ವೈದ್ಯಕೀಯ ಉಪಕರಣಗಳ ಖರೀದಿ; ಚೀನಾದ ಕಂಪೆನಿಗೆ ಮಣೆ ಹಾಕಿದ ರಾಜ್ಯ ಸರಕಾರ
ಕೇಂದ್ರದ ಮಾರ್ಗ ಸೂಚಿ ಉಲ್ಲಂಘನೆ
ಒಕ್ಕೂಟ ಸರಕಾರವು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ 2020ರಿಂದ ಚೀನಾ ಮೂಲದ ಯಾವುದೇ ಉಪಕರಣಗಳನ್ನು ಕೊಳ್ಳುವುದನ್ನು ನಿರ್ಬಂಧಿಸಿದೆ ಮತ್ತು ಅನುಮತಿ ಇಲ್ಲದೆ ಆ ಕಂಪೆನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಕೂಡ ಭಾಗವಹಿಸುವಂತಿಲ್ಲ. ಆದರೂ ದೇಶದ ಭದ್ರತೆ ಬಗ್ಗೆ ನಿರಂತರವಾಗಿ ಮಾತನಾಡುವ ರಾಜ್ಯ ಬಿಜೆಪಿ ಸರಕಾರವು ರಾಷ್ಟ್ರೀಯ ಭದ್ರತೆಯ ವಿಷಯವನ್ನು ಉಪೇಕ್ಷಿಸಿ ಚೀನಾ ಮೂಲದ ಉಪಕರಣಗಳನ್ನು ಕೊಳ್ಳಲು ಮುಂದಾಗಿರುವುದು ಇವರ ಇಬ್ಬಂದಿತನವನ್ನು ತೋರಿಸುತ್ತದೆ. ಒಂದೆಡೆ ಮೇಕ್ ಇನ್ ಇಂಡಿಯಾ ಎಂದು ಹೇಳುವವರು ಭಾರತದಲ್ಲಿ ಇದೇ ಉಪಕರಣಗಳ ಖರೀದಿಗೆ ಲಭ್ಯವಿರುವಾಗ ಯಾಕಾಗಿ ಚೀನಾ ಮೂಲದ ಉಪಕರಣಗಳು ಮುಂದಾಗಿದ್ದಾರೆ ಎಂದು ತಿಳಿಯುತ್ತಿಲ್ಲ. ಇಲ್ಲಿ ಭ್ರಷ್ಟಾಚಾರದ ಮುಂದೆ ಇವರಿಗೆ ಯಾವ ರಾಷ್ಟ್ರೀಯ ಭದ್ರತೆಯೂ ಲೆಕ್ಕಕ್ಕಿಲ್ಲ.
► ಸಿ.ಎನ್. ದೀಪಕ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಷ್ಟ್ರಸಮಿತಿ
ಬೆಂಗಳೂರು, ಮಾ.31: ರಾಜ್ಯ ಸರಕಾರಗಳು ವಿವಿಧ ಇಲಾಖೆಗಳ ಮೂಲಕ ಉಪಕರಣ, ಉತ್ಪನ್ನಗಳ ಖರೀದಿ ಸಂಬಂಧ ಆಹ್ವಾನಿಸುವ ಟೆಂಡರ್ ಬಿಡ್ಡಿಂಗ್ನಲ್ಲಿ ಭಾಗವಹಿಸುವ ವಿದೇಶಿ ಕಂಪೆನಿಗಳು ಮತ್ತು ಅದರ ಏಜೆನ್ಸಿಗಳು ಕೇಂದ್ರ ಸರಕಾರದಿಂದ ಅನುಮತಿ ಪಡೆಯಬೇಕು ಎಂದು ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸದ ಚೀನಾದ ಶಾಂಘೈ ಯುನೈಟೆಡ್ ಇಮೇಜಿಂಗ್ ಕಂಪೆನಿಯ ಏಜೆನ್ಸಿಗೆ ರಾಜ್ಯ ಬಿಜೆಪಿ ಸರಕಾರವು ಮಣೆ ಾಕಿರುವುದು ಇದೀಗ ಬಹಿರಂಗವಾಗಿದೆ.
