varthabharthi


ಅನುಗಾಲ

ಭಾರತ ಕಡತಗಳು

ವಾರ್ತಾ ಭಾರತಿ : 24 Mar, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಶುದ್ಧ ಬ್ರಾಹ್ಮಣನನ್ನು ರಾಕ್ಷಸನನ್ನಾಗಿಸಿ ಕ್ಷತ್ರಿಯನೊಬ್ಬನ ಕೈಯಿಂದ ಸಾಯಿಸಿದ್ದು ನಿಜಕ್ಕೂ ಭಾರತೀಯ ವರ್ಣಪರಂಪರೆಗೆ ಒಂದು ಕಪ್ಪುಚುಕ್ಕಿ. ರಾಮಾಯಣವನ್ನು ವಾಲ್ಮೀಕಿಯ ಬದಲು ನನ್ನಂತಹ ಬ್ರಾಹ್ಮಣ ಬರೆಯುತ್ತಿದ್ದರೆ ರಾಮನನ್ನು ಅಪ್ಪಟ ಬ್ರಾಹ್ಮಣನನ್ನಾಗಿಸಿ ರಾವಣನನ್ನು ಒಬ್ಬ ಅಲ್ಪಸಂಖ್ಯಾತನ್ನಾಗಿಸಿ ಅವನನ್ನು ಗಡಿಯಾಚೆಗಿನ ಭಯೋತ್ಪಾದಕನಂತೆ ಚಿತ್ರಿಸಿ ಭಯೋತ್ಪಾದಕರು ಮೆಹಬೂಬಾ ಮುಫ್ತಿಯನ್ನು ಕಿಡ್ನಾಪ್ ಮಾಡಿದಂತೆ ಸೀತಾಪಹಾರದ ಕಥೆಯನ್ನು ಬೆಳೆಸಬಹುದಿತ್ತು.


ನನಗೆ ಕಡತಗಳು ಎಂಬುದಕ್ಕಿಂತಲೂ ‘ಫೈಲ್ಸ್’ ಎಂಬ ಪದ ಸದ್ಯ ಹೆಚ್ಚು ರೋಚಕ ಮತ್ತು ಪ್ರಚೋದನಾಕಾರಿಯಾಗಿರುತ್ತದೆಂಬ ಅರಿವಿದೆ. ಆದರೂ ‘ಫೈಲ್ಸ್’ ಎಂಬ ಪದ ಒಂದಿಷ್ಟು ವ್ಯತ್ಯಾಸಗೊಂಡರೂ ‘ಪೈಲ್ಸ್’ ಅಥವಾ ‘ಮೂಲವ್ಯಾಧಿ’ಯಾಗುತ್ತದೆಂಬ ಅರಿವೂ ನನಗಿದೆ. ಆದ್ದರಿಂದ ನಾನು ಸರಳಗನ್ನಡದಲ್ಲಿ ಬಳಕೆಯಾಗುತ್ತಿರುವ ‘ಕಡತಗಳು’ ಎಂಬ ಪದವನ್ನೇ ಬಳಸಲಿಚ್ಛಿಸುತ್ತೇನೆ. ರಾಮಾಯಣ ಮತ್ತು ಮಹಾಭಾರತದಂತಹ ಪುರಾಣಗಳು ಬಂದ ಮೇಲೆ ಯಾವ ಕಡತಗಳೂ ಬೇಕಾಗಿಲ್ಲ. ಸದ್ಯ ಈ ದೇಶದಲ್ಲಿ ನ್ಯಾಯಾಲಯಗಳೂ ಸಾಮೂಹಿಕ ನಂಬಿಕೆಯ ಆಧಾರದಲ್ಲೇ ತೀರ್ಪುಗಳನ್ನು ನೀಡಬಹುದಾದ್ದರಿಂದ ಪುರಾಣಗಳು ದಾಖಲೆಗಳಂತೆ ಪ್ರಭಾವಿಸಬಲ್ಲವೆಂಬ ವಿಶ್ವಾಸ ನನಗಿದೆ. ಈಚೆಗೆ ಪ್ರಯಾಣಮಾಡುತ್ತಿದ್ದಾಗ ‘ಪುರಾಣ ಪ್ರಸಿದ್ಧ ಐತಿಹಾಸಿಕ’ ಎಂಬ ಒಂದು ಕ್ಷೇತ್ರವನ್ನು ಕಂಡು ಇದು ಹೇಗೆ ಎಂದು ಒಂದರೆಕ್ಷಣ ಅನ್ನಿಸಿದರೂ ನನಗೆ ನಾನೇ ಹಿರೇಮಗಳೂರು ಕಣ್ಣನ್ ವರಸೆಯಲ್ಲಿ ‘‘... ಮುಚ್ಚಿಕೊಂಡು ಹೋಗು’’ ಎಂದು ಹೇಳಿಕೊಂಡೆ. ಆದ್ದರಿಂದ ಪುರಾಣಗಳಲ್ಲಿ ಬಂದ ವಿಚಾರಗಳೂ ಪರಮೋಚ್ಚ ಸತ್ಯವೆಂದು ಬಗೆದೇ ನನ್ನ ವಿಚಾರಗಳನ್ನು ಮಂಡಿಸುತ್ತೇನೆ. ಭಾರತೀಯ ಪುರಾಣಗಳಲ್ಲಿ ಹಿಂದೂ-ಮುಸ್ಲಿಮ್-ಕ್ರೈಸ್ತ ಹೀಗೆ ಬಹುಸಂಖ್ಯಾತ-ಅಲ್ಪಸಂಖ್ಯಾತ ವಿವಾದವಿರಲಿಲ್ಲ. ರಾಮ-ರಾವಣ, ಕೌರವ-ಪಾಂಡವರು ಹೀಗೆ ಬಹುತೇಕ ಪರಸ್ಪರ ಹತ್ತಿರದ ಸಂಬಂಧದ ವ್ಯಕ್ತಿಗಳನ್ನೇ ಕಾಣುತ್ತೇವೆ. ಕೃತಯುಗದಲ್ಲಿ ಸಮುದ್ರ ಮಥನ ನಡೆಯಿತು. ಭಗವಾನ್ ವಿಷ್ಣು ನಮ್ಮ ಚುನಾವಣಾ ಆಯೋಗದಂತೆ ದೇವತೆಗಳ ಪರ ವಾಲಿದ. ಅಮೃತ ದೇವತೆಗಳ ಪಾಲಾಯಿತು. ರಾಹು-ಕೇತು ವಿಕಲಚೇತನರಾದರು. ವಿಷ? ಅದು ಶಿವನ ಕಂಠದ ಪಾಲಾಯಿತು. ದೇವತೆಗಳಿಗೆ ಅಳಿವಿಲ್ಲ. ಅಸುರರಿಗೆ ಉಳಿವಿಲ್ಲ. ಅಸುರರೆಲ್ಲ ಗೋಳಾಡಿದರು.

ಆಗ ಭಗವಂತ ‘‘ಮುಂದೆ ಕಲಿಯುಗ ಬರಲಿದೆ. ಆಗ ನಿಮ್ಮನ್ನೂ ದೇವತೆಗಳನ್ನೂ ಮಿಶ್ರಮಾಡಿ ಸಮುದ್ರ ಮಥನ ಮಾಡೋಣ, ಸಮಾಜದ ಒಟ್ಟಾರೆ ವಿಭಜನೆಯ ಹೊರತು ಬೇರೇನೂ ಇರುವುದಿಲ್ಲ. ಅದೃಷ್ಟ ಹೇಗಿದೆ ನೋಡೋಣ!’’ ಎಂದನಂತೆ. ಈಗ ಒಕ್ಕೂಟ ಸರಕಾರದಲ್ಲಿ ನಖ್ವಿ-ಶಹನವಾಝ್ ಹುಸೇನ್ ಇದ್ದಾರಲ್ಲ, ಹಾಗೆ ಎಂದುಕೊಂಡು ನಮ್ಮ ಆಗ 33 ಕೋಟಿಯಿದ್ದ ಮತ್ತು ಈಗ ಇನ್ನಷ್ಟು ಬೆಳೆದ ದೇವತೆಗಳು ಹೇಳಿಕೊಳ್ಳಬಹುದು! ರಾಮಾಯಣದ ಕಥೆಯನ್ನೇ ‘ತೆಗೆದುಕೊಳ್ಳಿ’ (ಇದು ಕೃಷ್ಣೇಗೌಡರ ಹಾಸ್ಯದ ಪದವಲ್ಲ; ಗಂಭೀರವಾದದ್ದು!) ರಾವಣನು ರಾಮನಿಗೆ ಅಪರಿಚಿತನಲ್ಲ. ಸೀತೆಯನ್ನು ರಾವಣನು ಮೊದಲು ನೋಡಿದ್ದು ಪಂಚವಟಿಯಲ್ಲಿ ಅಲ್ಲ. ಸೀತಾ ಸ್ವಯಂವರಕ್ಕೆ ರಾವಣನೂ ಬಂದಿದ್ದ. ಶಿವಧನುಸ್ಸನ್ನು ಹೆದೆಯೇರಿಸಲಾಗದೆ ಸೀತಾವಂಚಿತನಾದ. ಹೀಗಾಗಿ ಹಿಂದೀ ಸಿನೆಮಾದ ಖಳನಾಯಕರಂತೆ ಅವನಿಗೆ ಸೀತೆಯ ಮೇಲೆ ಕಣ್ಣಿತ್ತು; ರಾಮನ ಕುರಿತು ಮಾತ್ಸರ್ಯವಿತ್ತು. ಸಂದರ್ಭ ಬಂದಾಗ ನೋಡಿಕೊಳ್ಳೋಣವೆಂದು ಅವನು ಸುಮ್ಮನಿದ್ದಿರಬಹುದು.

