ಉಲ್ಕೆಯಂತೆ ಮೇಲೇರಿದ ಅಘೋಷಿತ ಸರ್ವಾಧಿಕಾರಿ ವ್ಲಾದಿಮಿರ್ ಪುಟಿನ್
ವ್ಲಾದಿಮಿರ್ ಪುಟಿನ್
ಡಿಸೆಂಬರ್ 31,1999ರಲ್ಲಿ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ ಯೆಲ್ಸಿನ್, ಪುಟಿನ್ರನ್ನು ಹಂಗಾಮಿ ಅಧ್ಯಕ್ಷರಾಗಿ ಘೋಷಿಸಿದರು. ದುರ್ಬಲವಾಗಿದ್ದ ರಶ್ಯವನ್ನು ಮತ್ತೆ ಹಿಂದಿನ ಭವ್ಯತೆಗೆ ಮರಳಿಸುವುದಾಗಿ ಭರವಸೆ ಕೊಟ್ಟ ಪುಟಿನ್, 2000ದ ಮಾರ್ಚ್ ಚುನಾವಣೆಯಲ್ಲಿ ಶೇ. 53 ಮತ ಗಳಿಸಿ, ಸುಲಭದಲ್ಲಿ ಗೆದ್ದರು.
ಸೋವಿಯತ್ ಒಕ್ಕೂಟದ ಪತನದ ನಂತರ ರಶ್ಯನ್ ಫೆಡರೇಶನ್ ಅನುಭವಿಸುತ್ತಿದ್ದ ರಾಜಕೀಯ, ಆರ್ಥಿಕ, ಸಾಮಾಜಿಕ ವಿಘಟನೆ, ತಲ್ಲಣ, ನೋವುಗಳ ನಡುವೆ, ಕೆಜಿಬಿ ಗುಪ್ತಚರ ಸಂಸ್ಥೆಯ ಮಾಜಿ ‘ಸ್ಪೈ’ ವ್ಲಾದಿಮಿರ್ ಪುಟಿನ್, ಉಲ್ಕೆಯಂತೆ ಮೇಲೇರಿ ಅಘೋಷಿತ ಸರ್ವಾಧಿಕಾರಿಯಾಗಿ ಬೆಳೆದ ರೀತಿ ನಿಗೂಢ ಮತ್ತು ರೋಚಕವಾಗಿದೆ. ಬಹುತೇಕ ಇಡೀ ಪ್ರಪಂಚಕ್ಕೇ ಸೆಡ್ಡು ಹೊಡೆದು, ನೆರೆಯ ಪುಟ್ಟ ದೇಶ ಉಕ್ರೇನಿನ ಮೇಲೆ ಏಕಪಕ್ಷೀಯವಾಗಿ ದಾಳಿ ನಡೆಸಿ, ಜಗತ್ತನ್ನೇ ಬಿಕ್ಕಟ್ಟು ಮತ್ತು ಮೂರನೇ ಮಹಾಯುದ್ಧದ ಅಪಾಯಕ್ಕೆ ತಳ್ಳಿರುವ ಪುಟಿನ್ ಹೆಸರು ಇದೀಗ ಜನಜನಿತವಾಗಿದೆ. ಈ ನಿಟ್ಟಿನಲ್ಲಿ ಅವರ ಚುಟುಕಾದ ವ್ಯಕ್ತಿಚಿತ್ರ ಇಲ್ಲಿದೆ.
ಅಕ್ಟೋಬರ್ 7,1952ರಲ್ಲಿ ರಶ್ಯದ ಬಾಲ್ಟಿಕ್ ಸಮುದ್ರ ತೀರದ ಹಳೆಯ ರಾಜಧಾನಿ ಸೈಂಟ್ ಪೀಟರ್ಸ್ ಬರ್ಗ್ (ಲೆನಿನ್ಗ್ರಾಡ್)ನಲ್ಲಿ ಜನಿಸಿದ ವ್ಲಾದಿಮಿರ್ ಪುಟಿನ್, ಅಲ್ಲಿನ ಸರಕಾರಿ ವಿಶ್ವವಿದ್ಯಾನಿಲಯದ ಕಾನೂನು ಪದವೀಧರ. ಕಾನೂನು ಕಲಿಯುತ್ತಿದ್ದಾಗ ಇವರ ಗುರುವಾಗಿದ್ದವರು ಸೋವಿಯತ್ ಒಕ್ಕೂಟದ ಕೊನೆಯ ಕಮ್ಯುನಿಸ್ಟ್ ಅಧ್ಯಕ್ಷ ನಿಕೊಲಾಯ್ ಗೊರ್ಬಚೆವ್ ಅವರ ಪೆರೆಸ್ತ್ರೋಯ್ಕ (ಪುನರ್ರಚನೆ) ಮತ್ತು ಗ್ಲಾಸ್ನಾಸ್ತ್ (ಪಾರದರ್ಶಕತೆ) ಸುಧಾರಣೆಗಳ ಪ್ರಬಲ ಪ್ರತಿಪಾದಕರಾಗಿದ್ದ ಅನಾತೊಲಿ ಸೊಬ್ಚಕ್. ಈ ಎರಡೂ ಸುಧಾರಣೆಗಳನ್ನು ಪುಟಿನ್ ಈಗ ಕಾಲ್ನಡಿಗೆ ತಳ್ಳಿ, ಭಯಾನಕ ಮುಖ ಹೊಂದಿದ್ದ ಕೆಜಿಬಿ ಶೈಲಿಯನ್ನು ತನ್ನದಾಗಿಸಿಕೊಂಡಿರುವುದು ವಿಪರ್ಯಾಸ.
