'ಸಾವರ್ಕರ್ ಕಠೋರ ಜಾತಿವಾದಿಯಾಗಿದ್ದರು': ಹಿಂದುತ್ವದ ಹಳೆಯ ದಾಖಲೆಗಳಿಂದ ಬಹಿರಂಗ
ಸಾವರ್ಕರ್ ಪುನರ್ವಸತಿ ಯೋಜನೆಯು ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿದೆ. ‘‘ಜಾತೀಯತೆಯ ಕ್ರೌರ್ಯ, ಅಸ್ಪಶ್ಯತೆ ಮತ್ತು ಮಹಿಳೆಯರಿಗೆ ಅನ್ಯಾಯ ಮುಂತಾದ ಸಾಮಾಜಿಕ ಅನಿಷ್ಟಗಳು ಇರದ ದೇಶವೊಂದರ ಕಲ್ಪನೆಯನ್ನು ಅವರು ಹೊಂದಿದ್ದರು. ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಒಡನಾಟದ ಕಲ್ಪನೆಯ ಆಧಾರದಲ್ಲಿ ಜಾತಿರಹಿತ ಸಮಾಜವೊಂದನ್ನು ಅವರು ಪ್ರತಿಪಾದಿಸಿದ್ದರು. ಜಾತಿ ಪದ್ಧತಿಯ ವೈವಿಧ್ಯತೆಯನ್ನು ಬೇರುಸಹಿತ ಕಿತ್ತೊಗೆಯಲು ಮತ್ತು ದಲಿತರು ಘನತೆ ಮತ್ತು ನೆಮ್ಮದಿಯಿಂದ ಬದುಕಬಹುದಾದ ಹಿಂದೂ ಏಕತೆಯ ಆಧಾರದಲ್ಲಿ ದೇಶವೊಂದನ್ನು ನಿರ್ಮಿಸಲು ಅವರು ಬಯಸಿದ್ದರು’’ ಎಂಬುದಾಗಿ ಹೇಳಿಕೊಳ್ಳಲು ಸಾವರ್ಕರ್‌ವಾದಿಗಳು ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಆ ಪೈಕಿ ಇತ್ತೀಚಿನ ಪ್ರಯತ್ನ, 28-02-2022ರ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ- ‘‘ಹೌ ಸಾವರ್ಕರ್ ಫೈಟ್ ಫಾರ್ ಎ ಕಾಸ್ಟ್‌ಲೆಸ್ ಸೊಸೈಟಿ’’ (ಜಾತಿರಹಿತ ಸಮಾಜಕ್ಕಾಗಿ ಸಾವರ್ಕರ್ ಹೇಗೆ ಹೋರಾಡಿದರು). ‘‘ಮನುಸ್ಮತಿ ಮುಂತಾದ ಜಾತಿಯನ್ನು ಪ್ರತಿಪಾದಿಸುವ ಪುರಾಣಗಳ ವಿರುದ್ಧವೂ ಅವರು ಮಾತನಾಡಿದ್ದರು. ಸಾವರ್ಕರ್ ಪ್ರಕಾರ, ಈ ಪುರಾಣಗಳು ಅಧಿಕಾರದಲ್ಲಿರುವವರ ಕೈಯಲ್ಲಿರುವ ಉಪಕರಣಗಳು ಹಾಗೂ ಸಾಮಾಜಿಕ ರಚನೆಯನ್ನು ನಿಯಂತ್ರಿಸಲು ಮತ್ತು ಅವರ ಶ್ರೇಷ್ಠತೆಯನ್ನು ಸಾಧಿಸಲು ಅವುಗಳನ್ನು ಬಳಸಲಾಗುತ್ತದೆ’’ ಎಂಬುದಾಗಿಯೂ ಹೇಳಿಕೊಳ್ಳಲಾಗುತ್ತಿದೆ.
