varthabharthi


ಅನುಗಾಲ

ಒಲೆ ಹತ್ತಿ ಉರಿದರೂ ನಿಲಲಾಗದು...

ವಾರ್ತಾ ಭಾರತಿ : 31 Mar, 2022
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಬಹಳಷ್ಟು ಜನರಿನ್ನೂ ತಮ್ಮ ಬಂಧು-ಬಳಗ, ನೆರೆ-ಕರೆ ಎಂಬ ಚೌಕಟ್ಟಿನೊಳಗೆ ಜಾತಿ-ಮತಗಳನ್ನು ಲೆಕ್ಕಿಸದೆ ತಮಗರಿವಿಲ್ಲದೆಯೇ ಸಮರಸದ ಬದುಕಿನಲ್ಲಿದ್ದಾರೆ. ಆದರೆ ಈ ಮಂದಿಗೆ ಮತ-ಧರ್ಮಗಳ ಅಂಧತ್ವ ಬರಬಾರದು. ಶೇ. 10 ಮಂದಿಯ ಈ ಮಾಟದ ಪಿಡುಗನ್ನು ನಿವಾರಿಸುವುದರಲ್ಲಿ ಶೇ. 80 ಮೌನಿ ಸಮಾಜ ನೆರವಾಗಬೇಕು. ಸುಮ್ಮನಿರಬಾರದು. ಪ್ರತಿಭಟಿಸುವ ಶೇ. 10 ಜಾಗೃತಾವಸ್ಥೆಯ ಜನರೊಂದಿಗೆ ತಮಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಧ್ವನಿಸಬೇಕು.



ನಮ್ಮ ವಿದ್ಯಾರ್ಥಿ ದಿನಗಳಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೆಲವು ಕಾರಣ ಗಳಿಗೆ, ಇನ್ನು ಕೆಲವು ಬಾರಿ ವಿನಾಕಾರಣಕ್ಕೆ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆಗೆ ನಾವೇ ‘ಮುಷ್ಕರ’ವೆಂಬ ಗಂಭೀರವಾದ ಹೆಸರನ್ನು ಇಟ್ಟುಕೊಂಡು ಸಂತೋಷಪಟ್ಟದ್ದೂ ಇತ್ತು. ಆ ದಿನಗಳಲ್ಲಿ ಕಾಲೇಜಿನ ಪ್ರಾಂಶುಪಾಲರು ಹೇಳುತ್ತಿದ್ದದ್ದು ನೆನಪಿದೆ: ‘‘ನಿಮ್ಮ ಪೈಕಿ ಶೇ. 10 ಮಂದಿ ಈ ಪ್ರತಿಭಟನೆಗೆ ಬೆಂಬಲ ಸೂಚಿಸುವವರು ಇರಬಹುದು; ಹಾಗೆಯೇ ಇನ್ನೊಂದು ಶೇ. 10 ಮಂದಿ ಇದನ್ನು ವಿರೋಧಿಸುವವರು ಇದ್ದಾರೆ; ಉಳಿದ ಶೇ. 80 ಹಾಗೂ ಇಲ್ಲ ಹೀಗೂ ಇಲ್ಲ ಎಂದುಕೊಂಡು ಯಾವ ನಿಲುವೂ ಇಲ್ಲದೆ ಯಾರು ಶಕ್ತರೋ ಅವರನ್ನು ಬೆಂಬಲಿಸುವವರು... ಅವರು ಹೇಳಿದಂತೆ ನಡೆದುಕೊಳ್ಳುವವರು... ಈ ಶೇ. 80ರಿಂದಾಗಿಯೇ ಪ್ರತಿಭಟನೆಯು ಯಶಸ್ವಿಯಾಗಿದೆಯೆಂದುಕೊಂಡು ವಿದ್ಯಾಭ್ಯಾಸದ ಅಮೂಲ್ಯ ಕ್ಷಣಗಳು ವ್ಯರ್ಥವಾಗುವವು...’’