ಆರಂಭದಲ್ಲಿ ಅವರು ರಾಷ್ಟ್ರೀಯ ಭದ್ರತೆಯ ಗುಪ್ತಚರ ಸಂಸ್ಥೆ ಕೆಜಿಬಿಯ ವಿದೇಶಿ ಗುಪ್ತಚರ ಅಧಿಕಾರಿಯಾಗಿ 15 ವರ್ಷ ಸೇವೆ ಸಲ್ಲಿಸಿದರು. ಸೋವಿಯತ್ ಒಕ್ಕೂಟ ಚೂರುಚೂರಾದ ನಂತರ ಉಳಿದ, ಇನ್ನೂ ಪ್ರಪಂಚದ ಅತಿದೊಡ್ಡ ದೇಶ ರಶ್ಯನ್ ಫೆಡರೇಶನ್ನ ಅಧ್ಯಕ್ಷರಾದ ಬೋರಿಸ್ ಯೆಲ್ಸಿನ್ ಅಧಿಕಾರ ವಹಿಸಿಕೊಳ್ಳುವುದಕ್ಕಿಂತ ಸ್ವಲ್ಪ ಮೊದಲು ಲೆಫ್ಟಿನೆಂಟ್ ಕರ್ನಲ್ ಸ್ಥಾನದಲ್ಲಿ ಕೆಜಿಬಿಯಿಂದ ನಿವೃತ್ತಿ ಪಡೆದ (1990) ಪುಟಿನ್, ಲೆನಿನ್ಗ್ರಾಡ್ ವಿಶ್ವವಿದ್ಯಾನಿಲಯದಲ್ಲಿ ಪ್ರೊರೆಕ್ಟರ್ ಆಗಿ ಸಾರ್ವಜನಿಕ ಸೇವೆ ಆರಂಭಿಸಿದರು. ನಂತರ ತನ್ನ ಗುರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸೈಂಟ್ ಪೀಟರ್ಸ್ಬರ್ಗ್ನ ಮೊದಲ ಮೇಯರ್ ಸೊಬ್ಚೆಕ್ ಅವರ ಸಲಹೆಗಾರರಾದರು. ಯಾವುದೇ ರೀತಿಯಿಂದಲಾದರೂ ತನ್ನ ಕೆಲಸ ಮಾಡಿಸಿಕೊಳ್ಳುವ ಚಾಕಚಕ್ಯತೆ ಹೊಂದಿರುವ ಪುಟಿನ್, 1994ರಲ್ಲಿಯೇ ಉಪ ಮೇಯರ್ ಆದರು.