ರಾಜ್ಯದ ಸರಕಾರಿ ವೈದ್ಯಕೀಯ ಕಾಲೇಜುಗಳಿಗೆ 60 ಕೋಟಿ ರೂ. ವೆಚ್ಚದಲ್ಲಿ ಸಿಟಿ ಸ್ಕಾನರ್, ಎಂಆರ್ಐ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಭಾರತ ಸರಕಾರದ ಅನುಮತಿ ಪಡೆಯದೇ ಇರುವ ಚೀನಾದ ಶಾಂಘೈ ಯುನೈಟೆಡ್ ಇಮೇಜಿಂಗ್ ಕಂಪೆನಿಯ ಏಜೆನ್ಸಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆಯು ಕೇಂದ್ರ ಹಣಕಾಸು ಸಚಿವಾಲಯದ ಸುತ್ತೋಲೆಯನ್ನೇ ಬದಿಗಿರಿಸಿದೆ. ಈ ಮೂಲಕ ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನೇ ಉಲ್ಲಂಘಿಸಿರುವ ಗುರುತರ ಆರೋಪಕ್ಕೆ ರಾಜ್ಯ ಸರಕಾರವು ಗುರಿಯಾಗಿದೆ.
ಅಷ್ಟೇ ಅಲ್ಲ, ಇಡೀ ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ರೀತಿಯ ಲೋಪಗಳನ್ನೆಸಗಿರುವ ಆರೋಪಕ್ಕೆ ಗುರಿಯಾಗಿರುವ ವೈದ್ಯಕೀಯ ಶಿಕ್ಷಣ ಇಲಾಖೆಯು ಚೀನಾದ ಕಂಪೆನಿಯ ಏಜೆನ್ಸಿಗೆ ಉಪಕರಣಗಳ ಸರಬರಾಜು ಮತ್ತು ಅಳವಡಿಸಲು ಲೆಟರ್ ಆಫ್ ಕ್ರೆಡಿಟ್ ಪತ್ರವನ್ನೂ ತೆರೆಮರೆಯಲ್ಲಿ ನೀಡಿದೆ ಎಂದು ಗೊತ್ತಾಗಿದೆ. ಈ ಮೂಲಕ ರಾಜ್ಯದ ರೋಗಿಗಳ ದತ್ತಾಂಶಗಳನ್ನೂ ಚೀನಾ ಕಂಪೆನಿಗೆ ತಲುಪಿಸಿದಂತಾಗಿದೆ.
ಅದೇ ರೀತಿ ಟೆಂಡರ್ ಸಕ್ಷಮ ಪ್ರಾಧಿಕಾರದ ಅಧ್ಯಕ್ಷರು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಗಿರೀಶ್ ಅವರ ನಿವೃತ್ತಿಗೆ ಒಂದು ತಿಂಗಳು ಬಾಕಿ ಇರುವಾಗಲೇ ಟೆಂಡರ್ ಪ್ರಕ್ರಿಯೆಯನ್ನು ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಿಯಮಗಳ ಪ್ರಕಾರ ಟೆಂಡರ್ ಪ್ರಕ್ರಿಯೆ ನಡೆಸಿದರೂ ಈ ಬಗ್ಗೆ ಅಂತಿಮ ನಿರ್ಧಾರಗಳನ್ನು ಪ್ರಕಟಿಸಬಾರದು. ಆದರೂ ಚೀನಾದ ಶಾಂಘೈ ಯುನೈಟೆಡ್ ಇಮೇಜಿಂಗ್ ಕಂಪೆನಿ ಏಜೆನ್ಸಿಗೆ ಲೆಟರ್ ಆಫ್ ಕ್ರೆಡಿಟ್ ಪತ್ರ ನೀಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೋವಿಡ್ ಮೊದಲ ಮತ್ತು ಎರಡನೇ ಅಲೆ ವೇಳೆಯಲ್ಲಿ ಚೀನಾ ಕಂಪೆನಿಗಳು ಉತ್ಪಾದಿಸಿರುವ ಎಲ್ಲಾ ರೀತಿಯ ಉಪಕರಣಗಳನ್ನು ನಿರ್ಬಂಧಿಸಿ ಸುತ್ತೋಲೆ ಹೊರಡಿಸಿತ್ತು. ಒಂದೊಮ್ಮೆ ಚೀನಾದ ಕಂಪೆನಿಗಳ ಏಜೆನ್ಸಿಗಳು ಟೆಂಡರ್ನಲ್ಲಿ ಭಾಗವಹಿಸುವುದಿದ್ದರೆ ಅದಕ್ಕೆ ಮುನ್ನ ಭಾರತ ಸರಕಾರದ ಅನುಮತಿ ಪತ್ರವನ್ನು ಪಡೆದಿರಬೇಕು ಎಂದು ಕೇಂದ್ರದ ಹಣಕಾಸು ಸಚಿವಾಲಯವು ಮಾರ್ಗಸೂಚಿ ಹೊರಡಿಸಿತ್ತು.
