ಉಡುಪಿ ಜಿಲ್ಲೆಯಾಗಿ 25ನೇ ವರ್ಷದಲ್ಲಿ ನಿರ್ಮಾಣಗೊಳ್ಳುತ್ತಿದೆ ಜಿಲ್ಲಾಸ್ಪತ್ರೆ!
ವಿಶ್ವ ಆರೋಗ್ಯ ದಿನ
ಉಡುಪಿ, ಎ.7: ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಗತಿಸ್ಥಿತಿಯನ್ನು ಮೇಲಿನ ಶೀರ್ಷಿಕೆ ಅರ್ಥವತ್ತಾಗಿ ತೆರೆದಿಡುತ್ತದೆ. ಉಡುಪಿಯಂಥ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ, ಆರೋಗ್ಯ ಕ್ಷೇತ್ರದ ಹೆಚ್ಚಿನೆಲ್ಲಾ ಪ್ಯಾರಾಮೀಟರ್‌ಗಳಲ್ಲಿ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿರುವ ಜಿಲ್ಲೆ ಅಸ್ತಿತ್ವಕ್ಕೆ ಬಂದು 25 ವರ್ಷ ಪೂರ್ಣಗೊಳ್ಳುತಿದ್ದರೂ ಸುಸಜ್ಜಿತವಾದ ಜಿಲ್ಲಾಸ್ಪತ್ರೆಯೇ ಇಲ್ಲ ಎಂಬುದು ಅಚ್ಚರಿಗೆ ಕಾರಣ ಎನಿಸಬಹುದು. ಹಲವು ದಶಕಗಳ ಹಿಂದಿನಿಂದ ಇರುವ 124 ಹಾಸಿಗೆಗಳ ತಾಲೂಕು ಆಸ್ಪತ್ರೆಯ ಬೋರ್ಡ್‌ನ್ನೇ ‘ಜಿಲ್ಲಾಸ್ಪತ್ರೆ’ ಎಂದು ಬದಲಿಸಿ ಇದುವರೆಗೆ ಹಾಗೆಂದು ಕರೆಯಲಾಗುತ್ತಿದೆ.
ಹಾಗೆಂದು ಜಿಲ್ಲಾಸ್ಪತ್ರೆಗಾಗಿ ಹೋರಾಟವೇ ನಡೆದಿಲ್ಲವೆಂದಲ್ಲ. 1997ರ ಆಗಸ್ಟ್ 25ರಂದು ಅಸ್ತಿತ್ವಕ್ಕೆ ಬಂದ ಉಡುಪಿ ಜಿಲ್ಲೆ ಐದು ವರ್ಷಗಳನ್ನು ಪೂರ್ಣಗೊಳಿಸಿದಾಗ ಜಿಲ್ಲಾಸ್ಪತ್ರೆಯ ಪ್ರಸ್ತಾಪ ಜೋರಾಗಿಯೇ ಕೇಳಿಬಂದಿತ್ತು. ಆ ಬಳಿಕವೂ ಹಲವು ಬಾರಿ ಇದಕ್ಕಾಗಿ ಸಣ್ಣಮಟ್ಟದ ಹೋರಾಟ ನಡೆದಿತ್ತು. ಜಿಲ್ಲೆಯ ಹಾಗೂ ಉಡುಪಿಯ ಶಾಸಕರೂ, ಸಚಿವರು ಅದರಲ್ಲೂ ಮುಖ್ಯವಾಗಿ ಆರೋಗ್ಯ ಸಚಿವರು ಬಂದಾಗಲೆಲ್ಲಾ ಜಿಲ್ಲಾಸ್ಪತ್ರೆಯ ಅಗತ್ಯತೆಯನ್ನು ಜೋರಾಗಿಯೇ ಪ್ರಸ್ತಾಪಿಸುತ್ತಿದ್ದರಾದರೂ ಸಚಿವರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಂತೆ ಕಾಣುತ್ತಿರಲ್ಲಿಲ್ಲ.
