ಕನಿಷ್ಠ ಕೂಲಿಗೆ ಸರಿಯಾಗಿರಲಿ ಉದ್ಯೋಗ ಖಾತರಿಯ ಕೂಲಿದರ!
2022-23ಕ್ಕೆಂದು ಭಾರತ ಸರಕಾರವು ಉದ್ಯೋಗ ಖಾತರಿಯ ಕೂಲಿದರವನ್ನು ಏರಿಸಿ ಮಾರ್ಚ್ 28ಕ್ಕೆ ಘೋಷಣೆ ಮಾಡಿದ್ದು, ಈ ಸರಕಾರಕ್ಕೆ ಉದ್ಯೋಗ ಖಾತ್ರಿಯ ಬಗ್ಗೆ ಇರುವ ಅಗೌರವ, ತಿರಸ್ಕಾರಗಳನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತಿದೆ. ಮೇಲ್ನೋಟಕ್ಕೆ ಅದು ವೇತನ ದರ ಏರಿಕೆ. ಆದರೆ ಆಗಿರುವ ಏರಿಕೆಯನ್ನು ನೋಡಿದರೆ ಅಥವಾ ಪ್ರಕಟಿಸಿರುವ ಸಮಯವನ್ನು ನೋಡಿದರೆ ಇದು ಸರಕಾರ ಮಾಡುತ್ತಿರುವ ವಂಚನೆಯೋ ಅಥವಾ ವ್ಯಂಗ್ಯವೋ ತಿಳಿಯುವುದಿಲ್ಲ. ಹೊಸ ಹಣಕಾಸು ವರ್ಷ ಆರಂಭವಾಗುವ ಕೇವಲ ಮೂರು ದಿನಕ್ಕೆ ಮೊದಲು ದರ ಪರಿಷ್ಕರಣೆಯ ಘೋಷಣೆ ಆಗುತ್ತದೆ. ಅದನ್ನು ಮೊದಲೇ ಪ್ರಕಟಿಸುವುದಾಗಲೀ, ಚರ್ಚೆಗೆ ಅವಕಾಶ ಕೊಡುವುದಾಗಲೀ, ಜನಾಭಿಪ್ರಾಯ ಕೇಳುವುದಾಗಲೀ ಯಾವೊಂದು ವಿಧಾನವೂ ಇಲ್ಲದೆ, ದಿಢೀರ್ ನೋಟ್ ಬ್ಯಾನ್ ಮಾಡಿದ ರೀತಿಯಲ್ಲಿ ಎಪ್ರಿಲ್ 1ಕ್ಕೆ ಜಾರಿಯಲ್ಲಿ ಬರುವಂತೆ ಪ್ರಕಟ ಮಾಡಿದೆ. ಕೇವಲ 4 ರೂ.ಯಿಂದ ಹಿಡಿದು 21ರೂ. ವರೆಗೆ ಬೇರೆಬೇರೆ ರಾಜ್ಯಗಳಲ್ಲಿ ವೇತನ ಏರಿದೆ. ಮಣಿಪುರ, ಮಿಜೋರಮ್, ತ್ರಿಪುರಾ ರಾಜ್ಯಗಳಲ್ಲಿ ಕೂಲಿ ಏರಿಕೆ ಆಗಿಯೇ ಇಲ್ಲ. ಕೇಂದ್ರ ಸರಕಾರದ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ತೆಯು ಶೇ. 31 ಏರಿಕೆಯಾಗಿರುವಾಗ, ಇಡೀ ರಾಷ್ಟ್ರದಲ್ಲಿ ಉದ್ಯೋಗ ಖಾತರಿಯ ಕೂಲಿದರ ಏರಿಕೆ ಆಗಿದ್ದು, ಶೇ. 4.25 ಮಾತ್ರ. ಕೇಂದ್ರ ಸರಕಾರದ ನೌಕರರಿಗೆ ತುಟ್ಟಿಭತ್ತೆ ಏರಿಸಿದಾಗಲೊಮ್ಮೆ ಸರಕಾರದ ಖಜಾನೆಗೆ ಪ್ರತಿವರ್ಷ 9,544.5 ಕೋಟಿ ರೂ. ಹೆಚ್ಚುವರಿ ವೆಚ್ಚವಾಗುತ್ತಿದ್ದರೂ, ತುಟ್ಟಿಭತ್ತೆಯನ್ನು ವರ್ಷಕ್ಕೆರಡು ಬಾರಿ ಪರಿಷ್ಕರಿಸಲಾಗುತ್ತದೆ. ಬಡ ಜನರ ವೇತನ ಪರಿಷ್ಕರಣೆ ವರ್ಷಕ್ಕೆ ಒಂದಾವರ್ತಿ ಆದರೆ ಹೆಚ್ಚಿನದು, ಅದೂ ಚರ್ಚೆಗವಕಾಶವಿಲ್ಲದಂತೆ ಕಡೆಗಳಿಗೆಯಲ್ಲಿ ಮಾಡುವುದು.
