ಭಾರತದಲ್ಲಿ ಪ್ರಜಾತಂತ್ರದ ರಕ್ಷಣೆಗಾಗಿ ಜಾತ್ಯತೀತ ಪಕ್ಷಗಳು ಒಗ್ಗೂಡಲಿ
ಇತ್ತೀಚೆಗೆ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಜಾತ್ಯತೀತ ಹಾಗೂ ಪ್ರಾದೇಶಿಕ ಪಕ್ಷಗಳ ವಿಘಟನೆಯಿಂದಾಗಿ ಭಾರತೀಯ ಜನತಾಪಕ್ಷ ನಾಲ್ಕು ರಾಜ್ಯಗಳಲ್ಲಿ ಮರಳಿ ಅಧಿಕಾರ ಪಡೆದಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಆಡಳಿತ ನಡೆಸಲು ಸಾಕಾಗುವಷ್ಟು ಬಹುಮತ ಪಡೆದರೆ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಇತರ ಪಕ್ಷಗಳ ಸಹಕಾರದಿಂದ ಬಿಜೆಪಿ ಆಡಳಿತ ನಡೆಸುವ ಅವಕಾಶ ಪಡೆದಿದೆ. ಪಂಜಾಬಿನ ಪ್ರಜ್ಞಾವಂತ ಮತದಾರರು ಪರ್ಯಾಯ ಅಭಿವೃದ್ಧಿಗಾಗಿ ಅಮ್ ಆದ್ಮಿ ಪಕ್ಷಕ್ಕೆ ಆಡಳಿತ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಭಾರತೀಯ ಪ್ರಜಾಸತ್ತೆಗೆ ಬಹುದೊಡ್ಡ ಪೆಟ್ಟು ನೀಡಿರುವ ಬಿಜೆಪಿ ಹಿಂದುತ್ವವಾದಿಗಳು, ಮಾರುಕಟ್ಟೆ ಶಕ್ತಿಗಳು, ಭ್ರಷ್ಟ ನಾಯಕರು ಮತ್ತು ಕಡುಭ್ರಷ್ಟ ಅಧಿಕಾರಶಾಹಿಯ ಅನೈತಿಕ ಒಗ್ಗೂಡುವಿಕೆಯಿಂದ ತಾಂತ್ರಿಕವಾಗಿ ಗೆಲುವು ಸಾಧಿಸಿದ್ದರೂ ನೈತಿಕವಾಗಿ ಕುಗ್ಗುತ್ತಿರುವುದು ಪಂಚರಾಜ್ಯ ಚುನಾವಣಾ ಫಲಿತಾಂಶದಿಂದ ಅಕ್ಷರಶಃ ಸಾಬೀತಾಗಿದೆ. ಇತ್ತೀಚಿನ ಚುನಾವಣಾ ಫಲಿತಾಂಶದಿಂದ ರಾಜಕೀಯ ಇಚ್ಛಾಶಕ್ತಿ ಕಳೆದುಕೊಂಡ ಬಿಜೆಪಿಯೇತರ ನಾಯಕರು ಮತ್ತು ಪ್ರಜ್ಞಾವಂತಿಕೆಯನ್ನು ಕಳೆದುಕೊಂಡ ಮತದಾರರ ನಿಜವಾದ ಬಣ್ಣ ಬಯಲಾಗಿದೆ.
