ಆಯುರ್ವೇದ ಉತ್ಪನ್ನ, ಔಷಧಗಳು ರಪ್ತು ಪಟ್ಟಿಗೆ ಸೇರ್ಪಡೆ: ದೇವುಪುಜಾರಿ
ಉಡುಪಿ : ಕೇಂದ್ರ ವಿದೇಶಾಂಗ ಇಲಾಖೆ ಹಾಗೂ ವಾಣಿಜ್ಯ ಇಲಾಖೆ ಸಹಕಾರದೊಂದಿಗೆ ಆಯುರ್ವೇದ ಉತ್ಪನ್ನ ಹಾಗೂ ಔಷಧಗಳನ್ನು ರಪ್ತು ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಇದರಿಂದ ಆಯುರ್ವೇದ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಭಾರತೀಯ ಪರಂಪರಾಗತ ಚಿಕಿತ್ಸಾ ಪದ್ಧತಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ವೈದ್ಯ ಜಯಂತ್ ದೇವುಪುಜಾರಿ ಹೇಳಿದ್ದಾರೆ.
ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಅಗದತಂತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥವಾಗಿ ಶುಕ್ರವಾರ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಸಮ್ಮೇಳನ ‘ತ್ವಿಷ- ೨೦೨೨’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆಯುರ್ವೇದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗ ಪಠ್ಯಕ್ರಮದಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಈ ನಿಟ್ಟಿನಲ್ಲಿ ಸ್ನಾತಕೋತ್ತರ ಪದವಿ ವಿಭಾಗ ಉನ್ನತೀ ಕರಣಕ್ಕೆ ಆಯೋಗ ಕಾರ್ಯಪ್ರವೃತ್ತವಾಗಿದೆ. ಇದರಲ್ಲಿ ಯಾವ ವಿಷಯಗಳನ್ನು ಸೇರ್ಪಡೆಗೊಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಿಂದ ಸ್ನಾತ ಕೋತ್ತರ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ವಿಷಯದಲ್ಲಿ ಪ್ರಾವೀಣ್ಯತೆ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಹಾಸನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್ ಸ್ಮರಣ ಸಂಚಿಕೆ ಯನ್ನು ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ವಹಿಸಿದ್ದರು.
ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಸ್ವಾಗತಿಸಿದರು. ಸಮ್ಮೇಳನದ ಮುಖ್ಯ ಕಾರ್ಯದರ್ಶಿ ಡಾ. ಚೈತ್ರ ಹೆಬ್ಬಾರ್ ವಂದಿಸಿದರು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ನಿರಂಜನ್ ರಾವ್ ಉಪಸ್ಥಿತರಿದ್ದರು. ರೋಗನಿದಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅರುಣ್ ಕುಮಾರ್ ಹಾಗೂ ಕೌಮಾರಭೃತ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ನಾಗರತ್ನ ಎಸ್.ಜೆ. ಕಾರ್ಯಕ್ರಮ ನಿರೂಪಿಸಿದರು.