After all, ಭಾರತ-ಶ್ರೀಲಂಕಾ ಸಂಬಂಧ ಆಗ ಒಳ್ಳೆಯದೇ ಇದ್ದಿರಬೇಕು. ವೀಸಾ ಇಲ್ಲದೆ ಪರಸ್ಪರ ಪ್ರಯಾಣಿಸಬಹುದಿತ್ತು. ಇಲ್ಲವಾದರೆ ರಾವಣನು ಮಿಥಿಲೆಗೆ ಬರುವುದು ಶಕ್ಯವಿರಲಿಲ್ಲ. ಸೀತಾ ಸ್ವಯಂವರಕ್ಕೆ ಜನಕರಾಜನು ರಾವಣನನ್ನು ಖುದ್ದು ಆಮಂತ್ರಿಸಿರಬಹುದು ಅಥವಾ ಅಂತರ್‌ರಾಷ್ಟ್ರೀಯ ಮುಕ್ತ ಅವಕಾಶದ ಪ್ರಕಟನೆಯನ್ನು ನೀಡಿದ್ದಿರಬೇಕು. ಪಾಕ್ ಜಲಸಂಧಿಗೆ ಆಗ ಬೇರೆ ಹೆಸರಿದ್ದಿರಬೇಕು. ಸಮುದ್ರವನ್ನು ನೆಲ-ಜಲದಲ್ಲಿ ದಾಟುವ ಪ್ರಶ್ನೆಯಿರಲಿಲ್ಲ. ಏನಿದ್ದರೂ ಏರ್ ಶ್ರೀಲಂಕಾ! ಆಗಿನ್ನೂ ಏರ್ ಇಂಡಿಯಾವಿರಲಿಲ್ಲ. ಟಾಟಾ ಕಂಪೆನಿಯು ಏರ್ ಇಂಡಿಯಾವನ್ನು ಆರಂಭಿಸುವ ಮೊದಲು ಭಾರತದಲ್ಲಿ ವಿಮಾನಸೇವೆಯಿರಲಿಲ್ಲವಾದ್ದರಿಂದ ರಾಮನು ಸಮುದ್ರಕ್ಕೆ ಸೇತುವೆ ಕಟ್ಟಬೇಕಾಯಿತು. ಇನ್ನೂ ಮುಖ್ಯವಾದದ್ದೆಂದರೆ ರಾವಣನು ವಂಶಪಾರಂಪರ್ಯ ಆಡಳಿತದ ದ್ರಾವಿಡ ಬ್ರಾಹ್ಮಣ. ಅತೀ ಬುದ್ಧಿವಂತನಾದ್ದರಿಂದ ಕಲಾವಿದರು ಅವನಿಗೆ ಹತ್ತು ತಲೆಯ ರೂಪಕವನ್ನು ಸೃಷ್ಟಿಸಿದರು. ಹತ್ತು ತಲೆಗಳನ್ನು ಹೊತ್ತು ಅವನು ನಡೆಯುವುದಾದರೂ ಎಲ್ಲಿಗೆ? ಅಲ್ಲದೆ ಈಗಾಗಲೇ ಸಂಶೋಧಕರು ಗುರುತಿಸಿದಂತೆ ಈ ಹತ್ತರ ಸಂಖ್ಯೆ ಯಾಕೋ ಪ್ರಕೃತಿಗೆ ಹೊಂದುವುದಿಲ್ಲ. ಹತ್ತಾದರೆ ಒಂದು ಕಡೆಗೆ ನಾಲ್ಕು ಇನ್ನೊಂದು ಕಡೆಗೆ ಐದು ತಲೆಗಳಾಗುತ್ತವೆ. ಎಡಕ್ಕೆಷ್ಟು? ಬಲಕ್ಕೆಷ್ಟು? ಯಾವುದಾದರೂ ಒಂದು ಕಡೆಗೆ ವಾಲುವ ಸಾಧ್ಯತೆಯೇ ಹೆಚ್ಚು! ಸೀತೆಯ ಸ್ವಯಂವರಕ್ಕೆ ಒಂದು ತಲೆಗಿಂತ ಹೆಚ್ಚಿನವರನ್ನು ಆಹ್ವಾನಿಸುವ ಪ್ರಮೇಯವೇ ಇರಲಿಲ್ಲ.

