varthabharthi


ಈ ಹೊತ್ತಿನ ಹೊತ್ತಿಗೆ

ಹಿತ್ತಾಳೆ ಬಣ್ಣದ ಪುಸ್ತಕ

ವಾರ್ತಾ ಭಾರತಿ : 25 Mar, 2022
ಅಮರ್ತ್ಯ ಸೇನ್ | ಹಾರ್ವರ್ಡ್ ವಿಶ್ವವಿದ್ಯಾನಿಲಯ, ಮೆಸಾಚುಸೆಟ್ಸ್, ಅಮೆರಿಕ ಸಂಯುಕ್ತ ಸಂಸ್ಥಾನ

ತನ್ನ ಸುತ್ತ ಘಟಿಸುತ್ತಿರುವ ಆಸಕ್ತಿಕರ ಘಟನೆಗಳ ಅಸಾಮಾನ್ಯ ಸಂಗ್ರಹವನ್ನು ಅಷ್ಟೇ ಸುಂದರವಾಗಿ ಪ್ರಸ್ತುತಪಡಿಸುವ ಅದ್ಭುತ ನೆನಪುಗಳ ಸಂಪುಟವಿದು,

ದೇವಕಿ ನನಗೆ ಅರುವತ್ತು ವರ್ಷಗಳಿಗೂ ಹಿಂದಿನ ಪರಿಚಯ. ಅದು ನನ್ನ ಸೌಭಾಗ್ಯ, ಆಕೆಯನ್ನು ಮೊತ್ತ ಮೊದಲು ಭೇಟಿಯಾದಾಗ, ಆಕೆಯ ಚೇತೋಹಾರಿ ವ್ಯಕ್ತಿತ್ವ ನನ್ನನ್ನು ಹಿಡಿದು ನಿಲ್ಲಿಸಿತು. ಅಷ್ಟೇ ಅಲ್ಲ. ಹಮ್ಮಿಲ್ಲದೆ ಉಲ್ಲಾಸಗೊಳ್ಳುವ ಅವಳ ಸಾಮರ್ಥ್ಯ ಕಂಡು ಚಕಿತನಾದೆ.

ದೇವಕಿ ಬಹಳ ತೀಕ್ಷ್ಣ ಬುದ್ಧಿಯ ವಿದ್ಯಾರ್ಥಿನಿ. ಮೈಸೂರು ವಿಶ್ವವಿದ್ಯಾನಿಲಯ ಮತ್ತು ಆಕ್ಸ್‌ಫರ್ಡ್‌ನಲ್ಲಿ ತನ್ನ ಶಿಕ್ಷಣ ಪೂರೈಸಿದ್ದಳು. ಆಕ್ಸ್‌ಫರ್ಡ್‌ನ ಸೈಂಟ್ ಆನ್ಸ್ ಕಾಲೇಜಿನಲ್ಲಿ ಗೌರವ ಫೆಲೋ ಆಗಿ ಆಯ್ಕೆಯಾಗಿದ್ದಳು ಕೂಡ. ಆದರೆ ಅವಳ ಪ್ರಸಿದ್ಧಿ, ಈ ಔಪಚಾರಿಕ ತರಬೇತಿಗಳನ್ನು ಮೀರಿದ್ದಾಗಿತ್ತು. ಸಮಾಜದಲ್ಲಿ ಮಹಿಳೆಯ ಸ್ಥಾನ, ಅದರಲ್ಲಿಯೂ ಮುಖ್ಯವಾಗಿ ಲಿಂಗಾಧಾರಿತ ಅಸಮಾನತೆ ಎಲ್ಲೆಲ್ಲ ತಲುಪಬಹುದು ಎಂಬುದಕ್ಕೆ ಸಂಬಂಧಿಸಿ ತನ್ನ ವಿಶೇಷ ಒಳನೋಟಗಳಿಂದಾಗಿ ಅವಳ ಪ್ರಸಿದ್ಧಿ ಮತ್ತಷ್ಟು ವ್ಯಾಪಕಗೊಂಡಿತು.

ಈ ಸಂಪುಟ ಶ್ರೀಮಂತಗೊಳ್ಳಲು ಈ ತಾಜಾತನವಷ್ಟೇ ಕಾರಣವಲ್ಲ, ತನ್ನ ಬದುಕಿ ನುದ್ದಕ್ಕೂ ದೇವಕಿ ಉನ್ನತ ಧ್ಯೇಯಗಳೊಂದಿಗೆ ಕೆಲಸ ಮಾಡಿದ ವ್ಯಕ್ತಿಗಳ ಒಡನಾಟದಲ್ಲಿದ್ದಳು ಎಂಬ ವಿಚಾರವೂ ಕಾರಣ. ಅವಳ ತಂದೆ ಮಹಾತ್ಮಾ ಗಾಂಧೀಜಿ ಅವರಿಗೆ ಆಪ್ತರಾಗಿದ್ದರು. ಹತ್ಯೆಯ ಕುರಿತು ತಮಗೆ ಪೂರ್ವಸೂಚನೆಗಳು ದೊರೆತ ಬಗ್ಗೆ ದೇವಕಿಯವರ ತಂದೆಯೊಡನೆ ಹತ್ಯೆಯ ಹಿಂದಿನ ದಿನವಷ್ಟೇ ಗಾಂಧೀಜಿ ಹೇಳಿಕೊಂಡಿದ್ದರು. ದೇವಕಿ ಕೂಡ ಸ್ವಯಂ ವಿನೋಬಾ ಭಾವೆಯವರೊಡನೆ ಹೆಜ್ಜೆ ಹಾಕಿದ್ದಳು, ಜಯಪ್ರಕಾಶ್ ನಾರಾಯಣ್ ಜೊತೆ ಕೆಲಸ ಮಾಡಿದ್ದಳು.

