ಸಾರ್ವಜನಿಕ ಉದ್ದಿಮೆ ಜನರ ಆಸ್ತಿಯೇ ಹೊರತು ಸಂಸದರದ್ದಲ್ಲ: ಕೆ.ಶಂಕರ್
ಉಡುಪಿ ಜಿಲ್ಲೆಯಾದ್ಯಂತ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮುಷ್ಕರ
ಉಡುಪಿ : ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಮುಷ್ಕರದ ಪ್ರಯುಕ್ತ ಇಂದು ಕಾರ್ಮಿಕ ಸಂಘಗಳ ಜಂಟಿ ಸಮಿತಿ(ಜೆಸಿಟಿಯು) ನೇತೃತ್ವದಲ್ಲಿ ನಗರದ ಸಿಂಡಿಕೇಟ್ ಬ್ಯಾಂಕ್‌ನಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಬಳಿಕ ನಡೆದ ಧರಣಿಯನ್ನುದ್ದೇಶಿಸಿ ಮಾತನಾಡಿದ ಜೆಸಿಟಿಯು ಸಂಚಾಲಕ ಕೆ. ಶಂಕರ್, ಕೇಂದ್ರ ಸರಕಾರ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ದೇಶಿ ಹಾಗೂ ವಿದೇಶಿ ಗುತ್ತಿಗೆದಾರರು ಹಾಗೂ ಬಂಡವಾಳಶಾಹಿಗಳಿಗೆ ಮಾರಾಟ ಮಾಡಲು ಮುಂದಾಗಿದೆ. ಈ ದೇಶದ ಈ ಆಸ್ತಿ ಜನರಿಗೆ ಸಂಬಂಧಪಟ್ಟದ್ದೇ ಹೊರತು ಶಾಸಕರು, ಸಂಸದರದ್ದಲ್ಲ. ಯಾವುದೇ ಕಾರಣಕ್ಕೂ ಇವುಗಳನ್ನು ಮಾರಾಟ ಮಾಡಲು ಜನರು ಬಿಡಲ್ಲ ಎಂದು ಹೇಳಿದರು.
ದೇಶದ ಜನರು ಬೆಲೆ ಏರಿಕೆಯಿಂದ ಇಂದು ಬಹಳ ಕಷ್ಟದಲ್ಲಿದ್ದಾರೆ. ಜೀವನ ಅವಶ್ಯಕ ವಸ್ತುಗಳು ಹಾಗೂ ತೈಲ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಇದನ್ನು ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ಈ ದೇಶದಲ್ಲಿ ಆಳ್ವಿಕೆ ಮಾಡು ತ್ತಿರುವವರು ಸುಲಿಗೆಕೋರರು ಹಾಗೂ ದೇಶಿಯ ಮತ್ತು ವಿದೇಶಿ ಗುತ್ತಿಗೆ ಬಂಡ ವಾಳಶಾಹಿಗಳ ಪರವಾಗಿ ಕೆಲಸ ಮಾಡುವವರು. ಆದುದರಿಂದ ದೇಶದ ಸಾಮಾಜಿಕ ಬದಲಾವಣೆಗಾಗಿ ಕಾರ್ಮಿಕ ವರ್ಗದ ನೇತೃತ್ವದಲ್ಲಿ ಅಂತಿಮ ಹೋರಾಟ ನಡೆಯಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಮಾ ನೌಕರರ ಸಂಘಟನೆಯ ಪ್ರಭಾಕರ ಬಿ.ಕುಂದರ್, ವಿಶ್ವನಾಥ್, ಎಐಟಿಯುಸಿಯ ಸಂಜೀವ ಶೇರೆಗಾರ್, ಬ್ಯಾಂಕ್ ಎಂಪ್ಲಾಯಿಸ್ ಪೆಡರೇಶನ್ ಆಫ್ ಇಂಡಿಯಾದ ರವೀಂದ್ರ, ಎಐಐಬಿಇಎಯ ನಾಗೇಶ್ ನಾಯ್ಕ್, ಸಿಐಟಿಯುನ ವಿಶ್ವನಾಥ್ ರೈ, ಕವಿರಾಜ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರದಲ್ಲಿ ಪ್ರತಿಭಟನೆ
ಕುಂದಾಪುರ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ, ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಜಯಶ್ರೀ ಪಡುವರಿ, ಕಾರ್ಯದರ್ಶಿ ಸಿಂಗಾರಿ ನಾವುಂದ, ನಾಗರತ್ನ ಕುಂದಾಪುರ, ಸಂತೋಷ್ ಹೆಮ್ಮಾಡಿ, ಜಗದೀಶ್ ಆಚಾರ್, ಪ್ರಕಾಶ್ ಕೋಣಿ, ಬಲ್ಕೀಸ್, ಮಹಾಬಲ ವಡೇರಹೋಬಳಿ ಉಪಸ್ಥಿತರಿದ್ದರು.
ವಿವಿಧೆಡೆ ಕಾರ್ಮಿಕರ ಮುಷ್ಕರ
ಮುಷ್ಕರದ ಹಿನ್ನೆಲೆಯಲ್ಲಿ ಇಂದು ಕುಂದಾಪುರದ ವಿವಿಧ ಗ್ರಾಪಂಗಳ ಎದುರು ಕಟ್ಟಡ ಕಾರ್ಮಿಕರು ಪ್ರತಿಭಟಿಸಿ ಪಿಡಿಒ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ನೀಡಿದರು.
