತ್ ಘಟಕಗಳಿಗೆ ಮತ್ತು ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ವಿದ್ಯುತ್ ಗ್ರಾಹಕರಿಗೆ ಪ್ರತಿ ವಿದ್ಯುತ್ ಘಟಕಕ್ಕೆ ಮಾಸಿಕ 40 ಯುನಿಟ್‌ವರೆಗೆ ಮಾತ್ರ ಉಚಿತ ವಿದ್ಯುತ್ ಸರಬರಾಜು ಮಾಡುವ ಸಂಬಂಧ ವಿದ್ಯುತ್ ಸರಬರಾಜು ಕಂಪೆನಿಗಳ ಬೇಡಿಕೆ ಮೊತ್ತವನ್ನು ಸಹಾಯಧನದ ಮೂಲಕ ಮರುಪಾವತಿಸಲು ಆಯವ್ಯಯದಲ್ಲಿ ಅನುದಾನ ಹಂಚಿಕೆ ಮಾಡಿ ಒದಗಿಸಲಾಗುತ್ತಿದೆ.
2016-17ನೇ ಸಾಲಿನವರೆಗೆ ರೈತರ 10 ಎಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್ ವಿದ್ಯುತ್ ಘಟಕಕ್ಕೆ ಮತ್ತು ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್ ಘಟಕಗಳ ಎಲ್ಲ ಗ್ರಾಹಕರಿಗೆ ಉಚಿತ ವಾಗಿ ವಿದ್ಯುತ್ ಸರಬರಾಜಿಗೆ ಸಹಾಯಧನವನ್ನು ಒಂದೇ ಲೆಕ್ಕ ಶೀರ್ಷಿಕೆ (2801-80-101-04-106) ಹಂಚಿಕೆ ಮಾಡಿ ಒದಗಿಸಲಾಗುತ್ತಿತ್ತು.
ಆದರೆ 2017-18ನೇ ಸಾಲಿನಿಂದ ಲೆಕ್ಕ ಶೀರ್ಷಿಕೆಗಳನ್ನು ಮೂರು ವಿಭಾಗವಾಗಿ ವರ್ಗೀಕರಿಸಿ ಸಹಾಯಧನವನ್ನು ಹಂಚಿಕೆ ಮಾಡಿ ಆಯವ್ಯಯದಲ್ಲಿ ಒದಗಿಸಲಾಗುತ್ತಿತ್ತು. 10 ಎಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಅಡಿ ಉಚಿತ ವಿದ್ಯುತ್ ಸರಬರಾಜು ಮಾಡುವುದಕ್ಕಾಗಿ ಸಹಾಯಧನದ ಸಾಮಾನ್ಯ ಯೋಜನೆ, ಇನ್ನೊಂದು ಲೆಕ್ಕ ಶೀರ್ಷಿಕೆಯಡಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿಯಡಿ ಸಹಾಯಧನದ ಪರಿಶಿಷ್ಟ ಜಾತಿ ಉಪ ಯೋಜನೆ, ಮತ್ತೊಂದು ಲೆಕ್ಕ ಶೀರ್ಷಿಕೆಯಡಿ ಗಿರಿಜನ ಉಪಯೋಜನೆ ಎಂದು ವರ್ಗೀಕರಿಸಿ ಸಹಾಯಧನ ಒದಗಿಸಲಾಗುತ್ತಿತ್ತು.
2020-21ನೇ ಸಾಲಿನ ಆಯವ್ಯಯದ ವೆಚ್ಚದ ಅಂದಾಜುಗಳ ಪ್ರಕಾರ ಲೆಕ್ಕ ಶೀರ್ಷಿಕೆ (2801-80-101-1-04-422) ಅಡಿ ಪರಿಶಿಷ್ಟ ಜಾತಿ ಉಪಯೋಜನೆಯಡಿ 1,558.88 ಕೋಟಿ ರೂ., ಮತ್ತು ಗಿರಿಜನ ಉಪಯೋಜನೆ (ಲೆಕ್ಕ ಶೀರ್ಷಿಕೆ- 2801- 80- 101--1-04-423) ಅಡಿ 576.17 ಕೋಟಿ ರೂ.ಗಳನ್ನು ಒದಗಿಸಿತ್ತು.
ಅದೇ ರೀತಿ 2021-22ನೇ ಸಾಲಿನ ಆಯವ್ಯಯದಲ್ಲಿ (ಲೆಕ್ಕ ಶೀರ್ಷಿಕೆ; 2801-80-101--1-04-422) ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ 10 10 ಎಚ್‌ಪಿ ವರೆಗಿನ ನೀರಾವರಿ ಪಂಪ್ ಸೆಟ್‌ಗಳು ಮತ್ತು ಭಾಗ್ಯಜ್ಯೋತಿ/ಕುಟೀರ ಜ್ಯೋತಿ ಯೋಜನೆಯಡಿ ವಿದ್ಯುತ್ ಸ್ಥಾವರಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡುವುದಕ್ಕಾಗಿ 1,626.34 ಕೋಟಿ ರೂ. ಸಹಾಯ ಧನ ಒದಗಿಸಲಾಗಿದೆ. ಎಪ್ರಿಲ್ 2021ರಿಂದ ಫೆ.2022ರವರೆಗೆ ಒಟ್ಟಾರೆಯಾಗಿ 1,490.72 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇನ್ನೂ 135.62 ಕೋಟಿ ರೂ. ಬಿಡುಗಡೆಗೆ ಬಾಕಿ ಇರುವುದು ಇಂಧನ ಇಲಾಖೆಯ 2021-22 ಮತ್ತು 2022-23 ನಿರ್ವಹಣಾ ಮುಂಗಡ ಪತ್ರದಿಂದ ತಿಳಿದು ಬಂದಿದೆ.
ಹಾಗೆಯೇ ಗಿರಿಜನ ಉಪಯೋಜನೆಯಡಿ 582.62 ಕೋಟಿ ರೂ. ಒದಗಿಸಲಾಗಿದೆ. ಏಪ್ರಿಲ್ 2021ರಿಂದ ಫೆ.2022ರವರೆಗೆ ಒಟ್ಟಾರೆಯಾಗಿ 534.05 ಕೋಟಿ ರೂ. ಬಿಡುಗಡೆ ಮಾಡಿದೆ.
2021-22ನೇ ಸಾಲಿನ ಆಯವ್ಯಯದಲ್ಲಿ ಸಾಮಾನ್ಯ (ಲೆಕ್ಕ ಶೀರ್ಷಿಕೆ; 2801-80-101-004-106) 1ಎಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ಗಳು ಮತ್ತು ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ವಿದ್ಯುತ್ ಸ್ಥಾವರಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡಲು 9,167.04 ಕೋಟಿ ರೂ. ಸಹಾಯಧ ಧನ ಒದಗಿಸಿತ್ತು. ಏಪ್ರಿಲ್ 2021ರಿಂದ ಫೆ.2022ರವರೆಗೆ ಒಟ್ಟಾರೆಯಾಗಿ 8,398.73 ಕೋಟಿ ರೂ. ಬಿಡುಗಡೆ ಮಾಡಿರುವುದು ಇಂಧನ ಇಲಾಖೆಯ 2021-22 ಮತ್ತು 2022-23ನೇ ಸಾಲಿನ ನಿರ್ವಹಣಾ ಮುಂಗಡ ಪತ್ರದಿಂದ ತಿಳಿದು ಬಂದಿದೆ.