ಇದು ಕಾಲೇಜಿನ ಪ್ರತಿಭಟನೆಯೆಂದಲ್ಲ, ಎಲ್ಲ ಸಾಮಾಜಿಕ ಆಂದೋಲನಗಳಲ್ಲೂ ನಿಜವಿರಬಹುದೇನೋ? ವ್ಯತ್ಯಾಸವೆಂದರೆ ಇಂತಹ ಪ್ರತಿಭಟನೆಗಳನ್ನು ವಿಷಕಾರಿಯಾಗಿ ಹಬ್ಬುವ ಮಾಧ್ಯಮಗಳು ತಮ್ಮ ನಡವಳಿಕೆಯು ಸಮಾಜದ ಮೇಲೆ ಮಾಡುವ, ಮಾಡಬಹುದಾದ, ಪರಿಣಾಮವನ್ನು ಊಹಿಸದಿರುವುದು. ಇದರಿಂದಾಗಿ ಎಲ್ಲೇ ಏನು ನಡೆದರೂ ಅದು ತಕ್ಷಣ ಇಡೀ ಜಗತ್ತನ್ನು ಆವರಿಸುತ್ತದೆ. ಸದ್ಯ ಕರಾವಳಿಯಲ್ಲಿ ಹಬ್ಬಿರುವ ಮತೀಯ ನಿಲುವು ಇತರೆಡೆಗೂ ಹಬ್ಬದಂತೆ ಮಾಡುವ ಹೊಣೆ ಸಮಾಜಕ್ಕಿದೆ. ನಾಡಿನ ರಾಜಧಾನಿಯಲ್ಲಿಯೂ ಇಂತಹ ಬಹಿಷ್ಕಾರದ ಕಿಡಿ ಮೂಡಿದೆಯೆಂದು ವರದಿಯಾಗಿದೆ. ಇಡೀ ಹಿಂದೂ ಸಮಾಜವು ಹಿಂದೂ ಅಲ್ಲದವರನ್ನು ತಮ್ಮ ಜಾತ್ರೆ-ಸಂತೆಗಳಿಂದ ದೂರವಿಟ್ಟಿದೆಯೆಂದು ತಿಳಿಯುವುದು ತಪ್ಪಾಗುತ್ತದೆ. ಹಿಂದುತ್ವದ ಕೆಲವು ಸ್ವಘೋಷಿತ ರಕ್ಷಕ ಸಂಘಟನೆಗಳು ಈ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿವೆ ಮತ್ತು ಭಾಗವಹಿಸುತ್ತವೆ. ಅವುಗಳಲ್ಲಿ ಕೇಡಿನ ಮನೋಭಾವದವರು ಕೆಲವೇ ಮಂದಿ. ಉಳಿದವರು ನಿರುದ್ಯೋಗಿಗಳು. ಈ ಖಾಲಿ ಮನಸ್ಸುಗಳು ದೆವ್ವದ ಕಾರ್ಖಾನೆಗಳಾಗುತ್ತವೆ. ಸಮಾಜದ ಶಾಂತಿಯನ್ನು ಕೆಡಿಸುವ ಮೂಲಕ ತಾವು ಹೆಸರನ್ನು ಪಡೆಯುತ್ತೇವೆಂಬ ಸುಳ್ಳು ಮನೋಭಾವ ಇವರಿಗಿರುತ್ತದೆ. ಈ ಸಂಘಟನೆಗಳನ್ನು ಕಾನೂನು ಮತ್ತು ವ್ಯವಸ್ಥೆಯ ಮಾಲಕರು ನಿಯಂತ್ರಿಸಬಹುದು. ಆದರೆ ಅವರ ಮೌನ ಕೃಪಾಶೀರ್ವಾದವು ಇದ್ದಾಗ ಸಾಮಾಜಿಕ ಸಾಮರಸ್ಯವನ್ನು ಕದಡುವ ಯತ್ನಕ್ಕೆ ಒಂದಷ್ಟು ಯಶಸ್ಸು ಲಭಿಸುತ್ತದೆ.

ದೇವಸ್ಥಾನಗಳು ಸಾಂಸ್ಕೃತಿಕ ಕೇಂದ್ರಗಳಾಗಿದ್ದ ಕಾಲವೊಂದಿತ್ತು. ದೇವರನ್ನು ನಂಬುವ ಮತ್ತು ನಂಬದ ಜನರೂ ದೇವಸ್ಥಾನದ ಪರಿಸರದಲ್ಲಿ ವ್ಯವಹರಿಸುತ್ತಿದ್ದರು. ದೇವಸ್ಥಾನಗಳು ಅಂತಲ್ಲ, ಎಲ್ಲ ಧರ್ಮ/ಮತಗಳ ಪೂಜಾ ಕೇಂದ್ರಗಳು ಊರಿನ ಸಂಭ್ರಮದ ಸಂಕೇತಗಳಾಗಿದ್ದವು. ಊರಿನ ಜಾತ್ರೆಯೆಂದರೆ ಅಲ್ಲಿ ಉಪನ್ಯಾಸ-ಪ್ರವಚನಗಳು, ಸಂಗೀತ-ನೃತ್ಯ, ನಾಟಕ/ಯಕ್ಷಗಾನ, ಹರಿಕಥೆ ಇವೆಲ್ಲವೂ ಇರುತ್ತಿದ್ದವು. ಹೊರಗಿರುವ ಜಾಗದಲ್ಲಿ ಸಂತೆ ನೆರೆಯುತ್ತಿತ್ತು. ಅಲ್ಲಿ ಪುಟ್ಟ ಮಕ್ಕಳಿಂದ ಮುದುಕರವರೆಗೆ ಎಲ್ಲ ಹಂತದ ಬದುಕನ್ನು ಆಕರ್ಷಿಸುವ ಮಳಿಗೆಗಳಿರುತ್ತಿದ್ದವು. ಯುವಕ-ಯುವತಿಯರು ಪರಸ್ಪರ ಭೇಟಿಯಾಗುವುದಕ್ಕಾಗಿ ಈ ಜಾತ್ರೆ-ಸಂತೆಗಳಲ್ಲಿ ಭಾಗವಹಿಸುತ್ತಿದ್ದರು. ಊರಿಗೆ ಊರೇ ಇವೆಲ್ಲವನ್ನು ಅನುಭವಿಸುತ್ತಿತ್ತು. ಎಲ್ಲೋ ಮೂಲೆಯಲ್ಲಿ ಕೆಲವು ಹುಡುಗರು ಪರಸ್ಪರ ಹೊಡೆದಾಟ ನಡೆಸುತ್ತಿದ್ದದ್ದೂ ಇತ್ತು. ನಮಗೆ ವಿದ್ಯಾರ್ಥಿದಿನಗಳಲ್ಲಿ ದೇವರ ನಂಬಿಕೆ ಎಷ್ಟಿತ್ತೆಂದು ಈಗ ನೆನಪಾಗುವುದಿಲ್ಲ. ಆದರೆ ಜಾತ್ರೆಯಲ್ಲಿ ಓಡಾಡಿದ ಅಲ್ಲಿ ಎಲ್ಲ ಧರ್ಮ/ಮತಗಳ ಮಂದಿ ಸಮಾನರಂತೆ ವ್ಯವಹರಿಸಿದ್ದು ನೆನಪಾಗುತ್ತದೆ. ಅನೇಕರಿಗೆ ಇದು ಹೊಟ್ಟೆ ತುಂಬಿಸುವ ಕಾಯಕ. ಮುಖ್ಯವಾಗಿ ಈ ದೇಶ, ಈ ಮಣ್ಣು ಮತ್ತು ಈ ಜನ ನೆನಪಿಡಬೇಕಾದದ್ದೆಂದರೆ ಇಲ್ಲಿನ ಹೆಚ್ಚಿನ ಜಾತ್ರೆ-ಸಂತೆಗಳು ದೇವಸ್ಥಾನಗಳ ಸುತ್ತ ನಡೆಯುತ್ತವಾದರೆ ಅದಕ್ಕೆ ಕಾರಣ ಯಾವುದೇ ಧರ್ಮ/ಮತ ಇತರ ಧರ್ಮ/ಮತಗಳಿಗಿಂತ ಶ್ರೇಷ್ಠವೆಂದಲ್ಲ. ಬಹುಸಂಖ್ಯೆಯ ಜನ ಯಾವ ಧರ್ಮ/ಮತದಲ್ಲಿರುವರೋ ಅದು ಒಟ್ಟಾರೆ ಸಮಾಜದ ಮುಖ್ಯ ವಾಹಿನಿಯೆನಿಸಿಕೊಳ್ಳುತ್ತದೆ. ತಲಕಾವೇರಿಯಲ್ಲಿ ಹುಟ್ಟುವ ಕಾವೇರಿಯೇ ಪೂಂಪುಹಾರಿನಲ್ಲಿ ಸಾಗರವನ್ನು ಸೇರುವುದಲ್ಲ. ಅದಕ್ಕೆ ಕಪಿನಿ, ಹೇಮಾವತಿ ಹೀಗೆ ಹಲವು ನದಿಗಳು ಸೇರಿ ತಮ್ಮ ಹರಿವನ್ನೂ ನೀಡಿ ಅದರ ಪಾತ್ರವನ್ನು ವಿಶಾಲಗೊಳಿಸುತ್ತವೆ. ಯಾವುದು ಕಾವೇರಿ, ಯಾವುದು ಕಪಿನಿ, ಯಾವುದು ಹೇಮಾವತಿ ಎಂದು ಸಾಗರಕ್ಕೆ ಗೊತ್ತಿರುವುದಿಲ್ಲ. ನಾವು-ಅಂದರೆ ಈ ಸಮಾಜ ಇವುಗಳಲ್ಲೊಂದರ ಹೆಸರಿಟ್ಟಿದ್ದೇವೆ. ಅಲ್ಲಿಗೆ ಉಳಿದವುಗಳ ಅಸ್ತಿತ್ವ ನಾಶವಾಯಿತೆಂದಲ್ಲ. ಈ ಸಾಮರಸ್ಯವೇ ಬದುಕಿನ ಒಟ್ಟಂದದ ಸಂಕೇತ. ಆದರೆ ನಮ್ಮ ಸಮಾಜ ಹೇಗಿದೆಯೆಂದರೆ ಒಂದೆಡೆ ಎಲ್ಲರೂ ಮುಖ್ಯವಾಹಿನಿಗೆ ಸೇರಬೇಕೆಂಬ ಕರೆಕೊಡುವುದರೊಂದಿಗೆ ಭಿನ್ನತೆಗೆ ಮುದಕೊಡುವ, ಪ್ರತ್ಯೇಕತೆಯನ್ನು ಪ್ರಚೋದಿಸುವ, ವೈವಿಧ್ಯವನ್ನು ಸಹಿಸದ ಅಸಮಾನತೆಯನ್ನೂ ಅಸಹನೆಯನ್ನೂ ಬೆಳೆಸುವ, ದೃಷ್ಟಿಯನ್ನು ಸಂಕುಚಿತ ಗೊಳಿಸುವ ನೇತ್ಯಾತ್ಮಕ ಶಕ್ತಿಗಳು ಸಂಚುಹೂಡಿದಂತೆ ಕಾರ್ಯೋನ್ಮುಖವಾಗಿವೆ. ಎಲ್ಲರೂ ಸೇರಬೇಕಾದಲ್ಲಿ ನಾವಷ್ಟೇ ಇರಬೇಕೆಂಬ ಕುರುಡು ನ್ಯಾಯ ಹಬ್ಬುತ್ತಿದೆ.

