ಓ ಮೆಣಸೇ ....
ಪೂರ್ವಗ್ರಹ ಪೀಡಿತ ಮನಸ್ಸುಗಳಿಗೆ ಕಾಶ್ಮೀರ ಪಂಡಿತರ ಸ್ಥಿತಿ ಅರ್ಥವಾಗುವುದಿಲ್ಲ - ಸಿ.ಟಿ.ರವಿ, ಶಾಸಕ
ಆದ್ದರಿಂದ ಸತ್ಯ ಏನೆಂಬುದನ್ನು ಕಾಶ್ಮೀರ ಪಂಡಿತರೇ ಜಗತ್ತಿಗೆ ತಿಳಿಸುತ್ತಿದ್ದಾರೆ.
ವೀರಪ್ಪ ಮೊಯ್ಲಿ ಹಿಂದುಳಿದ ವರ್ಗದಿಂದ ಬಂದು ರಾಜ್ಯದ ಮುಖ್ಯಮಂತ್ರಿಯಾಗಿ ಹೊಸ ಕನಸು ಬಿತ್ತಿದರು - ಸುನೀಲ್‌ಕುಮಾರ್, ಸಚಿವ
ಆ ಕನಸನ್ನು ಛಿದ್ರಗೊಳಿಸುತ್ತಿರುವವರೇ ಅದನ್ನು ನೆನಪಿಸಿಕೊಳ್ಳುತ್ತಿದ್ದಾರಲ್ಲಾ? ಅದುವೇ ಗಮ್ಮತ್ತು.
ಕಾಶ್ಮೀರ ಪಂಡಿತರ ಕಷ್ಟದ ದಿನಗಳನ್ನು ಜನರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಸುದೀರ್ಘ ಅವಧಿಯ ಬಳಿಕ ಅಗಿದೆ - ನಳೀನ್‌ಕುಮಾರ್ ಕಟೀಲು, ಸಂಸದ
ಅವರ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಇನ್ನೆಷ್ಟು ದೀರ್ಘ ಕಾಲ ಬೇಕಾದೀತೋ!
ಕೇಂದ್ರ ಸರಕಾರ 2024ರೊಳಗೆ ಸೂರಿಲ್ಲದ ಪ್ರತಿಯೊಬ್ಬರಿಗೂ ಸೂರು ಒದಗಿಸುವ ಗುರಿ ಇಟ್ಟುಕೊಂಡಿದೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಕಳೆದ ಬಾರಿ ಯಾರೆಲ್ಲರ ಖಾತೆಯಲ್ಲಿ 15 ಲಕ್ಷ ರೂ. ಜಮೆ ಆಗಿತ್ತೋ ಅವರಿಗೆ ಮಾತ್ರ ಸೂರು ಎಂಬ 'ಜುಮ್ಲಾ' ವನ್ನೂ ಸೇರಿಸಿ.
ಕಾಂಗ್ರೆಸ್‌ನಲ್ಲಿ ಚುನಾವಣೆಗೆ ಮುನ್ನ ಸಿಎಂ ಘೋಷಣೆ ಮಾಡುವ ಸಂಪ್ರದಾಯವಿಲ್ಲ - ಎಂ.ಬಿ.ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ
ಚುನಾವಣೆಗೆ ಮುನ್ನವೇ ಮಾಡಿ ಬಿಟ್ಟರೆ ಒಳ್ಳೆಯದು. ಅನಂತರ ಎಲ್ಲಿ ಅವಕಾಶ ಸಿಗುತ್ತೆ?
ಕಾಂಗ್ರೆಸ್ ಸೇರಿದಂತೆ ದೇಶದಲ್ಲಿನ ಎಲ್ಲ ರಾಜಕೀಯ ಪಕ್ಷಗಳೂ ಸಮಾಜವನ್ನು ಒಡೆಯುವುದರಲ್ಲಿ ನಿರತವಾಗಿದೆ - ಗುಲಾಂ ನಬಿ ಆಝಾದ್, ಕಾಂಗ್ರೆಸ್ ನಾಯಕ
ಇದು, ನೀವು ಕಾಂಗ್ರೆಸ್ ಅನ್ನು ಒಡೆಯಲು ಹೊರಟಿರುವುದಕ್ಕೆ ಸಮರ್ಥನೆಯೇ?