ಹಿಂದೂ ಮಹಾಸಭಾದ ಸಂಗ್ರಹದಲ್ಲಿರುವ ಸಾವರ್ಕರ್‌ರ ಬರಹಗಳು ಮತ್ತು ಕೆಲಸಗಳ ದಾಖಲೆಗಳೊಂದಿಗೆ ಈ ಹೇಳಿಕೆಗಳನ್ನು ಹೋಲಿಸೋಣ. ಹಿಂದುತ್ವದ ಓರ್ವ ಪ್ರವಾದಿಯಾಗಿ ಹಾಗೂ ಇದೇ ಹೆಸರಿನ ಪುಸ್ತಕದ ಲೇಖಕರಾಗಿ ಸಾವರ್ಕರ್ 1923ರಲ್ಲಿ, ಹಿಂದೂ ಸಮಾಜದಲ್ಲಿನ ಜಾತೀಯತೆಯನ್ನು ಸಮರ್ಥಿಸಿಕೊಂಡಿದ್ದರು. ಅದನ್ನು (ಜಾತೀಯತೆಯನ್ನು) ದೇಶವೊಂದರ ನಿರ್ಮಾಣಕ್ಕೆ ಅಗತ್ಯವಾದ ಸಹಜ ಅಂಶ ಎಂಬುದಾಗಿ ಪರಿಗಣಿಸಿದ್ದರು. ‘ಇನ್‌ಸ್ಟಿಟ್ಯೂಶನ್ಸ್ ಇನ್ ಫೇವರ್ ಆಫ್ ನ್ಯಾಶನಾಲಿಟಿ’ (ರಾಷ್ಟ್ರೀಯತೆಗೆ ಪೂರಕವಾಗಿರುವ ವ್ಯವಸ್ಥೆಗಳು) ಎಂಬ ಅಧ್ಯಾಯದಲ್ಲಿ, ಜಾತೀಯತೆಯ ಬಗ್ಗೆ ಬರೆಯುತ್ತಾ, ಜಾತಿ ವ್ಯವಸ್ಥೆಯು ಹಿಂದೂ ದೇಶವೊಂದನ್ನು ಗುರುತಿಸುವ ವಿಶಿಷ್ಟ ವಿಧಾನ ಎಂಬುದಾಗಿ ಘೋಷಿಸಿದ್ದಾರೆ.
‘‘ಬೌದ್ಧ ಧರ್ಮ ಪ್ರಭಾವಿಯಾಗಿದ್ದಾಗಲೂ ನಾಲ್ಕು ವರ್ಣಗಳ ವ್ಯವಸ್ಥೆಯನ್ನು ಅಳಿಸಿಹಾಕಲು ಸಾಧ್ಯವಾಗಲಿಲ್ಲ. ಅದರ ಜನಪ್ರಿಯತೆ ಯಾವ ಪ್ರಮಾಣದಲ್ಲಿ ಹೆಚ್ಚಿತೆಂದರೆ, ವರ್ಣಾಶ್ರಮ ವ್ಯವಸ್ಥೆಯನ್ನು ಕಾಪಾಡಿದವರು ಎಂಬುದಾಗಿ ಕರೆಯಲ್ಪಡುವುದನ್ನು ರಾಜರು ಮತ್ತು ಚಕ್ರವರ್ತಿಗಳು ಹೆಗ್ಗಳಿಕೆ ಎಂಬುದಾಗಿ ಪರಿಗಣಿಸಿದರು. ಈ ವ್ಯವಸ್ಥೆಯ ಪರವಾಗಿ ಒಲವು ಎಷ್ಟು ಬಲವಾಗಿ ಬೆಳೆಯಿತೆಂದರೆ, ನಮ್ಮ ರಾಷ್ಟ್ರೀಯತೆಯು ಬಹುತೇಕ ಇದರೊಂದಿಗೆ ಗುರುತಿಸಲ್ಪಡುತ್ತಿತ್ತು’’ ಎಂಬುದಾಗಿ ಅವರು ಬರೆದಿದ್ದಾರೆ.
ಜಾತೀಯತೆಯು ಹಿಂದೂ ದೇಶವೊಂದರ ಬೇರ್ಪಡಿಸಲಾಗದ ಘಟಕವಾಗಿದೆ ಎಂಬುದಾಗಿ ಪ್ರತಿಪಾದಿಸಿರುವ ಸಾವರ್ಕರ್, ಒಬ್ಬರನ್ನು (ಇವರು ಯಾರೆಂದು ಅವರು ಹೇಳಿಲ್ಲ) ಉಲ್ಲೇಖಿಸಿ ಹೀಗೆ ಹೇಳುತ್ತಾರೆ: ‘‘ನಾಲ್ಕು ವರ್ಣಗಳು ಇರದ ನೆಲವನ್ನು ಮ್ಲೇಚ್ಛ ದೇಶ ಎಂಬುದಾಗಿ ಪರಿಗಣಿಸಬೇಕು. ಇಂಥ ನೆಲದಿಂದ ಆರ್ಯಾವರ್ತವು ದೂರದಲ್ಲಿದೆ’’.
