ಎ.8ರಿಂದ ಸಗ್ರಿ ದೇವಳದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ
ಉಡುಪಿ : ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.8ರಿಂದ 11ರವರೆಗೆ ನವನಿರ್ಮಿತ ಶ್ರೀನಾಗದೇವರ ಗುಡಿ ಸಮರ್ಪಣೆ, ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವವು ಪಾಡಿಗಾರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ದೇವಸ್ಥಾನದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ರಹ್ಮ ಕಲಶೋತ್ಸವ ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಕೆ.ರಘುಪತಿ ಭಟ್, ಪ್ರತಿದಿನ ನಡೆಯುವ ಧರ್ಮಸಭೆಗಳಲ್ಲಿ ಅನೇಕ ಮಠಾಧೀಶರು, ಮಂತ್ರಿಗಳು, ಜನಪ್ರತಿನಿಧಿಗಳು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿರುವರು. ಆ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಭಾಗವಹಿಸಿ ಕಲಾಪ್ರದರ್ಶನ ನೀಡ ಲಿದ್ದಾರೆ ಎಂದರು.
ಎ.7ರಂದು ಸಂಜೆ 5ಗಂಟೆಗೆ ಉಡುಪಿ ಕೃಷ್ಣ ಮಠದ ರಾಜಾಂಗಣದ ಬಳಿ ಯಿಂದ ಹೊರಡುವ ಹೊರೆಕಾಣಿಕೆ ಮೆರವಣಿಗೆಗೆ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಚಾಲನೆ ನೀಡಲಿರುವರು. ಎ.11ರಂದು ಬೆಳಗ್ಗೆ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ನಾಗ ದೇವರ ಗುಡಿಯಲ್ಲಿ ನಾಗದೇವರ ಪ್ರತಿಷ್ಠೆ ಬ್ರಹ್ಮಕಲಶೋತ್ಸವಗಳು ನಡೆಯಲಿವೆ. ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
ಅಂದು ರಾತ್ರಿ ಪುಷ್ಪಾಲಂಕೃತ ಮಂಟಪದಲ್ಲಿ ನಾಗಮಂಡಲೋತ್ಸವವು ನೆರೆವೇರಲಿದೆ. ಎ.9ರಂದು ಸಂಜೆ ನಡೆಯುವ ಧರ್ಮಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೆಂದ್ರ ಹೆಗ್ಗಡೆ ಭಾಗವಹಿಸಲಿರುವರು. 2.25ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ಗುಡಿಯನ್ನು ನಿರ್ಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಧರ್ಮದರ್ಶಿ ಸಗ್ರಿ ಗೋಪಾಲಕೃಷ್ಣ ಸಾಮಗ, ಪಾಡಿಗಾರು ಶ್ರೀನಿವಾಸ ತಂತ್ರಿ, ಗೋಪಾಲ್ ಜೋಯಿಸ್, ಸುಬ್ರಹ್ಮಣ್ಯ ಭಟ್, ಪ್ರದೀಪ್ ರಾವ್, ಅನಂತ ಸಾಮಗ ಉಪಸ್ಥಿತರಿದ್ದರು.