varthabharthi


ಬುಡಬುಡಿಕೆ

ವ್ಯಾಪಾರದಲ್ಲಿ ಸೌಹಾರ್ದ ಮುಖ್ಯ...!

ವಾರ್ತಾ ಭಾರತಿ : 27 Mar, 2022
ಚೇಳಯ್ಯ

‘‘ವ್ಯಾಪಾರಕ್ಕೆ ನಿರ್ಬಂಧ ...ವ್ಯಾಪಾರಕ್ಕೆ ನಿರ್ಬಂಧ’’ ಎಂಬ ಘೋಷಣೆಗಳು ಕೇಳುತ್ತಿದ್ದಂತೆಯೇ ಪತ್ರಕರ್ತ ಎಂಜಲು ಕಾಸಿಯ ಕಿವಿ ಚುರುಕಾಯಿತು. ನೋಡಿದರೆ ಭಕ್ತ ಬಸ್ಯ ನೇತೃತ್ವದಲ್ಲಿ ಒಂದು ತಂಡ ಘೋಷಣೆ ಕೂಗುತ್ತಿತ್ತು. ಕಾಸಿಗೆ ಕುತೂಹಲವಾಯಿತು. ಮನೆಯಲ್ಲಿ ಕೂತು ನೊಣ ಹೊಡೆಯುತ್ತಿದ್ದ ಈ ಬಸ್ಯನಿಗೂ ವ್ಯಾಪಾರಕ್ಕೂ ಏನು ಸಂಬಂಧ ಎನ್ನುವುದು ಅರ್ಥವಾಗಲಿಲ್ಲ.
ನೇರವಾಗಿ ಬಸ್ಯನ ಬಳಿ ಧಾವಿಸಿದ ‘‘ಚೀನಾದ ಜೊತೆಗೆ ವ್ಯಾಪಾರ ನಿರ್ಬಂಧ ಮಾಡಬೇಕು ಎಂದು ಘೋಷಣೆ ಕೂಗುತ್ತಿರುವುದಾ?’’ ಕೇಳಿದ.
ಕಾಸಿಯನ್ನು ಅನ್ಯಗ್ರಹದ ಜೀವಿಯನ್ನು ನೋಡುವಂತೆ ಬಸ್ಯ ನೋಡಿದ.
‘‘ಹೋ....ಮುಸ್ಲಿಮ್ ರಾಷ್ಟ್ರಗಳಿಗೆ ಗೋಮಾಂಸ ರಫ್ತು ನಿಷೇಧಕ್ಕೆ ಆಗ್ರಹಿಸುತ್ತಿರುವುದಾ ?’’ ಮತ್ತೆ ಕಾಸಿ ಮರು ಪ್ರಶ್ನಿಸಿದ.
‘‘ಅಲ್ಲ...ಮುಸ್ಲಿಮರ ಜೊತೆಗೆ ವ್ಯಾಪಾರ ಮಾಡಬಾರದು ಎಂದು ಆಗ್ರಹಿಸುತ್ತಿರುವುದು’’ ಬಸ್ಯ ತಿದ್ದಿದ.
‘‘ಅಂದರೆ ಗಲ್ಫ್‌ನಲ್ಲಿರುವ ಎಲ್ಲ ಹಿಂದೂಗಳು ಭಾರತಕ್ಕೆ ವಾಪಸ್ ಬರಬೇಕೆ?’’ ಕಾಸಿ ಮತ್ತೆ ಕೇಳಿದ.
‘‘ಹಾಗಲ್ಲ....ಭಾರತದಲ್ಲಿ ಮುಸ್ಲಿಮ್ ವ್ಯಾಪಾರಿಗಳ ಜೊತೆಗೆ ಹಿಂದೂಗಳು ವ್ಯಾಪಾರ ಮಾಡಬಾರದು’’ ಬಸ್ಯ ಫತ್ವಾ ಘೋಷಿಸಿದ.
‘‘ಯಾಕೆ ಮಾಡಬಾರದು?’’ ಕಾಸಿ ಪ್ರಶ್ನಿಸಿದ.

‘‘ಯಾಕೆಂದರೆ...ಅದರಿಂದ ಹಿಂದೂ ವ್ಯಾಪಾರಿಗಳಿಗೆ ನಷ್ಟವಾಗುತ್ತದೆ....’’ ‘‘ಅದು ಹೇಗೆ?’’