1996ರಲ್ಲಿ ಮಾಸ್ಕೋಗೆ ಸ್ಥಳಾಂತರಗೊಂಡ ಆವರು, ಅಧ್ಯಕ್ಷೀಯ ಸಿಬ್ಬಂದಿ ವಲಯ ಸೇರಿಕೊಂಡು, ಕ್ರೆಮ್ಲಿನ್ನ ಮುಖ್ಯ ಆಡಳಿತಗಾರರಾಗಿದ್ದ ಪೊವೆಲ್ ಬೊರೊದಿನ್ಗೆ ಸಹಾಯಕರಾದರು. ಕೆಜಿಬಿ ಗುಪ್ತಚರನಾಗಿ ಅತ್ಯಂತ ಮೇಧಾವಿ, (ಅಂತವರನ್ನೇ ಕೆಜಿಬಿಗೆ ಸೇರಿಸುತ್ತಿದ್ದುದು), ತಂತ್ರ, ಪ್ರತಿತಂತ್ರ, ಷಡ್ಯಂತ್ರ, ಕೊಲೆ, ಹಿಂಸೆ, ಕಲ್ಲು ಹೃದಯದ ನಿರ್ದಯತೆ, ಬುಡಮೇಲು, ಬ್ಲ್ಯಾಕ್ ಮೇಲ್ ಇತ್ಯಾದಿಗಳಲ್ಲಿ ತರಬೇತಿ ಪಡೆದು ನಿಷ್ಣಾತನಾಗಿದ್ದ ಪುಟಿನ್ಗೆ ಏಣಿ ಏರುವ ಕಲೆ ಸುಲಭವಾಗಿ ಸಿದ್ಧಿಸಿತ್ತು.ಕೆಲವೇ ಸಮಯದಲ್ಲಿ ಆವರು ಪ್ರಭಾವಿ ಭದ್ರತಾ ಮಂಡಳಿಯ ಸದಸ್ಯರಾದರು. ಅಧ್ಯಕ್ಷ ಯೆಲ್ಸಿನ್-ಕುಡುಕತನ ಮತ್ತು ಸ್ತ್ರೀಲೋಲುಪನಾಗಿದ್ದು, ಯುಎಸ್ಎ ಭೇಟಿಯ ವೇಳೆಯೇ ಅವರ ಮರ್ಯಾದೆ ಮಾಧ್ಯಮಗಳಲ್ಲಿ ಹರಾಜಾಗಿತ್ತು. ಅದು ಹೇಗೆ ಪುಟಿನ್ ಅವರನ್ನು ಬುಟ್ಟಿಗೆ ಹಾಕಿಕೊಂಡರೋ ಗೊತ್ತಿಲ್ಲ; 1999ರಲ್ಲಿ ಯೆಲ್ಸಿನ್ ತನ್ನ ಉತ್ತರಾಧಿಕಾರಿಯಾಗಿ ಪುಟಿನ್ರನ್ನು ಆಯ್ಕೆ ಮಾಡಿ, ಪ್ರಧಾನಿಯಾಗಿ ನೇಮಕ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ ಈ ಮಹತ್ವಾಕಾಂಕ್ಷಿ ವ್ಯಕ್ತಿ, ಅಧಿಕಾರದ ಮೇಲಿನ ತನ್ನ ಉಡದ ಹಿಡಿತವನ್ನು ಬಿಗಿಗೊಳಿಸುತ್ತಾ ಬಂದಿದ್ದಾರೆ.
ಸಾರ್ವಜನಿಕರಿಗೆ ಸಂಪೂರ್ಣ ಅಪರಿಚಿತನಾಗಿದ್ದ ಪುಟಿನ್, ಸೋವಿಯತ್ ಒಕ್ಕೂಟದ ಪತನದ ನಂತರ ಜನರಲ್ಲಿದ್ಧ ಗೊಂದಲ, ಲೋಲುಪ ಯೆಲ್ಸಿನ್ರ ಯರ್ರಾಬಿರ್ರಿ ಆಡಳಿತದಿಂದ ಬೇಸತ್ತಿದ್ದ ರಶ್ಯನ್ ಜನತೆಗೆ ಪುಟಿನ್ರಲ್ಲಿ ಸಮತೂಕದ ದೃಢ ನಿರ್ಧಾರದ ವ್ಯಕ್ತಿಯನ್ನು ಕಂಡು ಅವರಿಂದ ಪ್ರಭಾವಿತರಾದರು. ಆತ ಚೆಚೆನ್ಯದ ಬಂಡುಕೋರರ ಮೇಲೆ ನಡೆಸಿದ ಸಂಘಟಿತ ಮಿಲಿಟರಿ ದಾಳಿ ಆತನ ಜನಪ್ರಿಯತೆಯನ್ನು ಏಕಾಏಕಿಯಾಗಿ ತುತ್ತತುದಿಗೇರಿಸಿತು. ಆಗ ಆತ ಎಲ್ಲಾ ಸರ್ವಾಧಿಕಾರದ ಆಕಾಂಕ್ಷಿಗಳಂತೆ ಬಳಸಿದ ನೀತಿಯೇ ಜನಾಂಗೀಯವಾದ ಮುಸ್ಲಿಂ ವಿರೋಧ ಮತ್ತು ಹುಸಿ ದೇಶಪ್ರೇಮ. (ಹಿಟ್ಲರ್ನಂತಾ ಕೆಲವರು ಇದನ್ನು ಹಿಂದೆಯೇ ತೋರಿಸಿಕೊಟ್ಟಿದ್ದರೆ, ಭಾರತ, ಬ್ರೆಜಿಲ್ ಮುಂತಾದ ಕೆಲವು ದೇಶಗಳು ಈಗ ಇದೇ ದಾರಿ ಹಿಡಿದಂತಿದೆ.)