ಏಕೆಂದರೆ ಸೀತೆಯ ಕೈಯಲ್ಲಿ ಒಂದೇ ಹಾರವಿದ್ದದ್ದು; ನೇಣಿನ ಕುಣಿಕೆಯ ಹಾಗೆ ಒಂದೇ ಕೊರಳಿಗೆ. ಒಂದು ವೇಳೆ ಹತ್ತು ತಲೆಗಳಿದ್ದರೂ ಅತಿಥೇಯರು ಪಡಿತರ ಚೀಟಿಯ ಹಾಗೆ ಒಂದೇ ತಲೆಗೆ ಪ್ರವೇಶ ಎಂಬ ನಿರ್ಬಂಧ ಹೇರಿರಬಹುದು- ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದೆ ರಾವಣನು ಅನಿವಾರ್ಯವಾಗಿ ತನ್ನ ಇತರ ಒಂಬತ್ತು ತಲೆಗಳನ್ನು ಬಿಟ್ಟು ಹೋಗಿರಬಹುದೇನೋ? ಅಷ್ಟೇ ಅಲ್ಲ, ರಾವಣನು ನಮ್ಮ ಸಂಘಪರಿವಾರದಂತೆ ಪೂರ್ಣ ಬ್ರಾಹ್ಮಣ. ಚತುರ್ವೇದಗಳನ್ನೂ ಬಲ್ಲವನು. ಅಷ್ಟದಿಕ್ಪಾಲಕರನ್ನು ತನ್ನ ಅ(ಸು)ರಮನೆಯ ಕೌಕೋಲಿಗೆ ಕಟ್ಟಿದ್ದನಂತೆ. ಅಷ್ಟೇ ಅಲ್ಲ, ತನ್ನ ಅನುಮತಿಯಿಲ್ಲದೆ ಯಾರೂ ಸುವರ್ಣಲಂಕೆಗೆ ಪ್ರವೇಶಿಸದಂತೆ ರಕ್ಷಣೆಯನ್ನು ಮಾಡಿದ್ದನಂತೆ. ಇದು ರಕ್ಷಣೆಯೋ ಅಥವಾ ಅಸ್ಪಶ್ಯತೆಯೋ ಸಂಶೋಧಕರು ಹೇಳಬೇಕು. ಅಷ್ಟರ ಮಟ್ಟಿಗೆ ರಾವಣನು ಮಡಿವಂತ. ಈ ಶುದ್ಧ ಬ್ರಾಹ್ಮಣನನ್ನು ರಾಕ್ಷಸನನ್ನಾಗಿಸಿ ಕ್ಷತ್ರಿಯನೊಬ್ಬನ ಕೈಯಿಂದ ಸಾಯಿಸಿದ್ದು ನಿಜಕ್ಕೂ ಭಾರತೀಯ ವರ್ಣಪರಂಪರೆಗೆ ಒಂದು ಕಪ್ಪುಚುಕ್ಕಿ. ರಾಮಾಯಣವನ್ನು ವಾಲ್ಮೀಕಿಯ ಬದಲು ನನ್ನಂತಹ ಬ್ರಾಹ್ಮಣ ಬರೆಯುತ್ತಿದ್ದರೆ ರಾಮನನ್ನು ಅಪ್ಪಟ ಬ್ರಾಹ್ಮಣನನ್ನಾಗಿಸಿ ರಾವಣನನ್ನು ಒಬ್ಬ ಅಲ್ಪಸಂಖ್ಯಾತನ್ನಾಗಿಸಿ ಅವನ್ನು ಗಡಿಯಾಚೆಗಿನ ಭಯೋತ್ಪಾದಕನಂತೆ ಚಿತ್ರಿಸಿ ಭಯೋತ್ಪಾದಕರು ಮೆಹಬೂಬಾ ಮುಫ್ತಿಯನ್ನು ಕಿಡ್ನಾಪ್ ಮಾಡಿದಂತೆ ಸೀತಾಪಹಾರದ ಕಥೆಯನ್ನು ಬೆಳೆಸಬಹುದಿತ್ತು. ಆಗ ಮಂಥರೆ-ಕೈಕೇಯಿಯರು ಇದ್ದರು. ಅವರು ಅಲ್ಪಸಂಖ್ಯಾತರಲ್ಲವಾದರೂ ಅಯೋಧ್ಯೆಯ ಭಯೋತ್ಪಾದಕರಾದದ್ದು ಮಾತಾ-ಹರಿಗೂ ನಾಚಿಕೆಯಾಗುವ ವಿಚಾರ. ಈ ಸಂದರ್ಭಕ್ಕೆ ಹೊಂದುವಂತೆ ರಕ್ತರಹಿತ ಕ್ರಾಂತಿಯಲ್ಲಿ ರಾಮನು ವನವಾಸಕ್ಕೆ ಹೋಗಬೇಕಾಯಿತು. ದೇಶದ್ರೋಹಿಗಳನ್ನು ಪಾಕಿಸ್ತಾನಕ್ಕೆ ಅಟ್ಟುವ ಹಾಗೆ ಆಗ ಯಾರನ್ನೂ ಶ್ರೀಲಂಕಾಕ್ಕೆ ಹೋಗಿ ಎಂದು ಹೇಳುತ್ತಿರಲಿಲ್ಲ. ಕಾಡಿಗೆ ಕಳುಹಿಸುತ್ತಿದ್ದರು. ಒಂದು ರೀತಿಯಲ್ಲಿ ಇದೂ ಸರಿ. ಆಗ ಕಾಡಿತ್ತು. ಈಗ ಕಾಡೆಲ್ಲ ನಾಶವಾಗಿರುವುದರಿಂದ ದೇಶಭ್ರಷ್ಟರನ್ನು ಪಾಕಿಸ್ತಾನಕ್ಕೇ ಕಳುಹಿಸಬೇಕಷ್ಟೇ! ಅಂತೂ ಕಾಂಗ್ರೆಸ್-ಮುಕ್ತ ಭಾರತದಂತೆ ಅಯೋಧ್ಯೆಯು ರಾಮ-ಮುಕ್ತವಾಗಬೇಕೆಂಬ ಕೈಕೆಯ ಆಸೆ ಈಡೇರಿತು!