ಕೋಟೇಶ್ವರ ಗ್ರಾಪಂ ಎದುರು ನಡೆದ ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಘಟಕದ ಅಧ್ಯಕ್ಷ ಪರಮೇಶ್ವರ್ ಆಚಾರ್, ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು. ಗ್ರಾಪಂ ಅಧ್ಯಕ್ಷ ಕೃಷ್ಣ ಗೊಲ್ಲ ಮನವಿ ಸ್ವೀಕರಿಸಿದರು.
ಬಸ್ರೂರು, ಹೆಮ್ಮಾಡಿ, ತ್ರಾಸಿ, ಕೋಣಿ, ಗುಲ್ವಾಡಿ ಹೊಸಂಗಡಿ, ನೇರಳೆಕಟ್ಟೆ, ವಂಡ್ಸೆ, ಇಡೂರು ಕುಂಜ್ನಾಡಿ, ಆಲೂರು, ಹಕ್ಲಾಡಿ, ಕಟ್‌ಬೇಲ್ತೂರು, ಕಂದಾ ವರ, ಹೊಂಬಾಡಿ, ಹಾಲಾಡಿ, ಅಂಪಾರು, ಸಿದ್ದಾಪುರ ಗ್ರಾಪಂಗಳ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿದರು.
ರಿಕ್ಷಾ ಚಾಲಕರ ಧರಣಿ
ಟೋ ರಿಕ್ಷಾ ಚಾಲಕರು ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಅಧ್ಯಕ್ಷ ಲಕ್ಷ್ಮಣ ಬರೆಕಟ್ಟು, ಸಂಘಟನ ಕಾರ್ಯದರ್ಶಿ ರಮೇಶ್ ವಿ.ಶೇಖರ ದೋಣಿ ಮನೆ, ಚಂದ್ರಶೇಖರ ವಿ. ಮೊದಲಾದವರಿದ್ದರು.
ಹಳೆ ಬಸ್ ನಿಲ್ದಾಣ ರಿಕ್ಷಾ ನಿಲ್ದಾಣ, ಪಾರಿಜಾತ, ಬಸ್ರೂರು ಮೂರು ಕೈ, ಸನ್‌ರೈಸ್ ಕೋಟೇಶ್ವರ, ತ್ರಾಸಿ, ಕೋಟೇಶ್ವರ ಗಾಂಧಿ ಸರ್ಕಲ್, ಮರವಂತೆ, ಕೋಟೇಶ್ವರ ಬೈಪಾಸ್ ರಿಕ್ಷಾ ನಿಲ್ದಾಣ ಸೇರಿದಂತೆ ಹಲವಾರು ನಿಲ್ದಾಣಗಳಲ್ಲಿ ರಿಕ್ಷಾ ಚಾಲಕರು ಕಲ್ಯಾಣ ಮಂಡಳಿ ಮೂಲಕ ಸೌಲಭ್ಯಕ್ಕಾಗಿ ಒತ್ತಾಯಿಸಿದರು.
ಕುಂದಾಪುರದ ಗ್ರೀನ್ ಲ್ಯಾಂಡ್, ಪ್ರಭಾಕಿರಣ, ಪ್ರಭಾಕರ ಟೈಲ್ಸ್, ಮಂಗಳೂರು ಟೈಲ್ಸ್, ಗಿರಿಜಾ ಟೈಲ್ಸ್, ಸೌಪರ್ಣಿಕಾ ಟೈಲ್ಸ್, ರಘುಸನ್ ಕಾರ್ಖಾನೆಗಳ ಹಂಚು ಕಾರ್ಮಿಕರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು.
ಬೈಂದೂರಿನಲ್ಲಿ ಧರಣಿ
ಅಖಿಲ ಭಾರತ ಕಾರ್ಮಿಕರ ಮುಷ್ಕರದ ಅಂಗವಾಗಿ ಬೈಂದೂರು ತಾಲೂಕು ಸಿಐಟಿಯು ಕಾರ್ಮಿಕ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಬೈಂದೂರಿನ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಪ್ರದರ್ಶನ, ಮೆರವಣಿಗೆ ನಡೆಸಿದರು.
ಬೈಂದೂರು ತಹಶೀಲ್ದಾರ್ ಜ್ಯೋತಿ ಲಕ್ಷ್ಮಿ ಮೂಲಕ ಪ್ರಧಾನ ಮಂತ್ರಿಗೆ ಮನವಿಯನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಉದಯ ಗಾಣಿಗ ಮೊಗೇರಿ, ಸಿಂಗಾರಿ ನಾವುಂದ, ರಾಜೀವ ಪಡುಕೋಣೆ, ಗಣೇಶ ತೊಂಡೆಮಕ್ಕಿ, ಅಮ್ಮಯ್ಯ ಪೂಜಾರಿ, ಮಂಜು ಪಡುವರಿ, ಮಾಧವ ದೇವಾಡಿಗ ವೆಂಕಟೇಶ್ ಕೋಣಿ, ಲಕ್ಷ್ಮಣ ಯಡ್ತರೆ, ರಮೇಶ್ ಗುಲ್ವಾಡಿ, ವಿಜಯ ಕೊಯಾನಗರ, ಜಯಶ್ರೀ ಪಡುವರಿ, ನಾಗರತ್ನ ನಾಡಾ, ಶೀಲಾವತಿ, ರೋನಿ, ವಿನೋದ ನಜ್ರತ್ ಪಡುವರಿ, ಮೊದಲಾದವರು ಉಪಸ್ಥಿತರಿದ್ದರು.