ಪ್ರಾಯಶಃ ಆರೋಗ್ಯ ಕ್ಷೇತ್ರದಲ್ಲಿ ಉಡುಪಿ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿರುವುದು ಇದಕ್ಕೆ ಕಾರಣವಾಗಿರಬಹುದು. ಉತ್ತಮ ಗುಣಮಟ್ಟದ ಖಾಸಗಿ ಆಸ್ಪತ್ರೆಗಳು ಹಾಗೂ ಇವುಗಳಿಗೆ ಸರಿಮಿಗಿಲಾಗಿ ಸರಕಾರಿ ಆಸ್ಪತ್ರೆಗಳೂ ತಮ್ಮ ಇತಿಮಿತಿಯ ಹೊರ ತಾಗಿಯೂ ಜನರಿಗೆ ಉತ್ತಮ ಸೇವೆ ನೀಡುತ್ತಿದ್ದುದರಿಂದ ತಾಲೂಕು ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಅಗತ್ಯತೆಯೂ ಸಚಿವರಿಗೆ ಕಂಡುಬಂದಿರಲಿಲ್ಲ ಎನಿಸುತ್ತೆ. ಇದಕ್ಕೆ ಉತ್ತಮ ಉದಾಹರಣೆ ಹಾಜಿ ಅಬ್ದುಲ್ಲಾ ಅವರು 80 ವರ್ಷಗಳ ಹಿಂದೆ ಉಡುಪಿಯಲ್ಲಿ ಕಟ್ಟಿಸಿಕೊಟ್ಟ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ. 70 ಹಾಸಿಗೆಗಳ ಈ ಆಸ್ಪತ್ರೆ ಮೂಲಭೂತ ಸೌಕರ್ಯಗಳ ಕೊರತೆಯ ಹೊರತಾಗಿಯೂ ಹೊರಜಿಲ್ಲೆಯವರನ್ನೂ ಆಕರ್ಷಿಸುತ್ತಿತ್ತು. ಈ ಆಸ್ಪತ್ರೆ ಸದಾ ಗರ್ಭಿಣಿಯರಿಂದ ಹಾಗೂ ಮಕ್ಕಳಿಂದ ಕ್ಕಿಕ್ಕಿರಿದು ತುಂಬಿರುತ್ತಿತ್ತು. ಇದಕ್ಕೆ ಇಲ್ಲಿನ ಸರಕಾರಿ ವೈದ್ಯರು ಹಾಗೂ ಇತರ ಸಿಬ್ಬಂದಿಯ ಕರ್ತವ್ಯಪರತೆ ಪ್ರಧಾನ ಕಾರಣವಾಗಿತ್ತು.
ಇದೀಗ ಈ ಆಸ್ಪತ್ರೆ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎಂಬ ಹೆಸರಿನೊಂದಿಗೆ ಪಿಪಿಪಿ ಮಾದರಿಯಲ್ಲಿ ಖಾಸಗಿಯವರ ಸುಪರ್ದಿಗೆ ಹೋಗಿ 200 ಬೆಡ್‌ಗಳ ಅತ್ಯಾಧುನಿಕ, ಸುಸಜ್ಜಿತ ಸಂಪೂರ್ಣ ಹವಾನಿಯಂತ್ರಿತ ಆಸ್ಪತ್ರೆಯಾಗಿ ಪರಿವರ್ತನೆಯಾದರೂ ಚಿಕಿತ್ಸೆ ಎಲ್ಲವೂ ಹಿಂದಿನಂತೆ ಉಚಿತವಾಗಿ ದೊರೆಯುತ್ತಿದೆ. ಆಸ್ಪತ್ರೆಯ ಮಾಲಕ ಬಿ.ಆರ್.ಶೆಟ್ಟಿ ಆರ್ಥಿಕ ಸಂಕಷ್ಟ ಸಿಲುಕಿದ್ದರಿಂದ ಕಳೆದ ವಾರದಿಂದ ಈ ಆಸ್ಪತ್ರೆಯನ್ನು ಸರಕಾರ ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ. ಇದರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಕೊನೆಗೂ ಉಡುಪಿಗೆ ಸುಸಜ್ಜಿತ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದು, ಮಾತ್ರವಲ್ಲದೇ ಅದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಸುಮಾರು 120 ಕೋಟಿ ರೂ. ವೆಚ್ಚದಲ್ಲಿ 250 ಹಾಸಿಗೆಗಳ ಈ ಆಸ್ಪತ್ರೆಗೆ ಇದೀಗ ಭರದಿಂದ ಕಾಮಗಾರಿ ನಡೆಯುತ್ತಿದೆ. 2024ರೊಳಗೆ ಜಿಲ್ಲೆಗೆ ಕೊನೆಗೂ ಜಿಲ್ಲಾಸ್ಪತ್ರೆಯೊಂದು ದೊರೆಯುವ ವಿಶ್ವಾಸ ಮೂಡಿದೆ.