ರಾಮನು ಕಾಡಿಗೆ ಹೋದಾಗ ಅಲ್ಲಿದ್ದ ಋಷಿಮುನಿಗಳು ತಮಗೆ ರಾಕ್ಷಸರು ಮಾಡುವ ಉಪಟಳವನ್ನು ಹೇಳಿದರಂತೆ. ಆಗಿನ ಉಪಟಳಕ್ಕೆ ಹೋಲಿಸಿದರೆ ಈಗಿನ ಪುಲ್ವಾಮ ಮುಂತಾದ ಗಡಿಯಾಚೆಗಿನ ಭಯೋತ್ಪಾದನೆ ಏನೂ ಅಲ್ಲ. ಯಜ್ಞಯಾಗಾದಿಗಳನ್ನು ಮಾಡುವಾಗ ರಕ್ತವನ್ನು, ಕಲ್ಲುಮಣ್ಣುಗಳನ್ನು ಸುರಿಯುತ್ತಿದ್ದರಂತೆ. ರಾಮನು ಇವೆಲ್ಲವನ್ನು ಕಂಡು ಯುದ್ಧಮಾಡಿ ಅವರಲ್ಲಿ ಬಹುಪಾಲು ನಾಶಮಾಡಿದನಂತೆ. ಆಗ ಈ ಹಾವಳಿಯ ಮೂಲ ಎಲ್ಲೆಂದು ಅವನಿಗೆ ತಿಳಿದಿರಲಿಲ್ಲ. ಇಲ್ಲವಾದರೆ ಈಗ ಮಾಡುವಂತೆ ಒಂದೇ ಒಂದು ಸರ್ಜಿಕಲ್ ಸ್ಟ್ರೈಕ್ ಲಂಕೆಯ ಮೇಲೆ ಮಾಡಿದ್ದರೆ ಎಲ್ಲ ಭಯೋತ್ಪಾದನೆಯೂ ನಿಲ್ಲುತ್ತಿತ್ತು. ರಾಮನಲ್ಲಿ ದೊಡ್ಡ ಸೇನೆಯಿರಲಿಲ್ಲ. ಅವನೊಬ್ಬನೇ ಮತ್ತು ಅಗತ್ಯವಿದ್ದರೆ ಲಕ್ಷ್ಮಣನ ಸಹಕಾರದಿಂದ ಲಂಕೆಯನ್ನು ನಾಶ ಮಾಡಬಹುದಿತ್ತು. ಆದರೆ ರಾಮನಿಗೆ ಪ್ರಜಾಪ್ರಭುತ್ವದಲ್ಲಿ ತೀರದ ನಂಬಿಕೆ. ಅಯೋಧ್ಯೆಯ ಜನರು ಅಲ್ಲೇ ಉಳಿದುಹೋದರು. ಅವರ ಬದಲಿಗೆ ಅವರಿಗೆ ಸರಿಮಿಗಿಲೆನ್ನಿಸುವಂತೆ ಕಿಷ್ಕಿಂಧೆಯ ಕಪಿಗಳನ್ನು ಸೇರಿಸಿಕೊಂಡ. ಕಿಷ್ಕಿಂಧೆ ಕರ್ನಾಟಕದಲ್ಲಿದೆಯೋ ಆಂಧ್ರಪ್ರದೇಶದಲ್ಲಿದೆಯೋ ಎಂಬ ವಿವಾದ ಈಗ ಎದ್ದಿದ್ದರೂ ನನ್ನ ದೃಷ್ಟಿಯಲ್ಲಿ ಅದು ಕರ್ನಾಟಕದಲ್ಲೇ ಇತ್ತು-ಇದೆ. ಸ್ವಭಾವ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಮರದಿಂದ ಮರಕ್ಕೆ ಹಾರುವ ಚಾಕಚಕ್ಯತೆಯಲ್ಲಿ ಇಂದಿನ ರಾಜಕಾರಣಿಗಳನ್ನು ಹೋಲುವ ಕಪಿಗಳು ಅಧಿಕಾರಕ್ಕೆ ಅಲ್ಲದಿದ್ದರೂ ‘ಜೈ ಶ್ರೀರಾಮ್’ ಎಂಬ ಘೋಷಣೆಗೆ ಅಂಟಿಕೊಂಡದ್ದು ಒಂದು ಅಪೂರ್ವ ಘಟನೆ-ನಟನೆ. ಇಂತಹ ಕಪಿಗಳ ಮೂಲಕ ಲಂಕೆಯನ್ನು ಜಯಿಸಬಹುದೆಂದು ರಾಮನಿಗೆ ಅನ್ನಿಸಿದ್ದರಲ್ಲಿಯೇ ಭಾರತೀಯ ಭವ್ಯ ಪರಂಪರೆಯ ಬುನಾದಿಗಳಿದ್ದವು ಎಂದು ವಿಲ್ ಡುರಾಂಟ್ ಎಲ್ಲಾದರೂ ಬರೆದಿದ್ದಾನೋ ಎಂದು ವಿಚಾರಿಸಬೇಕು.