ವಾಸ್ತವವಾಗಿ, ಜನಾಂಗೀಯತೆಯ ಆಧಾರದಲ್ಲಿ ಹಿಂದೂ ದೇಶವೊಂದನ್ನು ಕಲ್ಪಿಸುವ ಪ್ರಕ್ರಿಯೆಯ ಸಹಜ ಫಲಿತಾಂಶವೇ ಜಾತೀಯತೆಯ ಸಮರ್ಥನೆ. ಹಿಂದೂ ಸಮಾಜದಲ್ಲಿ ರಕ್ತದ ಮುಕ್ತ ಸಂಚಾರವನ್ನು ಜಾತೀಯತೆಯು ತಡೆದಿದೆ ಎಂಬ ಟೀಕೆಯನ್ನು ನಿರಾಕರಿಸುತ್ತಾ, ಅವರೊಂದು ಆಸಕ್ತಿದಾಯಕ ವಾದವನ್ನು ಮಂಡಿಸುತ್ತಾರೆ ಹಾಗೂ ಆ ಮೂಲಕ ಜನಾಂಗೀಯತೆ ಮತ್ತು ಜಾತೀಯತೆಯು ಪರಸ್ಪರ ಪೂರಕ ಎಂದು ಹೇಳುತ್ತಾರೆ. ಜಾತೀಯತೆಯಿಂದಾಗಿಯೇ ಹಿಂದೂ ಜನಾಂಗದ ಶುದ್ಧತೆ ಉಳಿದಿದೆ ಎಂಬುದಾಗಿ ಅವರು ವಾದಿಸುತ್ತಾರೆ.
ಅವರು ಹೇಳುತ್ತಾರೆ: ‘‘ಸಮೃದ್ಧಿ ಹೊಂದಿರುವವರು ಮತ್ತು ಹುಟ್ಟಿನಿಂದಲೇ ಶ್ರೇಷ್ಠವಾಗಿರುವವರು ಬಡತನಕ್ಕೆ ಒಳಗಾಗದಂತೆ ಮತ್ತು ಕೆಳ ದರ್ಜೆಗೆ ಇಳಿಯದಂತೆ ನೋಡಿಕೊಂಡು, ಬಂಜರಾಗಿರುವ ಮತ್ತು ಬಡವಾಗಿರುವವರನ್ನು ಸಮೃದ್ಧಗೊಳಿಸಲು ಮತ್ತು ಶ್ರೀಮಂತಗೊಳಿಸಲು ಎಲ್ಲವನ್ನೂ ಧಾರೆಯೆರೆಯಬೇಕು ಎಂಬ ತತ್ವವನ್ನು ನಮ್ಮ ಸಂತ ಮತ್ತು ದೇಶಭಕ್ತ ನೀತಿ ನಿರೂಪಕರು ಮತ್ತು ರಾಜರು ಸರಿಯಾಗಿಯೇ ನಂಬಿಕೊಂಡು ಬಂದಿದ್ದಾರೆ. ಇದೇ ತತ್ವಗಳ ಆಧಾರದಲ್ಲಿ, ಶ್ರೇಷ್ಠ ರಕ್ತವು ಅದು ಸಾಗಬೇಕಾದ ದಾರಿಯಲ್ಲೇ ಸಾಗುವಂತೆ ನಿಯಂತ್ರಿಸುವ ಕೆಲಸವನ್ನು ಜಾತೀಯತೆ ಮಾಡಿದೆ.’’
ಆಸಕ್ತಿಯ ವಿಷಯವೆಂದರೆ, ಜಾತೀಯತೆಯ ಪರವಾಗಿ ಬಲವಾಗಿ ನಿಂತಿರುವ ಸಾವರ್ಕರ್, ಹಿಂದೂ ಸಮಾಜದಲ್ಲಿರುವ ಅಸ್ಪಶ್ಯರ ಸ್ಥಾನವನ್ನು ಕಿರು ಅವಧಿಗೆ ಏರಿಸಬೇಕು ಎಂಬುದಾಗಿಯೂ ವಾದಿಸಿದ್ದಾರೆ. ಅಸ್ಪಶ್ಯತೆಯ ವಿರುದ್ಧ ಮತ್ತು ಹಿಂದೂ ದೇವಾಲಯಗಳಿಗೆ ಅಸ್ಪಶ್ಯರ ಪ್ರವೇಶದ ಪರವಾಗಿ ಅವರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇದನ್ನು ಅವರು ಸಮಾನತೆಯ ಮನೋಭಾವದಿಂದ ಮಾಡಿದ್ದಲ್ಲ. ಅಸ್ಪಶ್ಯರು ನಿರಂತರವಾಗಿ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಹಿನ್ನೆಲೆಯಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣಿಸಿದ್ದರಿಂದ ಎಚ್ಚೆತ್ತು ಅವರು ಈ ಕ್ರಮಕ್ಕೆ ಮುಂದಾಗಿದ್ದರು.