ಆದರೆ, ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯು ಕರೆದಿದ್ದ ಟೆಂಡರ್ನಲ್ಲಿ ಚೀನಾ ಕಂಪೆನಿ ಪರವಾಗಿ ಭಾಗವಹಿಸಿದ್ದ ಬೆಂಗಳೂರಿನ ಏಜೆನ್ಸಿಯೊಂದು ಭಾರತ ಸರಕಾರದ ಯಾವುದೇ ಅನುಮತಿ ಪತ್ರವನ್ನು ಪಡೆದಿರಲಿಲ್ಲ ಎಂಬುದು ತಿಳಿದು ಬಂದಿದೆ. ಇದನ್ನು ಪರಿಶೀಲಿಸದೆಯೇ ವೈದ್ಯಕೀಯ ಶಿಕ್ಷಣ ಇಲಾಖೆಯು ಈ ಏಜೆನ್ಸಿಗೆ ಟೆಂಡರ್ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಭಾರತ ಸರಕಾರದ ಸುತ್ತೋಲೆಯನ್ನು ನೇರಾನೇರ ಉಲ್ಲಂಘಿಸಿದೆ ಎಂಬ ಆಪಾದನೆ ಕೇಳಿ ಬಂದಿದೆ.
ಇದಷ್ಟೇ ಅಲ್ಲ, ಇಡೀ ಟೆಂಡರ್ ಪ್ರಕ್ರಿಯೆಯು ದೋಷಪೂರಿತವಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದೆ ಉಲ್ಲಂಘನೆ ಮಾಡಲಾಗಿದೆಯಲ್ಲದೆ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ನೇಮಕವಾಗಿರುವ ತಾಂತ್ರಿಕ ಪರಿಣಿತರ ಗುಂಪು ಪಕ್ಷಪಾತಿಯಾಗಿದೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿದೆ. ಈ ಸಂಬಂಧ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಭಾರತ ಸರಕಾರದ ಆರ್ಥಿಕ ಸಚಿವಾಲಯದ ಮೆಟ್ಟಿಲು ಹತ್ತಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ರೀತಿಯ ಉಲ್ಲಂಘನೆಗಳು, ದೋಷಪೂರಿತವಾಗಿರುವ ಕುರಿತಂತೆ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಕಂಪೆನಿಯು ಕೇಂದ್ರ ಸರಕಾರದ ಹಣಕಾಸು ಸಚಿವಾಲಯಕ್ಕೆ ದೂರು ಸಲ್ಲಿಸಿತ್ತು. ಈ ದೂರನ್ನು ಪರಿಶೀಲಿಸಿರುವ ಕೇಂದ್ರ ಸರಕಾರದ ಹಣಕಾಸು ಸಚಿವಾಲಯವು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರಿಗೆ 2022ರ ಮಾರ್ಚ್ 23ರಂದು ಪತ್ರ ಬರೆದಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಕೇಂದ್ರ ಸರಕಾರವು ಬರೆದಿರುವ ಪತ್ರ ಮತ್ತು ಫಿಲಿಫ್ಸ್ ಕಂಪನಿ ಸಲ್ಲಿಸಿರುವ ಆಕ್ಷೇಪಣೆಗಳ ವಿವರಗಳು ‘the-file.in’ಗೆ ಲಭ್ಯವಾಗಿದೆ.