ಸಂವಿಧಾನ ಬದಲಾಯಿಸಿ ಮೀಸಲಾತಿಯನ್ನು ರದ್ದುಪಡಿಸಿ ಜಾತಿಬಲ, ತೋಳ್ಬಲ ಮತ್ತು ಧನಬಲಗಳಿಂದ ದೇಶವನ್ನು ಆಳುವುದಾಗಿ ಬಹಿರಂಗವಾಗಿ ಘೋಷಿಸಿ ಪ್ರಜಾತಂತ್ರದ ಸೋಲಿಗೆ ಕಾರಣವಾಗಿರುವ ಬಿಜೆಪಿಯನ್ನು ಉತ್ತರ ಭಾರತದಲ್ಲಿ ನಿಜವಾಗಿ ಅಧಿಕಾರಕ್ಕೆ ತಂದವರು ಬಿಎಸ್‌ಪಿ ನಾಯಕಿ ಮಾಯಾವತಿ, ಕಾಂಗ್ರೆಸ್ ಮತ್ತಿತರ ಪ್ರಾದೇಶಿಕ ಪಕ್ಷಗಳೆಂದರೆ ಅತಿಶಯೋಕ್ತಿಯಾಗಲಾರದು. ಬಿಜೆಪಿಯೇತರ ಪಕ್ಷಗಳಲ್ಲಿ ಕೋಮುವಾದಿಗಳ ವಿರುದ್ಧ ಪ್ರಬಲ ಹೋರಾಟ ನಡೆಸಿ ಪ್ರಜಾಸತ್ತೆ ಮತ್ತು ಸಂವಿಧಾನಗಳನ್ನು ರಕ್ಷಿಸುವ ಬದ್ಧತೆ ಮತ್ತು ಹೊಣೆಗಾರಿಕೆ ಕ್ಷೀಣಿಸಿರುವುದನ್ನು ಚುನಾವಣಾ ಫಲಿತಾಂಶ ಸ್ಪಷ್ಟವಾಗಿ ಅಭಿವ್ಯಕ್ತಗೊಳಿಸಿದೆ. ಭಾರತದಲ್ಲಿ ಚುನಾವಣೆಯು ಒಂದು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಾಗಿ ಉಳಿಯದೆ ಬೃಹತ್ ಲಾಭದಾಯಕ ಉದ್ದಿಮೆಯಾಗಿ ರೂಪುಗೊಳ್ಳಲು ವೈದಿಕಶಾಹಿ ಮತ್ತು ಬಂಡವಾಳಶಾಹಿ ಪ್ರಮುಖ ಕಾರಣಗಳಾಗಿವೆ. ವಂಶಪಾರಂಪರ್ಯ ಆಡಳಿತದ ಆರೋಪವಿರುವ ಕಾಂಗ್ರೆಸ್ ಪಕ್ಷ ನೆಹರೂ-ಗಾಂಧಿ ಮನೆತನದ ಏಕಸ್ವಾಮ್ಯಕ್ಕೆ ಗುರಿಯಾಗಿ ಭಾರತೀಯ ಪ್ರಜಾಸತ್ತೆಯಲ್ಲಿ ತನ್ನ ನೆಲೆ-ಬೆಲೆಗಳನ್ನು ಕಳೆದುಕೊಳ್ಳುತ್ತಿದೆ. ಜಿ-23 ಗುಂಪಿನ ಸದಸ್ಯರು ಸಮಷ್ಟಿಪ್ರಜ್ಞೆ ಮತ್ತು ಸಾಮೂಹಿಕ ನಾಯಕತ್ವಗಳ ಆಧಾರದ ಮೇಲೆ ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನಗೊಳಿಸುವ ಮತ್ತು ಪ್ರಜಾಸತ್ತೆಯನ್ನು ಉಳಿಸುವ ಸದಾಶಯ ಹೊಂದಿದ್ದಾರೆ.
