ಭವಿಷ್ಯದೆಡೆಗೆ ತೇಲುವ ಸೌರ-ಜಲ ವಿದ್ಯುತ್ ಯೋಜನೆ
ಥಾಯ್ಲೆಂಡ್ ಒಂದು ಸುಂದರ ಪ್ರದೇಶವಾಗಿದ್ದು, ಆಧುನಿಕ ಶೈಲಿಯ ಕಟ್ಟಡಗಳುಳ್ಳ ಸ್ವಚ್ಛ ಹಾಗೂ ಸುಂದರ ನಗರಗಳು, ಸಾಂಪ್ರದಾಯಿಕ ಕೃಷಿಯೊಂದಿಗೆ ನಮನ ಮನೋಹರವಾದ ಹಳ್ಳಿಗಳು, ಕರಕುಶಲ ವಸ್ತುಗಳ ಅತಿ ದೊಡ್ಡ ಮಾರುಕಟ್ಟೆಗಳು, ಅನಿಮೇಟೆಡ್ ಶೈಲಿಯ ಭೂದೃಶ್ಯಾವಳಿಗಳು, ಬೆರಗುಗೊಳಿಸುವ ಸುಂದರ ಕಡಲ ತೀರಗಳು, ನೀಲಿ ಖಾರಿಗಳ ಸುಂದರ ಕರಾವಳಿಗಳು ಇವೆಲ್ಲವೂ ಇಲ್ಲಿ ಮೇಳೈಸಿವೆ. ಇವೆಲ್ಲವುಗಳ ಜೊತೆಗೆ ಥಾಯ್ಲೆಂಡ್ ಈಗ ಪುನಃ ಅಂತರ್‌ರಾಷ್ಟ್ರಿಯ ಮಟ್ಟದಲ್ಲಿ ಸುದ್ದಿಯಲ್ಲಿದೆ. ಅದೇನೆಂದರೆ ಇತ್ತೀಚೆಗೆ ಇಲ್ಲಿ ನಿರ್ಮಿಸಿದ ತೇಲು ಸೌರ ಫಾರ್ಮ್.
ಅದರಲ್ಲೇನು ವಿಶೇಷ ಎಂಬ ಪ್ರಶ್ನೆ ನಮ್ಮನ್ನೆಲ್ಲ ಕಾಡದೆ ಇರದು. ಥಾಯ್ಲೆಂಡ್ ದೇಶವು ತನ್ನ ಜಲಾಶಯಗಳಲ್ಲಿ ಹೊಸ ಹೈಬ್ರಿಡ್ ಸೌರ-ಜಲವಿದ್ಯುತ್ ಉತ್ಪಾದನಾ ಸೌಲಭ್ಯದೊಂದಿಗೆ, ಹಸಿರು ಶಕ್ತಿಗೆ ತನ್ನ ಬದ್ಧತೆಯನ್ನು ಎತ್ತಿ ತೋರಿಸಿದೆ. ಸಿರಿಂಧೋರ್ನ್ ಅಣೆಕಟ್ಟಿನಲ್ಲಿ ಇಂತಹದ್ದೊಂದು ಸೌರ-ಜಲವಿದ್ಯುತ್ ಫಾರ್ಮ್ ಅನ್ನು ನಿರ್ಮಾಣ ಮಾಡಲಾಗಿದೆ. ಇದು ವಿಶ್ವದ ಅತಿದೊಡ್ಡ ತೇಲುವ ಹೈಡ್ರೋ-ಸೋಲಾರ್ ಫಾರ್ಮ್ ಆಗಿದೆ. ಫಾರ್ಮ್ 1,44,000 ಸೌರ ಕೋಶಗಳನ್ನು ಹೊಂದಿದೆ. ಇದರಿಂದ 45 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಇಂತಹ ಮಹತ್ವಾಕಾಂಕ್ಷಿ ಯೋಜನೆಯ ಮೂಲಕ ಥಾಯ್ಲೆಂಡ್ ವರ್ಷಕ್ಕೆ ತನ್ನ ದೇಶದಲ್ಲಿ ಉತ್ಪತ್ತಿಯಾಗುವ ಅಂದಾಜು 47,000 ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಇದು ಹೆಚ್ಚುವರಿಯಾಗಿ ಪೂರ್ವ ಥಾಯ್ಲೆಂಡ್‌ನ ಮೂರು ಪ್ರಾಂತಗಳಲ್ಲಿ 36 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸುವ ಯೋಜನೆಯೂ ಕಾರ್ಯಾರಂಭ ಮಾಡಿದೆ. ಪ್ರಸ್ತುತ ಸಿರಿಂಧೋರ್ನ್‌ನಲ್ಲಿ ನಿರ್ಮಾಣವಾದ ಈ ಫಾರ್ಮ್ ವಿಶೇಷತೆಯಿಂದ ಕೂಡಿದೆ. ಅದೇನೆಂದರೆ, ಸೋಲಾರ್ ಪ್ಯಾನೆಲ್‌ಗಳು ಹಗಲಿನಲ್ಲಿ ವಿದ್ಯುತ್ ಉತ್ಪಾದಿಸುತ್ತವೆ ಮತ್ತು ರಾತ್ರಿಯಲ್ಲಿ ಜಲವಿದ್ಯುತ್ ಉತ್ಪಾದನೆಯಾಗುತ್ತದೆ. ಇವೆರಡೂ ಕೇಂದ್ರಗಳಿಂದ ಉತ್ಪಾದನೆಯಾದ ವಿದ್ಯುತ್ತನ್ನು ಅಸ್ತಿತ್ವದಲ್ಲಿರುವ ಒಂದೇ ಗ್ರಿಡ್ ಟ್ರಾನ್ಸ್‌ಮಿಷನ್ ಲೈನ್‌ಗಳು ಮತ್ತು ಟ್ರಾನ್ಸ್ ಫಾರ್ಮರ್‌ಗಳಿಗೆ ವರ್ಗಾಯಿಸಲಾಗುತ್ತದೆ. ದೇಶವು ತನ್ನ ಶಕ್ತಿ ವಲಯವನ್ನು ಡಿಕಾರ್ಬೊನೈಸ್ ಮಾಡಲು ಆರಂಭಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಥಾಯ್ಲೆಂಡ್‌ನಾದ್ಯಂತ ಹೊರಹೊಮ್ಮಿದ ಅನೇಕ ರೀತಿಯ ತೇಲುವ ಸೌರ ಫಲಕ ಯೋಜನೆಗಳಲ್ಲಿ ಇದು ಮೊದಲನೆಯದು.
ಫಾರ್ಮ್‌ನಲ್ಲಿ ಸೌರಫಲಕಗಳನ್ನು ನೀರಿನ ಮೇಲೆ ತೇಲುವಂತೆ ಅಳವಡಿಸಲಾಗಿದೆ. ಅದಕ್ಕೆ ಏಳು ವಿದ್ಯುಜ್ಜನಕ ಕೋಶಗಳನ್ನು ಸ್ಥಾಪಿಸಲಾಗಿದೆ. ಇದು ನೀರೊಳಗಿನ ಪರಿಸರದ ಮೇಲೆ ಪರಿಣಾಮ ಬೀರದಂತೆ ಅಂದರೆ ಸೂರ್ಯನ ಬೆಳಕನ್ನು ನೀರಿನೊಳಗೆ ಹಾದುಹೋಗಲು ಅನುಕೂಲವಾಗುವಂತೆ ಫಲಕಗಳನ್ನು ಜೋಡಿಸಲಾಗಿದೆ. ಫಲಕದ ವಿಸ್ತೀರ್ಣ ಸರಿಸುಮಾರು 70 ಸಾಕರ್ ಮೈದಾನಗಳಿಗೆ ಅಥವಾ 100 ಫುಟ್ಬಾಲ್ ಮೈದಾನಗಳಿಗೆ ಸಮನಾಗಿರುತ್ತದೆ. ವಾಸ್ತವವಾಗಿ ಜಲಾಶಯದ ಮೇಲ್ಮೈಯಲ್ಲಿ ಕೇವಲ ಒಂದು ಪ್ರತಿಶತವನ್ನು ಆಕ್ರಮಿಸಿಕೊಂಡಿದೆ. ಪ್ರತಿ ವರ್ಷ ಆವಿಯಾಗುವಿಕೆಯಿಂದ ಕಳೆದುಹೋಗುವ 4,60,000 ಕ್ಯೂಬಿಕ್ ಮೀಟರ್ ನೀರನ್ನು ಉಳಿಸಲು ಇದು ಸಹಾಯ ಮಾಡುತ್ತದೆ ಎಂಬುದು ಗಮನಾರ್ಹ ಅಂಶ. 1,45,000 ಪ್ಯಾನೆಲ್‌ಗಳನ್ನು ಒಳಗೊಂಡಿರುವ ಫಾರ್ಮ್ ಅನ್ನು ಪರಿಸರ ಸ್ನೇಹಿ ವಸ್ತುಗಳಿಂದ ಮಾಡಲಾಗಿದ್ದು, ಜಲಾಶಯದ ಪರಿಸರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ನೀರಿನ ಮೇಲ್ಮೈಯು ಪ್ಯಾನೆಲ್‌ಗಳು ಹೆಚ್ಚು ಬಿಸಿಯಾಗುವುದನ್ನು ತಡೆಯುತ್ತದೆ ಮತ್ತು ಭೂಮಿಯಲ್ಲಿ ಸ್ಥಾಪಿಸಿದ್ದಕ್ಕಿಂತ 15 ಪ್ರತಿಶತದಷ್ಟು ಹೆಚ್ಚು ಪರಿಣಾಮಕಾರಿಯಾಗಿ ಉಳಿಯುತ್ತದೆ ಎಂದು ಖಚಿತಪಡಿಸಲಾಗಿದೆ. 