‘‘ಮುಸ್ಲಿಮ್ ವ್ಯಾಪಾರಿಗಳು ಕಡಿಮೆ ಬೆಲೆಗೆ ಮಾರಾಟ ಮಾಡಿ ಹಿಂದೂ ವ್ಯಾಪಾರಿಗಳಿಗೆ ನಷ್ಟವುಂಟು ಮಾಡುತ್ತಿದ್ದಾರೆ....’’ ಬಸ್ಯ ತನ್ನ ವಾದ ಮುಂದಿಟ್ಟ. ‘‘ಆದುದರಿಂದ ಹಿಂದೂಗಳಿಗೆ ಲಾಭವೇ ಆಯಿತಲ್ಲ. ಕಡಿಮೆ ಬೆಲೆಗೆ ದಿನಸಿ ಸಿಗುತ್ತದಲ್ಲ’’ ಕಾಸಿ ಕೇಳಿದ.
‘‘ಮೋದಿಯವರು ಬೆಲೆಯೇರಿಕೆಗಾಗಿ ಇಷ್ಟೆಲ್ಲ ದುಡಿಯುತ್ತಿರುವಾಗ ಈ ಮುಸ್ಲಿಮ್ ವ್ಯಾಪಾರಿಗಳು ಕಡಿಮೆ ದರದಲ್ಲಿ ಮಾರುವುದು ದೇಶದ್ರೋಹವಲ್ಲವೆ? ಆದುದರಿಂದ ಅವರಿಗೆ ವ್ಯಾಪಾರ ಮಾಡುವುದಕ್ಕೆ ಅವಕಾಶ ನೀಡಬಾರದು’’
‘‘ಮೊದಲು ಸರಕಾರ ಮುಸ್ಲಿಮ್ ದೇಶಗಳ ಜೊತೆಗೆ ವ್ಯಾಪಾರ ನಿಲ್ಲಿಸಲು ಒತ್ತಡ ಹಾಕಬಹುದಲ್ಲವೆ? ಪೆಟ್ರೋಲ್‌ಗಾಗಿ ನಮ್ಮ ದುಡ್ಡೆಲ್ಲ ಮುಸ್ಲಿಮ್ ದೇಶಗಳಿಗೆ ಹೋಗುತ್ತಿರುವುದನ್ನು ತಡೆಯುವುದಕ್ಕೆ ಯಾಕೆ ಹೋರಾಟ ವಿಲ್ಲ’’ ಕಾಸಿ ಕೇಳಿದ.
‘‘ಅದು ಬೇರೆ... ಇದು ಬೇರೆ. ಈಗ ಗೋಮಾಂಸವನ್ನು ನಾವು ರಫ್ತು ಮಾಡುತ್ತೇವೆ. ಆದರೆ ಇಲ್ಲಿ ತಿನ್ನಬಾರದು ಅಷ್ಟೇ. ಹಾಗೆಯೇ ಇದು. ಅಲ್ಲಿ ತಿಂದರೆ ತೊಂದರೆ ಇಲ್ಲ. ಯಾಕೆಂದರೆ ಅವರೇನು ಭಾರತದ ಓಟಿನಲ್ಲಿ ಭಾಗವಹಿಸುವುದಿಲ್ಲವಲ್ಲ....’’
‘‘ಅಂದರೆ ವೋಟಿಗೂ ವ್ಯಾಪಾರಕ್ಕೂ ಸಂಬಂಧವಿದೆಯೆ?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ವೋಟು ಕೂಡ ವ್ಯಾಪಾರವೇ ಅಲ್ಲವೆ? ನಮ್ಮ ಎಮ್ಮೆಲ್ಲೆ ಸಾಹೇಬರು ಪ್ರತಿ ಸರ್ತಿ ವೋಟನ್ನು ಖರೀದಿಸುವುದು. ಜನರು ವೋಟು ಹಾಕುವುದಲ್ಲ. ಇದು ಗೊತ್ತಿಲ್ಲದ ನೀವು ಎಂತ ಪತ್ರಕರ್ತರು?’’ ಬಸ್ಯ ತಮಾಷೆ ಮಾಡಿದ.
‘‘ಹಾಗಾದರೆ ನಿಮ್ಮ ಎಮ್ಮೆಲ್ಲೆ ಸಾಹೇಬರು ಮುಸ್ಲಿಮರ ಓಟನ್ನು ಖರೀದಿಸುವುದಿಲ್ಲ ಯಾಕೆ?’’
‘‘ಖರೀದಿಸುವುದಕ್ಕೆ ಸಿದ್ಧರಿದ್ದಾರೆ. ಆದರೆ ಮುಸ್ಲಿಮರು ನಮ್ಮ ಪಕ್ಷದವರ ಜೊತೆಗೆ ವ್ಯಾಪಾರ ನಿಷೇಧಿಸಿದ್ದಾರೆ. ಬೇರೆ ಪಕ್ಷದವರ ಜೊತೆಗೆ ಮಾತ್ರ ಅವರು ಓಟಿನ ವ್ಯಾಪಾರ ಮಾಡುವುದು. ಅದಕ್ಕೇ....ನಾವೂ ಅವರ ವ್ಯಾಪಾರವನ್ನು ನಿಷೇಧಿಸುವುದು....’’ ಬಸ್ಯ ವಿವರಿಸಿದ.