ಭಗವದ್ಗೀತೆ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದವರೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ನೀವು ಮಾತನಾಡುತ್ತಿರುವಷ್ಟು ದಿನ ಸಂಘಿಗಳು ಆರಾಮವಾಗಿ ಮೌನ ವೃತ ಆಚರಿಸುತ್ತಿರಬಹುದು.
ನನಗೂ ಮುಖ್ಯಮಂತ್ರಿಯಾಗುವ ಸಾಮರ್ಥ್ಯವಿದೆ. ನನ್ನ ಬಳಿಯೂ ಹಣವಿದೆ, ಶಕ್ತಿ ಇದೆ. ಹಾಗಾಗಿ ನಾನೂ ಸಿಎಂ ಹುದ್ದೆಯ ಆಕಾಂಕ್ಷಿ - ಶಾಮನೂರು ಶಿವಶಂಕರಪ್ಪ, ಶಾಸಕ
ಇದು ಪ್ರಜಾಸತ್ತೆ. ಯಾರ ಬಳಿ ಹೆಚ್ಚು ಹಣ ಮತ್ತು ಹೆಚ್ಚು ಶಕ್ತಿ ಇದೆ ಎಂಬ ಸ್ಪರ್ಧೆ ನಡೆಸಿ ಗೆದ್ದವರಿಗೆ ಸಿ.ಎಂ ಹುದ್ದೆ ಕೊಟ್ಟುಬಿಡೋಣ.
ತುಷ್ಟೀಕರಣದ ನೀತಿಯಿಂದಾಗಿ ದೇಶದಲ್ಲಿ ಮೂರು ಬಣ್ಣದ ರಾಷ್ಟ್ರಧ್ವಜ ಬಂತು - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ನೀವು ಬಯಸುವ ಭಟ್ರೀಕರಣ ನಡೆದರೆ ನಿಮ್ಮ ಬಣ್ಣ ಮಾತ್ರ ಉಳಿದೀತೆ?
ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ - ಜೆ.ಸಿ.ಮಾಧುಸ್ವಾಮಿ, ಸಚಿವ
ಹಿಂದೆ ಇದೆಯೇ?
ಎಐಎಂಐಎಂ ಮತ್ತು ಬಿಜೆಪಿ ಮಧ್ಯೆ ಬಹಿರಂಗಪಡಿಸಲಾಗದ ಒಪ್ಪಂದವಿದೆ - ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಸಿಎಂ
ಶಿವಸೇನೆ ಮತ್ತು ಕಾಂಗ್ರೆಸ್ ನಡುವೆ ಬಹಿರಂಗ ಪಡಿಸಿಯೇ ಒಪ್ಪಂದ ನಡೆದಿರುವಾಗ ಇದೇನು ಮಹಾ ?
ಮಂತ್ರಿಗಳೆಂದರೆ ಅವರು ವಿಧಾನ ಸಭೆಯ ಮೂರನೇ ಮಹಡಿಗೆ ಸೀಮಿತವಾಗಬಾರದು - ಎಂ.ಪಿ.ರೇಣುಕಾಚಾರ್ಯ, ಶಾಸಕ
ಹಾರಿ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಬೇಕಾಗುವಷ್ಟು ಮಹಡಿಗಳು ಅಲ್ಲಿ ಇಲ್ವಲ್ಲಾ!
'ದಿ ಕಾಶ್ಮೀರ್ ಫೈಲ್ಸ್' ಸಿನೆಮಾವನ್ನು ನೋಡಿದಾಗ ಆಗಿರುವ ಆಘಾತವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ - ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಆದ್ದರಿಂದ ಅಂತಹ ಕೊಳಕನ್ನು ನೋಡಬೇಡಿರೆಂದು ಶಿಷ್ಯರಿಗೂ ಸೂಚಿಸಿ.
ಗ್ರಾಮ ವಾಸ್ತವ್ಯ ಎಂಬುದು ಪಾಠಶಾಲೆ ಇದ್ದಂತೆ - ಆರ್.ಅಶೋಕ್, ಸಚಿವ
ನೀವು ಅಲ್ಲಿಗೇಕೆ ಹೋಗುತ್ತಿಲ್ಲ ಎಂದು ಕೇಳಿದರೆ, ಇಂದು ಜಗತ್ತೇ ಒಂದು ಪುಟ್ಟ ಗ್ರಾಮವಾಗಿದೆ ಎಂದು ಡೈಲಾಗ್ ಹೊಡೆದು ಬಿಡಿ.
ಭಾರತದಲ್ಲಿ ದ್ವೇಷ ಬಿತ್ತುವ ಸಿನೆಮಾಗಳಿಗೆ ತೆರಿಗೆ ವಿನಾಯಿತಿ ಇದೆ - ಸಾಕೇತ್ ಗೋಖಲೆ, ಟಿಎಂಸಿ ವಕ್ತಾರ
ಟಿಕೇಟು ವಿನಾಯ್ತಿಯೇ ಇದೆಯಲ್ಲಾ!
ಮೋದಿ ಸರಕಾರದಲ್ಲಿ ಕೈಗೆಟಕುವ ದರ ಇರುವುದು ಕೋಮುವಾದ ಮತ್ತು ದ್ವೇಷಕ್ಕೆ ಮಾತ್ರ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಉಚಿತವಾಗಿ ಧಾರಾಳ ಲಭ್ಯವಿರುವ ಸುಳ್ಳು ಮತ್ತು ದ್ವೇಷಕ್ಕೆ ದರ ಇದೆ ಎಂಬ ನಂಬಿಕೆ ನಿಮ್ಮ ಮುಗ್ಧತೆಗೆ ಸಾಕ್ಷಿ.
ಮತ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಭಗವದ್ಗೀತೆಯ ಅರಿವಿಲ್ಲ - ನಳಿನ್ ಕುಮಾರ್ ಕಟೀಲು, ಸಂಸದ
ಅರಿವಿದ್ದವರು, ಅದನ್ನು ಮೇಲ್ಜಾತಿಯವರು ತಮ್ಮ ಹಿತಾಸಕ್ತಿಗಾಗಿ ಬಳಸುವುದನ್ನು ವಿರೋಧಿಸುತ್ತಾ ಬಂದಿದ್ದಾರೆ.
ನಾನು ಅಧಿಕಾರಕ್ಕೆ ಬರುವುದು ಮುಖ್ಯವಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬರ ಬೇಕೆನ್ನುವುದು ನಮ್ಮ ಪ್ರತಿಜ್ಞೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಎಷ್ಟೊಂದು ವಿಶಾಲ ಮನಸ್ಸು! ಪಕ್ಷ ಗೆದ್ದರೆ ಮುಖ್ಯಮಂತ್ರಿ ಯಾರೆಂಬುದನ್ನೂ ಘೋಷಿಸಿಬಿಡಿ.
ಆತ್ಮವು ಯಾರನ್ನು ಆಯ್ದುಕೊಳ್ಳುತ್ತದೋ ಅವರು ಮಾತ್ರ ಆತ್ಮ ಸಾಕ್ಷಾತ್ಕಾರವನ್ನು ಪಡೆಯಬಲ್ಲರು - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ಸ್ ಸಂಸ್ಥಾಪಕ
ಅದರ ಜೊತೆ ಹಲವಾರು ಕಾರು,ಬಂಗಲೆ ಮತ್ತು ನೂರಾರು ಕೋಟಿಯ ಆಸ್ತಿಯನ್ನು ಕೂಡಾ.
ಕಾವೇರಿ ನೀರಿನ ವಿಷಯವನ್ನು ತಮಿಳುನಾಡು ರಾಜಕೀಯ ದಾಳವಾಗಿ ನಿರಂತರವಾಗಿ ಬಳಸುತ್ತಲೇ ಬಂದಿದೆ - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ರಾಜಕೀಯ ದಾಳವಾಗಿ ಧರ್ಮ, ದೇವರುಗಳನ್ನು ಮಾತ್ರ ಬಳಸಬೇಕೆಂದು ಅವರಿಗೆ ತಿಳಿ ಹೇಳಿ.
ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಅಡಿಕೆ ಕಳ್ಳ ಸಾಗಣೆಯ ಮೇಲೆ ನಿಗಾ ಇಡಲಾಗಿದೆ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ನೆನಪಿಡಿ. ಅಡಿಕೆ ಕದ್ದವನೂ ಕಳ್ಳ, ಆನೆ ಕದ್ದವನೂ ಕಳ್ಳ.
ಉಕ್ರೇನ್ ಮೇಲೆ ರಶ್ಯ ದಾಳಿಯನ್ನು ಖಂಡಿಸಲು ಭಾರತ ಹೆದರಿದಂತಿದೆ - ಜೋ ಬೈಡನ್, ಅಮೆರಿಕ ಅಧ್ಯಕ್ಷ
ನಿಮ್ಮ ಯಾವುದೇ ಬಯಕೆಯನ್ನು ಈಡೇರಿಸಲು, ಬುದ್ಧಿಯುಳ್ಳವರು ಅಂಜುತ್ತಾರೆ.
ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಗಳ ಮೇಲೆ ವಿಧಿಸಲಾಗಿದ್ದ ಲಾಕ್‌ಡೌನ್ ಅನ್ನು ತೆಗೆದುಹಾಕಲಾಗಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ೊತೆಗೆ ಕೊರೋನ ಹೆಸರಲ್ಲಿ ಮತ್ತೆ ಲಾಕ್ ಡೌನ್ ಹೇರುವ ಉದ್ದೇಶವೂ ಉಂಟಂ ೆ.
ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಆರೆಸ್ಸೆಸ್ ಸೇರುವ ದಿನ ದೂರವಿಲ್ಲ - ಕೆ.ಎಸ್.ಈಶ್ವರಪ್ಪ, ಸಚಿವ
ಆರೆಸ್ಸೆಸ್ ನವರು ನಿಮಗೆ ಜನಿವಾರ ತೊಡಿಸಿದ ದಿನ ಹಾಗಾದೀತು.
ಕಾಂಗ್ರೆಸ್ ನಾಯಕತ್ವದ ವಿಷಯದಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ ಇನ್ನು ಮೂರು ತಿಂಗಳು ಕಾಯಬೇಕು - ಸೋನಿಯಾ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥೆ
ಅವಸರವೇಕೆ? ಮುಂದಿನ ಮಹಾಚುನಾವಣೆ ಮುಗಿದ ಬಳಿಕ ಪುರುಸೊತ್ತಲ್ಲಿ ಮಾಡಬಹುದಲ್ಲಾ!
ಮುಂದೊಂದು ದಿನ ನಾವು, ನೀವು ಎಲ್ಲರೂ ಆರೆಸ್ಸೆಸ್ ಎಂದು ಹೇಳಿಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ - ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾಧ್ಯಕ್ಷ
ಕೋವಿಡ್ ಬಗ್ಗೆ ಕೂಡಾ ಇಂತಹ ಎಚ್ಚರಿಕೆ ಬಂದಿತ್ತು. ರಶ್ಯ ಮತ್ತು ಉಕ್ರೇನ್ ವಿಷಯದಲ್ಲಿ ನಾವು ಶಾಂತಿಯ ಪರ - ಎಸ್.ಜೈಶಂಕರ್, ಕೇಂದ್ರ ಸಚಿವ
ದೇಶದೊಳಗೆ ಮಾತ್ರ ಅಶಾಂತಿಯ ಪರ?
ದೇಶದ ಸಂವಿಧಾನಕ್ಕಿಂತ ಧರ್ಮ ದೊಡ್ಡದಲ್ಲ - ಪ್ರತಾಪ ಸಿಂಹ, ಸಂಸದ
ಪಾಪ, ಎಲ್ಲೋ ಗುಟ್ಟಾಗಿ ಹೇಳಿರಬೇಕು. ಬಯಲುಗೊಳಿಸಬೇಡಿ