ಮುಖ್ಯವಾಹಿನಿ ಯಾವುದು? ಒಂದೇ ಧರ್ಮ/ಮತವೆಂದರ್ಥವಲ್ಲ. ವಿವಿಧತೆಯಲ್ಲಿ ಏಕತೆಯೆಂಬ ಘೋಷಣೆಯೊಂದಿಗೆ ಸ್ವಾತಂತ್ರ್ಯವನ್ನು ಪಡೆದು ಜಾತ್ಯತೀತತೆಯ ಬದಲು ಧರ್ಮನಿರಪೇಕ್ಷತೆಯೆಂಬ ಮೆಟ್ಟಲನ್ನು ಸಂವಿಧಾನಕ್ಕಿಟ್ಟು ಬೆಳೆಯಬೇಕಾದ ದೇಶ ನಮ್ಮದು. ಧರ್ಮನಿರಪೇಕ್ಷತೆ ಇರಬೇಕಾದ್ದೆಲ್ಲಿ? ಆಡಳಿತದಲ್ಲಿ. ಜಾತ್ಯತೀತತೆಯ ಬೇರುಗಳಿರುವುದೇ ಆಡಳಿತದಲ್ಲಿ ಧಾರ್ಮಿಕ ಹಿತಾಸಕ್ತಿಗಳು, ಮತೀಯ ಮಠಮಾನ್ಯಗಳು ಹಸ್ತಕ್ಷೇಪ ಮಾಡಬಾರದೆಂಬುದರಲ್ಲಿ. ಆದರೆ ನಮ್ಮ ಧಾರ್ಮಿಕ ಕೇಂದ್ರಗಳು ತಮಗೆ ರಾಜಕೀಯದ ಹೊರತು ಬೇರೆ ಕೆಲಸವೇ ಇಲ್ಲವೆಂಬಂತೆ ಮತ್ತು ಸಂಸಾರಿಗಳನ್ನೂ ನಾಚಿಸುವಂತೆ ಲೌಕಿಕ ವ್ಯವಹಾರದಲ್ಲಿ ಭಾಗವಹಿಸುವುದನ್ನು ನೋಡಿದಾಗ ಇವರೆಲ್ಲ ತ್ರಿಜನ್ಮ ಮೋಕ್ಷದ ಲಯಕಾರೀ ಅಸುರರಿರಬೇಕೆಂದು ಭಾಸವಾಗುತ್ತದೆ. ಮಂಗಳೂರಿನಲ್ಲಿ ಮಠಾಧೀಶರು ವಿಶ್ವ ಹಿಂದೂ ಪರಿಷತ್ತಿನ ‘ಆಶ್ರಯ’ದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾವನ್ನು ನೋಡಿ ಆನಂದಿಸಿದರೆಂದು ಕೇಳಿದೆ. ಅದು ಒಂದು ಸಿನೆಮಾ ಎಂಬುದನ್ನು ಮರೆತು ಅಧ್ಯಾತ್ಮ ಪ್ರವಚನವನ್ನು ನೋಡಲು-ಕೇಳಲು ಹೋದಂತೆ ಸ್ಪಷ್ಟ ರಾಜಕೀಯ ಪ್ರಚಾರದ ದುರುದ್ದೇಶವನ್ನು ಹೊಂದಿದ ಇಂತಹ ನಟನೆಗೆ (ಅದೆಷ್ಟೇ ಒಳ್ಳೆಯ ಸಿನೆಮಾವಾದರೂ) ಉತ್ಸಾಹದಿಂದ ಹೋಗುವವರಿಂದ ಲೋಕಾತೀತ ಸೌಖ್ಯವನ್ನು ಅಪೇಕ್ಷಿಸಬಹುದೇ? ಇಂತಹ ‘ಆಶ್ರಯ’ ಯೋಜನೆಗಳು