ಸೌದಿ ಅರೆಬಿಯಾ: ತೈಲ ಸಂಗ್ರಹಾಲಯದ ಮೇಲೆ ಕ್ಷಿಪಣಿ ದಾಳಿ
ರಿಯಾದ್, ಮಾ.26: ಸೌದಿ ಅರೆಬಿಯಾದ ತೈಲ ಸಂಗ್ರಹಾಲಯ ವ್ಯವಸ್ಥೆಯ ಮೇಲೆ ಯೆಮನ್‌ನ ಹೌದಿ ಬಂಡುಗೋರರು ಶುಕ್ರವಾರ ಕ್ಷಿಪಣಿ ದಾಳಿ ನಡೆಸಿದ್ದಾರೆ ಎಂದು ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಈ ದಾಳಿಯಿಂದ ರವಿವಾರ ಜಿದ್ದಾದಲ್ಲಿ ನಿಗದಿಯಾಗಿರುವ ಫಾರ್ಮುಲಾ 1 ಗ್ರ್ಯಾಂಡ್‌ಫ್ರಿಕ್ಸ್ ಟೂರ್ನಿಗೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ನಡೆದ ದಾಳಿಯಿಂದ ತೈಲ ಸಂಗ್ರಹಗಾರದಲ್ಲಿ ಭಾರೀ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ.
ಆದರೆ ಯಾವುದೇ ಸಾವುನೋವಿನ ವರದಿಯಾಗಿಲ್ಲ. ಫಾರ್ಮುಲಾ 1 ರೇಸ್‌ನ 2ನೇ ತರಬೇತಿ ಕಾರ್ಯಕ್ರಮಕ್ಕೆ ತುಸು ಅಡ್ಡಿಯಾಗಿದ್ದು ಅರ್ಧ ಗಂಟೆ ವಿಳಂಬವಾಗಿ ತರಬೇತಿ ಆರಂಭವಾಗಿದೆ ಎಂದು ವರದಿಯಾಗಿದೆ.
ಯೆಮನ್‌ನಲ್ಲಿನ ಸಂಘರ್ಷಕ್ಕೆ 2015ರಲ್ಲಿ ಮಧ್ಯಪ್ರವೇಶಿಸಿದ್ದ ಸೌದಿ ಅರೆಬಿಯಾ, ಅಂತರಾಷ್ಟ್ರೀಯ ಮಾನ್ಯತೆ ಪಡೆದಿರುವ ಸರಕಾರವನ್ನು ಯೆಮನ್‌ನಲ್ಲಿ ಮರುಸ್ಥಾಪಿಸಿತ್ತು. ಆ ಬಳಿಕ ಯೆಮನ್‌ನ ಹೌದಿ ಬಂಡುಗೋರರು ಸೌದಿ ಅರೆಬಿಯಾದ ವಿಮಾನ ನಿಲ್ದಾಣ, ಸೇನಾ ನೆಲೆಗಳು ಹಾಗೂ ತೈಲ ಸಂಗ್ರಹಾಗಾರವನ್ನು ಗುರಿಯಾಗಿಸಿ ನಿರಂತರ ದಾಳಿ ನಡೆಸುತ್ತಿದ್ದಾರೆ.
