ಯಕ್ಷಗಾನದಲ್ಲಿ ಅಲ್ಲಾಹನ ಕುರಿತು ಅಪಹಾಸ್ಯ ಮಾಡಿದ ವಿಡಿಯೋ ವೈರಲ್: ಸ್ಪಷ್ಟನೆ ನೀಡಿದ ಪಾತ್ರಧಾರಿ ಹೇಳಿದ್ದೇನು?
ಉಡುಪಿ, ಎ.4: ಯಕ್ಷಗಾನ ಪ್ರದರ್ಶನದಲ್ಲಿ ಯಕ್ಷಗಾನ ಪಾತ್ರಧಾರಿಯೊಬ್ಬರು ಆಂಜನೇಯ ಸ್ವಾಮಿ ಹಾಗೂ ಅಲ್ಲಾಹನ ಕುರಿತು ಮಾಡಿರುವ ಹಾಸ್ಯದ ಹಳೆಯ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸಾಲಿಗ್ರಾಮ ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿಯಿಂದ ನರಸಿಂಹ ಸೋಮಯಾಜಿ ಇವರ ಹರಕೆ ಬಯಲಾಟ ‘ಶ್ರೀಶನೇಶ್ವರ ಮಹಾತ್ಮೆ’ ಪೌರಾಣಿಕ ಯಕ್ಷಗಾನ ಪ್ರದರ್ಶನವು ಕೆಲವು ವರ್ಷಗಳ ಹಿಂದೆ ಕೋಟ ಹಂದೆ ದೇವಸ್ಥಾನದಲ್ಲಿ ನಡೆದಿತ್ತು. ಈ ಯಕ್ಷಗಾನ ಪ್ರದರ್ಶನ ಸಂಪೂರ್ಣ ವಿಡಿಯೊ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಪ್ರಸಾರವಾಗಿತ್ತು. ಇದರಲ್ಲಿ ಹಿರಿಯ ಕಲಾವಿದ ಮಹಾಬಲೇಶ್ವರ ಭಟ್ ಕ್ಯಾದಗಿ ಮುಸ್ಲಿಮ್ ಪಾತ್ರವನ್ನು ಮಾಡಿದ್ದರು. ಅವರು ಈ ಪ್ರದರ್ಶನದಲ್ಲಿ ಆಂಜನೇಯ ಹಾಗೂ ಅಲ್ಲಾಹನ ಕುರಿತು ಮಾಡಿರುವ ಹಾಸ್ಯದ ವಿಡಿಯೋ ತುಣುಕೊಂದನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಲಾವಿದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೂಡ ಕೇಳಿಬರುತ್ತಿವೆ.
ಈ ಬಗ್ಗೆ 'ವಾರ್ತಾಭಾರತಿ'ಗೆ ಪ್ರತಿಕ್ರಿಯಿಸಿರುವ ಯಕ್ಷಗಾನ ಕಲಾವಿದ ಮಹಾಬಲೇಶ್ವರ ಭಟ್ ಕ್ಯಾದಗಿ, ಮೂರು ವರ್ಷಗಳ ಹಿಂದಿನ ಈ ವಿಡಿಯೋವನ್ನು ಈಗ ಹರಿಯಬಿಡಲಾಗಿದೆ. ಈ ವಿಚಾರ ನನ್ನ ಗಮನಕ್ಕೂ ಬಂದಿದೆ. ಶನೇಶ್ವರ ಮಹಾತ್ಮೆಯಲ್ಲಿ ಬರುವ ಮುಸ್ಲಿಮ್ ಪಾತ್ರವನ್ನು ನಾನು ಮಾಡಿದ್ದೆ. ನಿಜವಾಗಿ ಅದು ಮುಸ್ಲಿಮ್ ಪಾತ್ರ ಅಲ್ಲ. ಶನಿ ದೇವರು ಮುಸ್ಲಿಮ್ ಪಾತ್ರದಲ್ಲಿ ಹೋಗು ವುದಾಗಿದೆ’ ಎಂದು ಸ್ಪಷ್ಟಪಡಿಸಿದರು.
‘ಉದ್ದೇಶಪೂರ್ವಕವಾಗಿ ಅಥವಾ ಯಾರಿಗೂ ಅವಮಾನ ಮಾಡಬೇಕೆಂಬ ಉದ್ದೇಶದಿಂದ ಈ ಹಾಸ್ಯವನ್ನು ಹೇಳಿಲ್ಲ. ಇದು ತುಂಬಾ ಹಳೆಯ ಹಾಸ್ಯವಾಗಿದೆ. ಇದರಲ್ಲಿ ಈಶ್ವರ, ಗಣಪತಿ ದೇವರ ಬಗ್ಗೆಯೂ ಹಾಸ್ಯಗಳಿವೆ. ನಾನು ಸಹಜವಾಗಿ ಮಾತನಾಡುತ್ತ ಈ ಹಾಸ್ಯವನ್ನು ಹೇಳಿದ್ದೇನೆ. ನನಗೂ ಮೊದಲು ಮತ್ತು ನಂತರವೂ ಈ ಹಾಸ್ಯವನ್ನು ಹಲವು ಮಂದಿ ಹೇಳಿರಬಹುದು’ ಎಂದು ಅವರು ತಿಳಿಸಿದರು.
‘ಆ ಪಾತ್ರದ ವಾತಾವರಣಕ್ಕೆ ಸಂಬಂಧಿಸಿದ ಹಾಸ್ಯ ಇದಾಗಿರುವುದು ಬಿಟ್ಟರೆ ಯಾವುದೇ ಜಾತಿ ಧರ್ಮದ ನಿಂದನೆ, ಅವಮಾನ ಮಾಡುವುದಕ್ಕಾಗಿ ಹೇಳಿದ್ದಲ್ಲ’. ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕಳೆದ 20 ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ದುಡಿಯುತ್ತಿರುವ ಮಹಾಬಲೇಶ್ವರ ಭಟ್ ಕ್ಯಾದಗಿ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.
ಸಂಪೂರ್ಣ ವೀಡಿಯೋ ಲಿಂಕ್ ಇಲ್ಲಿದೆ,