ಡಿಸೆಂಬರ್ 31,1999ರಲ್ಲಿ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ ಯೆಲ್ಸಿನ್, ಪುಟಿನ್ರನ್ನು ಹಂಗಾಮಿ ಅಧ್ಯಕ್ಷರಾಗಿ ಘೋಷಿಸಿದರು. ದುರ್ಬಲವಾಗಿದ್ದ ರಶ್ಯವನ್ನು ಮತ್ತೆ ಹಿಂದಿನ ಭವ್ಯತೆಗೆ ಮರಳಿಸುವುದಾಗಿ ಭರವಸೆ ಕೊಟ್ಟ ಪುಟಿನ್, 2000ದ ಮಾರ್ಚ್ ಚುನಾವಣೆಯಲ್ಲಿ ಶೇ. 53 ಮತ ಗಳಿಸಿ, ಸುಲಭದಲ್ಲಿ ಗೆದ್ದರು. ಭ್ರಷ್ಟಾಚಾರವನ್ನು ನಿವಾರಿಸಿ, ಮಾರುಕಟ್ಟೆಯನ್ನು ನಿಯಂತ್ರಿಸುವುದಾಗಿ ಹೇಳಿ, ಆಗ ಇನ್ನೂ ಸಾಕಷ್ಟು ಪ್ರಬಲವಾಗಿದ್ದ ಕಮ್ಯುನಿಸ್ಟ್ ಪಕ್ಷವನ್ನು ಸಮಾಧಾನಗೊಳಿಸಿದರು. ಭಾರತದಲ್ಲಿ ಕೆಲವು ಎಡಪಂಥೀಯರು ಅದನ್ನೇ ಇನ್ನೂ ನಂಬಿರುವಂತಿದೆ. ಆದರೆ, ಆತ ಸಾಗಿದ ರೀತಿ ಇದಕ್ಕೆ ವಿರುದ್ಧವಾದದ್ದು.
(Oligarch)ಆಗಲೇ ಅವರ ಕೇಂದ್ರೀಕರಣ ಮತ್ತು ಸರ್ವಾಧಿಕಾರಿ ಪ್ರಕ್ರಿಯೆ ಆರಂಭವಾಗಿತ್ತು. ರಶ್ಯದಲ್ಲಿದ್ದ 89 ವಿಭಿನ್ನ ರಾಜ್ಯಗಳನ್ನು ಕೇವಲ ಏಳು ಆಡಳಿತಾತ್ಮಕ ಜಿಲ್ಲೆಗಳ ಅಡಿಗೆ ತಂದು ನೇರ ಅಧ್ಯಕ್ಷರಿಂದಲೇ ನೇಮಕವಾಗುವ ಆಡಳಿತಾಧಿಕಾರಿಗಳನ್ನು ಅವರು ತಂದರು. ಮಾಧ್ಯಮ ಮತ್ತು ಉದ್ಯಮಪತಿಗಳಾದ ಭಾರೀ ಕುಳ ಗಳನ್ನು ಹದ್ದುಬಸ್ತಿಗೆ ತಂದು ತನ್ನ ಅಡಿಯಾಳಾಗಿ ಮಾಡಿಕೊಂಡರು. ಇಂದು ಅವರೇ ಈ ಕುಳಗಳ ಮಾಫಿಯಾದ ’ಝಾರ್’ ಆಗಿದ್ದಾರೆ. ಈ ನಡುವೆ ಚೆಚೆನ್ ಬಂಡುಕೋರರು ರಶ್ಯನ್ ಸೇನೆಗೆ ಭಾರೀ ಪ್ರತಿರೋಧ ತೋರಿ ಮಾಸ್ಕೊ ಮತ್ತಿತರರ ಮೇಲೆ ಭಯೋತ್ಪಾದಕ ದಾಳಿ ನಡೆಸಿದುದರ ಪರಿಣಾಮವಾಗಿ ಭಾರೀ ಸಾವುನೋವು ಅನುಭವಿಸಬೇಕಾಗಿ ಬಂದು ಸೇನೆ ಹಿಂತೆಗೆದರೂ, ಜನಾಂಗೀಯ ದ್ವೇಷ ಮತ್ತು ಹುಸಿ ದೇಶಪ್ರೇಮ ಕೈಬಿಡಲಿಲ್ಲ. ಜೊತೆಗೆ, ಬಹಳ ವರ್ಷಗಳ ಆರ್ಥಿಕ ಹಿಂಜರಿಕೆಯ ಬಳಿಕ ಚೇತರಿಕೆ ಆರಂಭವಾಗಿತ್ತು. ಪರಿಣಾಮವಾಗಿ 2004ರಲ್ಲಿ ಪುಟಿನ್ ಸುಲಭವಾಗಿ ಮರು ಆಯ್ಕೆ ಆದರೆ, ಮತ್ತವರ ಯುನೈಟೆಡ್ ರಶ್ಯ ಪಕ್ಷ 2007ರ ಡಿಸೆಂಬರಿನಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಭಾರೀ ಬಹುಮತ ಪಡೆಯಿತು. ಕಮ್ಯುನಿಸ್ಟ್ ಪಕ್ಷ ಮತ್ತು ಅಂತರ್ರಾಷ್ಟ್ರೀಯ ವೀಕ್ಷಕರು ಚುನಾವಣಾ ಅಕ್ರಮಗಳ ಬಗ್ಗೆ ದೂರಿದರೂ ಪ್ರಯೋಜನವಾಗಲಿಲ್ಲ. ಆದರೆ, 2008ರಲ್ಲಿ ಸಾಂವಿಧಾನಿಕ ನಿಯಮವೊಂದರ ಕಾರಣ ಆತ ರಾಜೀನಾಮೆ ನೀಡಬೇಕಾಯಿತು. ಆತ ಡ್ಮಿತ್ರಿ ಮೆಡ್ವೆಡೇವ್ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದರು.