ಮಠಾಧೀಶರುಗಳನ್ನು ಯಾವೆಡೆಗೆ ಸೆಳೆಯುತ್ತವೋ ಅರ್ಥವಾಗದು; ಆದರೂ ವಿಶ್ವಾಮಿತ್ರ-ಮೇನಕೆ ಪ್ರಸಂಗದ ಅನರ್ಥದ ಸಂಕೇತಗಳಿವು. ಹಿಂದೆ ಒಬ್ಬರು ಮಠಾಧೀಶರಿದ್ದರು. ಅವರು ಸಾಮವೇದವನ್ನು ಸರಿಯಾಗಿ ಅಧ್ಯಯನ ಮಾಡಿದವರು. ಅವರಿಗೆ ಸಂಗೀತದ ಉನ್ನತ ಅರಿವಿತ್ತು. ಅವರನ್ನೊಮ್ಮೆ ಯಾರೋ ಒಂದು ಸಂಗೀತ ಕಾರ್ಯಕ್ರಮಕ್ಕೆ ಆಮಂತ್ರಿಸಿದಾಗ ಅವರು ನಿರಾಕರಿಸಿದರು. ಕಾರಣ ಕೇಳಿದಾಗ ಸಂಗೀತ ಎಂದರೆ ಪ್ರಕೃತಿಯ ಸಾಂಸ್ಕೃತಿಕ ಸ್ವರೂಪ. ಪ್ರಕೃತಿ ಎಂದರೆ ಸೌಂದರ್ಯ. ಸನ್ಯಾಸಿಗಳು ಸತ್ಯವನ್ನರಸಬೇಕೇ ಹೊರತು ಸೌಂದರ್ಯವನ್ನಲ್ಲ. ಲೌಕಿಕವನ್ನಂತೂ ಖಂಡಿತಾ ಅಲ್ಲ ಎಂದರಂತೆ. ಅವರ ತರ್ಕವನ್ನು ಒಪ್ಪುವುದು ಬಿಡುವುದು ಬೇರೆ; ಆದರೆ ಅವರು ತಮ್ಮ ಸುತ್ತ ಹಾಕಿಕೊಂಡ ಚೌಕಟ್ಟನ್ನು ಮೆಚ್ಚಬೇಕು. ನಿವೃತ್ತಿಯ ಹಂತದಲ್ಲೊಮ್ಮೆ ಮಾತ್ರ ಅವರು ತಮ್ಮ ಅನುಯಾಯಿಗಳ ಸಮಾರಂಭವೊಂದರಲ್ಲಿ ತಮ್ಮದೇ ಜಾತಿಯ ಅಧಿಕಾರಸ್ಥ ರಾಜಕಾರಣಿಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದರು. (ಅದು ಸರಿಯೋ ತಪ್ಪೋ ಬೇರೆ ವಿಚಾರ. ಆದರೆ ಇಂದಿನ ಸಂತರ ಸಂತೆಯೊಳಗೆ ಅವರೊಬ್ಬ ಮಹಾತ್ಮರಂತೆ ಗೋಚರಿಸುತ್ತಾರೆ!) ಈಗಿನಂತೆ ನಾಟಕ, ಸಿನೆಮಾ, ನೃತ್ಯಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಪ್ರಾಯಃ ಎಲ್ಲ ಧರ್ಮ/ಮತಗಳಲ್ಲಿ ಈ ರೀತಿಯ ನಿರ್ಬಂಧ, ಚೌಕಟ್ಟು ಇದೆಯೋ ಗೊತ್ತಿಲ್ಲ.

