ಹೊರಗಿನವರ ಭೀತಿಯಿಂದ ಜಗತ್ತಿನೊಂದಿಗಿನ ಕಿಟಿಕಿಯನ್ನೇ ಮುಚ್ಚಿದರೆ?
ಉಷಾ ಮೆಹ್ತಾ ಸ್ಥಾಪಿಸಿದ ಕಾಂಗ್ರೆಸ್ ರೇಡಿಯೊದ ಕತೆಯು ಕ್ವಿಟ್ ಇಂಡಿಯಾ ಚಳವಳಿಯ ಸುತ್ತ ಹುಟ್ಟಿಕೊಂಡ ಹಲವು ದಂತಕತೆಗಳ ಪೈಕಿ ಒಂದಾಗಿದ್ದು ತುಂಬಾ ಸಮಯ ಜನಜನಿತವಾಗಿತ್ತು. ಈಗ ಆ ಘಟನೆಯು ದಂತಕತೆಯಿಂದ ಇತಿಹಾಸಕ್ಕೆ ಸೇರ್ಪಡೆಗೊಂಡಿದೆ. ಈ ಘಟನೆಯ ಬಗ್ಗೆ ಉಷಾ ಠಕ್ಕರ್ ಬರೆದಿರುವ ಪುಸ್ತಕ ‘ಕಾಂಗ್ರೆಸ್ ರೇಡಿಯೊ: ಉಷಾ ಮೆಹ್ತಾ ಆ್ಯಂಡ್ ದಿ ಅಂಡರ್‌ಗ್ರೌಂಡ್ ರೇಡಿಯೊ ಆಫ್ 1942’ ಇತ್ತೀಚೆಗೆ ಬಿಡುಗಡೆಗೊಂಡಿದೆ.
ನನ್ನ ನೆಚ್ಚಿನ ಭಾರತೀಯ ನಗರವೆಂದರೆ ಮುಂಬೈ. ಮುಂಬೈಯಲ್ಲಿರುವ ನನ್ನ ನೆಚ್ಚಿನ ಸ್ಥಳಗಳ ಪೈಕಿ ಗಮ್ದೇವಿಯಲ್ಲಿರುವ ಮಣಿಭವನವೂ ಒಂದು. ಇದೊಂದು ಮನೆಯಾಗಿತ್ತು. ಈಗ ಸ್ಮಾರಕವಾಗಿದೆ. ಇಲ್ಲಿ ಮಹಾತ್ಮಾ ಗಾಂಧಿ ಆಗಾಗ ತಂಗುತ್ತಿದ್ದರು ಹಾಗೂ ಹಲವಾರು ಸತ್ಯಾಗ್ರಹ ಆಂದೋಲನಗಳನ್ನು ರೂಪಿಸಿದ್ದರು.
1990ರ ದಶಕದ ಆದಿ ಭಾಗದಲ್ಲಿ ನಾನು ಮಣಿ ಭವನಕ್ಕೆ ಹಲವು ಬಾರಿ ಭೇಟಿ ನೀಡಿದೆ. ನನ್ನ ಆರಂಭಿಕ ಭೇಟಿಗಳ ಪೈಕಿ ಒಮ್ಮೆ ನಾನು ಬಿಳಿ ಸೀರೆ ಧರಿಸಿದ್ದ ಕುಳ್ಳಗಿನ ವೃದ್ಧ ಮಹಿಳೆಯೊಬ್ಬರನ್ನು ಭೇಟಿಯಾದೆ. ಅವರು ತುಂಬಾ ಕಡಿಮೆ ಮಾತನಾಡುತ್ತಿದ್ದರು ಹಾಗೂ ತುಂಬಾ ಮೃದುವಾಗಿ ಮಾತನಾಡುತ್ತಿದ್ದರು. ಅವರ ಶರೀರ ಚಿಕ್ಕದಾಗಿದ್ದರೂ ಸಾಧನೆಗಳು ಅಗಾಧವಾಗಿದ್ದವು. ಅವರ ಹೆಸರು ಉಷಾ ಮೆಹ್ತಾ. ಅವರು ತನ್ನ ಯೌವನದ ದಿನಗಳಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಪ್ರೇರಕ ಶಕ್ತಿಗಳ ಪೈಕಿ ಒಬ್ಬರಾಗಿದ್ದರು. 1942 ಆಗಸ್ಟ್ 9ರಂದು ಮಹಾತ್ಮಾ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಬ್ರಿಟಿಷ್ ಆಡಳಿತವು ಬಂಧಿಸಿದಾಗ, ಭೂಗತ ರೇಡಿಯೊವೊಂದನ್ನು ಸ್ಥಾಪಿಸುವಲ್ಲಿ ಉಷಾ ಮೆಹ್ತಾ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು. ಇನ್ನೂ ಜೈಲಿಗೆ ಹೋಗದ ದೇಶಭಕ್ತರಲ್ಲಿ ಸ್ವಾತಂತ್ರ್ಯದ ಚೇತನವನ್ನು ಜೀವಂತವಾಗಿಡುವುದಕ್ಕಾಗಿ ಭೂಗತ ರೇಡಿಯೊ ರಹಸ್ಯ ಸ್ಥಳಗಳಿಂದ ಆವೇಶಭರಿತ ಸುದ್ದಿಗಳನ್ನು ಪ್ರಸಾರ ಮಾಡಿತು.
