ವೈವಿಧ್ಯದ ಹರಿವಿಗೆ‘ನಿರಂತರ’ದ ಕೊಡುಗೆ
‘‘ನಿರಂತರ ರಂಗ ಉತ್ಸವ’’
ಕನ್ನಡದ ಪೂಜಾರಿ ಎಂದೇ ಹೆಸರಾದ ಹಿರೇಮಗಳೂರು ಕಣ್ಣನ್ ಅವರ ಕರ್ಣಾನಂದ ಉಂಟುಮಾಡುವ ಅಭೂತಪೂರ್ವ ‘‘ನುಡಿಮುತ್ತು’’ಗಳೊಂದಿಗೆ ಸಮಾಪ್ತಿಯಾದ ಬಹುರೂಪಿಯ ‘ತಾಯಿ’ ಯಾವುದೋ ಕೊರತೆಯಿಂದ ನಲುಗುತ್ತಿರಬೇಕು. ಈ ‘ತಾಯಿ’ಯ ಸಾಂಸ್ಕೃತಿಕ ದಾಹವನ್ನು ತೀರಿಸಲೆಂದೇ ಬಹುಶಃ ಮೈಸೂರು ಮತ್ತಷ್ಟು ರಂಗಪ್ರಯೋಗಗಳಿಗೆ ತೆರೆದುಕೊಂಡು ರಂಗಪ್ರೇಮಿಗಳಿಗೆ ಮತ್ತು ಪ್ರಜ್ಞಾವಂತ ಸಮಾಜಕ್ಕೆ ರಂಗಭೂಮಿಯ ಚೆಲುವನ್ನು ಪ್ರದರ್ಶಿಸಬೇಕಿದೆ. ಈ ಕೊರತೆಯನ್ನು ನೀಗಿಸಲೆಂದೋ ಏನೋ ಮೈಸೂರಿನ ಪ್ರತಿಷ್ಠಿತ ನಿರಂತರ ಫೌಂಡೇಷನ್ ಈ ವಾರ ‘‘ನಿರಂತರ ರಂಗ ಉತ್ಸವ’’ವನ್ನು ಆಯೋಜಿಸಿದೆ. ವಿಭಿನ್ನ ಕಥಾವಸ್ತುಗಳನ್ನೊಳಗೊಂಡ ಐದು ವಿಶಿಷ್ಟ ನಾಟಕಗಳನ್ನು ಪ್ರದರ್ಶಿಸಲು ರಾಮಕೃಷ್ಣನಗರದಲ್ಲಿರುವ ರಮಾಗೋವಿಂದ ರಂಗ ಮಂದಿರ ಸಕಲ ಸಿದ್ಧತೆಗಳೊಂದಿಗೆ ನಳನಳಿಸಿ ನಿಂತಂತೆ ಕಾಣುತ್ತಿದೆ.