ಇರುವುದು ಸಿಬ್ಬಂದಿಗೆ ಕೊರತೆ; ಮೂಲಭೂತ ಸೌಕರ್ಯಕ್ಕಲ್ಲ
ಜಿಲ್ಲೆ ಅಸ್ತಿತ್ವಕ್ಕೆ ಬಂದು 25 ವರ್ಷವಾದರೂ, ಜಿಲ್ಲಾಸ್ಪತ್ರೆ ಇನ್ನೂ ನಿರ್ಮಾಣಗೊಳ್ಳದಿದ್ದರೂ, ಜಿಲ್ಲೆಯ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಲ್ಲಿ ಯಾವುದೇ ಕೊರತೆಯಾಗಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇಲ್ಲವಾದರೂ, ಶೇ.50ರಷ್ಟು ಇತರ ಸಿಬ್ಬಂದಿಯ ಕೊರತೆ ಇದೆ ಎಂದು ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಹೇಳುತ್ತಾರೆ.
ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿ ನೆಲ್ಲಾ ವಿಭಾಗಗಳಿಗೆ ತಲಾ ಒಬ್ಬೊಬ್ಬರೇ ತಜ್ಞ ವೈದ್ಯರಿದ್ದರೂ, ಪೆಥಾಲಜಿಸ್ಟ್ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲಾ ಮಂಜೂರಾದ ಹುದ್ದೆಗಳು ಭರ್ತಿಯಾಗಿವೆ. ಆದರೆ ಗ್ರೂಪ್ ಸಿ ಹಾಗೂ ಗ್ರೂಪ್ ಡಿಯಲ್ಲಿ ಮಂಜೂರಾದ ಒಟ್ಟು 102 ಹುದ್ದೆಗಳಲ್ಲಿ 44 ಮಾತ್ರ ಭರ್ತಿಯಾಗಿದ್ದು, ಉಳಿದ 58 ಹುದ್ದೆಗಳು ಖಾಲಿಯಾಗಿ ಉಳಿದಿವೆ. ಅದರಲ್ಲೂ ಗ್ರೂಪ್ ಡಿಯಲ್ಲಿ ಕೇವಲ 13 ಮಂದಿ ಮಾತ್ರ ಇದ್ದು 36 ಪೋಸ್ಟ್ ಖಾಲಿ ಇವೆ ಎಂದು ಡಾ.ಮಧುಸೂಧನ್ ನಾಯಕ್ ವಿವರಿಸಿದರು.
ನಮ್ಮ ಆಸ್ಪತ್ರೆ ಈಗ ಜಿಲ್ಲಾಸ್ಪತ್ರೆಯಾಗಿ ಘೋಷಣೆಯಾಗಿರುವುದರಿಂದ ಹಾಗೂ 250 ಹಾಸಿಗೆಗಳ ನೂತನ ಕಟ್ಟಡ ಕಾಮಗಾರಿ ಶರವೇಗದಿಂದ ನಡೆಯುತ್ತಿರುವುದರಿಂದ ಸದ್ಯಕ್ಕೆ ಇಲ್ಲಿ ಯಾವುದೇ ಹೊಸ ನೇಮಕಾತಿ ನಡೆಯುವ ಸಾಧ್ಯತೆ ಇಲ್ಲ. ಶೇ.75ರಷ್ಟು ಕಾಮಗಾರಿ ಮುಗಿದ ಬಳಿಕ 250 ಆಸ್ಪತ್ರೆಗೆ ಬೇಕಾದ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಸದ್ಯ ಅಗತ್ಯ ಸಿ ಹಾಗೂ ಡಿ ಗ್ರೂಪ್ ನೌಕರರ ನೇಮಕಾತಿಗೆ ಹೊರಗುತ್ತಿಗೆ ಆಧಾರದಲ್ಲಿ ಅನುಮತಿ ಕೇಳಬೇಕಾಗುತ್ತದೆ ಎಂದು ಡಾ.ನಾಯಕ್ ತಿಳಿಸಿದ್ದಾರೆ.
ನೂತನ ಜಿಲ್ಲಾಸ್ಪತ್ರೆ ನಿರ್ಮಾಣಗೊಂಡಾಗ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಮಂಜೂರಾದರೆ, ಖಂಡಿತವಾಗಿಯೂ ಜಿಲ್ಲೆಯ ಜನರಿಗೆ ಅದರಲ್ಲೂ ವಿಶೇಷವಾಗಿ ಬಡವರಿಗೆ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗಬಹುದು ಎಂದು ಡಾ.ನಾಯಕ್ ಅಭಿಪ್ರಾಯಪಟ್ಟರು.