ರಾಮನ ವನವಾಸಕ್ಕೆ ಮೊದಲು ಅಯೋಧ್ಯೆಯಲ್ಲಿ ಕಪಿಗಳಿದ್ದ ಬಗ್ಗೆ ದಾಖಲೆಗಳಿಲ್ಲ. ರಾಮನು ಕಂಡ ಮೊದಲ ಕಪಿ ಹನುಮ. ಆದ್ದರಿಂದ ರಾಮನು ಅವರೆಲ್ಲರನ್ನೂ ಅಯೋಧ್ಯೆಗೆ ಕರೆತಂದದ್ದರಲ್ಲಿ ಅಚ್ಚರಿಯಿಲ್ಲ. ರಾಮನ ಅಗಲಿಕೆಯನ್ನು ತಾಳಲಾರದೆ ಅಯೋಧ್ಯೆಯ ಮೂಲನಿವಾಸಿಗಳಲ್ಲಿ ಬಹಳಷ್ಟು ಮಂದಿ ಗತಿಸಿರಬೇಕು ಅಥವಾ ಜನಸಂಖ್ಯೆ ಕ್ಷೀಣಿಸಿರಬೇಕು. ಈ ಕೊರತೆಯನ್ನು ಕಪಿಗಳು ತುಂಬಿಕೊಟ್ಟವು. ಇಂದಿಗೂ ಈ ಪರಂಪರೆಯು ಮುಂದುವರಿದಿರುವುದು ನಾವು ಹೆಮ್ಮೆಪಟ್ಟುಕೊಳ್ಳಬೇಕಾದ ವಿಚಾರ. ಶ್ರೀಲಂಕೆಯಲ್ಲಿ ನಡೆದ ಮೊದಲ ಮಹಾಯುದ್ಧದ ಬಳಿಕ ಸೀತೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ್ದನ್ನು ಮತ್ತು ಕಾಡಿಗೆ ಕಳುಹಿಸಿದ ರಾಮನ ಗುಣ ಬಹಳ ಉದಾತ್ತವೆಂದು ನಮ್ಮ ವಿದ್ವಾಂಸರೂ, ವಿಮರ್ಶಕರೂ ಹೇಳುತ್ತಾರೆ. ಅದರಲ್ಲೂ ಹೆಂಡತಿಯನ್ನು ಬಿಟ್ಟವರು ಶ್ರೇಷ್ಠರೆಂಬ ಕಲ್ಪನೆಯ ಅಡಿಪಾಯ ರಾಮಾಯಣದಲ್ಲಿದೆ. ಇದೊಂದು ರೀತಿಯ ದೇಶಭಕ್ತಿ. ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಹೆಂಡತಿಯನ್ನು ಬಿಡುವುದರ ಮೂಲಕ ರಾಮನು ಸಲ್ಲಿಸಿದ ದೇಶಸೇವೆಯನ್ನು ಜನ ಈಗಲೂ ನೆನಪಿಸುತ್ತಾರೆ. ರಾಮನು ಸೀತೆಯ ಬಂಗಾರದ ಪ್ರತಿಮೆಯನ್ನು ಮಾಡಿ ತನ್ನೊಂದಿಗೆ ಯಜ್ಞದಲ್ಲಿ ಭಾಗಿಯಾಗಿಸಿದನೆಂದು ಹೇಳುತ್ತಾರೆ. ಇದನ್ನೇ ಉದಾಹರಿಸಿ ರಾಮನೊಂದಿಗೆ ಸೀತೆಯ ಫೋಟೋಶಾಪಿಂಗ್ ನಡೆದಿದೆ ಮತ್ತು ಆಗ ಚುನಾವಣೆಗಳಿದ್ದಿದ್ದರೆ ಪ್ರಾಯಃ ರಾಮನು ತನ್ನ ಈ ಎಲ್ಲ ವಿಚಾರಗಳನ್ನು ಪ್ರಜೆಗಳಿಗೆ ‘ಮಾಸಿಕ ಮನಃಪೂರ್ವಕ’ ಹೇಳುವುದರ ಮೂಲಕ ಅನಾಯಾಸವಾಗಿ ಗೆಲ್ಲುತ್ತಿದ್ದ. ಆದರೆ ಆಗಲೂ ಕಾಂಗ್ರೆಸ್ ಪಕ್ಷದಂತೆ ವಂಶಪಾರಂಪರ್ಯ ಆಡಳಿತವೇ ಇತ್ತು. ರಾಮನ ಫೋಟೊಗಳನ್ನೇ ನೋಡಿ ಅಲ್ಲಿರುವವರು ಅವರೇ: ಒಂದು ಕುಟುಂಬದವರು: ರಾಮ-ಸೀತೆ-ಲಕ್ಷ್ಮ್ಮಣ, ಭರತ-ಶತ್ರುಘ್ನ. ಕಾಲ ಬಳಿ ಒಬ್ಬ ಹನುಮಂತ. ಗೌಡರ ಪಕ್ಷದಂತೆ.

