ಗರ್ಭಿಣಿಯ ಸಾವಿನ ಬಳಿಕ ತನ್ನ ಮೇಲಿನ ಕೊಲೆ ಆರೋಪದಿಂದ ನೊಂದ ವೈದ್ಯೆ ಆತ್ಮಹತ್ಯೆ
"ನನ್ನ ಸಾವು ನಾನು ನಿರಪರಾಧಿ ಎನ್ನುವುದನ್ನು ಸಾಬೀತುಗೊಳಿಸಬಹುದು"
photo courtesy: twitter
ಜೈಪುರ,ಮಾ.30: ಗರ್ಭಿಣಿಯೋರ್ವಳ ಸಾವಿಗೆ ಕಾರಣವಾದ ಆರೋಪದಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಾಗಿದ್ದರಿಂದ ನೊಂದ ವೈದ್ಯೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾಜಸ್ಥಾನದ ದೌಸಾ ಪಟ್ಟಣದಲ್ಲಿ ಸಂಭವಿಸಿದೆ.
ಡಾ.ಅರ್ಚನಾ ಶರ್ಮಾ ತನ್ನ ಪತಿಯೊಂದಿಗೆ ನಡೆಸುತ್ತಿದ್ದ ಆಸ್ಪತ್ರೆಯ ಮೇಲಂತಸ್ತಿನಲ್ಲಿಯ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೌಸಾದ ಹೆಚ್ಚುವರಿ ಎಸ್ಪಿ ಲಾಲಚಂದ್ ಕಾಯಲ್ ತಿಳಿಸಿದರು.ಮಂಗಳವಾರ ಗರ್ಭಿಣಿಯೋರ್ವಳು ಶರ್ಮಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿದ್ದ ಮಹಿಳೆಯ ಕುಟುಂಬ ಸದಸ್ಯರು ವೈದ್ಯೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಬಳಿಕ ಪೊಲೀಸರು ಕೊಲೆ ಆರೋಪದಲ್ಲಿ ಡಾ.ಶರ್ಮಾ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು.
ಘಟನಾ ಸ್ಥಳದಲ್ಲಿ ಆತ್ಯಹತ್ಯೆ ಚೀಟಿಯೊಂದು ಪೊಲೀಸರಿಗೆ ಸಿಕ್ಕಿದ್ದು,‘ಬಹುಶಃ ನನ್ನ ಸಾವು ನಾನು ನಿರಪರಾಧಿ ಎನ್ನುವುದನ್ನು ಸಾಬೀತುಗೊಳಿಸಬಹುದು’ ಎಂದು ಅದರಲ್ಲಿ ಬರೆಯಲಾಗಿದೆ. ಪ್ರಕರಣದಲ್ಲಿ ಪೊಲೀಸ್ ಕ್ರಮವನ್ನು ಖಂಡಿಸಿ ರಾಜಸ್ಥಾನ ಮತ್ತು ದಿಲ್ಲಿಯಲ್ಲಿನ ವೈದ್ಯರು ಪ್ರತಿಭಟನೆಗಿಳಿದಿದ್ದಾರೆ. ಐಎಂಎ ರಾಜಸ್ಥಾನ ಘಟಕವು ರಾಜ್ಯದಲ್ಲಿ ಬುಧವಾರ ಬೆಳಿಗ್ಗೆ ಆರು ಗಂಟೆಯಿಂದ 24 ಗಂಟೆಗಳ ಕಾಲ ವೈದ್ಯಕೀಯ ಸೇವೆಗಳ ಅಮಾನತಿಗೆ ಕರೆ ನೀಡಿತ್ತು.
ದಿ ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಇಂಡಿಯಾ ಗುರುವಾರ ಸಂಜೆ 6:30ಕ್ಕೆ ದಿಲ್ಲಿಯ ಜಂತರ್ ಮಂತರ್ನಲ್ಲಿ ಮೋಂಬತ್ತಿಗಳ ಬೆಳಕಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದೆ. ಇಂತಹ ಪ್ರಕರಣಗಳಲ್ಲಿ ತಜ್ಞರ ಸಮಿತಿಯ ತನಿಖೆಯಿಲ್ಲದೆ ವೈದ್ಯರ ಮೇಲೆ ವೈದ್ಯಕೀಯ ನಿರ್ಲಕ್ಷದ ಆರೋಪವನ್ನು ಹೊರಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳು ಸ್ಪಷ್ಟಪಡಿಸಿವೆ ಎಂದು ಅದು ಹೇಳಿದೆ.