ರಂಗಭೂಮಿ ಒಂದು ಸಾಮಾಜಿಕ-ಸಾಂಸ್ಕೃತಿಕ ಅಭಿವ್ಯಕ್ತಿ ಮಾಧ್ಯಮವಷ್ಟೇ ಅಲ್ಲ ಒಂದು ಪ್ರತಿರೋಧದ ನೆಲೆಗಳ ಕಲಾತ್ಮಕ ಅಭಿವ್ಯಕ್ತಿಯ ಭೂಮಿಕೆಯೂ ಹೌದು ಎಂಬ ವಾಸ್ತವವನ್ನು ಅರಿತುಕೊಂಡೇ ತನ್ನ ರಂಗಪಯಣವನ್ನು ಮುನ್ನಡೆಸಿರುವ ನಿರಂತರ ಫೌಂಡೇಷನ್, ಸಮಾಜಕ್ಕೆ ಅಂಟಿರುವ ಜಡತ್ವ ಮತ್ತು ಪಾಶವೀ ಸಂಕೋಲೆಗಳನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ತನ್ನ ಭವಿಷ್ಯದ ಹೆಜ್ಜೆಗಳನ್ನಿರಿಸುತ್ತದೆ ಎಂದು ಆಶಿಸಬಹುದು. ತನ್ನ ಸಾಮಾಜಿಕ ಜವಾಬ್ದಾರಿಗಳನ್ನು ಅರಿತು, ಕಲೆಯೊಂದಿಗೆ ಸಾಮಾಜಿಕ ಪ್ರಜ್ಞೆಯನ್ನೂ ಬೆಸೆಯುವ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ಮಾಡಿರುವ ನಿರಂತರ ಫೌಂಡೇಷನ್ ಈ ಹಿಂದೆ ಚಾಮಲಾಪುರ ಉಷ್ಣ ವಿದ್ಯುತ್ ಸ್ಥಾವರದಿಂದುಂಟಾಗುವ ಪರಿಸರ ಹಾನಿಯನ್ನು ಕುರಿತು ಬೀದಿ ನಾಟಕಗಳನ್ನು ಆಯೋಜಿಸಿತ್ತು. ಜನಪದ ಮತ್ತು ಸಮಕಾಲೀನ ಸಾಂಸ್ಕೃತಿಕ ನೆಲೆಗಳನ್ನು ಶೋಧಿಸುವ ಮೂಲಕ ರಂಗಭೂಮಿಗೆ ಆಧುನಿಕತೆಯ ಸ್ಪರ್ಶ ನೀಡುವುದರೊಂದಿಗೆ ಪರಂಪರೆಯ ಬೇರುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈ ರೀತಿಯ ನಾಟಕೋತ್ಸವಗಳು ನೆರವಾಗುತ್ತವೆ. ಇದು ಈ ಕಾಲಘಟ್ಟದ ಅವಶ್ಯಕತೆಯೂ ಹೌದು. ರಂಗೋತ್ಸವ ಅಥವಾ ನಾಟಕೋತ್ಸವ ಎಂದರೆ ಲಕ್ಷಾಂತರ ರೂ.ಗಳ ಆದಾಯ ಗಳಿಸುವ ಅಥವಾ ನೂರಾರು ಜನರನ್ನು ರಂಜಿಸುವ ಒಂದು ಜಾತ್ರೆ ಅಲ್ಲ ಎನ್ನುವ ವಾಸ್ತವವನ್ನು ಬಹುಶಃ ನಿರಂತರ ಫೌಂಡೇಷನ್ ಅರ್ಥಮಾಡಿಕೊಂಡಿರಬೇಕು. ಹಾಗಾಗಿಯೇ ಈ ಸಂಸ್ಥೆಯಿಂದ ಆಯೋಜಿಸಲಾಗುತ್ತಿರುವ ‘‘ನಿರಂತರ ರಂಗ ಉತ್ಸವ 2021-22’’ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಸುತ್ತಲಿನ ವಾಸ್ತವಿಕ ಬದುಕನ್ನು ತನ್ನೆಲ್ಲಾ ಮಜಲುಗಳಲ್ಲೂ ಪ್ರಸ್ತುತಪಡಿಸುತ್ತಲೇ ಸಮಾಜದ ಓರೆಕೋರೆಗಳನ್ನು ಶೋಧಿಸುತ್ತಾ, ಆಂಗಿಕ-ಭಾವನಾತ್ಮಕ-ಕಲಾತ್ಮಕ ಅಭಿವ್ಯಕ್ತಿಯ ಮೂಲಕ ಭವಿಷ್ಯದ ಪೀಳಿಗೆಗೆ, ವರ್ತಮಾನದ ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ನೀಡುವ ನಿಟ್ಟಿನಲ್ಲಿ ಈ ರಂಗೋತ್ಸವ ಸಾಗುತ್ತದೆ ಎಂದು ಆಶಿಸುವುದು ಅತಿಶಯ ಎನಿಸಲಾರದು.