ಅವರನ್ನು ಅವರ್ಣೀಯರು ಎಂಬುದಾಗಿ ಪರಿಗಣಿಸುತ್ತಿರುವುದರಿಂದ 7 ಕೋಟಿಯಷ್ಟು ‘ಹಿಂದೂ ಜನ ಶಕ್ತಿ’ (ಅಂದಿನ ಭಾರತದಲ್ಲಿದ್ದ ಅವರ್ಣೀಯರ ಸಂಖ್ಯೆ)ಯು ‘ನಮ್ಮ’ (ಉನ್ನತ ಜಾತಿಯ ಹಿಂದೂಗಳು) ಪರವಾಗಿ ನಿಲ್ಲುವುದಿಲ್ಲ ಎನ್ನುವುದನ್ನು ಸಾವರ್ಕರ್ ಒಪ್ಪಿಕೊಂಡಿದ್ದರು. ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧದ ಹೊಡೆದಾಟಗಳಲ್ಲಿ ಕಾಲಾಳುಗಳಾಗಿ ಈ ಅಸ್ಪಶ್ಯರ ದೈಹಿಕ ಶಕ್ತಿಯ ಅಗತ್ಯ ಹಿಂದೂ ರಾಷ್ಟ್ರೀಯವಾದಿಗಳಿಗೆ ತುಂಬಾ ಇದೆ ಎನ್ನುವುದನ್ನು ಸಾವರ್ಕರ್ ಅರಿತಿದ್ದರು. ಅಸ್ಪಶ್ಯರು ನಮ್ಮ ಪಕ್ಷದಲ್ಲಿ ಉಳಿಯದಿದ್ದರೆ, ಅವರು ಉನ್ನತ ಜಾತಿಯ ಹಿಂದೂಗಳಿಗೆ ಬೃಹತ್ ಬಿಕ್ಕಟ್ಟು ಸೃಷ್ಟಿಸುವ ಅಂಶವಾಗಲಿದ್ದಾರೆ ಎಂಬ ಎಚ್ಚ್ಚರಿಕೆಯನ್ನು ಸಾವರ್ಕರ್ ತನ್ನ ಅನುಯಾಯಿಗಳಿಗೆ ನೀಡಿದ್ದರು. ‘‘ಅವರು ಆಗ ನಮ್ಮ ಪ್ರಯೋಜನಕ್ಕೆ ಸಿಗುವುದಿಲ್ಲ ಮಾತ್ರವಲ್ಲ, ನಮ್ಮ ಮನೆಯನ್ನು ವಿಭಜಿಸುವ ಸುಲಭ ಸಲಕರಣೆಗಳಾಗುತ್ತಾರೆ ಹಾಗೂ ನಮಗೆ ಅಪಾರ ನಷ್ಟಕ್ಕೆ ಕಾರಣರಾಗುತ್ತಾರೆ’’ ಎಂದು ಅವರು ಹೇಳಿದ್ದರು.