27 ರಾಜ್ಯಗಳಲ್ಲಿ ಉದ್ಯೋಗ ಖಾತರಿಯ ವೇತನವು ಕನಿಷ್ಠ ಕೂಲಿಗಿಂತಲೂ ಕಡಿಮೆ ಇದೆ. ಕರ್ನಾಟಕದಲ್ಲಿ 20 ರೂ. ಹೆಚ್ಚಾಗಿದೆ ಎಂದು ಖುಷಿಪಡುವ ನಾವು ಕನಿಷ್ಠ ಕೂಲಿಗಿಂತ ಅದೆಷ್ಟು ಕಡಿಮೆ ಇದೆ ಎಂದು ನೋಡಿದರೆ ದಂಗಾಗುತ್ತೇವೆ. ನಮ್ಮ ರಾಜ್ಯದ ಕನಿಷ್ಠ ಕೂಲಿ ಇಡೀ ದೇಶದಲ್ಲೇ ಹೆಚ್ಚು. ಅದು 441 ಇದ್ದರೆ ಉದ್ಯೋಗ ಖಾತರಿಯ ಕನಿಷ್ಠ ಕೂಲಿ 309 ಮಾತ್ರ! ಅಂದರೆ ಕನಿಷ್ಠ ಕೂಲಿಯ ಶೇಕಡಾ 70ರಷ್ಟನ್ನು ಮಾತ್ರ ಕೊಡುತ್ತೇವೆ ಎಂದು ಘೋಷಣೆ ಮಾಡಿದೆ ಸರಕಾರ. ಕನಿಷ್ಠ ಕೂಲಿ ಇಷ್ಟಿರಬೇಕು ಎಂದು ಘೋಷಣೆ ಮಾಡಿದವರೂ ಅವರೇ! ಇಡೀ ದೇಶದಲ್ಲಿ ಸರಾಸರಿ ನೋಡಿದರೆ ಕನಿಷ್ಠ ಕೂಲಿಯ ಶೇ. 20 ಮಾತ್ರ ಉದ್ಯೋಗಖಾತರಿಯಲ್ಲಿ ಕೊಡಲಾಗುತ್ತಿದೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮುಗಿಲು ಮುಟ್ಟಿರುವಾಗ, ಕೊರೋನದಂತಹ ಸಮಯದಲ್ಲಿ ಉದ್ಯೋಗ ಖಾತರಿಯೇ ಬದುಕಲು ಆಸರೆಯಾಗಿದ್ದನ್ನು ಇಡೀ ದೇಶವೇ ಬೆರಗಾಗಿ ನೋಡಿರುವಾಗ, ಬಡ ಜನರಿನ್ನೂ ಕೊರೋನದ ಹೊಡೆತದಿಂದ ಚೇತರಿಸಿಕೊಳ್ಳಲು ಒದ್ದಾಡುತ್ತಿರುವಾಗ ವೇತನ ಪರಿಷ್ಕರಣೆಯನ್ನು ಸರಕಾರ ಇಷ್ಟು ತಿರಸ್ಕಾರದಿಂದ ಮಾಡಿದೆ. ದೇಶದೆಲ್ಲೆಡೆ ಆರ್ಥಿಕತೆಯು ನಿಧಾನವಾಗಿ ಮರುಚೇತರಿಸಿಕೊಳ್ಳುತ್ತಿದೆ, ಆದರೆ ಇಷ್ಟು ಕಡಿಮೆ ವೇತನ ಇಟ್ಟು, ಬಜೆಟ್ನಲ್ಲಿ ಅತಿ ಕಡಿಮೆ ಹಣ ಇಡುವುದರ ಮೂಲಕ, ಅದೂ ಸರಿಯಾದ ಸಮಯಕ್ಕೆ ಜನರ ಕೈಗೆ ಕೂಲಿ ಸಿಗದಂತೆ ಮಾಡಿದ್ದು, ಗ್ರಾಮೀಣ ಭಾಗದ ಜೀವನಾಡಿಯಾದ ಉದ್ಯೋಗ ಖಾತರಿಯು ಜನರನ್ನು ಮೇಲೆಬ್ಬಿಸುವ ಸಾಧ್ಯತೆ ಕಾಣುತ್ತಿಲ್ಲ. ಜನರಿಂದ ಹುಯಿಲೆದ್ದಾಗ ಸರಕಾರ ಸಮಿತಿಗಳನ್ನು ರಚನೆ ಮಾಡಿ ಸಲಹೆಗಳನ್ನು ಪಡೆಯುತ್ತದೆ. ಕನಿಷ್ಠ ವೇತನದ ಕುರಿತು ಹೀಗೆ ರಚನೆಯಾಗಿದ್ದ ಮಹೇಂದ್ರ ದೇವಸಮಿತಿ, ನಾಗೇಶ್ ಸಿಂಗ್ ಸಮಿತಿ ಮತ್ತು ಕನಿಷ್ಠ ಕೂಲಿಯು 375 ರೂ. ಗಿಂತ ಕಡಿಮೆ ಇರಬಾರದೆಂದು ಹೇಳಿದ್ದ ಅನೂಪ್ ಸತ್ಪತಿ ಸಮಿತಿ-ಹೀಗೆ ಯಾವೊಂದು ಸಮಿತಿಯ ಲೆಕ್ಕಗಳನ್ನೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಕಡೆಗೆ ಪಾರ್ಲಿಮೆಂಟಿನ ಪಂಚಾಯತ್ ರಾಜ್ ಸ್ಥಾಯಿ ಸಮಿತಿಯು 'ಉದ್ಯೋಗ ಖಾತರಿಯಲ್ಲಿ ಕನಿಷ್ಠ ಕೂಲಿಯನ್ನು ಹೆಚ್ಚಿಸಬೇಕು' ಎಂದು ಸಲಹೆ ಮಾಡಿದ್ದನ್ನೂ ಕಿವಿಗೆ ಹಾಕಿಕೊಳ್ಳದೆ ಕಾಟಾಚಾರಕ್ಕೆ ಏರಿಕೆ ಮಾಡಿದೆ.