2008ರ ಚುನಾವಣೆಯಲ್ಲಿ ಮೆಡ್ವೆಡೇವ್ ಭಾರಿ ಜಯಗಳಿಸಿದ ತಕ್ಷಣವೇ, ತಾನು ಯುನೈಟೆಡ್ ರಶ್ಯ ಪಕ್ಷದ ಅಧ್ಯಕ್ಷತೆ ವಹಿಸಿಕೊಂಡಿರುವುದಾಗಿ ಪುಟಿನ್ ಘೋಷಿಸಿದರು. ‘ಹೋದೆಯಾ ಪಿಶಾಚಿ ಎಂದರೆ, ಬಂದೆ ಗವಾಕ್ಷಿಯೊಳಗಿಂದ’ ಎಂಬಂತೆ ಅಧ್ಯಕ್ಷ ಸ್ಥಾನ ವಹಿಸಿಕೊಂಡ ತಕ್ಷಣವೇ ಮೆಡ್ವಡೇವ್ ಪ್ರಧಾನಿಯಾಗಿ ಪುಟಿನ್ ಅವರನ್ನೇ ನೇಮಿಸಿದರು. ತನ್ನ ಅಧಿಕಾರ ಸ್ಥಾಪಿಸಲು ಮೆಡ್ವೆಡೇವ್ ಯತ್ನಿಸಿದರೂ ಪುಟಿನ್ ಕೈಗೊಂಬೆಯಾಗಿಯೇ ಉಳಿಯ ಬೇಕಾಯಿತು. ಮೆಡ್ವೆಡೇವ್ ಎರಡನೇ ಅವಧಿಗೆ ಸ್ಪರ್ಧಿಸುವರು ಎಂಬ ನಿರೀಕ್ಷೆ ಸುಳ್ಳಾಯಿತು. ಅವರಿಬ್ಬರೂ ಸ್ಥಾನ ಬದಲಿಸಿಕೊಂಡರು. ಪುಟಿನ್ ಮತ್ತೆ ಅಧ್ಯಕ್ಷೀಯ ಚುನಾವಣೆಗೆ ನಿಂತಾಗ ಅಚ್ಚರಿಕಾರಕವಾಗಿ ಭಾರೀ ಪ್ರತಿಭಟನೆಗಳು ನಡೆದವು. ಆದರೆ, ಚುನಾವಣಾ ಅಕ್ರಮಗಳಿಗೆ ಎಲ್ಲಾ ತಯಾರಿಗಳು ನಡೆದಿದ್ದವು. 2012ರ ಮಾರ್ಚ್ಲ್ಲಿ ಪುಟಿನ್ ಕಷ್ಟಪಟ್ಟು ಗೆದ್ದರು.
ಮೂರನೇ ಅವಧಿಗೆ ಅಧ್ಯಕ್ಷನಾಗಿ ಆಯ್ಕೆಯಾದ ತಕ್ಷಣ ಪುಟಿನ್ ಮಾಡಿದ ಕೆಲಸವೆಂದರೆ ಮೆಡ್ವೆಡೋವ್ರನ್ನು ಪ್ರಧಾನಿಯಾಗಿ ಮತ್ತೆ ನೇಮಿಸುವುದು ಮತ್ತು ವಿರೋಧಿಗಳನ್ನು ಬೇರೆಬೇರೆ ರೀತಿಯಲ್ಲಿ ಸದೆಬಡಿಯುವುದು. ಚುನಾವಣೆಯಲ್ಲಿ ವಿರೋಧ ಆತನನ್ನು ಚೆನ್ನಾಗಿ ಚುಚ್ಚಿತ್ತು. ಪ್ರದರ್ಶನಗಳನ್ನು ನಿರ್ದಯವಾಗಿ ದಮನಿಸಲಾಯಿತು. ಅವುಗಳ ನಾಯಕರು ಮತ್ತು ಪ್ರತಿಪಕ್ಷಗಳ ನಾಯಕರನ್ನು ಜೈಲಿಗೆ ತಳ್ಳಲಾಯಿತು. ವಿದೇಶಿ ದೇಣಿಗೆ ಪಡೆಯುವ ಸ್ವಯಂಸೇವಾ ಸಂಸ್ಥೆಗಳನ್ನು ನಿಷೇಧಿಸಲಾಯಿತು. ಪತ್ರಿಕಾ ಸ್ವಾತಂತ್ರದ ಮೇಲಿದ್ದ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಲಾಯಿತು. ಪುಟಿನ್ ನವ ರಶ್ಯದ ಪುಂಗಿ ಊದಲು ಆರಂಭಿಸಿದರು. ಪಾಶ್ಚಾತ್ಯರ ವಿರುದ್ಧ ಸಂಘರ್ಷದ ಧೋರಣೆ ಹೆಚ್ಚಾಯಿತು. 2014ರ ಜುಲೈ 17ರಂದು ಪೂರ್ವ ಉಕ್ರೇನ್ನ ರಶ್ಯ ಬೆಂಬಲಿತ ಬಂಡುಕೋರರು 298 ಜನರಿದ್ದ ಮಲೇಷಿಯಾ ಏರ್ಲೈನ್ಸ್ನ ಫ್ಲೈಟ್ ಎಂಎಚ್ 17 ಪ್ರಯಾಣಿಕ ವಿಮಾನವನ್ನು ಹೊಡೆದುರುಳಿಸಿದರು. ಇದಕ್ಕಾಗಿ ಬಳಸಿದ ನೆಲದಿಂದ ಆಗಸಕ್ಕೆ ಹಾರಿಸುವ ಕ್ಷಿಪಣಿ ಒದಗಿಸಿದ್ದು ರಶ್ಯ ಎಂದು ಸಾಕ್ಷ್ಯಗಳು ಸಿಕ್ಕಿದಾಗ ಪಾಶ್ಚಾತ್ಯ ದಿಗ್ಬಂಧನಗಳು ಬಿಗಿಯಾದವು. ಪುಟಿನ್ ಇನ್ನಷ್ಟು ಆಕ್ರಮಣಕಾರಿಯಾದರು.
2014ರಲ್ಲಿ ರಶ್ಯವು ಉಕ್ರೇನ್ನ ಪೂರ್ವ ಮತ್ತು ದಕ್ಷಿಣದ ಮೇಲೆ ಆಕ್ರಮಣ ಮಾಡಿ, ಯಾವುದೇ ಪ್ರತಿರೋಧವಿಲ್ಲದೆ ಕಪ್ಪು ಸಮುದ್ರದ ಪರ್ಯಾಯ ದ್ವೀಪ ಕ್ರೈಮಿಯವನ್ನು ಸ್ವಾಧೀನಪಡಿಸಿಕೊಂಡದ್ದೇ ಅಲ್ಲದೆ, ಪೂರ್ವದ ದೊನೆಟ್ಸ್ಕ್ ಮತ್ತು ಲುಷಾನ್ಸ್ಕ್ ಪ್ರಾಂತಗಳಲ್ಲಿ ಬಂಡುಕೋರರ ನೆಲೆಗಳನ್ನು ಬಲಪಡಿ ಸಿತು. ಇದು ಮಿನ್ಸ್ಕ್ ಒಪ್ಪಂದದಿಂದ ಕೊನೆಕೊಂಡಿದ್ದು, ಇದೀಗ ಮತ್ತೆ ಭುಗಿಲೆದ್ದಿದೆ. 2015ರಲ್ಲಿ ಅದು ಸಿರಿಯದ ಅಂತರ್ಯುದ್ಧದಲ್ಲಿ ನೇರವಾಗಿ ಭಾಗಿಯಾಗಿ, ವಿರೋಧಿಗಳ ಮೇಲೆ ವೈಮಾನಿಕ ದಾಳಿ ನಡೆಸಿ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಅವರನ್ನು ಉಳಿಸಿತು. ಈ ಯುದ್ಧ ಈಗಲೂ ಮುಂದುವರಿದಿದ್ದು, ಎರಡೂ ಯುದ್ಧಗಳಲ್ಲಿ ಸಾವಿರಾರು ಮಂದಿ ಸತ್ತಿದ್ದಾರೆ ಮತ್ತು ಲಕ್ಷಾಂತರ ಮಂದಿ ನಿರ್ಗತಿಕರಾಗಿ ವಲಸೆ ಹೋಗಿದ್ದಾರೆ.