ಈ ಬಾರಿ ಕರಾವಳಿಯ ಹಲವು ಪೂಜಾಕೇಂದ್ರಗಳಲ್ಲಿ ಇತರರಿಗೆ ಪ್ರವೇಶವಿಲ್ಲವೆಂಬ ಬ್ಯಾನರ್ ಅಳವಡಿಸಿದ್ದಾರೆಂದು ವರದಿಯಾಗಿದೆ. ಇದು ನಿಜಕ್ಕೂ ಶಾಂತಿಯನ್ನು ಕದಡುವ ಮತ್ತು ಪರಸ್ಪರ ಮತೀಯ ಸಂಘರ್ಷಕ್ಕೆ ಎಡೆಮಾಡಿಕೊಡುವ ವಿಲಕ್ಷಣ ಸಂಗತಿಗಳು. ಪಾಕಿಸ್ತಾನದ ಗಣರಾಜ್ಯದಂದು ಮುಧೋಳದ ವಿದ್ಯಾರ್ಥಿಯೊಬ್ಬಳು ಎಲ್ಲ ದೇಶಗಳ ಶಾಂತಿ-ಸೌಹಾರ್ದಕ್ಕಾಗಿ ಹಂಬಲಿಸಿದ ಒಂದು ಸಂದೇಶವನ್ನು ಮತೀಯ ಸಾಮರಸ್ಯವನ್ನು ಕೆಡಿಸುವ, ಪರಸ್ಪರ ದ್ವೇಷಕ್ಕೆ ಕಾರಣವಾಗುವ ಅಪರಾಧವೆಂಬ ನೆಪದಲ್ಲಿ ದಸ್ತಗಿರಿ ಮಾಡಿದ ಘಟನೆ ನಡೆದಿದೆ. ಸಿನೆಮಾದ ಖಳನಾಯಕರ ಜೊತೆಗಿನ ಹುಡಿಪುಡಿ ರೌಡಿಗಳು ಖಳನಾಯಕನ ಚರ್ಯೆಯನ್ನು ಅರ್ಥಮಾಡಿಕೊಂಡವರಂತೆ ನೇರ ನಾಯಕನೆಡೆಗೆ ನೆಗೆಯುವ ದೃಶ್ಯವನ್ನು ನೆನಪಿಸುವ ಈ ಪೊಲೀಸು ಕೃತ್ಯವು ನಮ್ಮ ವ್ಯವಸ್ಥೆಯ ಹೊಣೆಗೇಡಿತನಕ್ಕೆ ನಿದರ್ಶನವಾಗಬಹುದು. ಅಲ್ಲೂ ಒಂದು ವಿಪರ್ಯಾಸವೆಂದರೆ ಅವರು ಕಾಣಿಸಿದ ಅಪರಾಧದ ಕಲಮನ್ನು ನ್ಯಾಯದೇವತೆಯ ಅರ್ಚಕರು ಕಣ್ಣುಮುಚ್ಚಿ ನೋಡಿ ಕಸ್ಟಡಿಗೆ ಆದೇಶಿಸಿದ್ದು. ಕೊಲೆಯ ಆರೋಪದಲ್ಲಿ ಬಂಧಿಸಿ ನ್ಯಾಯದೇವತೆಯ ಮುಂದೆ ಆರೋಪಿಯನ್ನು ತಂದಾಗ ಕೊಲೆಯಾಗಿದ್ದಾನೆಂದು ಹೇಳಲಾದ ವ್ಯಕ್ತಿಯೇ ಬಂದು ನಿಂತರೂ ವಿಚಾರವಿವೇಚನೆಯಿಲ್ಲದೆ ಆರೋಪಿಯ ಬಂಧನವನ್ನು ವಿಸ್ತರಿಸುವ ನ್ಯಾಯವ್ಯವಸ್ಥೆ ನಮ್ಮದು. ನ್ಯಾಯದೇವತೆ ನಿಜಕ್ಕೂ ಕಣ್ಣುಮುಚ್ಚಿದ್ದಾಳೆ.

ಇದು ಕರಾವಳಿಯ ಕಾಯಿಲೆಯಷ್ಟೇ ಆಗಿದ್ದರೂ ಸುಮ್ಮನಿರಬಾರದು. ಇದೀಗ ಕೊರೋನದಂತೆ ವ್ಯಾಪಿಸುವ ಹಂತದಲ್ಲಿದೆ. ಬೆಂಗಳೂರಿನಲ್ಲೂ ಇದರ ಸೋಂಕು ತಟ್ಟಿದಂತಿದೆ. ಕೇರಳದಂತಹ ಎಡಪಂಥದ ಜಾತ್ಯತೀತ ಪ್ರಾಬಲ್ಯವಿರುವ ರಾಜ್ಯದಲ್ಲೂ ಅನ್ಯ ಧರ್ಮ/ಮತಕ್ಕೆ ಸೇರಿದವಳೆಂಬ ಕಾರಣಕ್ಕೆ ಭರತನಾಟ್ಯ ಕಲಾವಿದೆಯೊಬ್ಬರ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆಯಂತೆ. ಆಕೆ ಭಾರತೀಯವಾದ ನೃತ್ಯ ಪ್ರಕಾರದಲ್ಲಿ ಪರಿಣತೆಯೆಂಬುದನ್ನೂ ಮರೆತು ಆಕೆಯಿಂದ ಧರ್ಮಕ್ಕೆ ಗ್ಲಾನಿಯಾಗುತ್ತದೆಂದು ಅಪನಂಬಿದವರ (ಅ) ಜ್ಞಾನಕ್ಕೆ ಏನು ಹೇಳಬೇಕು? ಗ್ಲಾನಿಯಾದರೆ ಭಗವಂತನ ಅವತಾರಕ್ಕೊಂದು ಕಾರಣವಾಗುತ್ತಿತ್ತು. ಅಂತಹ ಪರೀಕ್ಷೆಯಲ್ಲಿ ದೇವರು ಸೋಲಬಾರದಲ್ಲವೇ? ಅಧಿಕಾರವಿರುವ ಒಂದು ಸಂಸ್ಥೆಯು ಈ ಹಂತಕ್ಕೆ ಕೇರಳದಲ್ಲಿ ತಲುಪಬಹುದಾದರೆ ಕರ್ನಾಟಕದ ಸ್ಥಿತಿ ಹೇಗಾದೀತೆಂದು ಊಹಿಸಬೇಕಾಗಿಲ್ಲ. ಈಗಾಗಲೇ ಈ ಬಗ್ಗೆ ಅಂಧಾ ಕಾನೂನಿನ ಸಬೂಬುಗಳು ಸೃಷ್ಟಿಯಾಗಿವೆ. ಮಾಜಿ ಸರಕಾರಗಳ ದೂಷಣೆಯೊಂದಿಗೆ ಎಲ್ಲ ಒಳಿತಿಗೂ ಮಂಗಳ ಹಾಡಿ ಕೇಡೊಂದನ್ನೇ ಉಳಿಸಿಕೊಳ್ಳಲು ತವಕಿಸುತ್ತಿವೆ. ಏಳು ಬಣ್ಣ ಸೇರಿದರೆ ಬಿಳಿಯ ಬಣ್ಣವಾಗುತ್ತದೆ ಎಂಬ ಪುರಾತನ ನಂಬಿಕೆ ಇದೀಗ ಅಪಘಾತಕ್ಕೊಳಗಾಗಿದೆ.

ಕರ್ನಾಟಕದ ಕರಾವಳಿ ಮತ್ತಿತರೆಡೆಗಳಲ್ಲಿ ನಡೆದ, ನಡೆಯುತ್ತಿರುವ ಈ ವಿಷಮಾವಸ್ಥೆಯನ್ನು ಅಧಿಕಾರದ ಆಡಳಿತ ಒಂದರೆಗಳಿಗೆಯಲ್ಲಿ ನಿಲ್ಲಿಸಬಹುದು. ಆದರೆ ರಾಜಕೀಯದ ದೊಂಬರಾಟ ಮನೆಮನೆಗಳನ್ನು, ಮನಮನಗಳನ್ನು ಉರಿಸುವ, ಕೆಡವುವ ಹಂತಕ್ಕೆ ತಲುಪಿರುವಾಗ ಆಡಳಿತವು ಗೋರ್ಕಲ್ಲಾಗಿರುತ್ತದೆ. ಸರಕಾರದ ವಿರುದ್ಧ ಚಿಕ್ಕಪುಟ್ಟ ಟೀಕೆಗಳನ್ನೂ ಸಹಿಸದ ಸ್ಥಿತಿಯಲ್ಲಿ ನಮ್ಮ ಸಂಸ್ಕೃತಿಯೆಂಬ ನಾಟಕ ನಡೆಯುತ್ತಿದೆ. ಈ ಅಸಹನೆಯ ಲಾಭವನ್ನು ಪುಂಡುಪೋಕರಿಗಳು ಪಡೆಯುತ್ತಿದ್ದಾರೆ. ಇತಿಹಾಸ ಮರುಕಳಿಸುತ್ತಿದೆ. ಬಸವಣ್ಣ ಪೂರ್ಣ ವೈರಾಗ್ಯ ತಾಳಬೇಕಾದರೆ ಬಿಜ್ಜಳನ ಕೊಲೆೆಯಾಗಬೇಕು. ಇತಿಹಾಸ ಮರುಕಳಿಸುವಾಗಲೆಲ್ಲ ವರ್ತಮಾನ ಆಕಳಿಸುತ್ತದೆ.