128 ಸ್ಲೈಸ್ ಸಿಟಿ ಸ್ಕಾನರ್ ಉಪಕರಣಗಳ ಖರೀದಿ ಸಂಬಂಧದ ಟೆಂಡರ್ನಲ್ಲಿ ಫಿಲಿಪ್ಸ್ ಇಂಡಿಯಾ ಲಿಮಿಟೆಡ್, ವಿಪ್ರೋ ಜನರಲ್ ಎಲೆಕ್ಟ್ರಿಕ್ ಮತ್ತು ಚೀನಾ ಶಾಂಘೈ ಯುನೈಟೆಡ್ ಇಮೇಜಿಂಗ್ ಕಂಪೆನಿಯ ಏಜೆನ್ಸಿಯಾದ ಫೋರ್ಹೇಸ್ ಭಾಗವಹಿಸಿತ್ತು. ಎಂಆರ್ಐ ಉಪಕರಣ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಮತ್ತು ಫೋರ್ಹೆಸ್ ಭಾಗವಹಿಸಿತ್ತು ಎಂದು ತಿಳಿದು ಬಂದಿದೆ.
ಟೆಂಡರ್ಗೆ ಅನುಮತಿಯೇ ಇರಲಿಲ್ಲ: ಸಿಟಿ ಸ್ಕಾನ್ ಮತ್ತು ಎಂಆರ್ಐ ಉಪಕರಣಗಳನ್ನು ಖರೀದಿಸುವ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆಸಲು ಮುಂದಾಗಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸರಕಾರವು ಆರಂಭದಲ್ಲಿ ಅನುಮತಿಯನ್ನೇ ನೀಡಿರಲಿಲ್ಲ ಎಂದು ಗೊತ್ತಾಗಿದೆ. ಆದರೂ ಇಲಾಖೆಯು ಎರಡು ಬಾರಿ ಟೆಂಡರ್ ಕರೆದಿತ್ತು. ಟೆಂಡರ್ನಲ್ಲಿ ಪಾರದರ್ಶಕತೆ ಇರಲಿಲ್ಲ ಎಂದು ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಕಾನೂನು ತಿಳಿವಳಿಕೆ ನೋಟೀಸ್ ಜಾರಿಗೊಳಿಸಿದ ನಂತರ ಇಲಾಖೆಯು ಟೆಂಡರ್ನ್ನು ರದ್ದುಗೊಳಿಸಿತ್ತು. ಇದಾದ ನಂತರ 2022ರ ಫೆಬ್ರುವರಿಯಲ್ಲಿ ಮೂರನೇ ಬಾರಿಗೆ ಟೆಂಡರ್ ಕರೆದಿದೆ ಎಂದು ತಿಳಿದು ಬಂದಿದೆ.
ಫಿಲಿಪ್ಸ್ ಇಂಡಿಯಾ ಲಿಮಿಟೆಡ್ನ ಆಕ್ಷೇಪಗಳೇನು?: ಟೆಂಡರ್ ಪ್ರಕ್ರಿಯೆ ಸಂಪೂರ್ಣವಾಗಿ ದೋಷಪೂರಿತವಾಗಿದೆ. ಬಿಡ್ದಾರರಾದ ಫೋರ್ಹೆಸ್ ಹೆಲ್ತ್ ಕೇರ್ ಸಿಟಿ ಸ್ಕಾನರ್ ಉಪಕರಣಗಳನ್ನು ಚೀನಾದಿಂದ ತರಿಸಿಕೊಳ್ಳುತ್ತಿದೆ ಮತ್ತು ಉಪಕರಣಗಳ ಪ್ರಾತ್ಯಕ್ಷಿಕೆ ನೀಡದೇ ಇದ್ದರೂ ವಾಣಿಜ್ಯ ಬಿಡ್ಗೆ ಅರ್ಹಗೊಳಿಸಲಾಗಿದೆ ಎಂದು ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಅಕ್ಷೇಪ ಎತ್ತಿದೆ.