‘ವಿನಾಯಕ ದಾಮೋದರ್ ಸಾವರ್ಕರ್ಸ್ ವರ್ಲ್‌ವಿಂಡ್ ಪ್ರೊಪಗಾಂಡ: ಎಕ್ಸ್ಟ್ರಾಸ್ ಫ್ರಮ್ ದ ಪ್ರೆಸಿಡೆಂಟ್ಸ್ ಡಯರಿ ಆಫ್ ಹಿಸ್ ಪ್ರೊಪಗಾಂಡಿಸ್ಟ್ ಟೂರ್ಸ್ ಇಂಟರ್‌ವ್ಯೆಸ್ ಫ್ರಮ್ ಡಿಸೆಂಬರ್ 1937 ಟು ಅಕ್ಟೋಬರ್ 1941’ ಎಂಬ ಹೆಸರಿನಲ್ಲಿ ಸಾವರ್ಕರ್‌ರ ಕಾರ್ಯದರ್ಶಿ ಎ.ಎಸ್. ಭಿಡೆ ಸಂಪಾದಿಸಿರುವ ಪುಸ್ತಕದಲ್ಲಿ, ಜಾತೀಯತೆಗೆ ಸಂಬಂಧಿಸಿ ಸಾವರ್ಕರ್‌ರ ನಂಬಿಕೆಗಳು ಮತ್ತು ಕೆಲಸಗಳ ವಿವರಗಳು ಲಭಿಸುತ್ತವೆ. ಇದು ಹಿಂದೂ ಮಹಾಸಭಾ ಕಾರ್ಯಕರ್ತರಿಗೆ ಅಧಿಕೃತ ಮಾರ್ಗದರ್ಶಿ ಪುಸ್ತಕವಾಗಿದೆ. ‘‘ಈ ಸುಧಾರಣಾ ಕೆಲಸಗಳನ್ನು ನಾನು ನನ್ನ ವೈಯಕ್ತಿಕ ನೆಲೆಯಲ್ಲಿ ಮಾಡುತ್ತೇನೆ. ಹಿಂದೂಮಹಾಸಭಾದ ಸಂವಿಧಾನವು ಅನುಮತಿ ನೀಡದ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಹಿಂದೂ ಮಹಾಸಭಾ ಸಂಘಟನೆಯನ್ನು ತೊಡಗಿಸಿಕೊಳ್ಳುವುದಿಲ್ಲ’’ ಎಂಬುದಾಗಿ ಅವರು ಶೀಘ್ರವೇ ಘೋಷಿಸಿದ್ದಾರೆ ಎಂದು ಈ ಪುಸ್ತಕ ಹೇಳುತ್ತದೆ.
ಹಿಂದೂ ದೇವಾಲಯಗಳಿಗೆ ಅಸ್ಪಶ್ಯರ ಪ್ರವೇಶವನ್ನು ವಿರೋಧಿಸಿದ ಸನಾತನಿ ಹಿಂದೂಗಳಿಗೆ ಸಾವರ್ಕರ್ 1939ರಲ್ಲಿ ಈ ಭರವಸೆಯನ್ನು ನೀಡುತ್ತಾರೆ: ‘‘ ಈಗ ಚಾಲ್ತಿಯಲ್ಲಿರುವ ಪದ್ಧತಿಯಂತೆ, ಹಳೆಯ ದೇವಸ್ಥಾನಗಳಲ್ಲಿ ಹಿಂದೂಯೇತರರಿಗೆ ಎಲ್ಲಿಯವರೆಗೆ ಪ್ರವೇಶಿಸಲು ಅನುಮತಿ ಇದೆಯೋ, ಅದಕ್ಕಿಂತ ಮುಂದಕ್ಕೆ ಹೋಗಲು ಅಸ್ಪಶ್ಯರಿಗೆ ಅವಕಾಶ ನೀಡುವ ಕಡ್ಡಾಯ ಕಾನೂನನ್ನು ಹಿಂದು ಮಹಾಸಭಾವು ಪರಿಚಯಿಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ’’.
1941 ಜೂನ್ 20ರಂದು, ಅಸ್ಪಶ್ಯರ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿ ಸನಾತನಿ ಹಿಂದೂಗಳ ಭಾವನೆಗಳನ್ನು ನಾನು ಘಾಸಿಗೊಳಿಸುವುದಿಲ್ಲ ಎಂಬ ಇನ್ನೊಂದು ವೈಯಕ್ತಿಕ ಭರವಸೆಯನ್ನು ಸಾವರ್ಕರ್ ನೀಡಿದರು. ಈ ಬಾರಿ, ಮಹಿಳಾ ವಿರೋಧಿ ಮತ್ತು ದಲಿತ ವಿರೋಧಿ ಹಿಂದೂ ವೈಯಕ್ತಿಕ ಕಾನೂನುಗಳನ್ನು ನಾನು ಮುಟ್ಟುವುದೇ ಇಲ್ಲ ಎಂಬ ಭರವಸೆಯನ್ನೂ ನೀಡಿದರು. ‘‘ಪ್ರಾಚೀನ ದೇವಸ್ಥಾನಗಳಿಗೆ ಅಸ್ಪಶ್ಯರ ಪ್ರವೇಶಕ್ಕೆ ಸಂಬಂಧಿಸಿದ ಯಾವುದೇ ಕಾನೂನುಗಳನ್ನು ಹಿಂದೂ ಮಹಾಸಭಾ ಬಲವಂತವಾಗಿ ಹೇರುವುದಿಲ್ಲ ಅಥವಾ ಆ ದೇವಸ್ಥಾನಗಳಲ್ಲಿ ಚಾಲ್ತಿಯಲ್ಲಿರುವ ಯಾವುದೇ ಪವಿತ್ರ ಪ್ರಾಚೀನ ಮತ್ತು ನೈತಿಕ ಸಂಪ್ರದಾಯ ಅಥವಾ ಪದ್ಧತಿಯನ್ನು ಕಾನೂನಿನ ವ್ಯಾಪ್ತಿಗೆ ಒಳಪಡಿಸುವುದಿಲ್ಲ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ಒಟ್ಟಾರೆಯಾಗಿ, ವೈಯಕ್ತಿಕ ಕಾನೂನಿಗೆ ಸಂಬಂಧಿಸಿದಂತೆ, ಸನಾತನಿ ಸಹೋದರರ ಮೇಲೆ ಸುಧಾರಣಾ ಕ್ರಮಗಳನ್ನು ಹೇರುವ ಯಾವುದೇ ಕಾನೂನಿಗೆ ಹಿಂದೂ ಮಹಾಸಭಾ ಬೆಂಬಲ ನೀಡುವುದಿಲ್ಲ’’ ಎಂಬುದಾಗಿ ಅವರು ಹೇಳಿದ್ದಾರೆ.