ಕಾಂಗ್ರೆಸ್ ರೇಡಿಯೊವನ್ನು ಉಷಾ ಮೆಹ್ತಾ ಸ್ಥಾಪಿಸಿದಾಗ ಅವರ ಪ್ರಾಯ 20 ವರ್ಷ ದಾಟಿತ್ತು ಅಷ್ಟೇ. ಅವರು ಅಂದಿನ ಬಾಂಬೆ ನಗರದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿದ್ದರು. ಅಂತಿಮವಾಗಿ ಬ್ರಿಟಿಷ್ ಆಡಳಿತವು ರೇಡಿಯೊದ ಸ್ಥಳವನ್ನು ಪತ್ತೆ ಮಾಡಿತು ಹಾಗೂ ಅದರ ರೂವಾರಿಗಳನ್ನು ಬಂಧಿಸಿತು. ಉಷಾ ಮೆಹ್ತಾ ಹಲವು ವರ್ಷಗಳನ್ನು ಜೈಲಿನಲ್ಲಿ ಕಳೆದರು. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಅವರು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದರು ಹಾಗೂ ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದ ಪ್ರೊಫೆಸರ್ ಆದರು.
ಮಣಿ ಭವನದ ಆಡಳಿತದಲ್ಲಿಯೂ ಅವರು ಪ್ರಮುಖ ಪಾತ್ರವನ್ನು ನಿಭಾಯಿಸಿದರು. ಅದರ ನಿರ್ವಹಣೆ ಮತ್ತು ಪ್ರದರ್ಶನಗೊಳ್ಳುವ ಚಿತ್ರಗಳ ಮೇಲುಸ್ತುವಾರಿಯಿಂದ ಹಿಡಿದು ಗಾಂಧಿ ಪರಂಪರೆ ಮತ್ತು ಸ್ವಾತಂತ್ರ್ಯ ಚಳವಳಿಯ ಕುರಿತು ಭಾಷಣಗಳನ್ನು ಏರ್ಪಡಿಸುವವರೆಗೂ ಎಲ್ಲಾ ವಿಷಯಗಳನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಭೂಗತ ರೇಡಿಯೊದ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಈ ಸಿಡಿಗುಂಡು ಯುವತಿಯು ಬಳಿಕ ಸೌಮ್ಯ ಸ್ವಭಾವದ ಮಧ್ಯವಯಸ್ಕ ಮಹಿಳೆಯಾದರು. ಅವರು ಮಧ್ಯವಯಸ್ಕ ಮಹಿಳೆಯಾಗಿ, ಮಹಾತ್ಮಾ ಗಾಂಧೀಜಿಗೆ ಹಾಗೂ ಅವರ ಚಳವಳಿಗೆ ಅತ್ಯಂತ ಆಪ್ತವಾಗಿದ್ದ ನಗರದಲ್ಲಿ ಈ ಅತ್ಯಂತ ಮಹತ್ವದ ಸ್ಮಾರಕವನ್ನು ನಡೆಸಿಕೊಂಡು ಬಂದರು. ತನ್ನ ವಿದ್ಯಾರ್ಥಿಗಳು, ತನ್ನ ವಿದ್ವತ್ತು ಮತ್ತು ಮಣಿ ಭವನದ ನಿರ್ವಹಣೆಗೆ ತನ್ನನ್ನು ಅರ್ಪಿಸಿಕೊಂಡ ಉಷಾ ಮೆಹ್ತಾ ಮದುವೆಯಾಗಲಿಲ್ಲ.
ಉಷಾ ಮೆಹ್ತಾ ಸ್ಥಾಪಿಸಿದ ಕಾಂಗ್ರೆಸ್ ರೇಡಿಯೊದ ಕತೆಯು ಕ್ವಿಟ್ ಇಂಡಿಯಾ ಚಳವಳಿಯ ಸುತ್ತ ಹುಟ್ಟಿಕೊಂಡ ಹಲವು ದಂತಕತೆಗಳ ಪೈಕಿ ಒಂದಾಗಿದ್ದು ತುಂಬಾ ಸಮಯ ಜನಜನಿತವಾಗಿತ್ತು. ಈಗ ಆ ಘಟನೆಯು ದಂತಕತೆಯಿಂದ ಇತಿಹಾಸಕ್ಕೆ ಸೇರ್ಪಡೆಗೊಂಡಿದೆ. ಈ ಘಟನೆಯ ಬಗ್ಗೆ ಉಷಾ ಠಕ್ಕರ್ ಬರೆದಿರುವ ಪುಸ್ತಕ ‘ಕಾಂಗ್ರೆಸ್ ರೇಡಿಯೊ: ಉಷಾ ಮೆಹ್ತಾ ಆ್ಯಂಡ್ ದಿ ಅಂಡರ್‌ಗ್ರೌಂಡ್ ರೇಡಿಯೊ ಆಫ್ 1942’ ಇತ್ತೀಚೆಗೆ ಬಿಡುಗಡೆಗೊಂಡಿದೆ. ಉಷಾ ಮೆಹ್ತಾರ ಮಾಜಿ ವಿದ್ಯಾರ್ಥಿನಿಯಾಗಿರುವ ಡಾ. ಉಷಾ ಠಕ್ಕರ್, ತನ್ನ ಗುರುವಿನಂತೆಯೇ ತನ್ನ ಮುಂದಿನ ಬದುಕನ್ನು ಮಣಿ ಭವನದ ಆಡಳಿತದಲ್ಲಿ ತೊಡಗಿಸಿಕೊಂಡರು. ಈ ಪುಸ್ತಕವನ್ನು ಬರೆಯುವುದಕ್ಕಾಗಿ ಅವರು ಹಳೆಯ ಸಂಗ್ರಹದಲ್ಲಿರುವ ಪುಸ್ತಕಗಳು ಮತ್ತು ದಾಖಲೆಗಳನ್ನು ವಿವರವಾಗಿ ಅಧ್ಯಯನ ಮಾಡಿದ್ದಾರೆ. ಈ ಪುಸ್ತಕವು ವಿದ್ವಾಂಸರ ಜೊತೆಗೆ ಆಸಕ್ತ ಸಾರ್ವಜನಿಕರನ್ನೂ ಆಕರ್ಷಿಸುತ್ತದೆ.
ಗಮನಿಸಬೇಕಾದ ವಿಷಯವೆಂದರೆ, ಈ ಇತಿಹಾಸದ ಪುಸ್ತಕವು ವರ್ತಮಾನದ ಜೊತೆಗೆ ನೇರವಾಗಿ ಮಾತನಾಡುತ್ತದೆ. ಕಾಂಗ್ರೆಸ್ ರೇಡಿಯೊ 1942 ಅಕ್ಟೋಬರ್ 20ರಂದು ಪ್ರಸಾರ ಮಾಡಿದ ಸುದ್ದಿಯ ಸಾರಾಂಶ ಇಲ್ಲಿದೆ:
ಮನುಕುಲದ ಜಗತ್ತಿಗೆ ಭಾರತೀಯ ಜನತೆಯು ಭರವಸೆ, ಶಾಂತಿ ಮತ್ತು ಸದ್ಭಾವನೆಯ ಸಂದೇಶವೊಂದನ್ನು ಕಳುಹಿಸುತ್ತಿದೆ. ಒಂದು ಜನರು ಇನ್ನೊಂದು ಜನರ ಮೇಲೆ ನಡೆಸುವ ಹಿಂಸೆಯನ್ನು ನಾವಿಂದು ಮರೆಯೋಣ. ನಿಜವಾದ ಶಾಂತಿಯುತ ಹಾಗೂ ಉತ್ತಮ ಜಗತ್ತಿನ ಸ್ಥಾಪನೆಗಾಗಿ ನಮಗೆ ಪ್ರತಿಯೊಂದು ದೇಶದ ದಯೆ, ಪ್ರತಿಯೊಂದು ಜನತೆಯ ಬೆಂಬಲ ಬೇಕಾಗಿದೆ ಎನ್ನುವುದನ್ನು ಮಾತ್ರ ನಾವು ಸ್ಮರಿಸೋಣ. ನಮಗೆ ಜರ್ಮನಿಯ ತಾಂತ್ರಿಕ ಕೌಶಲ, ವೈಜ್ಞಾನಿಕ ಜ್ಞಾನ ಮತ್ತು ಸಂಗೀತ ಬೇಕು. ನಮಗೆ ಇಂಗ್ಲೆಂಡ್‌ನ ಉದಾರವಾದ, ಧೈರ್ಯ ಮತ್ತು ಸಾಹಿತ್ಯ ಬೇಕು. ನಮಗೆ ಇಟಲಿಯ ಸೊಬಗು ಬೇಕು. ನಮಗೆ ರಶ್ಯದ ಹಳೆಯ ಸಾಧನೆಗಳು ಮತ್ತು ನೂತನ ವಿಜಯಗಳು ಬೇಕು. ನಮಗೆ ನಗೆಯನ್ನು ಪ್ರೀತಿಸುವ ಆಸ್ಟ್ರಿಯದ ಸುಂದರ ನಗು, ಅದರ ಸಂಸ್ಕೃತಿ ಮತ್ತು ಘನತೆಯ ಬದುಕಿಗೆ ಅದು ಹೊಂದಿರುವ ಪ್ರೀತಿ ಬೇಕು. ಮತ್ತು ಚೀನಾ... ಚೀನಾದ ಬಗ್ಗೆ ನಾವು ಏನು ಹೇಳೋಣ? ನಮಗೆ ಚೀನಾದ ತಿಳುವಳಿಕೆ, ಧೈರ್ಯ ಮತ್ತು ಅದರ ಹೊಸ ಭರವಸೆ ಬೇಕು. ನಮಗೆ ಯುವ ಅಮೆರಿಕದ ಉತ್ಸಾಹ ಮತ್ತು ಸಾಹಸ ಪ್ರವೃತ್ತಿ ಬೇಕು. ನಮಗೆ ಆದಿವಾಸಿಗಳ ಜ್ಞಾನ ಮತ್ತು ಮಕ್ಕಳಂಥ ಸರಳತೆ ಬೇಕು. ನಮಗೆ ಶಾಂತಿಯ ಪುನಶ್ಚೇತನಕ್ಕಾಗಿ ಮತ್ತು ಮನುಕುಲದ ಘನತೆಗಾಗಿ ಸಮಗ್ರ ಮನುಕುಲ ಬೇಕು.
ದೇಶಗಳ ನಡುವಿನ ಅತ್ಯಂತ ವಿನಾಶಕಾರಿ ಸಂಘರ್ಷದ ನಡುವೆ ಬರೆಯಲಾದ ಹಾಗೂ ಪ್ರಸಾರ ಮಾಡಲಾದ ಈ ಸಂದೇಶದ ಆಶಯವು ಒಂದು ಕಾಲದ ಭಾರತೀಯ ರಾಷ್ಟ್ರೀಯತೆಯ ಆಶಯವಾಗಿತ್ತು. ವಿದೇಶಿ ಆಳ್ವಿಕೆಯಿಂದ ಮುಕ್ತಿಗಾಗಿ ತೀವ್ರವಾದ ಬದ್ಧತೆಯಿದ್ದಾಗ, ರಾಜಕೀಯ ಸ್ವಾತಂತ್ರ್ಯವನ್ನು ತರುವ ಪ್ರಕ್ರಿಯೆಯಲ್ಲಿ ಪ್ರಾಣಗಳು ಮತ್ತು ಅಂಗಾಂಗಗಳಿಗೆ ಅಪಾಯವಿದ್ದಾಗ, ಉಪಖಂಡದ ವಿವಿಧ ಭಾಗಗಳು ವಿವಿಧ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಗಳಲ್ಲಿ ಆಳವಾಗಿ ಮುಳುಗಿದ್ದಾಗ ಈ ಸಂದೇಶವನ್ನು ಬರೆಯಲಾಗಿತ್ತು. ಆದರೆ, ಇವೆಲ್ಲವುಗಳ ಹೊರತಾಗಿಯೂ, ಇತರ ದೇಶಗಳೊಂದಿಗಿನ ಮುಕ್ತ ಮನಸ್ಸಿನ ಸಂವಹನದಿಂದ ಹಾಗೂ ಇತರ ದೇಶಗಳು ಹೊಂದಿರುವ ಶ್ರೇಷ್ಠ ಸಾಂಸ್ಕೃತಿಕ, ರಾಜಕೀಯ ಮತ್ತು ಬೌದ್ಧಿಕ ಶ್ರೇಷ್ಠತೆಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದರಿಂದ ನಮ್ಮ ದೇಶಕ್ಕೆ ಲಾಭವಾಗುತ್ತದೆ ಎನ್ನುವುದನ್ನು ಆ ಸಂದೇಶವು ಗುರುತಿಸಿದೆ.