ಫೆಬ್ರವರಿ 27, 2015ರಂದು ಪ್ರತಿಪಕ್ಷ ನಾಯಕ ಬೋರಿಸ್ ನೆಮ್ಸ್ತೋವ್ ಅವರನ್ನು, ಉಕ್ರೇನ್ ಮೇಲಿನ ಆಕ್ರಮಣವನ್ನು ಬಹಿರಂಗವಾಗಿ ವಿರೋಧಿಸಿದ ಕೆಲವೇ ಸಮಯದಲ್ಲಿ ಕ್ರೆಮ್ಲಿನ್ಗೆ ಕೂಗಳತೆಯ ದೂರದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಇದು ಈ ರೀತಿಯಲ್ಲಿ ಕೊಲೆಯಾದ ಪುಟಿನ್ ವಿರೋಧಿಗಳ ಒಂದು ಉದಾರಣೆ ಮಾತ್ರವಷ್ಟೇ. ಇದಕ್ಕಿಂತ ಮೊದಲು ಪುಟಿನ್ ಮತ್ತು ಮಾಫಿಯಾ ಸಂಬಂಧವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ, ಯುಕೆಗೆ ಪರಾರಿಯಾಗಿದ್ದ ಎಫ್ಎಸ್ಬಿ (ಹಿಂದಿನ ಕೆಜಿಬಿಯ ಹೊಸ ಅವತಾರ) ಆಧಿಕಾರಿ ಅಲೆಕ್ಸಾಂಡರ್ ಲಿತ್ವಿನೆಂಕೊ ಅವರನ್ನು ಲಂಡನ್ನ ಹೊಟೇಲೊಂದರಲ್ಲಿ ಕಾಫಿಯಲ್ಲಿ ಪೊಲೋನಿಯಂ 210 ಎಂಬ ಆಪರೂಪದ ವಿಷಹಾಕಿ ಕೊಲ್ಲಲಾಗಿತ್ತು. 2016ರಲ್ಲಿ ಲಂಡನ್ನ ಸಾರ್ವಜನಿಕ ವಿಚಾರಣೆಯಲ್ಲಿ ಪುಟಿನ್ ದೋಷಿ ಎಂದು ಹೇಳಲಾಗಿದ್ದರೂ ಆದುದೇನು? ಆರೋಪಿಗಳಲ್ಲಿ ಒಬ್ಬನಾದ ಆಂದ್ರೇಯಿ ಲುಗವೊಯ್ ರಶ್ಯದ ಸಂಸತ್ತು ಡ್ಯುಮಾದ ಸದಸ್ಯನಾಗಿದ್ದಾನೆ. (ಕಿಮಿನಲ್ಗಳು, ಕೊಲೆ ಆರೋಪ ಹೊತ್ತವರು ಶಾಸಕರು, ಸಂಸ ದರು, ಮಂತ್ರಿಗಳಾಗುವುದು ಭಾರತದಲ್ಲಿ ಮಾತ್ರ ಅಲ್ಲ!)
ದೊಡ್ಡ ಕತೆಯನ್ನು ಚಿಕ್ಕದು ಮಾಡಿ ಹೇಳುವುದಾದಲ್ಲಿ ಪುಟಿನ್ ರಶ್ಯದ ಸಂವಿಧಾನಕ್ಕೆ ತಿದ್ದುಪಡಿ ತಂದು, ತಾನು ಸಾಯುವ ತನಕ ಅಧ್ಯಕ್ಷನಾಗಿ ಮುಂದುವರಿಯಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಮಾರ್ಚ್ 2018ರ ಚುನಾವಣೆಯಲ್ಲಿ ಪುಟಿನ್ ನಾಲ್ಕನೇ ಬಾರಿಗೆ ಸ್ಪರ್ಧಿಸಿದಾಗ ಜನಪ್ರಿಯ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಅವರನ್ನು ಕ್ಷುಲ್ಲಕ ಕಾರಣಕ್ಕಾಗಿ ಸ್ಪರ್ಧೆಯಿಂದ ಆನರ್ಹಗೊಳಿಸಲಾಯಿತು. ಕಮ್ಯುನಿಸ್ಟ್ ಅಭ್ಯರ್ಥಿ ಪಾವೆಲ್ ಗ್ರುದಿನಿನ್ ಮತ್ತು ಇತರ ಅಭ್ಯರ್ಥಿಗಳ ವಿರುದ್ಧ ಸರಕಾರಿ ನಿಯಂತ್ರಣದ ಮಾಧ್ಯಮಗಳು ಮುಗಿಬಿದ್ದು, ಅಪಪ್ರಚಾರ ಮಾಡಿ ಚಿಂದಿಮಾಡಿದವು. ನೊವಾಲ್ನಿಯನ್ನು ವಿಷವುಣಿಸಿ ಕೊಲೆ ಮಾಡಲು ಯತ್ನಿಸಲಾಯಿತು. ಹೇಗೂ ಬದುಕುಳಿದು ಜರ್ಮನಿಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದ ರೋಗಿಯನ್ನು ವಿದೇಶ ಪ್ರಯಾಣ ನಿಷೇಧಿಸಿದ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಕ್ಕಾಗಿ, ವಿಮಾನ ನಿಲ್ದಾಣದಲ್ಲೇ ಬಂಧಿಸಿ ಜೈಲಿಗೆ ತಳ್ಳಲಾಯಿತು. ಈಗ ಅವರ ವಕೀಲರು ಮತ್ತು ವೈದ್ಯರಿಗೂ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಹೇಳಲಾಗಿದೆ. ಪ್ರತಿಭಟಿಸಿದ ಅವರ ಬೆಂಬಲಿಗರನ್ನೂ ಜೈಲಿಗೆ ಹಾಕಲಾಗಿದೆ.