ಮಹಾಭಾರತ ಇದಕ್ಕಿಂತ ಭಿನ್ನವಲ್ಲ. ಅಲ್ಲಿ ಹೊರಗಿನವರಿಲ್ಲವೇ ಇಲ್ಲ. ತಮ್ಮಿಳಗೇ ಜಗಳವಾಡಿದರು. ಕೆಲವರು ಬಂಧು-ಬಳಗ. ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಕೌರವರು ನೂರು ಮಂದಿ ಪಾಂಡವರು ಐದು ಮಂದಿಯಾದರೂ ಅಂತಿಮವಾಗಿ ಪಾಂಡವರಿಗೇ ಗೆಲುವು. ದುರ್ಯೋಧನನು ನಮ್ಮ ಯೋಗಿಯ ಹಾಗೆ 80:20 ಎಂದು ಹೇಳಿಕೊಂಡಿರಬಹುದು. ಖಾಂಡವವನ ದಹನವಾಯಿತು. ಆಗಿನ್ನೂ ಹಸಿರು ನ್ಯಾಯಮಂಡಳಿ, ಮೇನಕಾ ಗಾಂಧಿ ಇಲ್ಲದ್ದರಿಂದ ಇದನ್ನು ಯಾರೂ ಪ್ರಶ್ನೆ ಮಾಡಲಿಲ್ಲ. ಅಂತೂ ಜೂಜಿನಲ್ಲಿ ಪಾಂಡವರಿಗೆ ವನವಾಸವಾಯಿತು. ಎಲ್ಲ ಯುಗಗಳಲ್ಲೂ ವನವಾಸವೆಂಬ ರೂಪಕ ಶಾಶ್ವತವೆಂದು ಕಾಣುತ್ತದೆ. ಪಾಂಡವರು ಕಾಡಿನಲ್ಲಿ ಬಹಳಷ್ಟು ಸಂಪಾದಿಸಿದರು. ಒಂದು ವರ್ಷ ಅಜ್ಞಾತವಾಗಿ ಉಳಿದರು. ವಿರಾಟನಗರಿಯಲ್ಲಿ ತೀರ ಬಡಕಲು ಬದುಕು ಅನಿವಾರ್ಯವಾಯಿತು. ಅಫ್ಘಾನಿಸ್ತಾನದ ಸಚಿವರೊಬ್ಬರು ಅಮೆರಿಕದಲ್ಲಿ ಈಗ ಉಬೆರ್ ಟ್ಯಾಕ್ಸಿಯ ಚಾಲಕರಾದ ಹಾಗೆ. ಮುಂದೆ ಕುರುಕ್ಷೇತ್ರ ಯುದ್ಧ ನಡೆದದ್ದು ನಿಮಗೆಲ್ಲ ತಿಳಿದೇ ಇದೆ. ಅದು ನಿಜಕ್ಕೂ ಯುದ್ಧವೇ ಅಥವಾ 2024ರಲ್ಲಿ ನಡೆಯಬಹುದಾದಂತೆ ಮಹಾ ಚುನಾವಣೆಯೇ ಎಂಬುದು ಯಕ್ಷಪ್ರಶ್ನೆಯೇ ಆಗಿದೆ. ಗಾಂಧಿ ಇದನ್ನು ಮನಸ್ಸಿನೊಳಗಣ ದ್ವಂದ್ವಕ್ಕೆ ಒಂದು ರೂಪಕ ಎಂದರು. ಹೇಗೇ ಇರಲಿ, ಯಾದವ ಕೃಷ್ಣ ಕ್ಷತ್ರಿಯ ಅರ್ಜುನನಿಗೆ ಗೀತೋಪದೇಶ ಮಾಡಿದ. ಬಂಧುಬಾಂಧವರನ್ನು ಕೊಲ್ಲುವುದು ಗೆಲುವಿಗೆ ಹೇಗೆ ಸಹಕಾರಿ ಎಂದು ಮತ್ತು ಇಂತಹ ವಿಚಾರಗಳಲ್ಲಿ ಸಂಬಂಧವನ್ನು ಲೆಕ್ಕಿಸಕೂಡದು ಎಂದು ಉಪದೇಶಮಾಡಿದ. ಆಗ ಶಾಲೆಗೆ ಹೋಗುವ ಮಕ್ಕಳಿಗೆ ಗೀತೋಪದೇಶವು ಪಠ್ಯದಲ್ಲಿ ಸೇರಿರಲಿಲ್ಲ. ಸೇರಿದ್ದರೆ ಮಕ್ಕಳೂ ಯುದ್ಧಕ್ಕೆ ಸನ್ನದ್ಧರಾಗಿರುತ್ತಿದ್ದರು. ಅದಕ್ಕೆ ಮತ್ತೆರಡು ಯುಗ ಕಾಯಬೇಕಾಗಿರಲಿಲ್ಲ.