ವರದಾನವಾದ ಕೋವಿಡ್: ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳ ಕೊರತೆ ಅಷ್ಟಾಗಿ ಬಾಧಿಸುತ್ತಿಲ್ಲ. ಅದರಲ್ಲೂ ಕೋವಿಡ್‌ನಿಂದಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ಸಾಕಷ್ಟು ಸೌಕರ್ಯಗಳನ್ನು ಒದಗಿಸಿದೆ. ಐಸಿಯು, ವೆಂಟಿಲೇಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಔಷಧಿಗಳೂ ಸರಬರಾಜಾಗುತ್ತಿವೆ. ಆದರೆ ಕೋವಿಡ್ ವೇಳೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡ 80ಕ್ಕೂ ಅಧಿಕ ಸಿಬ್ಬಂದಿಯನ್ನು ಈ ತಿಂಗಳಿನಿಂದ ಕೈಬಿಡಲಾಗಿದೆ ಎಂದು ಡಾ.ನಾಯಕ್ ವಿವರಿಸಿದರು.
ಪಿಎಚ್‌ಸಿಗಳಲ್ಲೂ ಇದೇ ಸಮಸ್ಯೆ:
ಜಿಲ್ಲಾಸ್ಪತ್ರೆಯಂತೆ, ಆರೋಗ್ಯ ಇಲಾಖೆಯಡಿಯಲ್ಲಿ ಬರುವ ಉಳಿದ ಸರಕಾರಿ ಆಸ್ಪತ್ರೆಗಳಲ್ಲೂ ಸಿಬ್ಬಂದಿ ಕೊರತೆಯೇ ಪ್ರಮುಖ ಸಮಸ್ಯೆ. ಇಲ್ಲೂ ಸಹ ವೈದ್ಯರು ಹಾಗೂ ತಜ್ಞ ವೈದ್ಯರ ಮಂಜೂರಾದ ಎಲ್ಲಾ ಹುದ್ದೆಗಳು ಭರ್ತಿಯಾಗಿವೆ. ಆದರೆ ಇಲ್ಲೂ ಗ್ರೂಪ್ ಸಿಯಲ್ಲಿ ಮಂಜೂರಾದ ಒಟ್ಟು 1,038 ಹುದ್ದೆಗಳಲ್ಲಿ 518 ಮಾತ್ರ ಭರ್ತಿಯಾಗಿದ್ದು, 520 ಖಾಲಿಯಾಗಿವೆ. ಅದೇರೀತಿ ಗ್ರೂಪ್ ಡಿಯಲ್ಲಿ 249 ಹುದ್ದೆಗಳಲ್ಲಿ 53 ಖಾಲಿಯಾಗುಳಿದಿವೆ. ಭರ್ತಿಯಾಗಿರುವ 196ರಲ್ಲಿ 129 ಹೊರಗುತ್ತಿಗೆಯಲ್ಲಿ ನೇಮಕವಾಗಿರುವುದು. ಗ್ರೂಪ್ ಸಿಯಲ್ಲೂ ಸಾಕಷ್ಟು ಹುದ್ದೆಗಳನ್ನು ಹೊರಗುತ್ತಿಗೆ ಹಾಗೂ ಎನ್‌ಎಚ್‌ಎಂ ನಲ್ಲಿ ತುಂಬಿಸಲಾಗಿದೆ ಎಂದು ಡಿಎಚ್‌ಒ ಡಾ.ನಾಗಭೂಷಣ ಉಡುಪ ತಿಳಿಸಿದರು. ಕೋವಿಡ್‌ನ ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲೂ ಬೆಡ್, ಐಸಿಯು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೀಗಾಗಿ ಎಲ್ಲೂ ಮೂಲಭೂತ ಸೌಕರ್ಯ ಹಾಗೂ ಚಿಕಿತ್ಸೆಯ ಗುಣಮಟ್ಟದ ಕುರಿತಂತೆ ಜಿಲ್ಲೆಯ ಎಲ್ಲಿಂದಲೂ ಸಾರ್ವಜನಕರಿಂದ ದೂರುಗಳು ಕೇಳಿಬರುತ್ತಿಲ್ಲ ಎಂದೂ ಡಾ.ಉಡುಪ ತಿಳಿಸಿದರು.