ಆಕ್ಸ್‌ಫರ್ಡ್‌ನಲ್ಲಿ ಓದುತ್ತಿದ್ದ ಯುವತಿ ದೇವಕಿ, ಇಲ್ಲಿನ ಮಾರ್ಗ ಪ್ರವರ್ತಕ ಶಿಕ್ಷಣ ತಜ್ಞರ ಜೊತೆಗೆ ಬಹಳ ಆಪ್ತವಾಗಿದ್ದಳು. ಐರಿಸ್ ಮರ್ಡೋಕ್‌ರಿಂದ ಹಿಡಿದು, ಜೆನ್ನಿಫರ್ ಹರ್ಟ್ ಸೇರಿದಂತೆ ಇನ್ನೂ ಅನೇಕರ ಜೊತೆ, ಗಮನಾರ್ಹ ಸಾಧನೆಗಳನ್ನು ಮಾಡಿದ ಅದ್ಭುತ ವ್ಯಕ್ತಿಗಳ ಉತ್ತಮ ಗೆಳತಿಯಾಗಿದ್ದಳು. ಗ್ಲೋರಿಯಾಸ್ಟೈನೆಮ್ ಜೊತೆಗೆ ಅವಳು ಸ್ತ್ರೀವಾದದ ಪರಿಕಲ್ಪನೆಗಳಿಗೆ ಸಂಬಂಧಿಸಿ ಕೆಲಸ ಮಾಡಿದಳು. ಜಗತ್ತಿನಲ್ಲಿ ಅಸಮಾನತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಚನೆಯಾದ ದಕ್ಷಿಣ ದೇಶಗಳ ಆಯೋಗ (ಸೌತ್‌ಕಮಿಷನ್)ದ ಸದಸ್ಯೆಯಾಗುವಂತೆ ಜೂಲಿಯಸ್ ನೈರೆರೆ ಅವರು ದೇವಕಿಯನ್ನು ಪ್ರೋತ್ಸಾಹಿಸಿದ್ದರು. ಅಷ್ಟೇ ಅಲ್ಲ, ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾ ಡೆಸ್ಮಂಡ್ ಟುಟು ಮತ್ತು ಇನ್ನೂ ಅನೇಕ ರಾಜಕೀಯ ನಾಯಕರ ಜೊತೆಗೆ ಕೆಲಸ ಮಾಡಿದಳು. ಫಾತೆಮಾ ಮರ್ನೆಸ್ಸಿ ಅವರಂತಹ ರಾಜಕೀಯ ಕ್ಷೇತ್ರದ ಮುಂಚೂಣಿಯಲ್ಲಿದ್ದ ಚಿಂತಕರ ಜೊತೆಗೆ ಆಫ್ರಿಕಾದ ವಿವಿಧೆಡೆಗಳಲ್ಲಿ ಕೆಲಸ ಮಾಡಿದಳು. ಆಕೆಯ ಸಂಗಾತಿ ಲಕ್ಷ್ಮೀ ಜೈನ್ ಪ್ರತಿಭಾವಂತರು. ಆಕೆ ಅವರನ್ನು ಚೆನ್ನಾಗಿ ಬಲ್ಲವಳು. ಬಳಿಕ ಅವರಿಬ್ಬರೂ ದಂಪತಿಗಳಾದರು. ಅವರಿಬ್ಬರೂ ತಮ್ಮ ಬದುಕನ್ನು ಅಪರೂಪವೆಂಬಂತೆ ಅಮೋಘವಾಗಿ ರೂಪಿಸಿಕೊಂಡರು. ಇಬ್ಬರೂ ಒಂದಾಗಿ ಇಬ್ಬರ ಬದುಕನ್ನೂ ಮೀರಿದಂತಹ ಬೃಹತ್ ಅಸ್ತಿತ್ವವನ್ನೇ ಕಟ್ಟಿಕೊಂಡರು.

ಈ ಪುಸ್ತಕದಲ್ಲಿ ದೇವಕಿ ಬರೆದಿರುವ ಅನುಭವ ಕಥನವು ಸರಸರನೇ ಓದಿಸಿಕೊಂಡು ಹೋಗುತ್ತದೆ. ನೆನಪುಗಳನ್ನು ಆಕೆ ಆಕರ್ಷಕವಾಗಿ ಮುನ್ನೆಲೆಗೆ ತಂದುಕೊಂಡು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದ್ದಾರೆ. ಈ ಸಮಕಾಲೀನ ಜಗತ್ತಿನ ಕುರಿತ ಸಾಹಿತ್ಯಕ್ಕೆ ಇದೊಂದು ಭವ್ಯ ಸೇರ್ಪಡೆಯಾಗಿದೆ.

(ಮುನ್ನುಡಿಯಿಂದ)

ಕೃತಿ: ಹಿತ್ತಾಳೆ ಬಣ್ಣದ ಪುಸ್ತಕ

ದೇವಕಿ ಜೈನ್ ಬದುಕಿನ ಪುಟಗಳು

ಕನ್ನಡಕ್ಕೆ: ಕೋಡಿಬೆಟ್ಟು ರಾಜಲಕ್ಷ್ಮಿ

ಮುಖಬೆಲೆ: 270 ರೂ.

ಪ್ರಕಾಶಕರು: ಅಹರ್ನಿಶಿ ಪ್ರಕಾಶನ,

ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್ ಹತ್ತಿರ, ವಿದ್ಯಾನಗರ, ಶಿವಮೊಗ್ಗ-5777203

ಫೋನ್:9449174662/9448628511

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)