ರಾಹುಲ್ ಗಾಂಧಿಯನ್ನು ಲೋಕಸಭೆ ನಾಯಕರಾಗಿ ನೇಮಿಸಿ ಕಾಂಗ್ರೆಸ್ ಪಕ್ಷಕ್ಕೆ ನೆಹರೂ-ಗಾಂಧಿ ಕುಟುಂಬ ಹೊರತು ಪಡಿಸಿದ ವ್ಯಕ್ತಿಯನ್ನು ನಾಯಕರಾಗಿ ನೇಮಿಸುವ ಪ್ರಸ್ತಾವನೆಗೆ ಹೊಸ ಚಾಲನೆ ಲಭಿಸಿದೆ. ಐದು ರಾಜ್ಯಗಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ಸೋಲಿನ ನೆಪದಲ್ಲಿ ಬದಲಾಯಿಸುವ ಮೊದಲು ಸೋನಿಯಾಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಗೆ ರಾಜೀನಾಮೆ ನೀಡಿ ತಮ್ಮ ಮಕ್ಕಳಾದ ಪ್ರಿಯಾಂಕ ಗಾಂಧಿ ಮತ್ತು ರಾಹುಲ್‌ಗಾಂಧಿಯವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಸಿದ್ದರೆ ದೇಶದ ಜನತೆಗೆ ಕಾಂಗ್ರೆಸ್ ಪಕ್ಷದ ಬಗ್ಗೆ ವಿಶ್ವಾಸ ಉಳಿಯುತ್ತಿತ್ತು. ಆದಾಗ್ಯೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ನಾಯಕರು ನೆಹರೂ- ಗಾಂಧಿ ಕುಟುಂಬ ರಾಜಕಾರಣಕ್ಕೆ ಶರಣಾಗಿರುವುದು ಅತ್ಯಂತ ಹಾನಿಕಾರಕ ಬೆಳವಣಿಗೆಯಾಗಿದೆ. ಚಮಚಾಗಿರಿಯಿಂದ ಪ್ರಜಾತಂತ್ರವನ್ನು ದುರ್ಬಲಗೊಳಿಸಲು ಕಾರಣರಾದ ಇಂತಹವರಿಂದಲೇ ಕಾಂಗ್ರೆಸ್ ಪಕ್ಷ ಅವನತಿಯೆಡೆಗೆ ಸಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಅಂಬೇಡ್ಕರ್-ಕಾನ್ಶೀರಾಂ ಪರಂಪರೆಯ ವಾರಸುದಾರರೆಂದೇ ಬಿಂಬಿಸಿಕೊಂಡಿರುವ ಬಿಎಸ್‌ಪಿ ನಾಯಕಿ ಮಾಯಾವತಿ ಇಂದು ಸ್ವಾರ್ಥ ರಾಜಕಾರಣದಿಂದ ತನ್ನ ಪಕ್ಷವನ್ನು ಬಿಜೆಪಿಯ ಬಿ-ಟೀಮ್ ಆಗಿ ಪರಿವರ್ತಿಸಿರುವುದು ಸಾಮಾಜಿಕ ನ್ಯಾಯ ವಿತರಣೆಗೆ ಬಹುದೊಡ್ಡ ಅಪಚಾರವೆಸಗಿದಂತಾಗಿದೆ.
ಮಾಯಾವತಿಯನ್ನು ನಂಬಿದ ಲಕ್ಷಾಂತರ ಅನುಯಾಯಿಗಳು ಇಂದು ರಾಜಕೀಯವಾಗಿ ದೇಶದೆಲ್ಲೆಡೆ ಬೀದಿ ಪಾಲಾಗುತ್ತಿದ್ದಾರೆೆ. ಮಾಯಾವತಿಯವರಿಗೆ ಪ್ರಜಾಸತ್ತೆ, ಸಂವಿಧಾನ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಗಳನ್ನು ಬಲಪಡಿಸುವ ಕನಿಷ್ಠ ಬದ್ಧತೆ, ಇಚ್ಛಾಶಕ್ತಿ ಮತ್ತು ಹೊಣೆಗಾರಿಕೆಗಳು ಇದ್ದಲ್ಲಿ ಬಿಎಸ್‌ಪಿ ಮತಗಳನ್ನು ಸಾರಾಸಗಟಾಗಿ ಬಿಜೆಪಿಗೆ ಧಾರೆಯೆರೆದು ಕೋಮುವಾದಿಗಳು ಉತ್ತರಪ್ರದೇಶದಲ್ಲಿ ವಿಜೃಂಭಿಸಲು ದಾರಿ ಮಾಡಿಕೊಡುತ್ತಿರಲಿಲ್ಲ. ಸಮಾಜವಾದಿ ಪಕ್ಷ, ಕಾಂಗ್ರೆಸ್, ಆರ್‌ಜೆಡಿ, ಕಮ್ಯುನಿಸ್ಟ್ ಮೊದಲಾದ ಜಾತ್ಯತೀತ ಪಕ್ಷಗಳೊಂದಿಗೆ ಸ್ವಾರ್ಥ ಬಿಟ್ಟು ಚುನಾವಣೆಗೆ ಮೊದಲೇ ಮೈತ್ರಿಕೂಟ ರಚಿಸಿಕೊಂಡು ಹೋರಾಟ ನಡೆಸಿದ್ದಲ್ಲಿ ಬಿಎಸ್‌ಪಿ ಮತ್ತು ಪ್ರಜಾಸತ್ತೆ ತೀವ್ರ ನಿಗಾ ಘಟಕಕ್ಕೆ ಬರುವಂತಹ ದಯನೀಯ ಸ್ಥಿತಿ ತಪ್ಪುತ್ತಿತ್ತು. ಬಿಜೆಪಿ ಪ್ರತಿಕೂಲ ರಾಜಕೀಯ ಪರಿಸ್ಥಿತಿಯ ನಡುವೆಯೂ ಮತ್ತೊಮ್ಮೆ ಅಧಿಕಾರ ಗಳಿಸಲು ಇಂತಹ ಸ್ವಾರ್ಥಪರ ನಾಯಕರು ಬಹುಮುಖ್ಯ ಕಾರಣರಾಗಿದ್ದಾರೆ. ಪಂಜಾಬಿನಲ್ಲಿ ಚುನಾವಣೆಗೂ ಮೊದಲೇ ಕ್ಯಾಪ್ಟನ್ ಅಮರಿಂದರ್‌ಸಿಂಗ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ದಲಿತ ನಾಯಕ ಚೆನ್ನಿಯನ್ನು ಮುಖ್ಯಮಂತ್ರಿಯಾಗಿ ನೇಮಿಸಿ ಮತ್ತೋರ್ವ ಅವಕಾಶವಾದಿ ನವಜೋತ್‌ಸಿಂಗ್ ಸಿಧುರನ್ನು ಪಂಜಾಬ್ ಪ್ರದೇಶ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದಾಗಲೇ ಕಾಂಗ್ರೆಸ್ ಸೋಲು ಖಚಿತವಾಗಿತ್ತು.
ಕಾಂಗ್ರೆಸ್ ಪಂಜಾಬಿನಲ್ಲಿ ಕ್ಯಾಪ್ಟನ್ ಅಮರಿಂದರ್‌ಸಿಂಗ್ ನೇತೃತ್ವದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಅಭಿವೃದ್ಧಿ ರಾಜಕಾರಣ ಮುಂದುವರಿಸಿದ್ದರೆ ಅಧಿಕಾರ ಉಳಿಸಿಕೊಳ್ಳಬಹುದಾಗಿತ್ತು. ಕಾಂಗ್ರೆಸ್ ಪಕ್ಷ ಎಲ್ಲಿಯವರೆಗೆ ಕೇಡರ್ ಪಾರ್ಟಿಯಾಗುವುದರ ಬದಲಿಗೆ ಲೀಡರ್ ಪಾರ್ಟಿಯಾಗಿ ಉಳಿಯುತ್ತದೆಯೋ ಅಲ್ಲಿಯವರೆಗೆ ರಾಷ್ಟ್ರರಾಜಕಾರಣ ಮತ್ತು ಪ್ರಾದೇಶಿಕ ರಾಜಕಾರಣಗಳಲ್ಲಿ ಸೋಲುಗಳ ಸರಮಾಲೆ ಎದುರಿಸುವುದು ಅನಿವಾರ್ಯವಾಗಿದೆ. ಭಾರತದ ಪ್ರಧಾನಿ ನರೇಂದ್ರಮೋದಿ ಬಂಧುತ್ವವನ್ನು ಕಡೆಗಣಿಸಿ ಹಿಂದುತ್ವ ಭಾರತ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಬಡತನ ನಿರ್ಮೂಲನಕ್ಕೆ ನಾಂದಿ ಹಾಡಿದರೆ, ಇಂದಿನ ಪ್ರಧಾನಿ ಮೋದಿ ಬಡವರ ನಿರ್ಮೂಲನಕ್ಕೆ ಪೂರಕವಾದ ಆರ್ಥಿಕ ಉದಾರೀಕರಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ, ಸಮಾನ ನಾಗರಿಕ ಸಂಹಿತೆ, ಜಮ್ಮು-ಕಾಶ್ಮೀರದಲ್ಲಿ ವಿಧಿ 370ರ ರದ್ದತಿ, ಮೂರು ಕೃಷಿ ವಿರೋಧಿ ಮಸೂದೆಗಳು, ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ, ಕಾಶಿಯಲ್ಲಿ ವಿಶ್ವನಾಥ ಧಾಮ ಕಾರಿಡಾರ್, ಹೈದರಾಬಾದ್‌ನಲ್ಲಿ ರಾಮಾನುಜಾಚಾರ್ಯರ ಪ್ರತಿಮೆ ಸ್ಥಾಪನೆ, ಮಿಲಿಟರಿ ಆಧುನೀಕರಣ, ಯುದ್ಧೋದ್ಯಮದ ಬೆಳವಣಿಗೆ, ಲಕ್ಷಾಂತರ ನಿರುದ್ಯೋಗಿಗಳ ಸೃಷ್ಟಿ, ರೈತರ ಸರಣಿ ಆತ್ಮಹತ್ಯೆ, ದಲಿತರು ಮತ್ತು ಮುಸಲ್ಮಾನರ ದಾರುಣ ಬದುಕು, ಸಂವಿಧಾನ ವಿರೋಧಿ ಆರ್ಥಿಕ ಕ್ರಮಗಳು ಮೊದಲಾದವುಗಳು ಪ್ರಜಾಪ್ರಭುತ್ವಕ್ಕೆ ಗಂಡಾಂತರಕಾರಿಯಾಗಿವೆ.
ಇವೆಲ್ಲವೂ 2014ರಿಂದ ಈಚೆಗೆ ವೈದಿಕಶಾಹಿಯ ಪರಮರಕ್ಷಕ ಆರೆಸ್ಸೆಸ್ ಸಂಘಟನೆ ಮೂಲಕ ಜರುಗಿರುವ ಸಂವಿಧಾನ ವಿರೋಧಿ ಕೃತ್ಯಗಳಾಗಿವೆ. ಅರ್ಥಹೀನ ಸಮರ್ಥನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಮೋದಿ ತನ್ನನ್ನು ಹಿಂದೂ ರಾಷ್ಟ್ರದ ಪ್ರಧಾನಿ ಎಂಬುದಾಗಿ ಪ್ರಸ್ತುತಪಡಿಸುತ್ತಿರುವುದು ಪ್ರಜಾತಂತ್ರ ದುರ್ಬಲಗೊಳ್ಳಲು ಕಾರಣವಾಗಿವೆ. ಇಂತಹ ಸಂಕಷ್ಟ ಮತ್ತು ಸವಾಲಿನ ಸಂದರ್ಭಗಳಲ್ಲಿ ಪಂಚರಾಜ್ಯ ಚುನಾವಣೆಯಲ್ಲಿ ಮೋದಿರಾಜ್ ವಿಜೃಂಭಿಸುತ್ತಿರುವುದಕ್ಕೆ ಜಾತ್ಯತೀತ ಪಕ್ಷಗಳ ವಿಘಟನೆ ಮತ್ತು ಹೊಣೆಗೇಡಿತನಗಳು ಪ್ರಮುಖ ಕಾರಣಗಳಾಗಿವೆ. ಹಿಂದೂಯೇತರರನ್ನು ರಾಷ್ಟ್ರೀಯ ಮುಖ್ಯವಾಹಿನಿಯಿಂದ ಹೊರದಬ್ಬುವ ಹಿಂದುತ್ವ ರಾಜಕಾರಣದ ವಿರುದ್ಧ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಬಿಎಸ್‌ಪಿ, ಆರ್‌ಜೆಡಿ, ಸಮಾಜವಾದಿ ಪಕ್ಷ, ಡಿಎಂಕೆ, ಬಿಜು ಜನತಾದಳ, ಎಸ್‌ಡಿಪಿಐ, ರೈತಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ದಲಿತ-ಆದಿವಾಸಿ ಸಂಘಟನೆಗಳು ಒಗ್ಗೂಡಿ ಸಂವಿಧಾನ ಮತ್ತು ಪ್ರಜಾಸತ್ತೆಗಳನ್ನು ರಕ್ಷಿಸುವುದು ಅತ್ಯಂತ ಪ್ರಮುಖ ಅವಶ್ಯಕತೆಯಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್ ಈಗಾಗಲೇ ಶರದ್‌ಪವಾರ್, ಮಮತಾ ಬ್ಯಾನರ್ಜಿ, ದೇವೇಗೌಡ ಮೊದಲಾದ ನಾಯಕರನ್ನು ಸಂಪರ್ಕಿಸಿ ಕೋಮುವಾದಿ ಬಿಜೆಪಿ ರಾಜಕಾರಣದಿಂದ ಭಾರತೀಯ ಪ್ರಜಾಸತ್ತೆಯನ್ನು ರಕ್ಷಿಸಲು ಹೊರಟಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಕೋಮುವಾದಿಗಳನ್ನು ಪ್ರಜಾಸತ್ತಾತ್ಮಕವಾಗಿ ಸೋಲಿಸಿ ಪ್ರಜಾಸತ್ತೆಯನ್ನು ಗೆಲ್ಲಿಸಿದ ದಿಟ್ಟ ನಾಯಕಿ ಮಮತಾ ಬ್ಯಾನರ್ಜಿ ಕೂಡ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ಬದ್ಧರಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಇಂತಹ ರಾಜಕೀಯ ಧ್ರುವೀಕರಣಕ್ಕೆ ಇರಲೇಬೇಕಾದ ತೀವ್ರ ಬದ್ಧತೆಯನ್ನು ಹೊಂದಿಲ್ಲದಿರುವುದನ್ನು ಬ್ಯಾನರ್ಜಿ ಟೀಕಿಸಿದ್ದಾರೆ. ಇತ್ತೀಚೆಗೆ ಲೋಕತಾಂತ್ರಿಕ ಜನತಾದಳದ ಅಧ್ಯಕ್ಷ ಶರದ್ ಯಾದವ್ ರಾಷ್ಟ್ರೀಯ ಜನತಾದಳ ಪಕ್ಷದೊಂದಿಗೆ ತನ್ನ ಪಕ್ಷವನ್ನು ವಿಲೀನಗೊಳಿಸಿ ದ್ವೇಷ ರಾಜಕಾರಣವನ್ನು ಮರೆತು ಪ್ರಜಾಪ್ರಭುತ್ವ ರಕ್ಷಣೆಗೆ ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ರಾಷ್ಟ್ರಮಟ್ಟದಲ್ಲಿ ಸಮಾನ ಮನಸ್ಕ, ಪ್ರಗತಿಶೀಲ ಮತ್ತು ಜವಾಬ್ದಾರಿಯುತ ಬಿಜೆಪಿಯೇತರ ಪಕ್ಷಗಳ ಮಹಾಘಟಬಂಧನ್ ರೂಪಿಸುವುದರ ಮೂಲಕ ಸಂಘ ಪರಿವಾರಿಗಳು ಮತ್ತು ಯಥಾಸ್ಥಿತಿವಾದಿಗಳ ಪ್ರಾಬಲ್ಯದಿಂದ ಅವನತಿಯೆಡೆಗೆ ಸಾಗುತ್ತಿರುವ ಭಾರತೀಯ ಪ್ರಜಾಸತ್ತೆಯನ್ನು ಉಳಿಸುವುದು ಅನಿವಾರ್ಯವಾಗಿದೆ.