ಸಾವರ್ಕರ್ ತನ್ನ ಜೀವನದುದ್ದಕ್ಕೂ ಜಾತೀಯತೆಯ ಶ್ರೇಷ್ಠ ಪ್ರಚಾರಕನಾಗಿ ಮತು ಮನುಸ್ಮತಿಯ ಆರಾಧಕರಾಗಿಯೇ ಉಳಿದರು. ಜಾತೀಯತೆ ಮತ್ತು ಅಸ್ಪಶ್ಯತೆ ವ್ಯವಸ್ಥೆಗಳು ವಾಸ್ತವವಾಗಿ ಮನುಸ್ಮತಿಯ ಫಲಿತಾಂಶವಾಗಿತ್ತು. ಆದರೆ, ಸಾವರ್ಕರ್ ಮನುಸ್ಮತಿಯ ಬಗ್ಗೆ ಅಗಾಧ ಗೌರವ ಹೊಂದಿದ್ದರು. ಅದು ಈ ಕೆಳಗಿನ ಹೇಳಿಕೆಯಲ್ಲಿ ವ್ಯಕ್ತವಾಗುತ್ತದೆ:
‘‘ಮನುಸ್ಮತಿಯು ವೇದಗಳ ಬಳಿಕ ನಮ್ಮ ಹಿಂದೂ ದೇಶದ ಅತ್ಯಂತ ಪೂಜಾರ್ಹ ಧರ್ಮಗ್ರಂಥವಾಗಿದೆ. ಅದು ಪ್ರಾಚೀನ ಕಾಲದಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯಗಳು, ಯೋಜನೆ ಮತ್ತು ಅನುಷ್ಠಾನದ ಆಧಾರಸ್ತಂಭವಾಗಿತ್ತು. ಈ ಪುಸ್ತಕವು ಶತಮಾನಗಳಿಂದ ನಮ್ಮ ದೇಶದ ಆಧ್ಯಾತ್ಮಿಕ ಮತ್ತು ದೈವಿಕ ನಡೆಯನ್ನು ಕ್ರೋಢೀಕರಿಸಿದೆ. ಇಂದಿಗೂ, ಕೋಟ್ಯಂತರ ಹಿಂದೂಗಳು ತಮ್ಮ ಬದುಕಿನಲ್ಲಿ ಅನುಸರಿಸುವ ನಿಯಮಗಳು ಮನುಸ್ಮತಿಯನ್ನೇ ಆಧರಿಸಿವೆ. ಇಂದು ಮನುಸ್ಮತಿಯು ಹಿಂದೂ ಕಾನೂನಾಗಿದೆ. ಅದು ಮೂಲ ಕಾನೂನಾಗಿದೆ’’.