260 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಫಾರ್ಮ್ 45 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ, ವಿನ್ಯಾಸಕರು ಮೂರು ಟರ್ಬೈನ್‌ಗಳನ್ನು ಸೇರಿಸಿದ್ದಾರೆ. ಅದು ಸೂರ್ಯನ ಬೆಳಕು ಇಲ್ಲದಿದ್ದಾಗ ಅಥವಾ ವಿದ್ಯುತ್‌ಗೆ ಗರಿಷ್ಠ ಬೇಡಿಕೆ ಹೆಚ್ಚಾದಾಗ ಜಲವಿದ್ಯುತ್ ಜಲಾಶಯದ ಹರಿಯುವ ನೀರಿನಲ್ಲಿ ಉತ್ಪಾದಿಸಲು ವ್ಯವಸ್ಥೆ ಮಾಡಲಾಗಿದೆ. ಸೌರ ಫಾರ್ಮ್‌ನಲ್ಲಿ ಬಳಸಲಾಗುವ ಶಕ್ತಿ ನಿರ್ವಹಣಾ ವ್ಯವಸ್ಥೆ (ಇಎಂಎಸ್) ವಿದ್ಯುತ್ ಉತ್ಪಾದನೆಯ ಸಮಯದಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹವಾಮಾನ ಮುನ್ಸೂಚನೆ ವ್ಯವಸ್ಥೆಯಿಂದ ಒಳಹರಿವಿನ ನಂತರ ಕಾರ್ಯನಿರ್ವಹಿಸುತ್ತದೆ.
ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಹುಟ್ಟುಹಾಕಲು ಮತ್ತು ಈ ಪ್ರದೇಶದಲ್ಲಿ ಪರಿಸರಕ್ಕೆ ಪೂರಕವಾಗಿ ಸಮರ್ಥನೀಯ ಉದ್ಯೋಗಗಳನ್ನು ಸೃಷ್ಟಿಸಲು ಹಾಗೂ ಸಾರ್ವಜನಿಕ ವೀಕ್ಷಣೆಗಾಗಿ ಸೌರ ಫಾರ್ಮ್ ಅನ್ನು ತೆರೆಯಲು ಥಾಯ್ಲೆಂಡ್‌ನ ವಿದ್ಯುತ್ ಉತ್ಪಾದನಾ ಪ್ರಾಧಿಕಾರ (EGAT) ಯೋಜಿಸಿದೆ. ಸಂಸ್ಥೆಯು ಈಗ ಅಂತಹ 15 ಯೋಜನೆಗಳನ್ನು ಹೊಂದಿದೆ, ಅದು ಪೂರ್ಣಗೊಂಡಾಗ ಥಾಯ್ಲೆಂಡ್‌ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 2,725 ಮೆಗಾವ್ಯಾಟ್‌ನಷ್ಟು ಹೆಚ್ಚುತ್ತದೆ ಎಂದು EGAT ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಇಂತಹ ಯೋಜನೆಯು ಇದೇ ಮೊದಲೇನಲ್ಲ. ಸಿಂಗಾಪುರದ ಟೆಂಗೆಹ್ ಜಲಾಶಯದಲ್ಲಿ ಇದೇ ರೀತಿಯ ಸೌರ ಫಲಕ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಮಲೇಶ್ಯ, ಇಂಡೋನೇಶ್ಯ, ವಿಯೆಟ್ನಾಂ ಮತ್ತು ಫಿಲಿಪ್ಪೀನ್ಸ್‌ನಲ್ಲಿ ಇದೇ ರೀತಿಯ ಯೋಜನೆಗಳನ್ನು ಕಾರ್ಯಗತಗೊಳಿಸುವ ಯೋಜನೆಗಳು ನಡೆಯುತ್ತಿವೆ.