ಇದೇ ತಿಂಗಳ 23ರಿಂದ 27ರವರಗೆ ಐದು ದಿನಗಳ ಕಾಲ ಐದು ವಿಶಿಷ್ಟ, ವೈವಿಧ್ಯಪೂರ್ಣ ರಂಗಪ್ರಯೋಗಗಳನ್ನು ಮೈಸೂರಿನ ಜನತೆಯ ಮುಂದೆ ನಿರಂತರ ಫೌಂಡೇಷನ್ ಪ್ರಸ್ತುತಪಡಿಸಲಿದೆ. ನುರಿತ ಕಲಾವಿದರೊಡನೆ, ಕಲಿಕೆಯ ಹಾದಿಯಲ್ಲಿರುವ ಯುವ ಕಲಾವಿದರನ್ನೂ ಪೋಷಿಸುತ್ತಾ, ಅನುಭವಿ ನಿರ್ದೇಶಕರ ಗರಡಿಯಲ್ಲಿ ಕಲೆಯ ವಿಭಿನ್ನ ಆಯಾಮಗಳನ್ನು ಪಳಗಿಸುತ್ತಾ, ವಿವಿಧ ಪ್ರಕಾರಗಳ ಸಾಹಿತ್ಯಾಭಿವ್ಯಕ್ತಿಯನ್ನು ರಂಗಭೂಮಿಯಲ್ಲಿ ಅಳವಡಿಸುವ ಪ್ರಕ್ರಿಯೆಗೆ ನಿರಂತರ ಫೌಂಡೇಷನ್ ಮೂರ್ತ ಸ್ವರೂಪ ನೀಡಬೇಕಿದೆ. ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಕಾರದೊಂದಿಗೆ ನಡೆಯಲಿರುವ ಐದು ದಿನಗಳ ರಂಗ ಉತ್ಸವದಲ್ಲಿ ಐದು ನಾಟಕಗಳು ಪ್ರದರ್ಶನಗೊಳ್ಳಲಿವೆ.
ಮೊದಲ ದಿನದ, ಮಾರ್ಚ್ 23, ‘ವಾರಸುದಾರಾ’ ನಾಟಕ ಯುವ ಮತ್ತು ಅನುಭವಿ ಕಲಾವಿದರನ್ನೊಳಗೊಂಡ ಒಂದು ಚಾರಿತ್ರಿಕ ಕಥನದ ವಿಶಿಷ್ಟ ನಾಟಕ. ಜಯರಾಮ ರಾಯಪುರ ರಚನೆಯ ಈ ನಾಟಕದ ಕಥಾವಸ್ತು ಮೊಘಲ್ ಸಾಮ್ರಾಜ್ಯದ ಸಂದರ್ಭದ್ದು. ಮೊಘಲ್ ವಂಶಸ್ಥರಾದ ಶಹಜಹಾನ್, ಔರಂಗಜೇಬ್ ಮತ್ತು ದಾರಾ ಶಿಕೋಹ್, ಈ ಮೂವರ ನಡುವೆ ಸಿಂಹಾಸನಕ್ಕಾಗಿ ನಡೆಯುವ ಅಂತರ್ ಕಲಹ ಮತ್ತು ಈ ಕಲಹದ ಸುತ್ತ ಆವರಿಸುವ ಚಾರಿತ್ರಿಕ ಕ್ರೌರ್ಯ, ಅಭೀಪ್ಸೆ, ಲಾಲಸೆ, ಅಧಿಕಾರ ಮೋಹ ಮತ್ತು ಸಾಮ್ರಾಜ್ಯದ ಕನಸುಗಳನ್ನು, ವರ್ತಮಾನದ ಸಾಮಾಜಿಕ ತುಮುಲಗಳ ಚೌಕಟ್ಟಿನಲ್ಲಿ ಅಭಿವ್ಯಕ್ತಗೊಳಿಸುವ ಒಂದು ಪ್ರಯತ್ನವನ್ನು ‘ವಾರಸುದಾರಾ’ ಮಾಡುತ್ತದೆ. ಅಧಿಕಾರಪೀಠವನ್ನು ಆಕ್ರಮಿಸಲು ಮನುಷ್ಯ ಹೇಗೆ ರಕ್ತದಾಹಿಯಾಗುತ್ತಾನೆ ಎನ್ನುವುದನ್ನು ಪ್ರತ್ಯಕ್ಷವಾಗಿ ನೋಡುತ್ತಿರುವ ವರ್ತಮಾನದ ಸಮಾಜದ ತಲ್ಲಣಗಳಿಗೆ ‘ವಾರಸುದಾರಾ’ ನೇರವಾಗಿಯೇ ಸ್ಪಂದಿಸುತ್ತದೆ ಎಂದು ಆಶಿಸೋಣ.
ಎರಡನೇ ದಿನ, ಮಾರ್ಚ್ 24 ಪ್ರದರ್ಶನಗೊಳ್ಳಲಿರುವ ‘ಮಾಯಾಬೇಟೆ’ ಬಹುಶಃ ಇತ್ತೀಚೆಗೆ ತಾನೇ ಬಹುರೂಪಿಯಲ್ಲಿ ಕಾಣಿಸಿಕೊಂಡ ‘ಕಣ್ಣನ್-ಸೂಲಿಬೆಲೆ’ ಪರಿಕಲ್ಪನೆಯ ‘ತಾಯಿ’ಯ ಮತ್ತೊಂದು ಮುಖವನ್ನು ಪರಿಚಯಿಸುತ್ತದೆ ಎಂದು ಭಾವಿಸುತ್ತೇನೆ. ಕೆ.ವೈ. ನಾರಾಯಣಸ್ವಾಮಿ ವಿರಚಿತ ಈ ನಾಟಕ ನಂಜುಂಡೇಗೌಡ ಅವರ ಸಾರಥ್ಯದಲ್ಲಿ ಮಹಿಳೆಯ ಸ್ಥಾನಮಾನಗಳನ್ನು ವರ್ತಮಾನದ ನೆಲೆಯ ಶೋಷಕ ವ್ಯವಸ್ಥೆಯ ಚೌಕಟ್ಟಿನಲ್ಲಿ ಪ್ರದರ್ಶಿಸಲು ಯತ್ನಿಸುತ್ತದೆ. ಸ್ತ್ರೀಕುಲವನ್ನು ‘ಆದರ್ಶ-ತ್ಯಾಗ ಮತ್ತು ಸಹನೆ’ಯ ಸರಳುಗಳ ಹಿಂದೆ ಬಂಧಿಸಿ ಆಕೆಯ ಮೇಲೆ ನಿರಂತರ ಶೋಷಣೆ, ದೌರ್ಜನ್ಯ, ಅತ್ಯಾಚಾರ ಎಸಗುತ್ತಲೇ ಇರುವ ಪುರುಷ ಸಮಾಜದ ಕರಾಳ ಮುಖವನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಬಹುಶಃ ‘ಮಾಯಾಬೇಟೆ’ ಯಶಸ್ವಿಯಾಗಲಿದೆ ಎಂದು ಆಶಿಸುತ್ತೇನೆ.
ರಂಗೋತ್ಸವದ ಮೂರನೆಯ ದಿನ, ಮಾರ್ಚ್ 25 ದ.ರಾ. ಬೇಂದ್ರೆ ಅವರ ‘ಸಾಯೋ ಆಟ’ ಪ್ರದರ್ಶಿತವಾಗಲಿದೆ. ಅಧಿಕಾರ ಮೋಹ ಮತ್ತು ಪೀಠದಾಹ ಎನ್ನುವುದು ಒಂದು ರಾಜಕೀಯ ವ್ಯಸನವಾಗಿರುವ ಈ ಕಾಲಘಟ್ಟದಲ್ಲಿ ಬೇಂದ್ರೆಯವರ ಈ ನಾಟಕ, ಹಾಸ್ಯ, ವಿಡಂಬನೆ ಮತ್ತು ತೀಕ್ಷ್ಣ ಸಂದೇಶದೊಂದಿಗೆ ಜನರನ್ನು ರಂಜಿಸುತ್ತದೆ. ತನ್ನ ಕುರ್ಚಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ‘ಸಾವಿನ ಸರದಾರ’ ಎಂದು ಬಿರುದಾಂಕಿತನಾದರೂ, ಲಜ್ಜೆಯಿಲ್ಲದೆ, ತನ್ನ ಗಜನಡೆಯನ್ನು ವಿಸ್ತರಿಸುತ್ತಲೇ ಹೋಗುವ ಅಧಿಕಾರದಾಹಿಗಳು ವಿಶ್ವದೆಲ್ಲೆಡೆ ಕಾಣುತ್ತಿರುವ ಈ ಸಂದರ್ಭದಲ್ಲಿ, ಬೇಂದ್ರೆಯವರ ಈ ನಾಟಕ ಪ್ರೇಕ್ಷಕರಲ್ಲಿ ಮತ್ತು ಸಾರ್ವಜನಿಕರಲ್ಲೂ ಒಂದು ಪ್ರಜ್ಞಾವಂತಿಕೆಯ ಜವಾಬ್ದಾರಿಯನ್ನು ಮೂಡಿಸಲು ನೆರವಾಗುತ್ತದೆ. ಬಿ.ಕೆ. ಕಿರಣ್ ಮತ್ತು ಕೆ.ವೈ. ಗುರುಪ್ರಸಾದ್ ಈ ನಾಟಕದ ಸಾರಥ್ಯ ವಹಿಸಲಿದ್ದಾರೆ. ಜಡಗಟ್ಟಿರುವ ಸಮಾಜವನ್ನು ‘ಸಾಯೋ ಆಟ’ ಬದುಕಿಸುತ್ತದೆ ಎಂದು ಆಶಿಸೋಣ. ನಾಲ್ಕನೆಯ ದಿನ ಮಾರ್ಚ್ 26ರಂದು ಪ್ರದರ್ಶನಕ್ಕೆ ಸಜ್ಜಾಗಿರುವುದು, ಇಂದು ಜನಸಾಮಾನ್ಯರ ನಾಡಿಮಿಡಿತಕ್ಕೆ ಸ್ಪಂದಿಸುವಂತಹ ಒಂದು ಅತಿಸೂಕ್ಷ್ಮ ವಿಚಾರಧಾರೆಯ ಕಥಾವಸ್ತುವನ್ನೊಳಗೊಂಡ ನಾಟಕ, ರಾಜಪ್ಪದಳವಾಯಿ ವಿರಚಿತ ‘ವೀ ದಿ ಪೀಪಲ್ ಆಫ್ ಇಂಡಿಯಾ’. ಸಂವಿಧಾನದ ಪೀಠಿಕೆಯಲ್ಲಿರುವ ಈ ಕೆಲವೇ ಅಕ್ಷರಗಳ ವ್ಯಾಪ್ತಿ, ಹರವು ಮತ್ತು ಪ್ರಭಾವ ವಿಶ್ವವ್ಯಾಪಿಯಾದದ್ದು. ಭಾರತದ ಸಂವಿಧಾನ ವಿಶ್ವಶ್ರೇಷ್ಠತೆಯನ್ನು ಪಡೆದಿರುವ ಮೂಲ ಕಾರಣ ಅದರಲ್ಲಿ ಅಡಕವಾಗಿರುವ ಸಮಾನತೆ, ಭ್ರಾತೃತ್ವ ಮತ್ತು ಸೌಹಾರ್ದತೆಯ ನೆಲೆಗಳು. ಈ ಸ್ಫೂರ್ತಿ ಭಾರತದ ಜನಮಾನಸದಲ್ಲಿ ಅಂತರ್‌ವಾಹಿನಿಯಂತೆ ಹರಿಯುತ್ತಲೇ ಇರಬೇಕಾಗುತ್ತದೆ. ಆದರೆ ಈ ಹರಿವಿನ ದಿಕ್ಕು ತಪ್ಪಿಸಿ, ವಿಕೃತ ತೊರೆಗಳನ್ನು ನಿರ್ಮಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದೆ. ಈ ಪ್ರಯತ್ನಗಳನ್ನು ಧಿಕ್ಕರಿಸುವ ರೀತಿಯಲ್ಲಿ ‘ನಿರಂತರ’ ಈ ನಾಟಕವನ್ನು ಪ್ರದರ್ಶಿಸಲಿದೆ. ಈ ಹೊತ್ತಿನ ಅತ್ಯಂತ ಆಪ್ತ ಮತ್ತು ಮನಸ್ಪರ್ಶಿ ಚಿಂತನೆಗಳನ್ನು ಸಂವಿಧಾನದ ಆಶಯಗಳೊಂದಿಗೆ ಚಿಗುರಿಸಲು ಈ ನಾಟಕ ಒಂದು ಕಲಾತ್ಮಕ ವಾಹಿನಿಯಾಗಲಿ.