ಕೊರೋನಕ್ಕಾದರೂ ಲಸಿಕೆಗಳಿವೆ. ಮತೀಯ/ಧಾರ್ಮಿಕ ವಿಷಕ್ಕೆ ಕೊನೆಯಿಲ್ಲ. ಹಾಲಿಗೆ ಹುಳಿ ಹಿಂಡುವಂತೆ ಸಾಮಾಜಿಕ ಸಾಮರಸ್ಯವನ್ನು ಕೆಡಿಸಲು ಒಂದೆರಡು ಮಂದಿಯೂ ಸಾಕು. ಅದರಲ್ಲೂ ಸಾಂಸ್ಕೃತಿಕ ರಾಷ್ಟ್ರವಾದಿ ಸಂಘಟನೆಗಳ ರೂಪದಲ್ಲಿ ಈ ವಿಷಬೀಜಗಳು ಮೊಳೆಯಲು ಆರಂಭವಾಗಿರುವುದರಿಂದ ಇವನ್ನು ತೊಡೆದು ಹಾಕುವುದಕ್ಕೆ ಸಂಘಟಿತ ಪ್ರಯತ್ನವಿರಬೇಕು. ಈ ದೇಶಕ್ಕೆ ಅಸ್ಪಶ್ಯತೆ, ಜಾತೀಯತೆ, ವರ್ಗತಾರತಮ್ಯ ಮುಂತಾದವುಗಳ ಭವ್ಯ, ರಕ್ತರಂಜಿತ ಇತಿಹಾಸವೂ ಇದೆ; ಪುರಾಣವೂ ಇದೆ. ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್‌ರಂತಹ ಐತಿಹಾಸಿಕ ಮಹಾನುಭಾವರಿಂದಲೂ ಈ ಪಿಡುಗನ್ನು ನಿವಾರಿಸಲು ಆಗಲಿಲ್ಲ. ಬೆಂಕಿಯಿಟ್ಟು ಸುಟ್ಟ ಕಳೆಯು ಬೆಂಕಿಯಾರಿ ಮಳೆ ಬಂದಾಗ ಅದೇ ಬೂದಿಯನ್ನು ಗೊಬ್ಬರವಾಗಿಸಿಕೊಂಡು ಬೆಳೆವ ಕಳೆಯಂತೆ ಈ ಶನಿಸಂತಾನಗಳು ಮೊಳೆಯುತ್ತಿವೆ. ಪ್ರಾಯಃ ರಕ್ತಬೀಜಾಸುರನೇ ಈ ಸಂಸ್ಕೃತಿಯ ಪುರುಷೋತ್ತಮನಿರಬೇಕು. ಇದಿನ್ನೂ ತಳಮಟ್ಟದ ಸಮಾಜವನ್ನು ತಲುಪಿಲ್ಲ.

ಬಹಳಷ್ಟು ಜನರಿನ್ನೂ ತಮ್ಮ ಬಂಧು-ಬಳಗ, ನೆರೆ-ಕರೆ ಎಂಬ ಚೌಕಟ್ಟಿನೊಳಗೆ ಜಾತಿ-ಮತಗಳನ್ನು ಲೆಕ್ಕಿಸದೆ ತಮಗರಿವಿಲ್ಲದೆಯೇ ಸಮರಸದ ಬದುಕಿನಲ್ಲಿದ್ದಾರೆ. ಆದರೆ ಈ ಮಂದಿಗೆ ಮತ-ಧರ್ಮಗಳ ಅಂಧತ್ವ ಬರಬಾರದು. ಶೇ. 10 ಮಂದಿಯ ಈ ಮಾಟದ ಪಿಡುಗನ್ನು ನಿವಾರಿಸುವುದರಲ್ಲಿ ಶೇ. 80 ಮೌನಿ ಸಮಾಜ ನೆರವಾಗಬೇಕು. ಸುಮ್ಮನಿರಬಾರದು. ಪ್ರತಿಭಟಿಸುವ ಶೇ. 10 ಜಾಗೃತಾವಸ್ಥೆಯ ಜನರೊಂದಿಗೆ ತಮಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಧ್ವನಿಸಬೇಕು. ಇಂದಂತೂ ಸಾಮಾಜಿಕ ಜಾಲತಾಣಗಳು/ಮಾಧ್ಯಮಗಳು ಬೇಕಷ್ಟಿರುವಾಗ ಇವುಗಳ ಕುರಿತು ಆರೋಗ್ಯಪೂರ್ಣ, ಇತ್ಯಾತ್ಮಕ ಹಾಗೂ ಉತ್ತಮ ಗುಣಮಟ್ಟದ ಚರ್ಚೆ ನಡೆಯಬೇಕು ಮತ್ತು ಜನರು ಭಾಗವಹಿಸಬೇಕು. ತಾವು ಒಪ್ಪದಿರುವ ವಿಚಾರದಲ್ಲಿ ಮೌನವಾಗಿರುವವರು ಸಮಾಜಕ್ಕೆ ಅಪಾಯಕಾರಿ ಸಂದೇಶವನ್ನು ನೀಡುತ್ತಾರೆ. ಆದ್ದರಿಂದ ಮೌನವು ಒಪ್ಪಿಗೆಯಲ್ಲವೆಂದು ಹೇಳಬೇಕಾದರೂ ಮಾತು ಹೊರಡಬೇಕಲ್ಲ? ನಮ್ಮ ಸಮಾಜ ಈ ಸೋಂಕಿಗೆ ಲಸಿಕೆಯನ್ನು ಕಂಡುಹಿಡಿಯದಿದ್ದರೆ ಭಾರೀ ದುರಂತವೇ ನಡೆಯುವುದು ಅನಿವಾರ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)