ಸಮಸ್ಯೆ ಇಲ್ಲಿದೆ ಎನ್ನುವುದು ಕಾಸಿಗೆ ಅರ್ಥವಾಯಿತು.
‘‘ಅಂದರೆ ನಿಮ್ಮ ಪಕ್ಷದವರ ಜೊತೆಗೆ ಮುಸ್ಲಿಮರು ವ್ಯಾಪಾರ ಮಾಡಿದರೆ ಸಮಸ್ಯೆ ಮುಗಿಯುತ್ತದೆ....’’ ಕಾಸಿ ಕೇಳಿದ.
‘‘ಹೌದು....ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಮರು ಬಿಜೆಪಿಯ ಜೊತೆಗೂ ಓಟಿನ ವ್ಯಾಪಾರ ನಡೆಸಬೇಕು. ಬಿಜೆಪಿಯ ನಾಯಕರಿಗೆ ಓಟು ಖರೀದಿಗೆ ನಿರ್ಬಂಧ ವಿಧಿಸಿದರೆ ನಾವು ನಮ್ಮ ದೇವಸ್ಥಾನದಲ್ಲಿ ವ್ಯಾಪಾರ ನಡೆಸಲು ಬಿಡುವುದಿಲ್ಲ. ಹಾಗೆಯೇ ಹಿಂದೂಗಳು ಮುಸ್ಲಿಮರ ಜೊತೆಗೂ ವ್ಯಾಪಾರ ಮಾಡಬಾರದು ಎಂದು ಒತ್ತಾಯ ಮಾಡುತ್ತೇವೆ....’’
‘‘ಅಂದರೆ ಇನ್ನು ಮುಂದೆ ಮುಸ್ಲಿಮರು ತಮ್ಮ ಓಟುಗಳನ್ನು ನಿಮ್ಮ ಪಕ್ಷದವರಿಗೆ ಮಾರಬೇಕು...’’
‘‘ಅಷ್ಟೇ ಮತ್ತೆ. ಈಗ ನೋಡಿ. ಗೋವುಗಳ ಮಾರಾಟ ನಿಷೇಧ ಆದ ಬಳಿಕ ನಮ್ಮ ಕಾರ್ಯಕರ್ತರೇ ಅವರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾ ಇಲ್ಲವೆ? ಹಾಗೆಯೇ ಇದು...ನೀ ನನಗಿದ್ದರೆ ನಾ ನಿನಗೆ....ನಾವು ಸೌಹಾರ್ದವನ್ನು ಕಾಪಾಡಬೇಕು....ಮುಸ್ಲಿಮರು ತಮ್ಮ ಓಟುಗಳನ್ನು ಕೊಡುವುದಾದರೆ ನಾವು ಅತ್ಯುತ್ತಮ ಬೆಲೆ ಕೊಟ್ಟು ಖರೀದಿಸುವುದಕ್ಕೆ ಸಿದ್ಧರಿದ್ದೇವೆ...ನಮಗೆ ಅವರು ನಿರ್ಬಂಧ ವಿಧಿಸಿದರೆ ನಾವೂ ಅವರಿಗೆ ನಿರ್ಬಂಧ ವಿಧಿಸುತ್ತೇವೆ...’’ ಎಂದು ಬಸ್ಯ ಸೌಹಾರ್ದ ಪರಿಹಾರ ಸೂಚಿಸುತ್ತಿದ್ದಂತೆಯೇ ಕಾಸಿಗೆ ದಿನಸಿ ಮುಗಿದಿರುವುದು ನೆನಪಾಯಿತು....
‘‘ಮನೆಯ ದಿನಸಿ ಮುಗಿದಿದೆ...ಅಬ್ಬೂಕಾಕನ ಅಂಗಡಿಯಲ್ಲಿ ಒಳ್ಳೆಯ ಅಕ್ಕಿ ಕಡಿಮೆ ಬೆಲೆಗೆ ಸಿಗುತ್ತದೆ....ನಾನು ಹೊರಟೆ’’ ಎಂದವನೇ ಕಾಸಿ ಹೊರಟು ಬಿಟ್ಟ.
‘‘ಅಬ್ಬೂ ಕಾಕನ ಅಂಗಡಿಯ....ನಿಲ್ಲು ನಿಲ್ಲು ನಾನೂ ಬರುತ್ತೇನೆ’’ ಎಂದು ಬಸ್ಯ, ಕಿಸೆಯಲ್ಲಿದ್ದ ದಿನಸಿಗಳ ಚೀಟಿಯ ಜೊತೆಗೆ ಕಾಸಿ ಹಿಂದೆ ಓಡತೊಡಗಿದ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)