ಶುಕ್ರವಾರ ನಡೆದ ದಾಳಿಯು ಜಿದ್ದಾದ ಅಂತರಾಷ್ಟ್ರೀಯ ವಿಮಾನನಿಲ್ದಾಣದ ಆಗ್ನೇಯದಲ್ಲಿರುವ ತೈಲ ದಾಸ್ತಾನು ಕೇಂದ್ರವನ್ನು ಗುರಿಯಾಗಿಸಿತ್ತು. ಕ್ಷಿಪಣಿ ದಾಳಿಯಿಂದ ತೈಲ ಸಂಗ್ರಹಾಗಾರಕ್ಕೆ ಬೆಂಕಿ ಹತ್ತಿಕೊಂಡಿದ್ದು 2 ತೈಲ ಟ್ಯಾಂಕ್‌ಗೆ ಹಾನಿಯಾಗಿದೆ. ಬಳಿಕ ಬೆಂಕಿಯನ್ನು ನಂದಿಸಲಾಗಿದ್ದು ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಸೌದಿ ನೇತೃತ್ವದ ಮಿತ್ರಪಡೆಯ ವಕ್ತಾರ ಬ್ರಿಗೇಡಿಯರ್ ಜನರಲ್ ತುರ್ಕಿ ಅಲ್-ಮಾಲಿಕಿ ಹೇಳಿರುವುದಾಗಿ ವರದಿಯಾಗಿದೆ.
ತೈಲ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿರುವ ಈ ಹಗೆತನದ ಕೃತ್ಯವು ಇಂಧನ ಭದ್ರತೆ ಮತ್ತು ಜಾಗತಿಕ ಅರ್ಥವ್ಯವಸ್ಥೆಯ ಬೆನ್ನೆಲುಬನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿದೆ. ಜಿದ್ದಾದಲ್ಲಿನ ಸಾರ್ವಜನಿಕ ಜೀವನದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರಿಲ್ಲ ಎಂದವರು ಹೇಳಿದ್ದಾರೆ. ದಾಳಿಗೆ ಪ್ರತೀಕಾರವಾಗಿ, ಯೆಮನ್‌ನ ಹುದೈದಾ ನಗರ ಸೇರಿದಂತೆ ಯೆಮನ್‌ನ ಮೇಲೆ ಹೊಸ ದಾಳಿ ನಡೆಸುವುದಾಗಿ ಸೌದಿ ನೇತೃತ್ವದ ಮೈತ್ರಿಪಡೆ ಘೋಷಿಸಿದೆ. ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವ ಹೌದಿ ಬಂಡುಗೋರರು ಈ ಹಿಂದೆ 2020ರ ನವೆಂಬರ್ ಮತ್ತು 2022ರ ಮಾರ್ಚ್ 20ರಂದು ಇದೇ ತೈಲ ಸಂಗ್ರಹಾಗಾರವನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು.
ದಾಳಿಯ ಬಳಿಕ ಫಾರ್ಮುಲಾ 1 ರೇಸ್‌ನ ಆಯೋಜಕರು ಹಾಗೂ ಫಾರ್ಮುಲಾ 1ನ ವ್ಯವಸ್ಥಾಪಕರಾದ ಇಂಟರ್‌ನ್ಯಾಷನಲ್ ಆಟೊಮೊಬೈಲ್ ಫೆಡರೇಶನ್‌ನ ಅಧಿಕಾರಿಗಳ ಮಧ್ಯೆ ಸುಮಾರು 4 ಗಂಟೆಯ ಸುದೀರ್ಘ ಮಾತುಕತೆ ನಡೆದಿದ್ದು ರೇಸ್ ಮುಂದುವರಿಸುವ ನಿರ್ಧಾರಕ್ಕೆ ಬರಲಾಗಿದೆ. ಸೌದಿಯ ಅಧಿಕಾರಿಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಿದ್ದೇವೆ ಎಂದು ಫಾರ್ಮುಲಾ 1ನ ವಕ್ತಾರರು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ. ದಾಳಿಕೋರರು ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿದ್ದಾರೆ, ನಾಗರಿಕರನ್ನಲ್ಲ. ರೇಸ್ ಮುಂದುವರಿಯುವ ಬಗ್ಗೆ ಆಯೋಜಕರು ಭರವಸೆ ನೀಡಿದ್ದಾರೆ ಎಂದು ಇಂಟರ್‌ನ್ಯಾಷನಲ್ ಆಟೊಮೊಬೈಲ್ ಫೆಡರೇಶನ್ ಪ್ರತಿಕ್ರಿಯಿಸಿದೆ.