5 ಪಿಎಚ್‌ಸಿಗಳಿಗೆ ತಲಾ ಐದು ಕೋಟಿ: ಇದರೊಂದಿಗೆ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಶಾಸಕರ ಶಿಫಾರಸಿನಂತೆ ಕ್ಷೇತ್ರಕ್ಕೆ ತಲಾ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆಯ್ಕೆ ಮಾಡಿದ್ದು, ಇವುಗಳನ್ನು ಮಾದರಿ ಆರೋಗ್ಯ ಕೇಂದ್ರಗಳಾಗಿ ಮಾಡಲು ಅವುಗಳಿಗೆ ತಲಾ ಐದು ಕೋಟಿ ರೂ.ನ್ನು ಒದಗಿಸಲಾಗುತ್ತಿದೆ.
ಇದರಂತೆ ಉಡುಪಿ ಕ್ಷೇತ್ರದಿಂದ ಕೊಳಲಗಿರಿ ಪ್ರಾಥಮಿಕ ಆರೋಗ್ಯಕೇಂದ್ರ, ಬೈಂದೂರಿನಿಂದ ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಂದಾಪುರದಿಂದ ಕುಂಭಾಶಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕಾರ್ಕಳದಿಂದ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕಾಪುವಿನಿಂದ ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದ್ದು, ಇವುಗಳಿಗೆ ಹೊಸ ಕಟ್ಟಡದೊಂದಿಗೆ ಉನ್ನತೀಕರಣಕ್ಕೆ ತಲಾ 5 ಕೋಟಿ ರೂ. ನೀಡಲಾಗುತ್ತದೆ ಎಂದು ಡಾ.ಉಡುಪ ಹೇಳಿದರು.
ಅಲ್ಲದೇ ಅಮೃತ ಯೋಜನೆಯಡಿ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 20 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಅಲ್ಲದೇ ಜಿಲ್ಲೆಯಲಿರುವ ಆರೋಗ್ಯ ಉಪಕೇಂದ್ರಗಳಿಗೆ 249 ಸಮುದಾಯ ಆರೋಗ್ಯಾಧಿಕಾರಿ(ಶುಶ್ರೂಷಕರು)ಗಳನ್ನು ನೇಮಕಗೊಳಿಸಲಾಗಿದೆ ಎಂದೂ ಅವರು ವಿವರಿಸಿದರು.
► ಉಡುಪಿಯ ಅಜ್ಜರಕಾಡಿನಲ್ಲಿ 124 ಹಾಸಿಗೆಗಳ ಜಿಲ್ಲಾಸ್ಪತ್ರೆ (ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 250 ಹಾಸಿಗೆಗಳ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.)
► ಉಡುಪಿಯ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ (200 ಹಾಸಿಗೆಗಳ ಸಂಪೂರ್ಣ ಹವಾನಿಯಂತ್ರಿಕ ಅತ್ಯಾಧುನಿಕ ಆಸ್ಪತ್ರೆ ಇದೀಗ ಸರಕಾರದ ಸುಪರ್ದಿಗೆ)
► ಕುಂದಾಪುರ ಮತ್ತು ಕಾರ್ಕಳಗಳಲ್ಲಿ ಸರಕಾರಿ ತಾಲೂಕು ಆಸ್ಪತ್ರೆಗಳು.
► ಜಿಲ್ಲೆಯಲ್ಲಿ ಒಟ್ಟು ಆರು ಸಮುದಾಯ ಆರೋಗ್ಯ ಕೇಂದ್ರಗಳು (ಬ್ರಹ್ಮಾವರ, ಕೋಟ, ಶಿರ್ವ, ಬೈಂದೂರು, ಹೆಬ್ರಿ, ನಿಟ್ಟೆ)
► ಜಿಲ್ಲೆಯಲ್ಲಿ 61 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 2 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಉಡುಪಿ, ಮಣಿಪಾಲ), 323 ಉಪಕೇಂದ್ರಗಳು, 2 ಮೊಬೈಲ್ ಮೆಡಿಕಲ್ ಯುನಿಟ್, ಒಂದು ಸಂಚಾರಿ ಕಣ್ಣಿನ ಘಟಕ, 14 ಆಯುಷ್ ಕೇಂದ್ರ,7 ಶಾಲಾ ಮಕ್ಕಳ ಆರೋಗ್ಯ ತಪಾಸಣಾ ತಂಡ ಹಾಗೂ 248 ಗ್ರಾಮ ಆರೋಗ್ಯ ನೈರ್ಮಲ್ಯ ಕೇಂದ್ರ.