ಸೋಲಾರ್ ಫಾರ್ಮ್‌ಗೆ ಹೋಲಿಸಿದರೆ ತೇಲುವ ಸೌರ-ಜಲ ವಿದ್ಯುತ್ ಯೋಜನೆಯು (ಫೋಟೊವೋಲ್ಟಾಯಿಕ್ಸ್) ಅಗ್ಗವಾಗಿದೆ. ಇದರಿಂದ ಭೂಮಿಯ ವೆಚ್ಚ ಉಳಿಯುತ್ತದೆ. ನವೀಕರಿಸಬಹುದಾದ ಸಾಮರ್ಥ್ಯದಲ್ಲಿ ಸಾಧಾರಣ ಹೆಚ್ಚಳದ ಹೊರತಾಗಿಯೂ, ಪಳೆಯುಳಿಕೆ ಇಂಧನಗಳು ಇನ್ನೂ ಥಾಯ್ಲೆಂಡ್‌ನ ಶಕ್ತಿ ಉತ್ಪಾದನೆ ಮತ್ತು ಒಟ್ಟಾರೆ ಇಂಗಾಲದ ಹೊರಸೂಸುವಿಕೆಯಲ್ಲಿ ಪ್ರಾಬಲ್ಯ ಹೊಂದಿವೆ. ಇಂಧನ ವಲಯವು ದೇಶೀಯ ಇ2 ಹೊರಸೂಸುವಿಕೆಗೆ ಹೆಚ್ಚಿನ ಕಾರಣವಾಗಿದೆ. ಇದು ದೇಶದ ಒಟ್ಟು ಮುಕ್ಕಾಲು ಭಾಗದಷ್ಟು ಕೊಡುಗೆ ನೀಡುತ್ತದೆ.
ದಶಕಗಳ ಕಾಲದಿಂದಲೂ ಥಾಯ್ಲೆಂಡ್ ಶಕ್ತಿಗಾಗಿ ನೈಸರ್ಗಿಕ ಅನಿಲವನ್ನು ಅವಲಂಬಿಸಿದೆ. ಕಲ್ಲಿದ್ದಲು ಸ್ಥಾವರಗಳು ಶಕ್ತಿ ಉತ್ಪಾದನೆಯ ಸುಮಾರು ಶೇ. 20ರಷ್ಟಿವೆ. ಆದರೆ ಅವುಗಳ ಇಂಗಾಲದ ಹೆಜ್ಜೆಗುರುತು ದೊಡ್ಡದಾಗಿದೆ. ನವೀಕರಿಸಬಹುದಾದ ಸಾಮರ್ಥ್ಯವು ಅದನ್ನು ಬದಲಾಯಿಸುವ ಯೋಜನೆಯಾಗಿದೆ. ಕಾಲಕ್ರಮೇಣ ಉತ್ತರ ಥಾಯ್ಲೆಂಡ್‌ನಲ್ಲಿರುವ ತನ್ನ ಲಿಗ್ನೈಟ್ ಕಲ್ಲಿದ್ದಲು ಸ್ಥಾವರಗಳನ್ನು ಮುಚ್ಚಲು ಉಎಅ ಯೋಜಿಸಿದೆ ಎಂದು ಪ್ಲಾಂಟ್ ಡೆವಲಪ್‌ಮೆಂಟ್ ಮತ್ತು ನವೀಕರಿಸಬಹುದಾದ ಶಕ್ತಿಯ ಡೆಪ್ಯುಟಿ ಗವರ್ನರ್ ಪ್ರಸರ್ಟ್ಸಾಕ್ ಚೆರ್‌ಂಗ್‌ಚಾವಾನೊ ಹೇಳಿದ್ದಾರೆ.