ಈ ಗೀತೋಪದೇಶವೂ ಬಹಿರಂಗವಾಗಿ ನಡೆದಂತೆ ಫೋಟೋಗಳಲ್ಲಿ ಚಿತ್ರಿಸಲಾಗುತ್ತದೆಯಾದರೂ ಪ್ರಾಯಃ ಫೆಗಾಸಸ್‌ನಂತೆ ಗುಟ್ಟಾಗಿ ನಡೆದಿರಬೇಕೆಂದು ಕಾಣಿಸುತ್ತದೆ. ಇಲ್ಲವಾದರೆ ಭೀಷ್ಮ ದ್ರೋಣಾದಿಗಳೂ ಅದನ್ನು ಕೇಳಿಸಿಕೊಳ್ಳುತ್ತಿದ್ದರು. ಭೀಷ್ಮರು ಶಿಖಂಡಿ ತನ್ನೆದುರು ಬಂದ ತಕ್ಷಣ ಶಸ್ತ್ರಸನ್ಯಾಸ ಮಾಡುತ್ತಿರಲಿಲ್ಲ. ‘ಮಾ ಫಲೇಶು ಕದಾಚನ’ ಎಂದುಕೊಂಡು ಯುದ್ಧವನ್ನು ಮುಂದುವರಿಸುತ್ತಿದ್ದರು. ಪರಿಣಾಮವೂ ಫಲಿತಾಂಶವೂ ಬೇರೆಯೇ ಇರುತ್ತಿತ್ತು. ಅಂತೂ ಧರ್ಮಕ್ಕೆ ಗ್ಲಾನಿ ಬಂದಾಗಲೆಲ್ಲ ಕೃಷ್ಣನು ಮತ್ತೆ ಮತ್ತೆ ಹುಟ್ಟುತ್ತೇನೆಂದು ಭರವಸೆಕೊಟ್ಟಿದ್ದಾನೆ. ರಾಮ ಇಂತಹ ಅಧಿಕಪ್ರಸಂಗಕ್ಕೆ ಹೊರಟ ಕತೆಯಿಲ್ಲ. ಮತ್ತೆ ಹುಟ್ಟುತ್ತೇನೆಂದು ರಾಮ ಹೇಳಿರಲಿಲ್ಲ. ಸರಯೂ ನದಿಯಲ್ಲಿಳಿದ. ಮಾಯವಾದ. ಕೃಷ್ಣ ಹೇಳಿದ. ಆದರೆ ಜನರು ಸುಮ್ಮನಿರಬೇಕಲ್ಲ! ರಾಮನೂ ಮತ್ತೆ ಮತ್ತೆ ಹುಟ್ಟಿದ. ಅವನಿಗೂ ಸರಯೂ ಬಳಿ ಒಂದು ಸ್ಥಳ ತೋರಿಸಿದರು. ಈ ಬಾರಿ ರಾಮನ ಮೂಲಕ ಕುರುಕ್ಷೇತ್ರ ನಡೆಸಬೇಕೆಂದು ನಿರ್ಧರಿಸಿದರು. ಪರಿಣಾಮ ನಿಮಗೆಲ್ಲ ತಿಳಿದೇ ಇದೆ: ಮತ್ತೆ ಮತ್ತೆ ಕುರುಕ್ಷೇತ್ರ ನಡೆಯಲೇಬೇಕು: ಸಂಭವಾಮಿ ಯುಗೇಯುಗೇ! ಈ ಬಗ್ಗೆ ಒಂದು ಸಿನೆಮಾ ತೆಗೆದರೆ ಅದಕ್ಕೆ ‘ಭಾರತ್ ಫೈಲ್ಸ್’ ಎಂದು ಹೆಸರಿಡಬಹುದು. ತೆರಿಗೆ ವಿನಾಯಿತಿ ಹೇಗೂ ಇದೆ. ನೋಡುವುದಕ್ಕೆ ರಾಮಾಯಣದ ಪಳೆಯುಳಿಕೆಗಳು ಇನ್ನೂ ಇವೆ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)