ಐದನೆಯ ದಿನ, ರಂಗ ಉತ್ಸವದ ಸಮಾರೋಪ ‘ವಿ.ಶಾಂ.ಕೇ’ ಎಂಬ ಮೌನೇಶ ಬಡಿಗೇರ ವಿರಚಿತ ವಿಶಿಷ್ಟ ರಂಗಪ್ರಯೋಗದೊಂದಿಗೆ ಆಗಲಿದೆ. ಮಂಜುನಾಥ್ ಎಲ್. ಬಡಿಗೇರ ಅವರ ಸಾರಥ್ಯದಲ್ಲಿ ರಂಜಿಸಲಿರುವ ಈ ನಾಟಕದ ಕಥಾವಸ್ತು ವಿಭಿನ್ನವಾದದ್ದು. ಪ್ರಾಚೀನ ಸಂಸ್ಕೃತ ನಾಟಕಗಳಲ್ಲಿ ಪ್ರಧಾನವಾಗಿರುವ ಸೂತ್ರಧಾರನನ್ನು ನೇಪಥ್ಯಕ್ಕೆ ಸರಿಸಿ, ನಾಟಕದ ಪಾತ್ರಗಳು ತಮ್ಮ ಸೂತ್ರಧಾರನನ್ನು ಶೋಧಿಸುವ ಪ್ರಯತ್ನದಲ್ಲಿರುವುದು ಈ ನಾಟಕದ ವೈಶಿಷ್ಟ್ಯ. ಈ ಶೋಧನೆಯ ಪಯಣದಲ್ಲಿನ ಅನುಭವಗಳು ಮತ್ತು ಅಂತಿಮವಾಗಿ ಪಡೆಯಲಿರುವ ದಾರ್ಶನಿಕ ಸಂದೇಶವೇ ವಿ.ಶಾಂ.ಕೇ. ನಾಟಕದ ಕಥಾವಸ್ತು. ಇದೊಂದು ವಿಭಿನ್ನ ಪ್ರಯೋಗ, ಪ್ರೇಕ್ಷಕರಿಗೆ ರುಚಿಸುವುದೇ ಅಲ್ಲದೆ, ವರ್ತಮಾನದ ಅನುಭಾವಗಳಿಗೆ ನಿಲುಕುತ್ತದೆ ಎಂದು ಆಶಿಸೋಣ.ನಿರಂತರ ಫೌಂಡೇಷನ್ ಈ ರಂಗ ಉತ್ಸವದ ಮೂಲಕ, ಅಲ್ಲಲ್ಲಿ ಕಾಣುತ್ತಿರುವ ನಿರ್ವಾತವನ್ನು ತುಂಬುವುದರಲ್ಲಿ ಯಶಸ್ವಿಯಾಗಲಿ ಎಂದು ಆಶಿಸೋಣ.