ಪ್ರಮುಖ ಎನ್ನಾರೈ, ಸಮಾಜ ಸೇವಕ ಎಸ್. ಎಂ. ಸಯ್ಯದ್ ಖಲೀಲ್ ಅವರಿಗೆ ಅಜ್ಮಾನ್‍ನಲ್ಲಿ ಸನ್ಮಾನ
ಅಜ್ಮಾನ್ : ಭಟ್ಕಳ ಮೂಲದ ಖ್ಯಾತ ಅನಿವಾಸಿ ಭಾರತೀಯ, ಸಮಾಜ ಸೇವಕ ಸಿ ಎ ಖಲೀಲ್ ಎಂದೇ ಚಿರಪರಿಚಿತರಾಗಿರುವ ಎಸ್ ಎಂ ಸಯ್ಯದ್ ಖಲೀಲ್ ಅವರು ಸಮಾಜಕ್ಕೆ ಹಾಗೂ ಸಮುದಾಯಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ನೂರ್ ಸ್ಪೋರ್ಟ್ಸ್ ಸೆಂಟರ್, ದುಬೈ ವತಿಯಿಂದ ಸನ್ಮಾನಿಸಲಾಯಿತು.
ಮಾರ್ಚ್ 20, ರವಿವಾರ ಅಜ್ಮಾನ್‍ನಲ್ಲಿ ನೂರ್ ಸ್ಪೋರ್ಟ್ಸ್ ಸೆಂಟರ್, ದುಬೈ ಘಟಕದ ವಾರ್ಷಿಕ ಸಮಾವೇಶದ ಅಂಗವಾಗಿ ಈ ಸನ್ಮಾನ ಕಾರ್ಯಕ್ರಮ ನಡೆದಿದೆ.
ಸಯ್ಯದ್ ಖಲೀಲ್ ಎಸ್ ಎಂ ಅವರು ಮಂಗಳೂರಿನ ಮಾಧ್ಯಮ ಕಮ್ಯುನಿಕೇಶನ್ಸ್ ಲಿಮಿಟೆಡ್ ಇದರ ಅಧ್ಯಕ್ಷರೂ ಆಗಿದ್ದು, ಕರಾವಳಿ ಕರ್ನಾಟಕದಾದ್ಯಂತ ತಮ್ಮ ಸಮಾಜ ಸೇವೆಗಳಿಗೆ ಮತ್ತು ಯುಎಇ ಯಲ್ಲಿ ಕನ್ನಡ, ಕೊಂಕಣಿ ಭಾಷೆ, ಸಂಸ್ಕೃತಿಗಳ ಏಳಿಗೆ ಹಾಗು ಕನ್ನಡಿಗ ಸಮುದಾಯಕ್ಕೆ ಅವರು ನೀಡಿದ ಕೊಡುಗೆಗಳಿಗೆ ಖ್ಯಾತರಾಗಿದ್ದಾರೆ.
ಸಯ್ಯದ್ ಖಲೀಲ್ ಅವರೊಂದಿಗೆ ಭಟ್ಕಳದ ಇನ್ನೊಬ್ಬ ಸಮಾಜ ಸೇವಕ ಹಾಗೂ ಸಮುದಾಯದ ನಾಯಕರಾಗಿರುವ ಮತ್ತು ಭಟ್ಕಳದ ನೂರ್ ಸ್ಪೋರ್ಟ್ಸ್ ಸೆಂಟರ್ ಪೋಷಕರಾದ ದಮ್ದ ಹಸನ್ ಶಬ್ಬರ್ ಅವರನ್ನೂ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸನ್ಮಾನಿಸಲಾಯಿತು.
ಉದ್ಯಮಿ ಖಮರ್ ಸದಾ ಸಹಿತ ಹಲವು ಖ್ಯಾತ ಅನಿವಾಸಿ ಭಾರತೀಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು ಮತ್ತು ಸಯ್ಯದ್ ಖಲೀಲ್ ಮತ್ತು ಹಸನ್ ಶಬ್ಬರ್ ಅವರ ಸಮಾಜ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.
ನೂರ್ ಸ್ಪೋರ್ಟ್ಸ್ ಸೆಂಟರ್‍ನ ದುಬೈ ಘಟಕದ ಅಧ್ಯಕ್ಷ ಶಹರಿಯಾರ್ ಖತೀಬ್, ಪ್ರಧಾನ ಕಾರ್ಯದರ್ಶಿ ಇಮ್ರಾನ್ ಖತೀಬ್, ಭಟ್ಕಳ್ ಮುಸ್ಲಿಂ ಜಮಾತ್ ದುಬೈ ಅಧ್ಯಕ್ಷ ಮುಯಿಝ್ ಮುಅಲ್ಲಿಂ ಮತ್ತಿತರರು ಉಪಸ್ಥಿತರಿದ್ದರು.