ಇಂದು ನಾವು ತೀರಾ ಭಿನ್ನ ಮಾದರಿಯ ರಾಷ್ಟ್ರೀಯತೆಯ ವ್ಯಾಖ್ಯೆಗೆ ಒಳಪಟ್ಟಿರುವ ಭಾರತದಲ್ಲಿ ಬದುಕುತ್ತಿದ್ದೇವೆ. ಇಂದಿನ ರಾಷ್ಟ್ರೀಯತೆಯನ್ನು ‘ಅಬ್ಬರದ ಮತ್ತು ಆಡಂಬರದ ದೇಶಭಕ್ತಿ’ ಎಂಬುದಾಗಿ ಕರೆಯುವುದೇ ಸೂಕ್ತ. ರಾಷ್ಟ್ರೀಯತೆಯಲ್ಲಿ, ಅದರಲ್ಲೂ ಮುಖ್ಯವಾಗಿ ಧಾರ್ಮಿಕವಾಗಿ ನಾವು ಶ್ರೇಷ್ಠರು ಎಂಬುದಾಗಿ ಯಾವುದೇ ನೆಲೆಗಟ್ಟಿಲ್ಲದೆ ಜೋರು ದನಿಯಲ್ಲಿ ಕೂಗುವುದೇ ಇದರ ಮುಖ್ಯ ಲಕ್ಷಣ. ಈ ಒಳಮುಖ ತಿರುವು ನಮ್ಮ ಆರ್ಥಿಕ ನೀತಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂಥ ಆರ್ಥಿಕ ನೀತಿಗಳು ಭಾರತೀಯ ಉದ್ಯಮಶೀಲತೆಯನ್ನು ಪೋಷಿಸುವ ಹೆಸರಿನಲ್ಲಿ ಅಸಮರ್ಥತೆ ಮತ್ತು ಸ್ವಜನಪಕ್ಷಪಾತವನ್ನು ಉತ್ತೇಜಿಸುತ್ತಿವೆ. ಇದಕ್ಕೆ ಪೂರಕವಾಗಿ ನಮ್ಮ ಶಿಕ್ಷಣ ನೀತಿಗಳು ಆಧುನಿಕ ವೈಜ್ಞಾನಿಕ ಜ್ಞಾನಕ್ಕೆ ಬದಲು ಹಿಂದೂ ಪ್ರಥಮ ಎನ್ನುವ ತಾರತಮ್ಯದ ಸಿದ್ಧಾಂತಗಳಿಗೆ ಉತ್ತೇಜನ ನೀಡಲು ವಂಚನೆಯ ಪ್ರಯತ್ನಗಳನ್ನು ನಡೆಸುತ್ತಿವೆ. ಈ ಮೂಲಕ ಜಗತ್ತಿಗಿರುವ ನಮ್ಮ ಕಿಟಿಕಿಗಳನ್ನು ಮುಚ್ಚಲಾಗುತ್ತಿದೆ ಹಾಗೂ ಅದಕ್ಕೆ ಪೂರಕವಾಗಿ ಭಾರತದೊಳಗೇ ಇರುವ ಬಹುತ್ವದ ಸಾಂಸ್ಕೃತಿಕ ಸಂಪ್ರದಾಯಗಳ ಮೇಲೆ ಅನಾಗರಿಕ ದಾಳಿ ನಡೆಸಲಾಗುತ್ತಿದೆ. ಇದನ್ನು, ಭಾರತೀಯರು ಏನನ್ನು ಧರಿಸಬೇಕು ಅಥವಾ ಧರಿಸಬಾರದು, ಅವರು ಏನನ್ನು ತಿನ್ನಬೇಕು ಅಥವಾ ತಿನ್ನಬಾರದು ಮತ್ತು ಅವರು ಯಾರನ್ನು ಮದುವೆಯಾಗಬೇಕು ಅಥವಾ ಮದುವೆಯಾಗಬಾರದು ಎನ್ನುವುದಕ್ಕೆ ಸಂಬಂಧಿಸಿ ಸಮಾನ ನೀತಿ ಸಂಹಿತೆಯೊಂದನ್ನು ಹೇರಲು ಬಯಸುವ ಅವರ ಇರಾದೆಯಲ್ಲಿ ನೋಡಬಹುದಾಗಿದೆ.