ರಶ್ಯವನ್ನು ಹಿಂದಿನ ಮಿಲಿಟರಿ ಶಕ್ತಿಯನ್ನಾಗಿ ಮಾಡುವುದಾಗಿಯೂ, ಬೇರೆ ದೇಶಗಳ ಚುನಾವಣೆ ಮತ್ತು ಯುದ್ಧಗಳಲ್ಲಿ ಹಸ್ತಕ್ಷೇಪ ಮಾಡುವುದಾಗಿಯೂ ಪುಟಿನ್ ಹಲವಾರು ಕಡೆ ಹೇಳಿದ್ದುಂಟು. ಡೊನಾಲ್ಡ್ ಟ್ರಂಪ್ ಅವರ ಎರಡು ಚುನಾವಣೆಗಳಲ್ಲಿಯೂ ಪ್ರಭಾವ ಬೀರಿದ ಆರೋಪ ರಶ್ಯದ ಮೇಲಿದೆ. ಫ್ರಾನ್ಸ್ ಮುಂತಾದ ದೇಶಗಳ ಚುನಾವಣೆಗಳಲ್ಲಿ ಕೂಡಾ ಇಂತಹ ಆರೋಪಗಳಿವೆ.
ಒಟ್ಟಿನಲ್ಲಿ ಹಿಂದಿನ ರಶ್ಯನ್ ಸಾಮ್ರಾಜ್ಯದ ಕನಸು ತಲೆಗೆ ಹೊಕ್ಕಂತೆ ಪುಟಿನ್ ವರ್ತಿಸುತ್ತಿದ್ದಾರೆ.
ಪ್ರಸ್ತುತ ಉಕ್ರೇನ್ ಮೇಲಿನ ಆಕ್ರಮಣ ಮಾಡಿ ಇಡೀ ವಿಶ್ವವನ್ನು ಮೂರನೇ ಮಹಾಯುದ್ಧದ ಸಂಕಷ್ಟಕ್ಕೆ ತಳ್ಳಿರುವುದು ಮತ್ತು ನಂತರದ ಬೆಳವಣಿಗೆಗಳ ಕುರಿತು ಎಲ್ಲರಿಗೂ ತಿಳಿದಿರುವಂತಹದ್ದೇ. ಇದು ಯಾವುದೇ ತಿರುವು ಪಡೆದುಕೊಳ್ಳಬಹುದು. ಇತಿಹಾಸ ಯಾವುದಾದರೂ ವಿಶೇಷ ತಿರುವು ತೆಗೆದುಕೊಳ್ಳದೇ ಇದ್ದರೆ, ಆರೋಗ್ಯಕರ ಮತ್ತು ಗಟ್ಟಿಮುಟ್ಟಾಗಿರುವ ಪುಟಿನ್ ಬದುಕಿರುವ ತನಕ ರಶ್ಯದ ಅಧ್ಯಕ್ಷನಾಗಿ ಮುಂದುವರಿಯುವ ಸಾಧ್ಯತೆಯಿದೆ. ಪುಟಿನ್ ಬೆಳವಣಿಗೆ ಮತ್ತು ರಶ್ಯದಲ್ಲಿ ನಡೆದುಬಂದ ವಿದ್ಯಮಾನಗಳನ್ನು ಗಮನವಿಟ್ಟು ಓದುತ್ತಾ ಹೋದ ಓದುಗರಿಗೆ ಭಾರತದ ನೆನಪು ಬಂದಿದ್ದರೆ ಅಚ್ಚರಿಯಿಲ್ಲ!