ವಿಶ್ವದ ಬಹುತೇಕ ರಾಷ್ಟ್ರಗಳು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬೃಹತ್ ಹಾಗೂ ಅಭಿವೃದ್ಧಿಗೆ ಪೂರಕವಾದ ದೂರದೃಷ್ಟಿ ಯೋಜನೆಗಳಿಂದ ದೂರ ಉಳಿದಿವೆ. ಆದರೆ ಥಾಯ್ಲೆಂಡ್ ಕೋವಿಡ್ ನಂತರವೂ ಅಗಾಧವಾದ ವಿದ್ಯುತ್ ಸರಬರಾಜು ಯೋಜನೆಯ ಕಾರ್ಯಾರಂಭಕ್ಕೆ ಮುಂದಾಗಿರುವುದು ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಪರಿಸರಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿಕೊಳ್ಳುವುದಾಗಿದೆ. ಜೊತೆಗೆ ಹೆಚ್ಚು ಮಾಲಿನ್ಯಕಾರಕ ವಿದ್ಯುತ್ ಸ್ಥಾವರಗಳನ್ನು ಆದಷ್ಟು ಬೇಗ ಹಂತಹಂತವಾಗಿ ತೆಗೆದುಹಾಕಬೇಕು ಮತ್ತು ಹೊಸ ಪಳೆಯುಳಿಕೆ ಇಂಧನ ಮೂಲ ಸೌಕರ್ಯವನ್ನು ನಿರ್ಮಿಸುವುದನ್ನು ತಡೆಯುವುದು ಆಗಿದೆ. ನಲವತ್ತು ವರ್ಷಗಳ ಹಿಂದೆ, ಈ ಪ್ರದೇಶಕ್ಕೆ ಜಲವಿದ್ಯುತ್ ಮತ್ತು ನೀರಾವರಿ ನೀರನ್ನು ಒದಗಿಸಲು ವಿನ್ಯಾಸಗೊಳಿಸಲಾದ ಅಂದಿನ ವಿವಾದಾತ್ಮಕ ಯೋಜನೆಯಾದ ಸಿರಿಂಧೋರ್ನ್ ಅಣೆಕಟ್ಟು ನಿರ್ಮಾಣದಿಂದ ಈ ಮುಖವು ರೂಪುಗೊಂಡಿತು. ಮತ್ತೊಮ್ಮೆ ಇಲ್ಲಿ ಉದ್ಯಮವು ಪ್ರಕೃತಿಯನ್ನು ಬಳಸಿಕೊಳ್ಳುತ್ತಿದೆ. ಇಲ್ಲಿ ಉದಯೋನ್ಮುಖ ತಂತ್ರಜ್ಞಾನವು ಭರವಸೆಯನ್ನು ತೋರಿಸುತ್ತಿದೆ ಮತ್ತು ಆಗ್ನೇಯ ಏಶ್ಯದಾದ್ಯಂತ ಹೊಸ ಸಂಚಲನವನ್ನು ಉಂಟು ಮಾಡುತ್ತಿದೆ. ಭಾರತದಲ್ಲೂ 180 ದೊಡ್ಡ ಪ್ರಮಾಣದ ಹಾಗೂ 56 ಸಣ್ಣ ಪ್ರಮಾಣದ ಜಲಾಶಯಗಳಿವೆ.
ಅದರಲ್ಲಿ ಕರ್ನಾಟಕದಲ್ಲಿ 16 ದೊಡ್ಡ ಪ್ರಮಾಣದ ಹಾಗೂ 12 ಸಣ್ಣ ಪ್ರಮಾಣದ ಜಲಾಶಯಗಳಿವೆ. ಇವುಗಳಲ್ಲಿ ಆಯ್ದ ಜಲಾಶಯಗಳಲ್ಲಿ ಈಗಾಗಲೇ ಜಲವಿದ್ಯುತ್ ಯೋಜನೆ ಕಾರ್ಯನಿರ್ವಹಿಸುತ್ತಿವೆ. ಜಲವಿದ್ಯುತ್ ಯೋಜನೆ ಅಳವಡಿಕೆಯಾದ ಜಲಾಶಯಗಳಲ್ಲಿ ಥಾಯ್ಲೆಂಡ್‌ನ ಸಿರಿಂಧೋರ್ನ್ ಜಲಾಶಯದಂತೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಸೌರ-ಜಲ ವಿದ್ಯುತ್ ಉತ್ಪಾದನೆಗೆ ಮುಂದಾದರೆ ನಮ್ಮಲ್ಲಿನ ವಿದ್ಯುತ್ ಬೇಡಿಕೆಯನ್ನೂ ಈಡೇರಿಸಬಹುದು. ಅಲ್ಲದೆ ಬಹಳ ಮುಖ್ಯವಾಗಿ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣವನ್ನು ಗರಿಷ್ಠ ಮಟ್ಟದಲ್ಲಿ ತೊಡೆದುಹಾಕಲು ಸಾಧ್ಯವಾಗುತ್ತದೆ. ಇಂತಹ ಬೃಹತ್ ಯೋಜನೆಗಳನ್ನು ನಿರ್ಮಿಸಲು ಸರಕಾರಗಳು ಮುಂದಾಗಬೇಕಿದೆ.