ಆಧುನಿಕ ಭಾರತವನ್ನು ನಿರ್ಮಿಸಿದವರು ಜಗತ್ತಿನಾದ್ಯಂತ ವ್ಯಾಪಕವಾಗಿ ಸಂಚರಿಸಿದ್ದರು. ಈ ಸಂಚಾರದ ವೇಳೆ ಅವರು ವಿವಿಧ ಕಲ್ಪನೆಗಳನ್ನು ತಮ್ಮದಾಗಿಸಿಕೊಂಡಿದ್ದರು. ಬಹುಷಃ, ಜಾಗತಿಕ ಕಲ್ಪನೆಗಳನ್ನು ಹೊಂದಿದ್ದ ಮೊದಲ ಶ್ರೇಷ್ಠ ಭಾರತೀಯನೆಂದರೆ ರಾಮಮೋಹನ್ ರಾಯ್. ಅವರ ಬಗ್ಗೆ ನಂತರದ ಬಂಗಾಳಿ ಚಿಂತಕರೊಬ್ಬರು ಹೀಗೆ ಬರೆದಿದ್ದಾರೆ: ಅವರಿಗೆ ಯುರೋಪ್‌ನ ಆದರ್ಶಗಳನ್ನು ಅಷ್ಟೊಂದು ಸಮಗ್ರವಾಗಿ ಅರಗಿಸಿಕೊಳ್ಳಲು ಹೇಗೆ ಸಾಧ್ಯವಾಯಿತೆಂದರೆ, ಅವರು ಆ ಆದರ್ಶಗಳಲ್ಲಿ ಮುಳುಗಿ ಹೋಗಿರಲಿಲ್ಲ; ಅವರಲ್ಲಿ ಬಡತನ ಅಥವಾ ದೌರ್ಬಲ್ಯಗಳಿರಲಿಲ್ಲ. ಅವರಿಗೆ ತನ್ನದೇ ಆದ ನೆಲೆಯಿತ್ತು. ಅದರ ಆಧಾರದಲ್ಲಿ ಅವರಿಗೆ ತನ್ನ ನಿಲುವುಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿತ್ತು ಹಾಗೂ ತನಗೆ ಬೇಕಾದವುಗಳನ್ನು ಅವರು ಸ್ವೀಕರಿಸಬಹುದಾಗಿತ್ತು. ಭಾರತದ ನಿಜವಾದ ಸಂಪತ್ತು ಏನೆಂದು ಅವರಿಗೆ ಗೊತ್ತಿತ್ತು. ಹೇಗೆಂದರೆ ಅವರು ಕೂಡ ಅದಾಗಲೇ ತನ್ನದೇ ಆದ ಸಂಪತ್ತನ್ನು ಗಳಿಸಿದ್ದರು. ಅದರ ಪರಿಣಾಮವಾಗಿ, ಇತರರ ಸಂಪತ್ತನ್ನು ಪರೀಕ್ಷಿಸಬಲ್ಲ ಮಾನದಂಡವು ಅವರ ಬಳಿಯಿತ್ತು.
ರಾಮಮೋಹನ್ ರಾಯ್‌ರ ಜಾಗತಿಕ ನಿಲುವಿನ ಬಲಗಳನ್ನು ಇಷ್ಟೊಂದು ಸೂಕ್ಷ್ಮವಾಗಿ ಗುರುತಿಸಿದ ಈ ಚಿಂತಕ ಬೇರಾರೂ ಅಲ್ಲ; ರವೀಂದ್ರನಾಥ ಟಾಗೋರ್. ಟಾಗೋರ್ ಸ್ವತಃ ಏಶ್ಯ, ಯುರೋಪ್ ಹಾಗೂ ಉತ್ತರ ಮತ್ತು ದಕ್ಷಿಣ ಅಮೆರಿಕಗಳಾದ್ಯಂತ ವ್ಯಾಪಕ ಪ್ರವಾಸ ಕೈಗೊಂಡಿದ್ದು, ತನಗೆ ಮತ್ತು ತನ್ನ ದೇಶಕ್ಕೆ ಮುಖ್ಯವಾಗಿ ಬೇಕಾಗಿರುವುದನ್ನು ಆ ದೇಶಗಳಿಂದ ಸ್ವೀಕರಿಸಬಲ್ಲ ಸಾಮರ್ಥ್ಯ ಹೊಂದಿದ್ದವರು. ರಾಯ್ ಅವರಂತೆ, ತನ್ನದೇ ಭಾಷೆ ಮತ್ತು ಸಂಸ್ಕೃತಿಯಲ್ಲಿ ಆಳವಾಗಿ ಮುಳುಗಿದ್ದ ಟಾಗೋರ್‌ರಲ್ಲಿ ಕೂಡ ಇತರರ ಸಂಪತ್ತನ್ನು ಪರೀಕ್ಷಿಸಬಲ್ಲ ಸ್ಪರ್ಶಕಲ್ಲಿತ್ತು.