ಸಿಟಿ ಸ್ಕಾನರ್ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಹಿಂದಿನ ಟೆಂಡರ್ ಪ್ರಕ್ರಿಯೆಗಳು ದೋಷಪೂರಿತವಾಗಿವೆ ಎಂದಿರುವ ಫಿಲಿಪ್ಸ್ ಇಂಡಿಯಾ ಲಿಮಿಟೆಡ್, ಟೆಂಡರ್ ಪ್ರಕ್ರಿಯೆಯಲ್ಲಿನ ದೋಷಗಳಿಂದಾಗಿ ಕಂಪೆನಿಗಳ ಮಧ್ಯೆ ಅನಾವಶ್ಯಕ ವೈಷಮ್ಯಕ್ಕೆ ದಾರಿ ಮಾಡಿಕೊಟ್ಟಿದೆ ಮತ್ತು ಉಪಕರಣಗಳಿಗೆ ಸಂಬಂಧಿಸಿದ ದರಗಳು ಪ್ರತಿಸ್ಪರ್ಧಿ ಕಂಪೆನಿಗಳಿಗೆ ತಿಳಿಯುತ್ತಿದೆ. ಟೆಂಡರ್ ಪ್ರಕ್ರಿಯೆಯಗಳನ್ನು ಕ್ರಮಬದ್ಧವಾಗಿ ಮೌಲ್ಯಮಾಪನ ಮಾಡುತ್ತಿಲ್ಲ ಎಂದು ದೂರಿದೆ.
2022ರ ಫೆ.22ರಂದು ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಕಂಪೆನಿಯು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಇ-ಮೈಲ್ ಕಳಿಸಿತ್ತು. ಸಿಟಿ ಸ್ಕ್ಯಾನರ್ ಉಪಕರಣಗಳ ಪ್ರಾತ್ಯಕ್ಷಿಕೆ ನೀಡಲು ಅವಕಾಶ ಕೋರಿತ್ತು. ಆದರೆ ಈ ಬಗ್ಗೆ ಇಲಾಖೆಯು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಕಂಪೆನಿಯು ಫೆ.25 ಮತ್ತು 28ರಂದು ಇ ಮೈಲ್ ಕಳಿಸಿತ್ತು. ಆದರೆ ಮಾರ್ಚ್ 9ರವರೆಗೆ ಇಲಾಖೆಯು ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ ಎಂದು ಗೊತ್ತಾಗಿದೆ.
ಮೊದಲ ಬಾರಿ ಕರೆದಿದ್ದ ೆಂಡರ್ನಲ್ಲಿ ಚೀನಾದ ಶಾಂಘೈ ಯುನೈಟೈಡ್ ಇಮೇಜಿಂಗ್ ಕಂಪೆನಿಯ ಏಜೆನ್ಸಿಯಾಗಿರುವ ಫೋರ್ಹೇಸ್ ಹೆಲ್ತ್ಕೇರ್ ಎಲ್ಎಲ್ಪಿಯು ಸಿಂಗಲ್ ಬಿಡ್ ಆಗಿತ್ತು. ಟೆಂಡರ್ ನಿಯಮಾವಳಿಗಳ ಪ್ರಕಾರ ಈ ಕಂಪೆನಿಯು ಅನರ್ಹಗೊಳ್ಳಬೇಕಿತ್ತು. ಆದರೂ ಅವರಿಗೆ ಟೆಂಡರ್ ನೀಡಲಾಗಿದೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಗಮನ ಸೆಳೆದಾಗ ಫೋರ್ಹೇಸ್ ಹೆಲ್ತ್ಕೇರ್ಗೆ ನೀಡಿದ್ದ ಟೆಂಡರ್ನ್ನು ಹಿಂಪಡೆಯಲಾಗಿತ್ತು ಎಂದು ತಿಳಿದು ಬಂದಿದೆ.