ದುರದೃಷ್ಟವಶಾತ್, ಸಾವರ್ಕರ್‌ರ ಅಸ್ಪಶ್ಯತೆ-ವಿರೋಧಿ ವ್ಯಕ್ತಿತ್ವವನ್ನು ಸಾಧಿಸಲು ಹೆಣಗಾಡುತ್ತಿರುವ ಸಾವರ್ಕರ್‌ವಾದಿಗಳು, ಇದಕ್ಕಾಗಿ 1933 ಫೆಬ್ರವರಿ 18 ರಂದು ಡಾ. ಅಂಬೇಡ್ಕರ್ ಅವರು ಸಾವರ್ಕರ್‌ಗೆ ಬರೆದ ಪತ್ರವನ್ನೂ ಬಳಸಿಕೊಳ್ಳಲು ಹಿಂಜರಿಯುವುದಿಲ್ಲ. ಈ ಪತ್ರವು ಅಸ್ಪಶ್ಯತೆ ವಿರುದ್ಧದ ಸಾವರ್ಕರ್‌ರ ಹೋರಾಟವನ್ನು ಸಾಬೀತುಪಡಿಸಿದೆ ಎಂದು ಅವರು ವಾದಿಸುತ್ತಾರೆ.
ಸಾವರ್ಕರ್ ಅನುಯಾಯಿಗಳ ಪ್ರಕಾರ, ಆ ಪತ್ರದ ಒಕ್ಕಣೆ ಹೀಗಿದೆ: ‘‘ಸಾಮಾಜಿಕ ಸುಧಾರಣೆ ಕ್ಷೇತ್ರದಲ್ಲಿ ನೀವು ಮಾಡುತ್ತಿರುವ ಕೆಲಸಕ್ಕೆ ಮೆಚ್ಚುಗೆ ಸೂಚಿಸಲು ನಾನು ಈ ಸಂದರ್ಭವನ್ನು ಬಳಸಿಕೊಳ್ಳಲು ಬಯಸುತ್ತೇನೆ. ಅಸ್ಪಶ್ಯರು ಹಿಂದೂ ಸಮಾಜದ ಭಾಗವಾಗಬೇಕಾದರೆ, ಅಸ್ಪಶ್ಯತೆಯನ್ನು ನಿವಾರಿಸಿದರೆ ಮಾತ್ರ ಸಾಕಾಗುವುದಿಲ್ಲ. ಅದಕ್ಕಾಗಿ ನೀವು ‘ಚತುರ್ವರ್ಣ’ವನ್ನೂ ನಾಶಪಡಿಸಬೇಕಾಗುತ್ತದೆ. ಇದನ್ನು ಅರ್ಥಮಾಡಿಕೊಂಡ ಕೆಲವೇ ಕೆಲವು ನಾಯಕರ ಪೈಕಿ ನೀವೂ ಒಬ್ಬರಾಗಿರುವುದಕ್ಕೆ ನಾನು ಸಂತೋಷಪಡುತ್ತೇನೆ’’.
ಆದರೆ, ದುರದೃಷ್ಟವಶಾತ್, ಡಾ. ಅಂಬೇಡ್ಕರ್ ಬರೆದ ಪತ್ರದಿಂದ ಕೆಲವೇ ವಾಕ್ಯಗಳನ್ನು ಹೆಕ್ಕಿ ತೆಗೆಯಲಾಗಿದೆ. ಅಸ್ಪಶ್ಯರ ಬಗ್ಗೆ ಸಾವರ್ಕರ್ ಹೊಂದಿರುವ ಕಾರ್ಯಸೂಚಿಗೆ ಸಂಬಂಧಿಸಿದ ಎಲ್ಲ ವಿಮರ್ಶಾತ್ಮಕ ಹೇಳಿಕೆಗಳನ್ನು ಕೈಬಿಡಲಾಗಿದೆ. ಪತ್ರದ ಪೂರ್ಣ ಒಕ್ಕಣೆಯನ್ನು ಇಲ್ಲಿ ನೀಡಲಾಗಿದೆ. ಅದು ಹೀಗಿದೆ:
‘‘ಕೋಟೆಯ ಮೇಲಿರುವ ದೇವಸ್ಥಾನವನ್ನು ಅಸ್ಪಶ್ಯರಿಗೆ ತೆರೆಯುವುದಕ್ಕಾಗಿ ರತ್ನಗಿರಿಗೆ ನನ್ನನ್ನು ಆಹ್ವಾನಿಸಿ ಪತ್ರ ಬರೆದಿರುವುದಕ್ಕಾಗಿ ಕೃತಜ್ಞತೆಗಳು. ಬೇರೆ ಕಾರ್ಯಕ್ರಮಗಳಿಂದಾಗಿ ನಿಮ್ಮ ಆಹ್ವಾನವನ್ನು ಸ್ವೀಕರಿಸಲು ಸಾಧ್ಯವಾಗದಿರುವುದಕ್ಕೆ ನನಗೆ ವಿಷಾದವಿದೆ. ಆದರೂ, ಸಾಮಾಜಿಕ ಸುಧಾರಣೆ ಕ್ಷೇತ್ರದಲ್ಲಿ ನೀವು ಮಾಡುತ್ತಿರುವ ಕೆಲಸಕ್ಕೆ ನನ್ನ ಮೆಚ್ಚುಗೆ ಸೂಚಿಸಲು ನಾನು ಈ ಅವಕಾಶವನು ಉಪಯೋಗಿಸಿಕೊಳ್ಳುತ್ತೇನೆ. ಈ ಅಸ್ಪಶ್ಯರ ಸಮಸ್ಯೆ ಎನ್ನುವುದು ಹಿಂದೂ ಸಮಾಜದ ಮರು ವಿಂಗಡಣೆಯ ಅಗತ್ಯದೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ ಎಂದು ನನಗನಿಸುತ್ತದೆ. ಅಸ್ಪಶ್ಯರು ಹಿಂದೂ ಸಮಾಜದ ಅವಿಭಾಜ್ಯ ಭಾಗವಾಗಬೇಕಾದರೆ, ಅಸ್ಪಶ್ಯತೆ ನಿವಾರಣೆ ಮಾತ್ರ ಸಾಕಾಗುವುದಿಲ್ಲ. ಅದಕ್ಕಾಗಿ ನೀವು ಚಾತುರ್ವರ್ಣ್ಯವನ್ನೂ ನಾಶಗೊಳಿಸಬೇಕು. ಅವರು ಹಿಂದೂ ಸಮಾಜದ ಅವಿಭಾಜ್ಯ ಭಾಗವಾಗದೆ ಹಿಂದೂ ಸಮಾಜಕ್ಕೆ ಅಂಟಿಕೊಂಡವರು ಮಾತ್ರ ಆಗಬೇಕಾದರೆ, ದೇವಸ್ಥಾನ ಪ್ರವೇಶಕ್ಕೆ ಮಾತ್ರ ಸಂಬಂಧಿಸಿದ ಅಸ್ಪಶ್ಯತೆ ಹಾಗೆಯೇ ಉಳಿಯಬಹುದಾಗಿದೆ. ಇದನ್ನು ಅರ್ಥ ಮಾಡಿಕೊಂಡ ಕೆಲವೇ ಕೆಲವರ ಪೈಕಿ ನೀವೊಬ್ಬರು ಎನ್ನುವುದಕ್ಕೆ ನನಗೆ ಸಂತೋಷವಿದೆ. ಆದರೆ ನೀವು ಈಗಲೂ ಚಾತುರ್ವರ್ಣ್ಯದ ಭಾಷೆಯನ್ನೇ ಬಳಸುತ್ತಿರುವುದು ದುರದೃಷ್ಟಕರ. ಆದರೆ, ಸಮಯ ಕಳೆದಂತೆ, ಈ ಅನಗತ್ಯ ಮತ್ತು ತುಂಟತನದ ಭಾಷೆಯನ್ನು ಕೈಬಿಡಲು ಬೇಕಾಗುವಷ್ಟು ಧೈರ್ಯ ನಿಮಗೆ ಬರುತ್ತದೆ ಎಂಬುದಾಗಿ ನಾನು ಆಶಿಸುತ್ತೇನೆ.
ವಾಸ್ತವವಾಗಿ, ಡಾ. ಅಂಬೇಡ್ಕರ್ 1940ರಲ್ಲಿ ಅಂತಿಮ ನಿರ್ಧಾರಕ್ಕೆ ಬಂದರು. ‘‘ಹಿಂದೂ ದೇಶ ಎನ್ನುವುದು ವಾಸ್ತವವಾದರೆ, ಅದು ಈ ದೇಶಕ್ಕೆ ಎದುರಾಗುವ ಅತಿ ದೊಡ್ಡ ವಿಪತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದು ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವಕ್ಕೆ ಎದುರಾಗುವ ಬೆದರಿಕೆಯಾಗಿದೆ. ಹಾಗಾಗಿ, ಅದು ಪ್ರಜಾಪ್ರಭುತ್ವಕ್ಕೆ ಹೊಂದಿಕೆಯಾಗುವುದಿಲ್ಲ. ಹಿಂದೂ ದೇಶವನ್ನು ಯಾವುದೇ ಬೆಲೆ ತೆತ್ತಾದರೂ ತಡೆಯಬೇಕು’’.