ಇತರ ಶ್ರೇಷ್ಠ ದೇಶಭಕ್ತರಾದ ಮಹಾತ್ಮಾ ಗಾಂಧಿ, ನೆಹರೂ, ಅಂಬೇಡ್ಕರ್ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ಮುಂತಾದವರೂ ವಿದೇಶಗಳಿಗೆ ವ್ಯಾಪಕ ಪ್ರವಾಸಗಳನ್ನು ಕೈಗೊಂಡು ತಮ್ಮ ನಿಲುವುಗಳನ್ನು ರೂಪಿಸಿಕೊಂಡವರು. ಭಾರತವನ್ನು ಜಗತ್ತಿನ ಕನ್ನಡಿಯಲ್ಲಿ ನೋಡುವ ಮೂಲಕ, ಅದರ ವೈಫಲ್ಯಗಳು ಮತ್ತು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಹಾಗೂ ಅವುಗಳಿಗೆ ಪರಿಹಾರ ರೂಪಿಸಲು ಅವರಿಗೆ ಸಾಧ್ಯವಾಗಿತ್ತು. ಇಂಥ ಒಂದು ರಚನಾತ್ಮಕ ಸೃಷ್ಟಿಯೇ ಭಾರತೀಯ ಸಂವಿಧಾನ. ಅದರಲ್ಲಿ ಅಂಬೇಡ್ಕರ್ ವಿದೇಶದಲ್ಲಿ ಮಾಡಿದ ಕಾನೂನು ಮತ್ತು ಸಾಮಾಜಿಕ ಶಿಕ್ಷಣ ಅಧ್ಯಯನದ ಗುರುತುಗಳಿವೆ ಹಾಗೂ ವಿದೇಶಿ ಪರಿಣತರೊಂದಿಗೆ ಮತ್ತು ತನ್ನ ಸಲಹಾಕಾರ ಮತ್ತು ಸಹೋದ್ಯೋಗಿ ಬಿ.ಎನ್. ರಾವ್ ಜೊತೆ ನಡೆಸಿದ ಸಮಾಲೋಚನೆಗಳ ಫಲಿತಾಂಶವಿದೆ. ವಾಸ್ತವವಾಗಿ, ಆ ಕಾಲದಲ್ಲಿ, ಇತರ ದೇಶಗಳಲ್ಲಿ ಅಧ್ಯಯನ ಮಾಡಲು ಅಥವಾ ಬದುಕಲು ಬೇಕಾಗುವಷ್ಟು ಸಂಪತ್ತು ಇಲ್ಲದವರೂ ತಮ್ಮ ರಾಷ್ಟ್ರೀಯ ಅಥವಾ ಸಾಂಸ್ಕೃತಿಕ ಮೂಲ ಏನೇ ಆಗಿದ್ದರೂ ಪ್ರಗತಿಶೀಲ ಕಲ್ಪನೆಗಳಿಗೆ ತಮ್ಮನ್ನು ತೆರೆದುಕೊಂಡಿದ್ದರು.
ಹಾಗಾಗಿ, 19ನೇ ಶತಮಾನದ ಕೊನೆಯಲ್ಲಿ, ಗುಲಾಮಗಿರಿಯನ್ನು ತೊಡೆದುಹಾಕಬೇಕೆಂಬ ಅಮೆರಿಕನ್ ಚಿಂತಕರ ವಿಚಾರಗಳಿಂದ ಪ್ರಭಾವಿತರಾದ ಜೋತಿಬಾ ಫುಲೆ, ಭಾರತದಲ್ಲಿ ಜಾತಿ ತಾರತಮ್ಯದ ವಿರುದ್ಧ ತನ್ನದೇ ಆದ ಹೋರಾಟವನ್ನು ಆರಂಭಿಸಿದರು. ಅದೇ ರೀತಿ, 1942ರಲ್ಲಿ, ತನ್ನ ಕಾಂಗ್ರೆಸ್ ರೇಡಿಯೊ ಬುಲೆಟಿನ್‌ನಲ್ಲಿ ಅಗಾಧ ದೇಶಭಕ್ತ ಯುವತಿ ಉಷಾ ಮೆಹ್ತಾ, ಯುರೋಪ್, ರಶ್ಯ, ಇಟಲಿ, ಚೀನಾ ಮತ್ತು ಅಮೆರಿಕದಲ್ಲಿರುವ ಯಾವ ಶ್ರೇಷ್ಠ ಅಂಶಗಳನ್ನು ತನ್ನ ಪ್ರೀತಿಯ ಭಾರತ ಪಡೆಯಬಹುದು ಎಂಬ ಬಗ್ಗೆ ಅಷ್ಟೊಂದು ಹೃದಯಸ್ಪರ್ಶಿಯಾಗಿ ಬರೆದರು.
ಹಿಂದಿನ ತಲೆಮಾರಿನ ಭಾರತೀಯ ದೇಶಭಕ್ತರು ಇತರ ಸಂಸ್ಕೃತಿಗಳಿಂದ ಶ್ರೇಷ್ಠವಾದವುಗಳನ್ನು ಪಡೆದುಕೊಂಡರು ಹಾಗೂ ಅದಕ್ಕೆ ಪ್ರತಿಯಾಗಿಯೂ ಕೊಟ್ಟರು. 19ನೇ ಶತಮಾನದ ಆರಂಭದಲ್ಲಿ, ಇಂಗ್ಲೆಂಡ್‌ನಲ್ಲಿ ಮತದಾನದ ಹಕ್ಕನ್ನು ಎಲ್ಲ ವರ್ಗಕ್ಕೂ ವಿಸ್ತರಿಸಬೇಕು ಎಂಬ ಅಂದಿನ ಕಾಲಕ್ಕೆ ಮಹತ್ವಾಕಾಂಕ್ಷಿ ಎಂಬುದಾಗಿ ಭಾವಿಸಲಾಗಿದ್ದ ವಾದವನ್ನು ರಾಮಮೋಹನ್ ರಾಯ್ ಮಂದಿಟ್ಟರು. ಒಂದು ಶತಮಾನದ ಬಳಿಕ, ಚೀನಾ, ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದಂತಹ ದೂರದ ಭೂಪ್ರದೇಶಗಳಲ್ಲಿರುವ ಲೇಖಕರು ಮತ್ತು ಚಿಂತಕರ ಮೇಲೆ ಟಾಗೋರ್ ಪ್ರಭಾವ ಬೀರಿದರು. ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಯ ಮೇಲೆ ಗಾಂಧೀಜಿಯ ಪ್ರಭಾವ ಎಲ್ಲರಿಗೂ ತಿಳಿದಿದೆ. ನೆಹರೂ ಮಟ್ಟಿಗೆ ಹೇಳುವುದಾದರೆ, ವಸಾಹತುಶಾಹಿ ವಿರುದ್ಧದ ಅವರ ಹೋರಾಟಗಳನ್ನು ಆಫ್ರಿಕದ ಅವರಿಗಿಂತ ಕಿರಿಯ ಸ್ವಾತಂತ್ರ್ಯ ಹೋರಾಟಗಾರರು (ಇದರಲ್ಲಿ ನೆಲ್ಸನ್ ಮಂಡೇಲ ಸೇರಿದ್ದಾರೆ)ಉತ್ಸಾಹದಿಂದ ಗಮನಿಸಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಭ್ರಾತೃತ್ವದ ನಿಟ್ಟಿನಲ್ಲಿ ಅಂಬೇಡ್ಕರ್ ಮಾಡಿರುವ ಕೆಲಸಗಳಿಗೆ ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳಲ್ಲಿಯೂ ಹೆಚ್ಚೆಚ್ಚು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಒಂದು ಕಾಲದಲ್ಲಿ ಇತರ ಸಂಸ್ಕೃತಿಗಳೊಂದಿಗೆ ಭಾರತೀಯ ದೇಶಭಕ್ತರು ನಡೆಸಿದ ಈ ಮಾದರಿಯ ಮುಕ್ತ ಮನಸ್ಸಿನ ಸಂವಹನಗಳು ಮತ್ತು ಇಂದಿನ ಭಾರತದ ಪ್ರಮುಖ ನಾಯಕರು ಪಡೆದಿರುವ ತರಬೇತಿ (ಸಿದ್ಧಾಂತಗಳ ಹೇರಿಕೆ ಎನ್ನುವುದು ಸೂಕ್ತ ಪದ)ಗಳು ಪರಸ್ಪರ ವಿರುದ್ಧ ಧ್ರುವಗಳಾಗಿವೆ.
ನರೇಂದ್ರ ಮೋದಿ, ಅಮಿತ್ ಶಾ ಮತ್ತು ಅವರಂಥ ಇತರರನ್ನು ರೂಪುಗೊಳಿಸಿರುವ ಆರೆಸ್ಸೆಸ್ ಸಿದ್ಧಾಂತವು ಹೊರ ಜಗತ್ತಿನ ಸಂಪರ್ಕವಿಲ್ಲದ ಒಂದು ದ್ವೀಪದಂತಿದೆ ಹಾಗೂ ಹೊರಗಿನವರ ಬಗ್ಗೆ ಹೆದರಿಕೆ (ಝೆನಫೋಬಿಯ)ಯನ್ನು ಹೊಂದಿದೆ. ನಮ್ಮ ಪ್ರಾಚೀನ ನಂಬಿಕೆಯನ್ನು ವಿವೇಚನಾರಹಿತವಾಗಿ ಹೆಮ್ಮೆಯಿಂದ ಅನುಸರಿಸಬೇಕು ಎಂಬುದಾಗಿ ಅದು ಜನರಿಗೆ ಕಲಿಸುತ್ತದೆ ಹಾಗೂ ಶತ್ರುಗಳ (ಹೆಚ್ಚನ ಸಂದರ್ಭಗಳಲ್ಲಿ ಕಾಲ್ಪನಿಕ) ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲು ಬೋಧಿಸುತ್ತದೆ ಹಾಗೂ ಹಿಂದೂಗಳು ಮಾನವತೆಯ ವಿಶ್ವ ಗುರು ಆಗಲಿದ್ದಾರೆ ಎಂಬ ಅತಿರಂಜಿತ ಕಲ್ಪನೆಗಳನ್ನು ಪುನರುಚ್ಚರಿಸುತ್ತದೆ. ಜಗತ್ತು ಅವರಿಂದ ಕಲಿಯುವುದು ಏನೂ ಇಲ್ಲ. ಇದಕ್ಕಿಂತಲೂ ಹೆಚ್ಚಿನ ದುಃಖದ ಸಂಗತಿಯೆಂದರೆ, ಜಗತ್ತಿನಿಂದ ಏನನ್ನೂ ಕಲಿಯದಿರಲು ಅವರು ನಿರ್ಧರಿಸಿದ್ದಾರೆ.