ಇಂದಿನ ಬೆಲೆಏರಿಕೆ ಮತ್ತು ಜೀವನ ನಿರ್ವಹಣಾ ವೆಚ್ಚಕ್ಕೂ ಮತ್ತು ಈಗ ಕೊಡಲು ಹೊರಟಿರುವ ವೇತನಕ್ಕೂ ಸಂಬಂಧವೇ ಇಲ್ಲ.ಅಷ್ಟೇ ಅಲ್ಲ, ಯಾವ ರೀತಿಯಲ್ಲಿ ತಾನು ಕೂಲಿದರ ಏರಿಕೆಯ ಲೆಕ್ಕ ಮಾಡುತ್ತಿದ್ದೇನೆಂಬುದನ್ನು ಬಿಟ್ಟುಕೊಡುವುದಿಲ್ಲ. ಆ ಮೂಲಕ ಸರಕಾರವು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾನೂನಿನ ಮೂಲ ಆಶಯಗಳಲ್ಲೊಂದಾದ ಪಾರದರ್ಶಕತೆಯನ್ನೇ ಮುಸುಕಾಗಿಸಿದೆ. ಎಲ್ಲೋ ಒಂದೊಂದು ಜಾರ್ಖಂಡ್ನಂತಹ ರಾಜ್ಯ ತನ್ನ ಜನರಿಗೆ ಹೆಚ್ಚಿನ ವೇತನ ಕೊಡಬೇಕೆಂದು ತನ್ನ ಕೈಯಿಂದ ಹಣ ಹಾಕಿ ಕೂಲಿಯನ್ನು ಹೆಚ್ಚು ಕೊಡುತ್ತದೆ. ಕರ್ನಾಟಕದಲ್ಲಿರುವಂತಹ ಸರಕಾರ ಕೈಯಿಂದ ಖರ್ಚು ಮಾಡುವ ಬದಲಿಗೆ ಜನರ ಗಮನವನ್ನು ಅತ್ತಿತ್ತ ಸೆಳೆಯುವಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದೆ.
ಗ್ರಾಮೀಣ ಉದ್ಯೋಗ ಖಾತರಿಯ ವೇತನ ಏರಿತೆಂದರೆ ಅದಕ್ಕೆ ತಕ್ಕಂತೆ ಗ್ರಾಮೀಣ ಭಾಗದ ಮತ್ತು ಕೈಗಾರಿಕೆಗಳ ವೇತನಗಳ ಪರಿಷ್ಕರಣೆಯೂ ತಾನಾಗಿಯೇ ಆಗುತ್ತದೆ. ಜನರ ಕೈಯಲ್ಲೊಂದಿಷ್ಟು ಹಣ ಬಂದಿತೆಂದರೆ ಅವರ ಖರೀದಿ ಸಾಮರ್ಥ್ಯವೂ ಹೆಚ್ಚಿ ಆರ್ಥಿಕತೆಯು ಕೂಡ ಸುಧಾರಿಸುತ್ತದೆ. ಕನಿಷ್ಠ ಕೂಲಿಗಿಂತ ಕಡಿಮೆ ಕೂಲಿಯನ್ನು ಕೊಡುವುದು ಬಲವಂತದ ಕೂಲಿ ಅಥವಾ ಜೀತವೆಂದು ಸರ್ವೋಚ್ಚ ನ್ಯಾಯಾಲಯ ವ್ಯಾಖ್ಯಾನಿಸಿದ್ದನ್ನೂ ಸರಕಾರ ಗಣನೆಗೆ ತಂದುಕೊಳ್ಳದಿರುವುದು, ಅತ್ಯಂತ ಕಡಿಮೆ ಬಜೆಟ್ ಇಟ್ಟಿರುವುದು, ಸಮಯಕ್ಕೆ ಸರಿಯಾಗಿ ಕೂಲಿಯನ್ನೇ ಕೊಡದಿರುವುದು ಇವೆಲ್ಲವೂ ಈ ಕಾನೂನಿನ ಬಗ್ಗೆ ಸರಕಾರಕ್ಕಿರುವ ನಿಷ್ಕಾಳಜಿಯಷ್ಟೇ ಅಲ್ಲ, ತೀವ್ರ ಅಸಡ್ಡೆಯನ್ನೂ ತೋರಿಸುತ್ತದೆ.