ಖಷೋಗಿ ಹತ್ಯೆ ಪ್ರಕರಣದ ವಿಚಾರಣೆ ರದ್ದುಗೊಳಿಸಿದ ಟರ್ಕಿ
ಅಂಕಾರ, ಎ.7: ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಅಂಕಣಕಾರ ಜಮಾಲ್ ಖಷೋಗಿ ಹತ್ಯೆ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿದ ಟರ್ಕಿಯ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಸೌದಿ ಅರೆಬಿಯಾಕ್ಕೆ ವರ್ಗಾಯಿಸುವಂತೆ ಆದೇಶಿಸಿದೆ.
2018ರ ಅಕ್ಟೋಬರ್ 2ರಂದು ಟರ್ಕಿಯಲ್ಲಿರುವ ಸೌದಿ ಅರೆಬಿಯಾ ಕಾನ್ಸುಲೇಟ್ ಕಚೇರಿಯಲ್ಲಿ 59 ವರ್ಷದ ಖಷೋಗಿಯ ಹತ್ಯೆ ನಡೆದಿತ್ತು. ಪ್ರಕರಣದ ಆರೋಪಿಗಳಾದ 26 ಸೌದಿ ಪ್ರಜೆಗಳು ನ್ಯಾಯಾಲಯದ ಕಲಾಪಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಿಚಾರಣೆ ಸ್ಥಗಿತಗೊಳಿಸಿ ಸೌದಿ ಅರೆಬಿಯಾಕ್ಕೆ ವರ್ಗಾಯಿಸುವಂತೆ ಫಿರ್ಯಾಧಿದಾರರು ಕಳೆದ ವಾರ ಮಾಡಿದ್ದ ಮನವಿಯನ್ನು ಟರ್ಕಿ ನ್ಯಾಯಾಲಯ ಪುರಸ್ಕರಿಸಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸುವುದಾಗಿ ಟರ್ಕಿಯ ನ್ಯಾಯ ಇಲಾಖೆ ಸಚಿವರು ಹೇಳಿದ್ದಾರೆ.
ವಿಚಾರಣೆ ರದ್ದುಗೊಳಿಸಿ ಸೌದಿ ಅರೆಬಿಯಾಕ್ಕೆ ವರ್ಗಾಯಿಸುವುದು ಪ್ರಕರಣವನ್ನು ಮುಚ್ಚಿಹಾಕಲು ನೆರವಾಗಲಿದೆ ಎಂದು ಮಾನವ ಹಕ್ಕು ಹೋರಾಟ ಸಂಘಟನೆಗಳು ಎಚ್ಚರಿಕೆ ನೀಡಿದ ಹೊರತಾಗಿಯೂ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಖಷೋಗಿಯ ಪ್ರೇಯಸಿ, ಟರ್ಕಿಯ ಸಂಶೋಧಕಿ ಹ್ಯಾಟಿಸ್ ಸೆಂಗಿರ್ ಹೇಳಿದ್ದಾರೆ. ಸೌದಿ ಅರೆಬಿಯಾದಂತೆ ಟರ್ಕಿಯಲ್ಲಿ ಕುಟುಂಬದ ಆಡಳಿತವಿಲ್ಲ. ಇಲ್ಲಿ ಪ್ರಜೆಗಳ ಅಹವಾಲನ್ನು ಆಲಿಸುವ ನ್ಯಾಯಾಂಗದ ವ್ಯವಸ್ಥೆಯಿದೆ ಎಂದವರು ಹೇಳಿದ್ದಾರೆ. ಸೌದಿ ಅರೆಬಿಯಾ ಸೇರಿದಂತೆ ಈ ವಲಯದ ಹಲವು ದೇಶಗಳೊಂದಿಗಿನ ಬಾಂಧವ್ಯವನ್ನು ಸರಿಪಡಿಸಿಕೊಳ್ಳಲು ಟರ್ಕಿ ಪ್ರಯತ್ನಿಸುತ್ತಿದೆ.