ಇದಾದ ನಂತರ ವೈದ್ಯಕೀಯ ಶಿಕ್ಷಣ ಇಲಾಖೆಯು ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಕೆಟಿಪಿಪಿ ಕಾಯ್ದೆಯ ಟೆಂಡರ್ನಿಂದ ವಿನಾಯಿತಿ ಪಡೆದು 4(ಎ) ದರ ಪಟ್ಟಿ ಆಹ್ವಾನಿಸಿತ್ತು. ಯಾವುದೇ ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡದೆಯೇ ವಾರಾಂತ್ಯದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ದರಪಟ್ಟಿ ಆಹ್ವಾನಿಸಿತ್ತು. ಇದರ ನಂತರ ಸಂಬಂಧಿತ ಕಂಪೆನಿಗೆ ಖರೀದಿ ಆದೇಶ ನೀಡಲಾಗಿತ್ತೇ ಎಂಬುದು ತಿಳಿದಿಲ್ಲ ಎಂದು ಕಂಪೆನಿಯು ಹೇಳಿದೆ.
ಎರಡನೇ ಬಾರಿ ಆಹ್ವಾನಿಸಿದ್ದ ಟೆಂಡರ್ನಲ್ಲಿ ನಮ್ಮ ಬಿಡ್ನ್ನು ಯಾವುದೇ ಕಾರಣ ನೀಡದೆಯೇ ತಿರಸ್ಕರಿಸಿತ್ತು. ನಮ್ಮ ಉಪಕರಣಗಳ ಪ್ರಾತ್ಯಕ್ಷಿಕೆಯನ್ನು ನೋಡದೆಯೇ ಮತ್ತು ನಮ್ಮ ಸ್ಪಷ್ಟೀಕರಣವನ್ನು ಪಡೆಯದೇ ತಿರಸ್ಕರಿಸಲಾಗಿದೆ ಎಂದು ಫಿಲಿಪ್ಸ್ ಇಂಡಿಾ ಲಿಮಿಟೆಡ್ ದೂರಿದೆ.
ಟೆಂಡರ್ ಪ್ರಕ್ರಿಯೆಯಲ್ಲಿನ ದೋಷಗಳ ಬಗ್ಗೆ ಇ-ಮೇಲ್ ಮೂಲಕ ತಿಳಿಸಿದ್ದರೂ ಅವುಗಳನ್ನು ನಿರ್ಲಕ್ಷಿಸಿ ಫೋರ್ಹೇಸ್ ಹೆಲ್ತ್ ಕೇರ್ಗೆ ಟೆಂಡರ್ ನೀಡಲಾಗಿದೆ ಎಂದು ನಾವು ಭಾವಿಸಿದ್ದೇವೆ. ಎಂಆರ್ಐ ಉಪಕರಣಗಳನ್ನು ತಾಂತ್ರಿಕ ಮೌಲ್ಯಮಾಪನ ನಡೆಸಲು ಏಮ್ಸ್, ನಿಮ್ಹಾನ್ಸ್ನ, ಧಾರವಾಡದ ಡಿಮ್ಹಾನ್ಸ್ನ ವಿಕಿರಣ ತಜ್ಞರು, ಮನೋ ವಿಶ್ಲೇಷಕರನ್ನೊಳಗೊಂಡ ಪರಿಣಿತರ ತಂಡವನ್ನು ರಚಿಸಬೇಕು. ಏಕೆಂದರೆ ಈಗಿರುವ ತಾಂತ್ರಿಕ ಪರಿಣಿತರ ತಂಡವು ಪಕ್ಷಪಾತಿಯಾಗಿದೆ ಎಂದು ದೂರಿನಲ್ಲಿ ವಿವರಿಸಿದೆ.
ಸಿಟಿ ಸ್ಕಾನರ್ ಉಪಕರಣಗಳನ್ನು ವಿಪ್ರೋ, ಸಿಮೆನ್ಸ್, ವಿಪ್ರೋ ಜನರಲ್ ಇಲೆಕ್ಟ್ರಿಕ್ ಫಿಲಿಪ್ಸ್ ಇಂಡಿಯಾ ಲಿಮಿಟೆಡ್, ಇಟಾಚಿ, ತೊಷಿಬಾ ಇಷ್ಟು ಕಂಪೆನಿಗಳು ಉತ್ಪಾದನೆ ಮಾಡುತ್ತಿವೆ. ಇದರಲ್ಲಿ ಇಟಾಚಿ ಮತ್ತು ತೊಷಿಬಾ ಜಪಾನ್ಗೆ ಮತ್ತು ಸಿಮೆನ್ಸ್ ಕಂಪೆನಿಯು ಜರ್ಮನಿಗೆ ಸೇರಿದೆ. ಫಿಲಿಪ್ಸ್ ಕಂಪೆನಿಯು ನೆದರ್ಲ್ಯಾಂಡ್ ಮೂಲವಾಗಿದ್ದರೆ ವಿಪ್ರೋ ಜನರಲ್ ಇಲೆಕ್ಟ್ರಿಕ್ ಅಮೇರಿಕ ಮೂಲದ್ದು. ಈ ಯಾವ ಕಂಪೆನಿಗಳಿಗೆ ಮಾನ್ಯತೆ ನೀಡದೆಯೇ ಚೀನಾದ ಶಾಂಘೈ ಯುನೈಟೆಡ್ ಇಮೇಜಿಂಗ್ ಕಂಪೆನಿಯ ಉಪಕರಣಗಳಿಗೆ ಮಣೆ ಹಾಕಿರುವುದು ಸರಿಯಲ್ಲ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಸರಕಾರದ ಸಂಗ್ರಹಣೆಯಲ್ಲಿ ಅಥವಾ ಇಂಧನ, ರೈಲು ಮತ್ತು ಟೆಲಿಕಾಂ ಯೋಜನೆಗಳಲ್ಲಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ತಡೆಯಲು ಭಾರತ ಸರಕಾರ ಈ ಕ್ರಮ ಕೈಗೊಂಡಿದ್ದು, ಸ್ಪರ್ಧಾತ್ಮಕ ಪ್ರಾಧಿಕಾರಗಳಲ್ಲಿ ದಾಖಲಾತಿ ಮಾಡಿಕೊಂಡಿರುವ ಗಡಿ ದೇಶಗಳ ಕಂಪೆನಿಗಳು ಮಾತ್ರ ಬಿಡ್ಡಿಂಗ್ನಲ್ಲಿ ಭಾಗವಹಿಸಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯವು ಹೇಳಿತ್ತು.
ಚೀನಾ ದೇಶದ ಕಂಪೆನಿಗಳು ಭದ್ರತಾ ಅನುಮತಿ ಪಡೆಯದೆ ಭಾರತದ ಇಂಧನ, ರೈಲು ಮತ್ತು ಟೆಲಿಕಾಂ ಪ್ರಾಜೆಕ್ಟ್ಗಳ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಕೈಗಾರಿಕೆಗಳ ಮತ್ತು ಆಂತರಿಕ ವ್ಯಾಪಾರದ ಅಭಿವೃದ್ಧಿ ಇಲಾಖೆ ರಚಿಸಿರುವ ದಾಖಲಾತಿ ಸಮಿತಿಯು ಇದರ ಸ್ಮರ್ಧಾತ್ಮಕ ಪ್ರಾಧಿಕಾರವಾಗಿರುತ್ತದೆ. ಭಾರತದ ಜೊತೆ ಗಡಿಯನ್ನು ಹಂಚಿಕೊಂಡಿರುವ ದೇಶಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಸೂಚಿಸಿದ್ದನ್ನು ಸ್ಮರಿಸಬಹುದು.